ಅಜ್ಜನೊಂದಿಗೆ ಕೃಷಿಭೂಮಿಯಲ್ಲಿ ಮಗುವೊಂದು ಆಟವಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ನೋಡುಗರ ಕಣ್ಣಿಗೆ ತಂಪೆರೆಯುತ್ತಿದೆ.
ಹಳೆ ಬೇರು ಹೊಸ ಚಿಗುರು ಸೇರಿದರೆ ಮರ ಸೊಬಗು ಎಂಬ ಡಿವಿಜಿಯವರ ಗದ್ಯವನ್ನು ನೀವು ಕೇಳಿರಬಹುದು. ಹಳೆಯ ತಲೆಮಾರು ಹಾಗೂ ಆಗಷ್ಟೇ ಜನಿಸಿದ ಹೊಸ ತಲೆಮಾರುಗಳು ಒಟ್ಟು ಸೇರಿದರೆ ಬದುಕು ಸೊಗಸು ಎಂಬುದು ಇದರ ಅರ್ಥ. ಆದರೆ ಈಗಿನ ಜಮಾನದಲ್ಲಿ ಹಳೆ ಬೇರಿನೊಂದಿಗೆ ಹೊಸ ಚಿಗುರು ಕಾಲ ಕಳೆಯುವಂತಹ ಅವಕಾಶ ಸಿಗುವುದು ಬಲು ಅಪರೂಪ. ಪುಟ್ಟು ಮಕ್ಕಳು ಪೋಷಕರು ಒಂದು ಕಡೆಯಾದರೆ ಹೀರಿಜೀವಿಗಳು ಮತ್ತೆಲ್ಲೋ ಒಂಟಿಯಾಗಿ ಬದುಕುವ ಕಾಲಮಾನ ನಿರ್ಮಾಣವಾಗಿದ್ದು, ಮೊಮ್ಮಕ್ಕಳೊಂದಿಗೆ ಅಜ್ಜಿತಾತನಿಗೆ, ಅಥವಾ ಅಜ್ಜಿತಾತನಿಗೆ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುವ ಅವಕಾಶ ತುಂಬಾ ಅದೃಷ್ಟವಂತರಿಗಷ್ಟೇ ಈಗಿನ ಕಾಲದಲ್ಲಿ ಸಿಗುತ್ತಿದೆ. ಹೀಗಿರುವಾಗ ಅಜ್ಜನೊಂದಿಗೆ ಕೃಷಿಭೂಮಿಯಲ್ಲಿ ಮಗುವೊಂದು ಆಟವಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ನೋಡುಗರ ಕಣ್ಣಿಗೆ ಮಜಾ ನೀಡುತ್ತಿದೆ.
ವೀಡಿಯೋದಲ್ಲಿ ಏನಿದೆ?
ಕೃಷಿ ಭೂಮಿಯಲ್ಲಿ ಜೋಳದ ಗಿಡವನ್ನು ನೆಟ್ಟಿದ್ದು, ಅಜ್ಜ ಆ ಗಿಡಗಳಿಗೆ ನೀರೆರೆಯುತ್ತಿದ್ದರೆ ಗಿಡಗಳ ನಡುವಿನ ಜಾಗದಲ್ಲಿ ಇನ್ನು ನಡೆಯಲು ಬಾರದ ಅಂಬೆಗಾಲಿಡುವ ಮಗುವೊಂದು ಅಂಬೆಗಾಲಿಡುತ್ತಾ ನಗುತ್ತಾ ಸಾಗುತ್ತಿದೆ. ಅಜ್ಜ ಗಿಡಕ್ಕೆ ನೀರೆರೆಯುವ ವೇಳೆ ಮಗುವಿನ ಮೇಲೂ ನೀರಿನ ಸಿಂಚನ ಮಾಡುತ್ತಿದ್ದು, ಮೈ ಮೇಲೆ ನೀರು ಬಿದ್ದ ಕೂಡಲೇ ಮಗು ಕಚಗುಳಿ ಇಟ್ಟಂತೆ ನಗುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಮಗು ನಗುವಿನ ವೇಳೆಯೂ ತಾತನೂ ಖುಷಿಯಿಂದ ನಗುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ತನ್ನ ಮೈ ಮೇಲೆ ನೀರು ಬೀಳುತ್ತಿದ್ದಂತೆ ಮಗು ಖುಷಿಯಿಂದ ನಗುವುದನ್ನು ಕೇಳುವುದೇ ಒಂದು ಖುಷಿ.
