ಲಾಕ್‌ಡೌನ್‌ನಲ್ಲಿ ಪತಿಪತ್ನಿ ಇಬ್ಬರೂ ಜೊತೆ ಕಳೆವ ಸಮಯದ ಸೌಂದರ್ಯ ಅರಿವಾಗಿದೆ. ಒಬ್ಬರಿಗೊಬ್ಬರ ಸಾಂಗತ್ಯವಿದ್ದರೆ, ಹಂಚಿಕೊಳ್ಳಬೇಕಾದುದನ್ನು ಅನಿಸಿದ ತಕ್ಷಣವೇ ಹೇಳುವ ಅವಕಾಶವಿದ್ದರೆ ಅದರಿಂದ ಮಾನಸಿಕವಾಗಿ ಎಷ್ಟು ಹತ್ತಿರವಾಗಬಹುದು ಎಂಬ ಅರಿವಾಗಿದೆ.
ನೈಜಬದುಕು ಕತೆಕಾದಂಬರಿಗಳಿಗಿಂಥ ಹೆಚ್ಚು ನಾಟಕೀಯವಾಗಿಯೂ, ಅನಿರೀಕ್ಷಿತವಾಗಿಯೂ ಇರುತ್ತದೆ. ಈ ಲಾಕ್‌ಡೌನ್ ಜೀವನವೇ ಅದಕ್ಕೆ ಉದಾಹರಣೆ. ಇಂಥದೊಂದು ಸಂದರ್ಭ ಎಂದಾದರೂ ಎದುರಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಆದರೆ, ಇಂದು ಲಾಕ್‌ಡೌನ್ ಎಂಬುದು ಪ್ರತಿಯೊಬ್ಬರ ಜೀವನವನ್ನೂ ವಿಭಿನ್ನ ರೀತಿಗಳಲ್ಲಿ ಬದಲಾಯಿಸಿದೆ. ಕಚೇರಿಗೆ ಹೋಗಿ ಮಾಡುವಷ್ಟೇ ಕೆಲಸವನ್ನು ಮನೆಯಿಂದಲೂ ಮಾಡಬಹುದೆಂಬುದು ಇದುವರೆಗೂ ಬಹುತೇಕರಿಗೆ ತಿಳಿದೇ ಇರಲಿಲ್ಲ. ಲಾಕ್‌ಡೌನ್ ಇದನ್ನು ತಿಳಿಸಿಕೊಟ್ಟಿದೆ. ಅಂತೆಯೇ ಸಂಬಂಧ ಹಾಗೂ ವಿವಾಹದ ಬಗ್ಗೆಯೂ ಹಲವಷ್ಟು ಪಾಠಗಳನ್ನು ಲಾಕ್‌ಡೌನ್ ತಿಳಿಸಿಕೊಟ್ಟಿದೆ. ಈ ಸಂದರ್ಭದಲ್ಲಿ ನಾವು ಕಂಡುಕೊಂಡ ಕೆಲವೊಂದು ಪಾಠಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡರೆ ಲೈಫ್ ಪಾರ್ಟ್ನರ್ ಜೊತೆಗಿನ ಬಂಧ ಹೆಚ್ಚು ಗಟ್ಟಿಯಾಗಿ ಮುಂದುವರೆಯುವುದು ಸಾಧ್ಯ.
ವಿವಾಹವೆಂದರೆ ಸಮಾನತೆ
ಲಾಕ್‌ಡೌನ್ ಇರಲಿಲ್ಲವೆಂದರೆ, ಮನೆಕೆಲಸಗಳು ಎಷ್ಟೊಂದು ಬಿಗಿಯಾಗಿರುತ್ತವೆ ಎಂಬುದನ್ನು ನಾವು ಎಂದಿಗೂ ಅರ್ಥ ಮಾಡಿಕೊಳ್ಳುತ್ತಿರಲಿಲ್ಲವೇನೋ ?! ಸಂಬಳವೇ ಇಲ್ಲದೆ ಮನೆಯಲ್ಲಿ ದುಡಿಯುವ ಪತ್ನಿಗೆ ಅದೆಷ್ಟು ಕೆಲಸಗಳಿರುತ್ತವೆ ಹಾಗೂ ಅವಕ್ಕೆ ಕೂಡಾ ಡೆಡ್‌ಲೈನ್ ಇರುತ್ತದೆ ಮತ್ತು ಅದು ಎಂದಿಗೂ ಮುಗಿಯದ ಜವಾಬ್ದಾರಿ ಎಂಬುದನ್ನು ಬಹಳಷ್ಟು ಗಂಡಸರು ಈಗ ಅರ್ಥ ಮಾಡಿಕೊಂಡಿದ್ದಾರೆ. ಪತಿಪತ್ನಿ ಇಬ್ಬರೂ ದುಡಿವ ಮನೆಗಳಲ್ಲಿ ಕೂಡಾ ಈ ಸಂದರ್ಭದಲ್ಲಿ ಕೆಲಸದವರಿಲ್ಲವಾದ ಕಾರಣ ಕಚೇರಿ ಕೆಲಸಗಳೊಟ್ಟಿಗೆ ಮನೆಗೆಲಸದ ಹೊಣೆಯೂ ಇಬ್ಬರ ಮೇಲೆ ಬಿದ್ದಿದೆ. ಇದರಿಂದ ಮನೆಗೆಲಸಗಳನ್ನು ಹಂಚಿಕೊಂಡು ಮಾಡುವ ದಂಪತಿಯು ಪತ್ನಿಯೊಬ್ಬಳೇ ಎಲ್ಲವನ್ನೂ ನಿಭಾಯಿಸಬೇಕೆಂದು ತಿಳಿದ ದಾಂಪತ್ಯಕ್ಕಿಂತ ಹೆಚ್ಚು ಸುಖವಾಗಿಯೂ, ಸಂತೋಷವಾಗಿಯೂ ಇದ್ದಾರೆ. ಸಮಾನತೆ ಎಂಬುದು ವೈವಾಹಿಕ ಜೀವನದಲ್ಲಿ ಎಷ್ಟು ಮುಖ್ಯವೆಂಬುದನ್ನು ಬಹಳ ಮನೆಗಳು ಕಳೆದೆರಡು ತಿಂಗಳಲ್ಲಿ ಕಲಿತಿವೆ.
