ನಾನು ವನಜಾಕ್ಷಿ, ನನಗೀಗ 85 ವರ್ಷ!

Kannadaprabha News   | Asianet News
Published : Apr 04, 2021, 03:00 PM IST
ನಾನು ವನಜಾಕ್ಷಿ, ನನಗೀಗ 85 ವರ್ಷ!

ಸಾರಾಂಶ

ತೀರಿಕೊಂಡಾಗ ನಮ್ಮ ತಾಯಿಗೆ ಕೇವಲ ಮೂವತ್ತೆರಡು ವರ್ಷ ಮಾತ್ರ ಆಗಿತ್ತು. ತಂದೆಯವರಿಗೆ ನಲುವತ್ತಾರು ವರ್ಷ. ನಮ್ಮ ತಾಯಿ ಬದುಕಿದ್ದ ಅಷ್ಟುಚಿಕ್ಕ ವಯಸ್ಸಿನಲ್ಲಿ ಹತ್ತು ಮಕ್ಕಳನ್ನು ಹೆತ್ತಿದ್ದರು. ಕಣ್ಣು ಮುಚ್ಚುವ ಮೊದಲು ಮೂರು ಮಕ್ಕಳನ್ನು ಕಳಕೊಂಡ ನೋವನ್ನು ಅನುಭವಿಸಿಬಿಟ್ಟಿದ್ದರು.

ಅಗ್ಗಿತ್ತಲ ನನ್ನ ಪ್ರೀತಿಯ ತವರೂರು. ನಾನು ಹುಟ್ಟಿದ ಮನೆಯ ಅಭಿಮಾನದ ಹೆಸರು. ಅಗ್ಗಿತ್ತಲ ಅಂದರೆ ಅದರ ಅರ್ಥ ಏನೂಂತ ನಂಗೆ ಗೊತ್ತಿಲ್ಲ. ಆದರೆ ಈ ಹೆಸರಿನಲ್ಲೇ ಒಂದು ಶಕ್ತಿ ಇದೆ. ಅದರ ಮೂಲ ಅರ್ಥ ಅಗ್ನಿಸ್ಥಳ ಆಗಿರಲಿ ಅಂತ ನಾನು ತುಂಬಾ ಆಸೆ ಪಡುವುದೂ ಇದೆ. ಅಗ್ನಿ ಅಂದರೆ ಬೆಂಕಿ, ಪವಿತ್ರ, ಪ್ರಖರತೆ, ದಿವ್ಯಜ್ಯೋತಿ. ಅಂಥ ಸ್ಥಳದಲ್ಲೇ ನನ್ನ ತಂದೆಯವರು ನೆಲೆಯಿದ್ದದ್ದು.

ಸಾಮಾನ್ಯವಾಗಿ,ಒಂದು ಊರು ಹಳ್ಳಿಮೂಲೆಯ ಪ್ರದೇಶವಾಗಿದ್ದಾಗ ಎಲ್ಲರಿಗೂ ಅಪರಿಚಿತವಾಗಿರುವುದು ಸಹಜ. ಅದು ಜನಪ್ರಿಯವಾಗಬೇಕಾದರೆ ಅಲ್ಲಿನ ಯಾರಾದರೂ ಒಬ್ಬರು, ಯಾವುದಾದರೂ ಕ್ಷೇತ್ರದಲ್ಲಿ ಹೆಸರುವಾಸಿಯಾಗಬೇಕು ಅಥವಾ ಆ ಊರಲ್ಲಿ ಏನಾದರೂ ಪುಣ್ಯಕ್ಷೇತ್ರವೋ, ವೀಕ್ಷಣಾಸ್ಥಳವೋ ಇರಬೇಕು. ಹಾಗಾಗಿ, ಅಂಥ ಆಕರ್ಷಣೆಯಾಗಲೀ ಅಥವಾ ಜನಪ್ರಿಯ ವ್ಯಕ್ತಿಗಳಾಗಲೀ ಇಲ್ಲದ್ದಕ್ಕೋ ಏನೋ ಅಗ್ಗಿತ್ತಲ ಇರುವ ಕುಬಣೂರು ಈಗಲೂ ಕೂಡಾ ಅಪರಿಚಿತವಾಗಿಯೇ ಇರುವ ಕುಗ್ರಾಮವಾಗಿ ಉಳಿದುಬಿಟ್ಟಿದೆ. ಇದು ಮೊದಲು ಹಳೇಮದ್ರಾಸು ಪ್ರಾಂತ್ಯಕ್ಕೆ ಸೇರಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದರೂ ಈಗ ಕೇರಳದ ಪಾಲಾಗಿದೆ.

