
ಕಾನ್ಪುರ (ಜು.17): ದೀರ್ಘಕಾಲದ ಬೆನ್ನುಮೂಳೆಯ ಕಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದ 28 ವರ್ಷದ ವಿವಾಹಿತ ಮಹಿಳೆಯೊಬ್ಬರು ಕಾನ್ಪುರದಲ್ಲಿ ಆತ್ಮಹ*ಗೆ ಶರಣಾಗಿದ್ದಾರೆ. ಸಾಮಾನ್ಯವಾಗಿ ಆತ್ಮಹ* ಪ್ರಕರಣಗಳಲ್ಲಿ ಆರೋಪ-ಪ್ರತ್ಯಾರೋಪಗಳು ಕೇಳಿಬರುತ್ತವೆಯಾದರೂ, ಈಕೆ ಬರೆದಿಟ್ಟಿರುವ ಭಾವುಕ ಡೆತ್‌ನೋಟ್ ಮಾತ್ರ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. ತನ್ನ ಸಾವಿಗೆ ಯಾರನ್ನೂ ಹೊಣೆ ಮಾಡದ ಆಕೆ, ತನ್ನ ಮೇಲೆ ಅಪಾರ ಪ್ರೀತಿ ಮತ್ತು ಕಾಳಜಿ ತೋರಿಸಿದ ಪತಿ ಹಾಗೂ ಅತ್ತೆ-ಮಾವನಿಗೆ ಧನ್ಯವಾದ ಅರ್ಪಿಸಿ ಪ್ರಾಣ ತೊರೆದಿದ್ದಾರೆ.
ಮೃತ ಮಹಿಳೆಯನ್ನು ನಿಕ್ಕಿ ಅಲಿಯಾಸ್ ವೈಷ್ಣವಿ (28) ಎಂದು ಗುರುತಿಸಲಾಗಿದೆ. ಈಕೆಗೆ ಸುಮಾರು ಮೂರು ವರ್ಷಗಳ ಹಿಂದೆ ಶಿವಂ ಶುಕ್ಲಾ ಎಂಬುವವರೊಂದಿಗೆ ವಿವಾಹವಾಗಿತ್ತು. ದಂಪತಿಗೆ ಸಣ್ಣ ವಯಸ್ಸಿನ ಮಗನಿದ್ದಾನೆ. ಪೊಲೀಸ್ ಮತ್ತು ಕುಟುಂಬದ ಮೂಲಗಳ ಪ್ರಕಾರ, ವೈಷ್ಣವಿ ಕಳೆದ ಕೆಲವು ವರ್ಷಗಳಿಂದ ಗಂಭೀರವಾದ ಸ್ಪೈನಲ್ ಕಾಯಿಲೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಅವರಿಗೆ ಕಾನ್ಪುರ ಹಾಗೂ ದೆಹಲಿಯ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ನಿರಂತರ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೂ ಕಾಯಿಲೆ ವಾಸಿಯಾಗದ ಹಿನ್ನೆಲೆಯಲ್ಲಿ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು.
ವೈಷ್ಣವಿ ಆತ್ಮಹ*ಗೂ ಮುನ್ನ ಕೈಬರಹದಲ್ಲಿ ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ, ತಾವು ಸದಾ ಕಾಲ ಕುಟುಂಬದ ಜೊತೆಗಿರುತ್ತೇನೆ ಎಂದು ನೀಡಿದ್ದ ಭರವಸೆಯನ್ನು ಮುರಿಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. 'ಯಾರಿಗೂ ಇಂತಹ ಅತ್ತೆ-ಮಾವ ಸಿಗುವುದಿಲ್ಲ, ಇಂತಹ ಕುಟುಂಬವನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. ಪ್ರತಿಯೊಬ್ಬರೂ ನನ್ನನ್ನು ತಾಯಿಯಂತೆ ನೋಡಿಕೊಂಡಿದ್ದಾರೆ, ತುಂಬಾ ಕಾಳಜಿ ವಹಿಸಿದ್ದಾರೆ. ದಯವಿಟ್ಟು ನನ್ನ ಸಾವಿಗೆ ಯಾರೂ ದುಃಖಿಸಬೇಡಿ. ನನ್ನ ಅನಾರೋಗ್ಯದ ಅಸಹಾಯಕತೆಯಿಂದ ನಾನೇ ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆ' ಎಂದು ಬರೆದಿದ್ದಾರೆ.