ಪರಸ್ಪರ ಕ್ವಾಲಿಟಿ ಸಮಯ
ಜೀವನ ಸಂಗಾತಿಯೊಂದಿಗೆ ಕ್ವಾಲಿಟಿ ಸಮಯ ಕಳೆಯುವ ಪ್ರಾಮುಖ್ಯತೆಯನ್ನು ಲಾಕ್‌ಡೌನ್ ಕಲಿಸಿಕೊಟ್ಟಿದೆ. ಇಂದಿನ ಬ್ಯುಸಿ ಜೀವನದಲ್ಲಿ ಎಲ್ಲದಕ್ಕೂ ಸಮಯವನ್ನು ಹೊಂದಿಸುವುದು ಕಷ್ಟವೆಂದಾಗ ಬಹುತೇಕರು ಮನೆಯಲ್ಲಿ ಕಳೆಯುವ, ಸಂಗಾತಿಗಾಗಿ ನೀಡುವ ಸಮಯವನ್ನೇ ತ್ಯಾಗ ಮಾಡುವುದು. ಅವರು ಅರ್ಥ ಮಾಡಿಕೊಳ್ಳುತ್ತಾರೆಂದು ಆರಂಭವಾಗುವುದು ಕಡೆಗೆ ಅವರನ್ನು ಕಡೆಗಣಿಸುವ ಮಟ್ಟಕ್ಕೆ ಮುಟ್ಟಿರುತ್ತದೆ. ಇದರಿಂದ ಇಬ್ಬರ ನಡುವೆ ಒಂದು ಮಾನಸಿಕ ಸಂಘರ್ಷ ಏರ್ಪಟ್ಟಿರುತ್ತದೆ. ಆದರೆ, ಲಾಕ್‌ಡೌನ್‌ನಲ್ಲಿ ಪತಿಪತ್ನಿ ಇಬ್ಬರೂ ಜೊತೆ ಕಳೆವ ಸಮಯದ ಸೌಂದರ್ಯ ಅರಿವಾಗಿದೆ. ಒಬ್ಬರಿಗೊಬ್ಬರ ಸಾಂಗತ್ಯವಿದ್ದರೆ, ಹಂಚಿಕೊಳ್ಳಬೇಕಾದುದನ್ನು ಅನಿಸಿದ ತಕ್ಷಣವೇ ಹೇಳುವ ಅವಕಾಶವಿದ್ದರೆ ಅದರಿಂದ ಮಾನಸಿಕವಾಗಿ ಎಷ್ಟು ಹತ್ತಿರವಾಗಬಹುದು ಎಂಬ ಅರಿವಾಗಿದೆ. ಆದರೆ, ಇದರೊಟ್ಟಿಗೇ ವೈಯಕ್ತಿಕ ಸ್ಪೇಸ್ ನೀಡುವತ್ತಲೂ ಗಮನ ಹರಿಸಬೇಕು.
ವಿವಾಹವೆಂಬುದೂ ಟೀಂ ವರ್ಕ್
ಕಚೇರಿ ಕೆಲಸ ಹೇಗೆ ಟೀಂ ವರ್ಕ್ ಆಗಿರುತ್ತದೆಯೋ ವಿವಾಹ ಕೂಡಾ ಹಾಗೆಯೇ. ಟೀಂನ ಒಬ್ಬ ಸದಸ್ಯ ಕೆಲಸಕ್ಕೆ ಸಹಕಾರ ನೀಡದಿದ್ದರೂ ಕೆಲಸ ಕೈಕೊಡುತ್ತದಲ್ಲವೇ? ಹಾಗೆಯೇ ವಿವಾಹ ಕೂಡಾ ಇಬ್ಬರ ಟೀಂ ವರ್ಕ್. ಇಬ್ಬರೂ ಒಂದೇ ಯಂತ್ರದ ಚಕ್ರಗಳಂತೆ ಕಾರ್ಯ ನಿರ್ವಹಿಸಿದರೆ ಆ ಜೀವನ ಸಂತೋಷದಿಂದ ಕೂಡಿರುತ್ತದೆ. ಜವಾಬ್ದಾರಿಗಳನ್ನೂ ಇಬ್ಬರೂ ಹಂಚಿಕೊಂಡು ಮಾಡಿದಾಗ ಸಮಸ್ಯೆಗಳು ಅರ್ಧಕ್ಕರ್ಧ ಕಡಿಮೆಯಾಗುತ್ತವೆ. ಇದರ ಅರಿವನ್ನು ಲಾಕ್‌ಡೌನ್ ಮಾಡಿಸುತ್ತಿದೆ.