ನಾನ್ಯಾಕೆ ಹಿಂಗೆ, ನನ್‌ ಮಗ ಯಾಕೆ ಹಂಗೆ! 

ನಾನು ಚಿಕ್ಕವಳಾಗಿದ್ದಾಗ ಇದ್ದದ್ದು ಹಳೆಯದೊಂದು ಚಿಕ್ಕ ಮನೆಯಲ್ಲಿ. ಅದರದ್ದು ಕಲ್ಲಿನ ಪಂಚಾಂಗ, ಮಣ್ಣಿನ ಗೋಡೆ.ಅದಕ್ಕೆ,ಯಾವುದೋ ಕಾಲದಲ್ಲಿ ಬಿಳಿಯಾಗಿದ್ದಿರಬಹುದೆಂಬಂತೆಭಾಸವಾಗುವ ಸುಣ್ಣದ ಲೇಪನ. ತೆಂಗಿನಮರದ ಅಡ್ಡ, ಅಡಿಕೆಯ ಸಲಾಕೆಗಳಿಂದ ರೂಪುಗೊಂಡ ಮನೆಯ ಮಾಡು. ಇದಕ್ಕೆಹೊದಿಕೆಯಾಗಿ ಒಣಗಿದ ತೆಂಗಿನ ಗರಿಯಹೆಣೆದ ಮಡಲುಗಳು. ಇದರ ಪದರಗಳಿಗೆ ಪೋಣಿಸಿದ ಬಂಗಾರದಂತೆ ಹಣ್ಣಾದ ಮುಳಿಹುಲ್ಲಿನ ಹಾಸು.ಕಾಲಕ್ರಮೇಣ ಮನೆಯ ಮಾಡು ಹಳೆಯದಾಗಿ ಕರಕಲಾದಾಗ ಅಂದರೆ ಸುಮಾರು ಎರಡು ಅಥವಾ ಮೂರುವರ್ಷಕ್ಕೊಮ್ಮೆ ಮಡಲು, ಮುಳಿಹುಲ್ಲನ್ನು ಬದಲಾಯಿಸಿ ಹೊಸತುಹಾಕಬೇಕಿತ್ತು. ಮನೆಯ ನೆಲವೂ ಮಣ್ಣಿನದ್ದೇ. ಇದ್ದಲಿನ ಮಸಿಯನ್ನು ಆವೆಮಣ್ಣಿಗೆ ಹದವಾಗಿ ಬೆರೆಸಿ ನುಣ್ಣಗಿನ ಕಲ್ಲುಗಳಲ್ಲಿ ಅರೆದು ಹೊಳಪು ಬರಿಸಿದ ತಣ್ಣನೆಯ ಕರಿಬಣ್ಣದ ನೆಲ. ಅದನ್ನು ಕೂಡಾ ಪ್ರತಿ ಎರಡು ವರ್ಷಕ್ಕೊಮ್ಮೆ ತಿಕ್ಕಿ ತೀಡಿ ನವೀಕರಿಸಬೇಕಾಗುತ್ತಿತ್ತು. ಗೆದ್ದಲು, ತಿಗಣೆ ಮುಂತಾದವುಗಳು ಬರದಂತೆ ಎಚ್ಚರ ವಹಿಸಬೇಕಿತ್ತು.

