ಒಬ್ಬಾಕೆ ಐವರ ಪತ್ನಿಯಾಗುವ ದ್ರೌಪದಿ ಪದ್ಧತಿ ನಿಜಕ್ಕೂ ಭಾರತದಲ್ಲಿದೆ!

By Suvarna News  |  First Published May 21, 2020, 3:56 PM IST

ಒಬ್ಬಾಕೆಯನ್ನು ಹಲವು ಮಂದಿ ಸಹೋದರರು ಮದುವೆಯಾಗುವ ಪದ್ಧತಿ ಭಾರತದಲ್ಲಿ ಮೊದಲಿನಿಂದಲೂ ಇತ್ತು. ವಿಶೇಷವಾಗಿ, ಹಿಮಾಲಯದ ಟಿಬೆಟ್‌ನ ಕೆಲವು ಭಾಗಗಳಲ್ಲಿ, ಹಿಮಾಚಲ ಪ್ರದೇಶದ ಕಿನ್ನೌರ್‌- ಸ್ಪಿಟಿ ವಲಯದಲ್ಲಿ ಈ ಪದ್ಧತಿ ಇತ್ತು, ಈಗಲೂ ಕೆಲವು ಕಡೆ ಉಳಿದುಕೊಂಡಿದೆ.


ಮಹಾಭಾರತದಲ್ಲಿ ಅರಗಿನ ಅರಮನೆಯಲ್ಲಿ ಸುಟ್ಟುಹೋಗದೆ ಪಾರಾದ ಪಾಂಡವರು, ಕುಂತಿಯ ಸಮೇತ ಏಕಚಕ್ರನಗರದಲ್ಲಿ ವಾಸಿಸುತ್ತಾರೆ. ಅಲ್ಲಿಗೆ ದ್ರೌಪದಿಯ ಸ್ವಯಂವರದ ಸುದ್ದಿ ಬರುತ್ತದೆ. ಐವರೂ ಪಾಂಡವರು ಬ್ರಾಹ್ಮಣ ವೇಷದಿಂದ ಅಲ್ಲಿಗೆ ಧಾವಿಸುತ್ತಾರೆ. ಸ್ವಯಂವರದಲ್ಲಿ ಎಲ್ಲ ಕ್ಷತ್ರಿಯರೂ ಸೇರುತ್ತಾರೆ. ಧುರ್ಯೋಧನ, ಕರ್ಣ ಮೊದಲಾದವರೂ ಅಲ್ಲಿಗೆ ಬಂದಿರುತ್ತಾರೆ. ಆದರೆ ಅವರೆಲ್ಲಾ ಬಿಲ್ಲನ್ನು ಎತ್ತಿ ಬಾಣ ಜೋಡಿಸಿ ಮತ್ಸ್ಯಯಂತ್ರ ಛೇದನ ಮಾಡಲಾಗದೆ ಸೋಲುತ್ತಾರೆ. ಆಗ ಮಹಾರಾಜ ದ್ರುಪದ, ಕ್ಷತ್ರಿಯರಲ್ಲದೆ ಇತರರೂ ಈ ಪ್ರಯತ್ನ ಮಾಡಬಹುದು ಎಂದು ಘೋಷಿಸುತ್ತಾನೆ. ಆಗ ಅರ್ಜುನ ಧೋತ್ರ ಸರಿಪಡಿಸಿಕೊಳ್ಳುತ್ತಾ ಎದ್ದು, ಬಿಲ್ಲಿಗೆ ಬಾಣ ಜೋಡಿಸಿ ಲೀಲಾಜಾಲವಾಗಿ ಮತ್ಸ್ಯಯಂತ್ರವನ್ನು ಭೇದಿಸುತ್ತಾನೆ. ಕ್ಷತ್ರಿಯರು ಸಿಟ್ಟಿಗೆದ್ದು ಆತನ ಮೇಲೆ ಜಗಳಕ್ಕೆ ಬರುತ್ತಾರೆ. ಭೀಮನೂ ಅರ್ಜುನನೂ ಸೇರಿ ಅವರನ್ನು ಸದೆಬಡಿಯುತ್ತಾರೆ. ನಂತರ ಅರ್ಜುನ ದ್ರೌಪದಿಯನ್ನು ಕರೆದುಕೊಂಡು ಬಂದು, ಮನೆಯೊಳಗಿದ್ದ ತಾಯಿಗೆ, ಅಮ್ಮಾ ಹೆಣ್ಣು ತಂದಿದ್ದೇವೆ ಅನ್ನುತ್ತಾನೆ. ಆಗ ಕುಂತಿಗೆ ಹೆಣ್ಣು ಎಂದುದು ಹಣ್ಣು ಎಂದಂತೆ ಕೇಳಿಸಿ, ಐವರೂ ಹಂಚಿಕೊಳ್ಳಿ ಎನ್ನುತ್ತಾಳೆ. ತಾಯಿಯ ಮಾತನ್ನು ಪಾಲಿಸಲು ಪಾಂಡವರು ಐವರೂ ಆಕೆಯನ್ನು ಮದುವೆಯಾಗುತ್ತಾರೆ. ಇದು ಒಂದು ಕತೆ.

