ಚಿರಕಾಲ ಇರಲಿ ಈ ಸ್ನೇಹ... ಇದ್ದರೆ ಸ್ನೇಹಿತರು ಹೀಗಿರಬೇಕು ನೋಡಿ

By Anusha KbFirst Published Nov 28, 2022, 10:08 PM IST
Highlights

ಕೆಲವರು ಆಪತ್ತಿಗಾಗುವವನೇ ನಿಜವಾದ ಸ್ನೇಹಿತ ಎಂದರೆ ಕಷ್ಟದಲ್ಲೂ ಸುಖದಲ್ಲೂ ಎಲ್ಲ ಏಳುಬೀಳುಗಳ ಜೊತೆಗಿರುವವರೆ ಸ್ನೇಹಿತರು ಎಂದು ಮತ್ತೆ ಕೆಲವರು ಹೇಳುತ್ತಾರೆ. ಅದೇನೇ ಇರಲಿ ಇಲ್ಲೊಂದು ಸ್ನೇಹಕ್ಕೆ ರೂಪಕ ಎನ್ನುವಂತಿರುವ ವಿಡಿಯೋವೊಂದು ವೈರಲ್ ಆಗಿದೆ.

ಸ್ನೇಹ ಒಂದು ಅತ್ಯದ್ಭುತ ಅನುಭವ... ಸ್ನೇಹವನ್ನು ಅನೇಕರು ಅನೇಕ ರೀತಿಯಲ್ಲಿ ಬಣ್ಣಿಸಿದ್ದಾರೆ. ಕೆಲವರು ಆಪತ್ತಿಗಾಗುವವನೇ ನಿಜವಾದ ಸ್ನೇಹಿತ ಎಂದರೆ ಕಷ್ಟದಲ್ಲೂ ಸುಖದಲ್ಲೂ ಎಲ್ಲ ಏಳುಬೀಳುಗಳ ಜೊತೆಗಿರುವವರೆ ಸ್ನೇಹಿತರು ಎಂದು ಮತ್ತೆ ಕೆಲವರು ಹೇಳುತ್ತಾರೆ. ಅದೇನೇ ಇರಲಿ ಇಲ್ಲೊಂದು ಸ್ನೇಹಕ್ಕೆ ರೂಪಕ ಎನ್ನುವಂತಿರುವ ವಿಡಿಯೋವೊಂದು ವೈರಲ್ ಆಗಿದೆ. ಅವರಿಬ್ಬರು ಒಂದು ಕಾಲದ ಆತ್ಮೀಯ ಸ್ನೇಹಿತರು. ಆದರೆ ಈಗ ಇಬ್ಬರ ಬಾಯಲ್ಲೂ ಹಲ್ಲುಗಳುದುರಿದು ಕೈ ನಡುಗುತ್ತಿದ್ದು, ಮಾತು ತೊದಲುತ್ತಿದೆ. ಇಬ್ಬರು ಹಣ್ಣು ಹಣ್ಣು ಮುದುಕಿಯರಾಗಿದ್ದಾರೆ. ಆದರೂ ಈ ಸ್ನೇಹಿತರು ಒಬ್ಬರನೊಬ್ಬರು ಮರೆತಿಲ್ಲ.. ಇಬ್ಬರೂ ಪರಸ್ಪರ ಭೇಟಿಯಾಗಿ ದಶಕಗಳೇ ಕಳೆದಿದ್ದರೂ ಮೊನ್ನೆ ಮೊನ್ನೆ ನೋಡಿದಂತಹ ಆತ್ಮೀಯತೆ ಆ ಸ್ನೇಹದಲ್ಲಿದೆ. ಇದೇ ಕಾರಣಕ್ಕೆ ಇವರಿಬ್ಬರ ದಶಕಗಳ ನಂತರ ಭೇಟಿಯಾದ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಅಂದಹಾಗೆ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ(Instagram) ಮುಕಿಲ್ ಮೆನನ್ (Mukhil Menon) ಅವರು ಪೋಸ್ಟ್ ಮಾಡಿದ್ದಾರೆ. ಇವರ ಸ್ನೇಹಕ್ಕೆ 80 ವರ್ಷಗಳೇ ಕಳೆದಿವೆ. ಇವರಿಬ್ಬರು ಬಾಲ್ಯದ ಸ್ನೇಹಿತರಾಗಿದ್ದು, ದಶಕಗಳ ಬಳಿಕ ಈಗ ಮತ್ತೆ ಭೇಟಿ ಮಾಡಿದಾಗ ಇಬ್ಬರು ತಮ್ಮ ಹಳೆಯ ಕ್ಷಣಗಳನ್ನು ನೆನಪು ಮಾಡಿಕೊಂಡು ಬಾಯ್ತುಂಬ ನಕ್ಕಿದ್ದಾರೆ. ಇವರಿಬ್ಬರಲ್ಲಿ ಒಬ್ಬರ ಮೊಮ್ಮಗ ಈ ಎರಡು ಹಿರಿಜೀವಗಳನ್ನು ಮತ್ತೆ ಒಂದಾಗುವಂತೆ ಮಾಡಿದ್ದಾರೆ. 