ಆಗ ಮನೆಗಳಲ್ಲಿ ಈಗಿನಂತೆ ಎಲ್ಲದಕ್ಕೂ ಪ್ರತ್ಯೇಕವಾಗಿ ಕೋಣೆಗಳಿರಲಿಲ್ಲ. ಮಲಗುವ ಕೋಣೆ, ಅಡಿಗೆ ಕೋಣೆ, ಮಕ್ಕಳ ಅಭ್ಯಾಸದ ಕೋಣೆ ಹೀಗೆ ಯಾವ ವಿಂಗಡಣೆ, ಅನುಕೂಲಗಳೂ ಇರಲಿಲ್ಲ. ಕೇವಲ ಕೆಲವೇ ಕೋಣೆಗಳು. ನಾಲ್ಕಾರು ಮಂದಿ ಮಲಗಬಹುದಾದಷ್ಟುವಿಸ್ತಾರದ ಒಂದು ಚಿಕ್ಕ ಜಗಲಿ, ಒಳಗೆ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಕೋಣೆಗಳು. ನಡುವೆ ದೇವರ ಕೋಣೆಯಾದರೆ ಉಳಿದದ್ದು ಅಡುಗೆಗೆ, ಮಲಗಲು, ಓದಲು ಹೀಗೆ ಎಲ್ಲದಕ್ಕೂ ಉಪಯೋಗಿಸಬೇಕಿತ್ತು. ಗಂಡಸರು ಹೊರಗೆ ಜಗಲಿಯಲ್ಲಿ ಮಲಗುತ್ತಿದ್ದರು.

ಮಕ್ಕಳು ಪ್ರಶ್ನೆ ಕೇಳಿದಾಗ ದೊಡ್ಡವರು ಏನ್ ಮಾಡ್ಬೇಕು ಗೊತ್ತಾ?

ಊರಲ್ಲಿ ಕೇವಲ ಕೆಲವೇ ಅನುಕೂಲಸ್ಥರ ಮನೆಗಳು ಹೆಂಚಿನ ಮಾಡನ್ನು ಹೊಂದಿದ್ದರೆ ಉಳಿದವುಗಳೆಲ್ಲಾ ಮಣ್ಣಿನ ಗೋಡೆ ಮತ್ತು ಮುಳಿಯ ಹುಲ್ಲಿನ ಹೊದಿಕೆಗಳದ್ದೇ. ಮಳೆಗಾಲದಲ್ಲಿ ಮಳೆಯ ಇರಿಚಲಿನ ರಭಸ ತಡೆಯಲು ಅಡಿಕೆಯ ಸೋಗೆ ಮತ್ತು ತೆಂಗಿನ ಮಡಲಿನ ತಡಿಕೆಗಳನ್ನು ಕಟ್ಟಬೇಕಿತ್ತು.ಮನೆಯಿಂದ ಪ್ರತ್ಯೇಕವಿರುವ ಬಚ್ಚಲುಮನೆಸೋಗೆ ಮತ್ತು ಮಡಲಿನಿಂದ ಮರೆ ಮಾಡಲ್ಪಡುತ್ತಿತ್ತು.. ಪಾಯಿಖಾನೆಗಳಂತೂ ಇದ್ದಿರಲೇ ಇಲ್ಲ.. ಬಹಿರ್ದೆಸೆಗೆ ಗುಡ್ಡ, ಬೈಲು, ತೋಡುಗಳನ್ನೇ ಅವಲಂಬಿಸಬೇಕಿತ್ತು. ಹೆಂಗಸರಂತೂ ಬೆಳಗಾಗುವ ಮೊದಲೇ ಎಲ್ಲವನ್ನೂ ಮುಗಿಸಿಕೊಳ್ಳಬೇಕಿದ್ದ ಅನಿವಾರ್ಯತೆ ಇತ್ತು. ಬ್ರಾಹ್ಮಣರ ಮನೆಗಳಲ್ಲಿ ಮಾತ್ರ ಪಕ್ಕದಲ್ಲಿಯೇ ಹಸುಗಳನ್ನು ಕಟ್ಟುವ ಕೊಟ್ಟಿಗೆಗಳಿರುತ್ತಿದ್ದವು. ಉಳಿದವರು ಕೋಳಿಗಳನ್ನು ಸಾಕುತ್ತಿದ್ದರು. ಮುಸಲ್ಮಾನರು ನಾಯಿ ಸಾಕುವಂತಿರಲಿಲ್ಲ. ಅವರನ್ನು ಹೊರತು ಪಡಿಸಿದರೆ ಬಹುತೇಕ ಎಲ್ಲರ ಮನೆಗಳಲ್ಲೂ ನಾಯಿಗಳಿರುತ್ತಿದ್ದುವು. ಮನೆ ಮತ್ತು ತೋಟಗಳನ್ನು ಕಾಯುವ, ಊರಿಗೆ ಯಾರೇ ಹೊಸಬರು ಬಂದರೂ ಮನೆಯ ಯಜಮಾನನಿಗೆ ತಿಳಿಸುವ ನಿಷ್ಠೆ ಈ ಕಾವಲುಗಾರರಿಗಿತ್ತು.