ಈ ಕತೆಯಲ್ಲಿ ಒಂದು ತಮಾಷೆ ಇದೆ. ಯಾಕೆಂದರೆ, ಹಣ್ಣು ಎಂದು ಹೇಳಬೇಕಾದರೆ ಹಾಗೂ ಹಣ್ಣು- ಹೆಣ್ಣು ಎಂಬ ಉಚ್ಚಾರದ ವ್ಯತ್ಯಾಸ ಗೊತ್ತಾಗದೆ ಕುಂತಿ ಉತ್ತರಿಸಬೇಕಾದರೆ ಅವರಿಗೆ ಕನ್ನಡ ಬರುತ್ತಿರಬೇಕು! ಬೇರ್ಯಾವ ಭಾಷೆಯಲ್ಲೂ ಈ ವಿಶಿಷ್ಟತೆ ಇಲ್ಲ.

Latest Videos

ವ್ಯಾಸ ಭಾರತದಲ್ಲಿ ಈ ಕತೆ ಬೇರೆ ಬಗೆಯಲ್ಲಿದೆ. ಅಲ್ಲಿ ಅರ್ಜುನ ಗೆದ್ದು ತಂದ ಹೆಣ್ಣನ್ನು ನೋಡಿ ಉಳಿದ ನಾಲ್ವರೂ ಪಾಂಡವರು ಮೋಹಿತರಾಗುತ್ತಾರೆ. ಇದನ್ನು ಗಮನಿಸಿದ ತಾಯಿ ಕುಂತಿದೇವಿ, ದ್ರೌಪದಿಯ ಕಾರಣದಿಂದ ಪಾಂಡವರಲ್ಲಿ ಒಡಕು ಸೃಷ್ಟಿಯಾಗುವುದು ಬೇಡ ಎಂಬ ಕಾರಣದಿಂದ ದ್ರೌಪದಿ ಐವರ ಹೆಂಡತಿಯಾಗಲಿ ಎಂದು ಹೇಳಿ ಆಕೆಯ ಮನವೊಲಿಸುತ್ತಾಳೆ. ಮರುದಿನ, ಪರಿಣಯದ ಸಂದರ್ಭದಲ್ಲಿ ಐವರೂ ಪಾಂಡವರು ಮದುಮಕ್ಕಳಾಗಿ ಅಲಂಕೃತರಾಗಿ ಹಸೆಮಣೆಗೆ ಬಂದುದನ್ನು ನೋಡಿ ದ್ರುಪದ ರಾಜ ಕಂಗಾಲಾಗುತ್ತಾನೆ. ಇದು ಅಸಹ್ಯ ಕ್ರಮ, ಇದು ಸಾಧ್ಯವಿಲ್ಲ ಎನ್ನುತ್ತಾನೆ. ಆಗ ಅಲ್ಲಿಗೆ ಮಹರ್ಷಿಗಳಾದ ವೇದವ್ಯಾಸರು ಆಗಮಿಸಿ, ಒಬ್ಬಾಕೆಯನ್ನು ಐವರೂ ಮದುವೆಯಾಗುವುದು ರೂಢಿಯಲ್ಲಿದೆ, ಇದು ಶಾಸ್ತ್ರಸಮ್ಮತ, ಇದಕ್ಕೆ ಅಂಜಬೇಕಿಲ್ಲ ಎಂದು ಘೋಷಿಸುತ್ತಾರೆ. ವೇದವ್ಯಾಸರು ಹೇಳಿದ ಬಳಿಕ ಲೋಕವೇ ಇದನ್ನು ಒಪ್ಪಿಕೊಳ್ಳುತ್ತದೆ.

#Feelfree: ಮೊದಲಿನಂತೆ ಸುಖಿಸುವುದು ಸಾಧ್ಯವಾಗುತ್ತಿಲ್ಲ, ಏನು ಮಾಡಲಿ?

