ಕೋಲಾರದಲ್ಲಿ ತಂದೆಯೇ ಮಗಳನ್ನು ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ಹೆಂಡತಿ ತೀರಿಕೊಂಡ ಬಳಿಕ ಮೂವರು ಹೆಣ್ಣು ಮಕ್ಕಳನ್ನು ಸಾಕುತ್ತಿದ್ದ ವ್ಯಕ್ತಿ, ಹಿರಿಯ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಕೋಲಾರ (ಮಾ.12): ರಾಜ್ಯದ ಗಡಿ ಜಿಲ್ಲೆ ಕೋಲಾರದಲ್ಲಿ ಮತ್ತೊಮ್ಮೆ ನಾಗರೀಕ ಸಮಾಜ ತಲೆ ತಗ್ಗಿಸುವ ಕೃತ್ಯವೊಂದು ನಡೆದಿದೆ. ಹೆಂಡತಿಯನ್ನು ಕಳೆದುಕೊಂಡು ಮೂವರು ಹೆಣ್ಣು ಮಕ್ಕಳೊಂದಿಗೆ ಜೀವನ ಮಾಡುತ್ತಿದ್ದ ಅಪ್ಪ, ಮದುವೆ ವಯಸ್ಸಿಗೆ ಬಂದಿದ್ದ ಮಗಳನ್ನು ಮದುವೆ ಮಾಡಿ ಕೊಡುವುದನ್ನು ಬಿಟ್ಟು ತಾನೇ ಮಗಳನ್ನು ಗರ್ಭಿಣಿ ಮಾಡಿದ್ದಾರೆ.
ಹೌದು, ಕೋಲಾರದಲ್ಲಿ ಆಗಿಂದಾಗ್ಗೆ ಇಂತಹ ಅಮಾನವೀಯ ಹಾಗೂ ಅನಾಗರೀಕ ಕೃತ್ಯಗಳು ನಡೆಯುತ್ತಲೇ ಇರುತ್ತವೆ. ಹಾಸ್ಟೆಲ್ ಬಾಲಕಿಯರನ್ನು ಗರ್ಭಿಣಿ ಮಾಡುವುದು. 13 ವರ್ಷದ ಬಾಲಕಿಗೆ ಆಸ್ಪತ್ರೆಯಲಲಿ ಹೆರಿಗೆ. ಅಂತರ್ಜಾತಿ ವಿವಾಹವಾದರೆ ಮರ್ಯಾದಾ ಹತ್ಯೆ ಮಾಡುವುದು ಸೇರಿದಂತೆ ಹಲವು ಕೃತ್ಯಗಳು ನಡೆದಿದ್ದವು. ಆದರೆ, ಇದೀಗ ಸ್ವತಃ ಅಪ್ಪನೇ ಮಗಳ ಮೇಲೆ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿರುವ ಕೃತ್ಯ ನಡೆದಿದ್ದು, ಮತ್ತೊಮ್ಮೆ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಆಗಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಗ್ರಾಮವೊಂದರಲ್ಲಿ ಈ ಕೃತ್ಯ ನಡೆದಿದೆ. ಕೃಷಿ ಕೂಲಿ ಹಾಗೂ ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಆದರೆ, ಈ ದಂಪತಿ ಪೈಕಿ ಕಳೆದ 11 ವರ್ಷಗಳ ಹಿಂದೆ ಹೆಂಡತಿ ಅಸಹಜ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪುತ್ತಾರೆ. ಇದಾದ ನಂತರ ಚಿಕ್ಕ ಮನೆಯಲ್ಲಿ ಗಾರೆ ಕೆಲಸ ಮಾಡುತ್ತಾ ಸಣ್ಣ ಸಣ್ಣ ಮಕ್ಕಳನ್ನು ಸಾಕುತ್ತಿದ್ದ ಅಪ್ಪ ಹೆಣ್ಣು ಮಕ್ಕಳ ಪೋಷಣೆ ಮಾಡುತ್ತಿದ್ದನು. ಇದೀಗ ಮಕ್ಕಳು ಬೆಳೆದಿದ್ದು, ಹಿರಿಯ ಮಗಳು 20 ವರ್ಷ, ಎರಡನೇ ಮಗಳಿಗೆ 18 ವರ್ಷ ಹಾಗೂ ಚಿಕ್ಕ ಮಗಳಿಗೆ 16 ವರ್ಷಗಳಾಗಿದೆ.