ಎದೆ ಹಾಲುಣಿಸೋ ತಾಯಿ ಆ್ಯಂಟಿಬಯೋಟಿಕ್ಸ್ ಸೇವಿಸೋದು ಸೇಫಾ?

ನಾನು ವನಜಾಕ್ಷಿ, ಹುಟ್ಟಿದ್ದು 1936ರಲ್ಲಿ. ನನಗೀಗ ಪ್ರಾಯ ಎಂಭತೈದು ವರ್ಷ.ಈಗ ತುಂಬ ಹಳೆಯ ಘಟನೆ ನೆನಪು ಮಾಡಿಕೊಳ್ಬೇಕು ಅಂದರೆ ತಟ್ಟನೆ ನನ್ನ ಕಣ್ಣ ಮುಂದೆ ಬರುವ ರೂಪ ನನ್ನ ಪ್ರೀತಿಯ ತಾಯಿ ಸೀತೆಯದ್ದು. ಅಂದು ಅವರ ದೇಹ ಮರಗಟ್ಟಿದಾಗ ನಮ್ಮ ಮನೆಯ ಆವರಣದಲ್ಲಿ ಸುತ್ತಮುತ್ತಲಿನ ಎಲ್ಲಾ ಜಾತಿಯ,ಎಲ್ಲಾ ವಯಸ್ಸಿನ ಗಂಡಸರೂ ಹೆಂಗಸರೂ ಮಕ್ಕಳೂಯಾವ ಭೇದಭಾವವೂ ಇಲ್ಲದೆ ಬಂದು ಸೇರಿದ್ದರು. ಊರ ಜನರೆಲ್ಲಾಬಂದು ಸೇರಿಕೊಂಡು ಅಳುತ್ತಿದ್ದ ದೃಶ್ಯವು ಈಗಲೂ ನನ್ನ ಕಣ್ಣಿಗೆ ಕಟ್ಟಿದ ಹಾಗೆ ಗೋಚರಿಸುತ್ತಿದೆ. ಆ ಸಮಯದಲ್ಲಿ ನನಗೆ ಹನ್ನೊಂದು ವರ್ಷ ಪ್ರಾಯವಾಗಿತ್ತು. ನನ್ನ ದೊಡ್ಡಣ್ಣ ವೇದವ್ಯಾಸನಿಗೆ ಹದಿನೇಳು, ಚಿಕ್ಕಣ್ಣ ರಘುರಾಮನಿಗೆ ಹದಿಮೂರುಮತ್ತು ತಮ್ಮವಸಂತವಾಸುದೇವನಿಗೆ ಆರು ವರ್ಷವೂ ಆಗಿತ್ತು. ತಂಗಿ ಸುಲೋಚನಾಳಿಗೆ ಮೂರು ಮತ್ತು ಸಣ್ಣ ತಂಗಿ ವತ್ಸಲಾಳಿಗೆ ಕೇವಲ ಒಂದೂವರೆ ವರ್ಷ ಪ್ರಾಯ ಆಗಿತ್ತು.ನಾವು ಆರು ಮಂದಿ ಚಿಕ್ಕ ಮಕ್ಕಳ ಜೊತೆಗೆ ನನ್ನ ತಾಯಿ ಇನ್ನೊಂದು ಹೆಣ್ಣು ಮಗು ಜೀವಕ್ಕೆ ಜನ್ಮ ನೀಡಿ, ಮರುದಿನವೇ ಎಲ್ಲರನ್ನೂ ನನ್ನ ತಂದೆಯವರ ಮಡಿಲಿಗೊಪ್ಪಿಸಿ ಜಗತ್ತಿನ ಯಾವ ಜಂಜಾಟವೂ ಬೇಡವೆಂಬಂತೆ ಇಹಲೋಕವನ್ನು ತ್ಯಜಿಸಿಯೇ ಬಿಟ್ಟಿದ್ದರು. ಆಗ ಏನು ನಡೆಯಿತೆಂದು ನನಗೆ ಗೊತ್ತಾಗಲೇ ಇಲ್ಲ. ಎಲ್ಲರೂ ಅಳುತ್ತಿರುವುದನ್ನು ನೋಡಿ ನಾನೂ ಕೂಡಾ ಬಿಕ್ಕಿ ಬಿಕ್ಕಿ ಅಳತೊಡಗಿದೆ. ಅತ್ತೂ ಅತ್ತೂ ಹಾಗೇ ನಿದ್ರೆಗೆ ನೂಕಲ್ಪಟ್ಟವಳಿಗೆ ಎಷ್ಟೋ ಗಂಟೆಗಳ ನಂತರ ಎಚ್ಚರವಾಗಿತ್ತು.ಆಗ ಮನೆಯವರಲ್ಲದೆ ನೆರೆಕರೆಯವರೂ ಸೇರಿದ್ದರು. ಅವರೆಲ್ಲಾ ಮಾತಾಡುತ್ತಿದ್ದಾಗ, ನಮ್ಮೆಲ್ಲರ ಪ್ರೀತಿಯ ತಾಯಿಯು ನಮ್ಮೆಲ್ಲರನ್ನೂ ತ್ಯಜಿಸಿ ಇನ್ನು ಮುಂದೆ ಎಂದೆಂದಿಗೂ ಬಾರದ ಲೋಕಕ್ಕೆ ಹೋಗಿರುವ ಸಂಗತಿ ನನ್ನ ಮಂದ ಬುದ್ಧಿಗೆ ಅರ್ಥವಾಗುತ್ತಾ ಹೋಯಿತು.