 

ಇನ್ಸ್ಟಾಗ್ರಾಮ್‌ನಲ್ಲಿ ಮುಕಿಲ್ ಮೆನನ್ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇದೊಂದು 80 ವರ್ಷಗಳಿಗಿಂತಲೂ ಹಳೆಯ ಸ್ನೇಹ (Friendship). ನನ್ನ ಅಜ್ಜಿ ಯಾವಾಗಲೂ  ನನಗೆ ನನ್ನ ಸ್ನೇಹಿತೆಯನ್ನು ಭೇಟಿಯಾಗಬೇಕು ಎಂದು ನನ್ನಲ್ಲಿ ಹೇಳುತ್ತಿದ್ದರು. ಹೀಗಾಗಿ ಇವರಿಬ್ಬರು ಪರಸ್ಪರ ಭೇಟಿಯಾಗುವಂತೆ ನಾನು ಮಾಡಿದೆ. ಅವರಿಬ್ಬರು ಮೊದಲ ಆರಿ ಭೇಟಿಯಾದ ಕ್ಷಣ ಹೇಗಿತ್ತು ಎಂಬುದು ಈ ವಿಡಿಯೋದಲ್ಲಿದೆ ಎಂದು ಮುಕಿಲ್ ಮೆನನ್ ಬರೆದುಕೊಂಡಿದ್ದಾರೆ. 

ಈ ಇಬ್ಬರಿಗೂ 80 ವರ್ಷ ದಾಟಿದ್ದರು ಇವರು ತಮ್ಮ ಬಾಲ್ಯದ ಸ್ನೇಹವನ್ನು ಮಾತ್ರ ಮರೆತಿಲ್ಲ. ಇಬ್ಬರು ಪರಸ್ಪರರನ್ನು ನೋಡಿ ಬಹಳ ಖುಷಿಯಾಗಿದ್ದು, ಕಷ್ಟಸುಖಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇವರ ಮೊಮ್ಮಗ ಇವರಿಬ್ಬರ ಹೆಸರನ್ನು ಮಾತ್ರ ಇಲ್ಲಿ ಉಲ್ಲೇಖಿಸಿಲ್ಲ. ಆದರೆ ಈ ವಿಡಿಯೋ ನಿಷ್ಕಲ್ಮಶ ಸ್ನೇಹಕ್ಕೆ ಅನುರೂಪವೆನಿಸುತ್ತಿದ್ದು, ಅನೇಕರು ಹಿರಿಜೀವಗಳ ಈ ಸ್ನೇಹವನ್ನು ನೊಡಿ ಭಾವುಕರಾಗಿದ್ದಾರೆ. 73 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಸ್ನೇಹಿತರ ನಡುವೆ ಪ್ರೀತಿ ಹುಟ್ಟಿದಾಗ…. ಏನು ಬದಲಾವಣೆ ನಿಮ್ಮಲ್ಲಾಗಬೇಕು?

ಇವರಿಬ್ಬರ ಸ್ನೇಹ ಹಾಗೂ ಇವರಿಬ್ಬರ ಒಡನಾಟ ಬಹಳ ಚೆನ್ನಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರಿಬ್ಬರನ್ನು ನೋಡಿದರೆ ನಮ್ಮ ಅಜ್ಜಿಯ ನೆನಪಾಗುತ್ತಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇದಂತೂ ಬೆಲೆ ಕಟ್ಟಲಾಗದು. ಅವರು ಹೇಗೆ ಭಾವುಕರಾಗಿರಬಹುದು ಎಂಬುದನ್ನು ಕೇವಲ ಕಲ್ಪಿಸಿಕೊಳ್ಳಬಹುದಷ್ಟೇ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ದೃಶ್ಯ ನೋಡಿ ನನ್ನ ಹೃದಯ ತುಂಬಿ ಬಂತು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದಂತು ತುಂಬಾ ಪರಿಶುದ್ಧವಾದ ಸ್ನೇಹ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಈ ಹಿರಿಜೀವಗಳ ಮುಗ್ಧ ಸ್ನೇಹ ಅನೇಕರ ಹೃದಯ ತುಂಬಿ ಬಂದಿದೆ. 

ಇಂಥಾ ಸ್ನೇಹಿತರು ನಿಮಗೂ ಇದ್ದಾರಾ? ನಿದ್ದೆಗೆ ಜಾರಿದ ಸಹಪಾಠಿಗೆ ಹೆಗಲು ಕೊಟ್ಟ ಸ್ನೇಹಿತ..!

click me!