ಇದನ್ನೂ ಓದಿ: ನಾಚಿಕೆ ಬಿಟ್ಟು ಮಹಿಳೆಯರು ಗಂಡನ ಕಿವಿಯಲ್ಲಿ ಪಿಸುಗುಡಬೇಕಾದ ರೊಮ್ಯಾಂಟಿಕ್ ಮಾತುಗಳು!
ಹೆಂಡತಿ ಇಲ್ಲದೇ ಜೀವನ ಮಾಡುತ್ತಿದ್ದ ಈ ವ್ಯಕ್ತಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ಸ್ವಂತ ಮಗಳನ್ನೇ ಬಳಸಿಕೊಂಡಿದ್ದಾನೆ. ಇಬ್ಬರು ಚಿಕ್ಕಮಕ್ಕಳು ಶಾಲೆ-ಕಾಲೇಜಿಗೆ ಹೋದಾಗ ಹಿರಿಯ ಮಗಳ ಮೇಲೆಯೇ ಮುಗಿಬಿದ್ದು ಅತ್ಯಾಚಾರ ಮಾಡಿದ್ದಾನೆ. ತನ್ನನ್ನು ಮದುವೆ ಮಾಡಿಕೊಟ್ಟು ಒಂದು ಜೀವನ ಕಟ್ಟಿಕೊಡಬೇಕಾದ ಹಾಗೂ ತನ್ನನ್ನು ರಕ್ಷಣೆ ಮಾಡಬೇಕಾದ ಅಪ್ಪನಿಂದಲೇ ತನ್ನ ಜೀವನ ಹಾಳಾಗುತ್ತಿದ್ದುದನ್ನು ಕಂಡು ಮಗಳು ಯಾರ ಬಳಿ ನ್ಯಾಯ ಕೇಳಬೇಕು ಎಂದು ಗೊತ್ತಾಗದೇ ಕೆಲವು ದಿನ ಸಹಿಸಿಕೊಂಡಿದ್ದಾಳೆ.
ಅಪ್ಪನ ಕೃತ್ಯಕ್ಕೆ ಬಲಿಯಾದ ಮಗಳು ಇದೀಗ 5 ತಿಂಗಳ ಗರ್ಭಿಣಿ ಆಗಿದ್ದಾಳೆ. ತಾನು ಗರ್ಭಿಣಿ ಆಗಿದ್ದರೂ ಬಿಡದೇ ಹುರಿದು ಮುಕ್ಕಲು ಬಂದಾಗ ಮಗಳು ಹೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಕಾಮಸಮುದ್ರಂ ಪೊಲೀಸರು ಮಗಳು ಕೊಟ್ಟ ದೂರಿನ ಆಧಾರದ ಮೇಲೆ ಆರೋಪಿ ತಂದೆಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಾರೆ, ಅಪ್ಪನ ರಕ್ಷಣೆಯಲ್ಲಿ ಬೆಳೆಯಬೇಕಿದ್ದ ಮಗಳ ಜೀವನ ಇದೀಗ ಅಪ್ಪನಿಂದಲೇ ಹಾಳಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಬೆಳೆ ತಾನೇ ಏನು ಮಾಡಲಾದೀತು ಎನ್ನುವ ಪರಿಸ್ಥಿತಿ ಮಗಳದ್ದಾಗಿದೆ.
ಇದನ್ನೂ ಓದಿ: ಡಿವೋರ್ಸ್ ಆಗಿ 9 ತಿಂಗಳು, ಮತ್ತೆ ಒಂದಾಗೋ ಚಾನ್ಸ್ ಇದ್ಯಾ? ಉತ್ತರ ಕೊಟ್ಟ ಚಂದನ್ ಶೆಟ್ಟಿ, ನಿವೇದಿತಾ ಗೌಡ!