ಆವತ್ತು ರಘುವಣ್ಣ ಬೆಳಿಗ್ಗೆ ಶಾಲೆಗೆ ಹೋಗಿದ್ದನು. ಸಂಜೆ ಹೊತ್ತಿನಲ್ಲಿ ಶಾಲೆಯಿಂದ ಬರುವಾಗ ಮನೆಯಲ್ಲಿ ತುಂಬಾ ಜನರು ಸೇರಿರುವುದನ್ನು ನೋಡಿ ಅವನಿಗೆ ಆಶ್ಚರ್ಯವಾಗಿ ನನ್ನೊಡನೆ ಏನೂಂತ ವಿಚಾರಿಸಿದನು. ನಾನು ಅಳುತ್ತಾ ಇನ್ನು ಮುಂದೆ ನಮಗೆ ತಾಯಿಯಿಲ್ಲ ಎನ್ನುವಾಗ ಅವನಿಗೆ ದುಃಖ ತಡೆಯಲಾಗಲಿಲ್ಲ. ನಾವಿಬ್ಬರೂ ತಾಯಿಯ ಹೆಣವನ್ನು ನೋಡಿ ಬಹಳ ಹೊತ್ತು ಅತ್ತೆವು. ಆಗ ನಮ್ಮ ತಾಯಿಗೆ ಕೇವಲ ಮೂವತ್ತೆರಡು ವರ್ಷ ಮಾತ್ರ ಆಗಿತ್ತು. ತಂದೆಯವರಿಗೆ ನಲುವತ್ತಾರು ವರ್ಷ. ನಮ್ಮ ತಾಯಿ ಬದುಕಿದ್ದ ಅಷ್ಟುಚಿಕ್ಕ ವಯಸ್ಸಿನಲ್ಲಿ ಹತ್ತು ಮಕ್ಕಳನ್ನು ಹೆತ್ತಿದ್ದರು. ಕಣ್ಣು ಮುಚ್ಚುವ ಮೊದಲುಮೂರು ಮಕ್ಕಳನ್ನು ಕಳಕೊಂಡ ನೋವನ್ನು ಅನುಭವಿಸಿಬಿಟ್ಟಿದ್ದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ರಾಶಿಯವರು ಕೆಟ್ಟ ಅತ್ತೆಯಂತೆ, ಸೊಸೆಗೆ ಕಾಟ ಕೊಡೋದು ಜಾಸ್ತಿ
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!