undefined
ಜೊತೆ ಜೊತೆಯಲಿ
ಕಚೇರಿ ಟೆನ್ಷನ್‌ಗಳಿರಲಿ, ಫೈನಾನ್ಸ್ ತಲೆಬಿಸಿಗಳಿರಲಿ, ನೆಂಟರಿಷ್ಟರ ಸಮಸ್ಯೆಗಳಿರಲಿ- ಏನೇ ಇರಲಿ, ಅವೆಲ್ಲ ತಲೆಯಲ್ಲಿ ಕೊರೆಯುವಾಗಲೇ ಹಂಚಿಕೊಳ್ಳಲು ಜೊತೆಗೊಬ್ಬರು ಇದ್ದರೆ, ಅವರೇನೂ ಮಾಡಲಾಗದಿದ್ದರೂ ಕೇಳಿಸಿಕೊಂಡರೆ ಸಾಕು- ಅರ್ಧಕ್ಕರ್ಧ ಸಮಸ್ಯೆ ಕಡಿಮೆಯಾದಂತೆ ಮನಸ್ಸು ಹಗುರಾಗುತ್ತದೆ. ಹೀಗೆ ಮಾತುಕತೆಯ ಮಹತ್ವವನ್ನು ಲಾಕ್‌ಡೌನ್ ಕಲಿಸಿಕೊಟ್ಟಿದೆ. ಇದುವರೆಗೂ ಕಚೇರಿ ವಿಷಯ, ಮನೆ ವಿಷಯ ಎಂದು ಬೇರ್ಪಡಿಸಿ ಅದನ್ನು ಹೇಳಿದರೆ ಏನು ತಾನೇ ಅರ್ಥವಾದೀತು ಎಂದುಕೊಂಡು ನೀನು ಕೆಲವಷ್ಟೇ ವಿಷಯ ಮಾತನಾಡಲು ಅರ್ಹ ಎಂಬಂತೆ ತೋರಿಸಿಕೊಟ್ಟಿದ್ದರ ಫಲವಾಗಿ ಇಬ್ಬರ ನಡುವೆ ಕಂದರ ಏರ್ಪಟ್ಟಿರುತ್ತದೆ. ಆದರೆ, ಲಾಕ್‌ಡೌನ್‌ನಲ್ಲಿ ಹೊರಗಿನವರ್ಯಾರೂ ಮನೆಗೆ ಬರಲು ಅವಕಾಶ ಇಲ್ಲವಾದಂತಾಗಿದ್ದರಿಂದ ಎಲ್ಲವನ್ನೂ ಪರಸ್ಪರ ಪತಿಪತ್ನಿಯೇ ಹಂಚಿಕೊಳ್ಳಬೇಕಾಗಿ ಬಂತು. ಇದರಿಂದ ಕಚೇರಿ ವಿಷಯ, ಜಗತ್ತಿನ ಆಗುಹೋಗುಗಳು, ಮನೆವಿಷಯ ಎಲ್ಲವನ್ನೂ ಅವರೇ ಹಂಚಿಕೊಂಡಿದ್ದರಿಂದ ಪತಿಪತ್ನಿಯ ನಡುವೆ ಮಾತಿಗೆ ಕೊರತೆ ಇಲ್ಲ ಎಂಬ ಅರಿವಾಗಿದೆ. ಅಷ್ಟೇ ಅಲ್ಲ, ಯಾವುದನ್ನು ಬೇಕಾದರೂ ಹಂಚಿಕೊಳ್ಳಬಹುದಾದ ಜೋಡಿ ತಮ್ಮದು ಎಂಬುದು ಹೆಮ್ಮೆಯನ್ನೂ, ನೆಮ್ಮದಿಯನ್ನೂ ಮೂಡಿಸುತ್ತದೆ.
ಇದಿಷ್ಟು ಪಾಠಗಳನ್ನು ಬದುಕಿನುದ್ದಕ್ಕೂ ಪಾಲಿಸಿದರೂ ವೈವಾಹಿಕ ಜೀವನದಲ್ಲಿ ಎದುರಾಗುವ ನೂರಾರು ಸಮಸ್ಯೆಗಳು ಹೇಳಹೆಸರಿಲ್ಲದೆ ಮಾಯವಾಗುತ್ತವೆ. ಬದುಕು ಬಂಗಾರವಾಗುತ್ತದೆ.