Raichur Politics: ಒಂದೇ ಟಿಕೆಟ್‌ಗೆ ತಾತ-ಮೊಮ್ಮಗನ ನಡುವೆ ತೀವ್ರ ಪೈಪೋಟಿ; ಯಾರಿಗೆ ಕೊಡುತ್ತೆ ಕೈ?
ಮಗುವಿನ ಕಿಲಕಿಲ ನಗು ಮೆಚ್ಚಿದ ನೆಟ್ಟಿಗರು
Elaine Cristiane ಎಂಬುವವರು ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸ್ಪೇನಿಶ್ ಭಾಷೆಯಲ್ಲಿ ಅತ್ಯುತ್ತಮ ಜೀವಸತ್ವಗಳು ಎಂದು ಬರೆದುಕೊಂಡಿದ್ದಾರೆ. ವೀಡಿಯೋ ನೋಡಿದ ಅನೇಕರು ಮಗುವಿನ ಕಿಲಕಿಲ ನಗುವಿಗೆ ಮನಸೋತಿದ್ದು, ಮಗುವಿನ ನಗು ಕೇಳುವುದೇ ಒಂದು ಚೆಂದ ಎಂದು ಕಾಮೆಂಟ್ ಮಾಡಿದ್ದಾರೆ. ಈ ರೀತಿ ಮಣ್ಣಿನಲ್ಲಿ ಓಡಾಟ ಹಾಗೂ ಒಡನಾಟ ಮಗುವಿನ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು, ಮಗುವಿನ ರೋಗ ನಿರೋಧಕ ಶಕ್ತಿ ಇದರಿಂದ ಹೆಚ್ಚಾಗುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮರಳು ಕೆಸರು ನೀರು ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮಗು ಮಣ್ಣಿನಲ್ಲಿ ನೀರಿನ ಸಮ್ಮಿಲನದ ಜೊತೆ ಬಹಳ ಖುಷಿಯಿಂದ ಆಟವಾಡುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಅನೇಕರು ಇತ್ತೀಚಿಗಿನ ಹೊಸ ಪೋಷಕರು ಮಕ್ಕಳನ್ನು ಮಣ್ಣಿನಲ್ಲಿ ಆಟವಾಡಿಸಿದರೆ ರೋಗ ಬರುತ್ತದೆ ಎಂದು ಮಕ್ಕಳನ್ನು ಮಣ್ಣಿನಲ್ಲಿ ಆಟವಾಡಲು ಬಿಡದೇ ರಕ್ಷಣೆಯ ಪ್ರಯತ್ನ ಮಾಡುತ್ತಾರೆ. ಆದರೆ ಮಣ್ಣಿನಲ್ಲಿ ಬೆರೆಯುವುದರಿಂದ ಹಲವು ಪ್ರಯೋಜನಗಳಿವೆ. ಮಕ್ಕಳ ರೋಗ ನಿರೋಧಕ ಶಕ್ತಿಹೆಚ್ಚಾಗುತ್ತದೆ ಎಂಬುದನ್ನು ಅನೇಕ ಸಂಶೋಧನೆಗಳು ಸಾಬೀತುಪಡಿಸಿವೆ.
ದೇವೇಗೌಡರಿಂದ ಆಯೋಗಕ್ಕೆ ಸುಳ್ಳು ಮಾಹಿತಿ? ತಾತ-ಮೊಮ್ಮಗನ ವಿರುದ್ಧ ದೂರು