ಇದು ಜನಜನಿತ ಕತೆ. ವಿಶೇಷ ಎಂದರೆ, ಒಬ್ಬಾಕೆಯನ್ನು ಹಲವು ಮಂದಿ ಸಹೋದರರು ಮದುವೆಯಾಗುವ ಪದ್ಧತಿ ಭಾರತದಲ್ಲಿ ಮೊದಲಿನಿಂದಲೂ ಇತ್ತು. ವಿಶೇಷವಾಗಿ, ಹಿಮಾಲಯದ ಟಿಬೆಟ್‌ನ ಕೆಲವು ಭಾಗಗಳಲ್ಲಿ, ಹಿಮಾಚಲ ಪ್ರದೇಶದ ಕಿನ್ನೌರ್‌- ಸ್ಪಿಟಿ ವಲಯದಲ್ಲಿ ಈ ಪದ್ಧತಿ ಇತ್ತು, ಈಗಲೂ ಕೆಲವು ಕಡೆ ಉಳಿದುಕೊಂಡಿದೆ. ಈ ಪದ್ಧತಿಗೆ ಕಾರಣ ಊಹಿಸುವುದು ಸುಲಭ. ಹಿಮಾಲಯ ಪರ್ವತ ಪ್ರಾಂತ್ಯದ ಸಮಾಜ ಪುರುಷ ಪ್ರಧಾನವಾಗಿದ್ದು, ಅಲ್ಲಿ ಹೆಣ್ಣುಮಕ್ಕಳನ್ನು ಹೊರೆ ಎಂದು ಭಾವಿಸುತ್ತಿದ್ದುದರಿಂದ ಹೆಣ್ಣು ಶಿಶುಗಳನ್ನು ಸಾಯಿಸಲಾಗುತ್ತಿತ್ತು. ಹೀಗಾಗಿ ಅಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿ ಗಂಡಸರ ಸಂಖ್ಯೆ ಹೆಚ್ಚಾಯಿತು. ಮದುವೆಗೆ ಹುಡುಗಿಯರು ಸಿಗಲಿಲ್ಲ. ಆಗ ಮನೆಯ ಹಿರಿಯಣ್ಣನಿಗೆ ಮದುವೆ ಮಾಡಿ ತರುವ ಹೆಣ್ಣೇ ಉಳಿದ ಸಹೋದರರಿಗೂ ಪತ್ನಿ ಎನ್ನುವ ರೂಢಿ ಹುಟ್ಟಿಕೊಂಡಿತು ಎಂದು ಸಮಾಜ ಶಾಸ್ತ್ರಜ್ಞರು ಹೇಳುತ್ತಾರೆ.

ಜೇನು ತುಪ್ಪದ ಸವಿ ಗೊತ್ತು, ಜೇನು ನೊಣವೂ ಇಷ್ಟು ಉಪಕಾರಿಯೇ?

ಇದಕ್ಕೆ ಇನ್ನೊಂದು ಕಾರಣವಿದೆ. ಹಲವು ಸಹೋದರರಿಗೆ ಹಲವು ಪತ್ನಿಯರಿದ್ದರೆ, ಕುಟುಂಬದ ಆಸ್ತಿ ಒಡೆದು ಚೂರಾಗುವ ಆತಂಕ ಇರುತ್ತದೆ. ಪತ್ನಿ ಒಬ್ಬಳೇ ಆಗಿದ್ದರೆ ಆಗ ಮನೆ ಒಡೆಯುವ ಸಮಸ್ಯೆಯೇ ಇರುವುದಿಲ್ಲ. ಕುಂತಿ ಕೂಡ ದ್ರೌಪದಿ ಐವರ ಮಡದಿಯಾಗಲಿ ಎಂದದ್ದು ಪಾಂಡವರ ಒಗ್ಗಟ್ಟು ಒಡೆಯದಿರಲಿ ಎನ್ನುವ ಕಾರಣಕ್ಕಾಗಿಯೇ.

ಭಾರತದ ಕುರಿತ ಈ ವಿಷಯ ನಿಮಗ್ಗೊತ್ತಾ? 

ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ಗಡಿಭಾಗದ ಕೆಲವು ಬುಡಕಟ್ಟುಗಳಲ್ಲಿ, ತಮಿಳುನಾಡಿನ ಕೆಲವು ಬುಡಕಟ್ಟುಗಳಲ್ಲಿ ಈ ಪದ್ಧತಿ ರೂಢಿಯಲ್ಲಿತ್ತು. ಆದರೆ ಇಲ್ಲೂ ಹಿಮಾಲಯದಲ್ಲೂ ಆಧುನಿಕತೆ ಬೆಳೆದು ಬಂದಂತೆ ಇದೊಂದು ಅಸಹ್ಯ ಪದ್ಧತಿ ಎಂಬ ಭಾವನೆ ಯುವಜನರಲ್ಲಿ ಬಲಿಯಿತು. ಹೀಗಾಗಿ ಈ ಪದ್ಧತಿಗೆ ಅಂತ್ಯ ಹಾಡಲಾಯಿತು. ಹಿಮಾಲಯದ ಕಿನ್ನೌರ್‌ ಭಾಗದಲ್ಲಿ ಈಗಲೂ ಹಳೆಯ ತಲೆಮಾರಿನ ಕೆಲವು ಕುಟುಂಬಗಳು ಬಹುಪತಿತ್ವ ಹೊಂದಿರುವುದನ್ನು ಕಾಣಬಹುದು. 

click me!