ಇದರೊಂದಿಗೆ, ತಮ್ಮ ವಸ್ತುಗಳ ಬಳಕೆಯ ಬಗ್ಗೆಯೂ ಅವರು ಸೂಚನೆ ನೀಡಿದ್ದಾರೆ. ನನ್ನ ಸ್ಕೂಟರ್ ಮತ್ತು ಒಡವೆಗಳನ್ನು ನನ್ನ ಮೈದುನನಿಗೆ (ಪತಿಯ ಕಿರಿಯ ಸಹೋದರ) ಬರುವ ಭಾವಿ ಪತ್ನಿಗೆ ಉಡುಗೊರೆಯಾಗಿ ನೀಡಿ. ಈ ಒಡವೆಗಳನ್ನು ನನ್ನ ತಂದೆಯ ಹಣದಿಂದ ಖರೀದಿಸಲಾಗಿತ್ತು. ಹಾಗೆಯೇ ನನ್ನ ಮೊಬೈಲ್ ಫೋನ್ ಹಳೆಯದಾಗಿರಬಹುದು, ಆದರೆ ಅದನ್ನು ನನ್ನ ಅತ್ತೆಗೆ ನೀಡಿ ಎಂದು ಡೆತ್‌ನೋಟ್‌ನಲ್ಲಿ ವಿನಂತಿಸಿಕೊಂಡಿದ್ದಾರೆ.
ವೈಷ್ಣವಿ ಅವರ ಪತಿ ಶಿವಂ ಶುಕ್ಲಾ ಮಧ್ಯಪ್ರದೇಶದಲ್ಲಿ ರೈಲ್ವೆ ಉದ್ಯೋಗಿಯಾಗಿದ್ದಾರೆ. ಪತ್ನಿಯ ಅನಾರೋಗ್ಯದ ನಡುವೆಯೂ ಕುಟುಂಬದವರು ಆಕೆಗೆ ಉತ್ತಮ ಚಿಕಿತ್ಸೆ ಕೊಡಿಸುತ್ತಿದ್ದರು. ಇದರ ನಡುವೆಯೇ ವೈಷ್ಣವಿ ಇತ್ತೀಚೆಗೆ ನಡೆದ ದೆಹಲಿ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು ಹಾಗೂ ಮುಂದಿನ ಹಂತದ ದೈಹಿಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಆದರೆ, ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದ ಬೆನ್ನುಮೂಳೆಯ ಕಾಯಿಲೆಯಿಂದಾಗಿ ತಮಗೆ ದೈಹಿಕ ಪರೀಕ್ಷೆ ಎದುರಿಸಲು ಸಾಧ್ಯವಾಗದೇ ಇರಬಹುದು ಮತ್ತು ತಾವೆಂದೂ ಗುಣಮುಖರಾಗುವುದಿಲ್ಲ ಎಂಬ ಭೀತಿ ಆಕೆಯನ್ನು ತೀವ್ರವಾಗಿ ಕಾಡಿತ್ತು ಎಂದು ಆಕೆಯ ಸಂಬಂಧಿಕರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ರಾವತ್‌ಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣದ ಕುರಿತು ಮಾತನಾಡಿದ ಸಹಾಯಕ ಪೊಲೀಸ್ ಕಮಿಷನರ್ (ACP) ದಿಲೀಪ್ ಸಿಂಗ್, "ಪ್ರಾಥಮಿಕ ತನಿಖೆ ಮತ್ತು ಡೆತ್‌ನೋಟ್ ಪ್ರಕಾರ ಮಹಿಳೆ ತನ್ನ ಅನಾರೋಗ್ಯದ ಕಾರಣದಿಂದ ತೀವ್ರ ನೊಂದಿರುವುದು ಕಂಡುಬಂದಿದೆ. ಆಕೆಯ ತವರು ಮನೆಯವರಾಗಲಿ ಅಥವಾ ಪತಿಯ ಮನೆಯವರಾಗಲಿ ಪರಸ್ಪರ ಯಾರ ಮೇಲೂ ಯಾವುದೇ ರೀತಿಯ ದೂರು ಅಥವಾ ಆರೋಪಗಳನ್ನು ಮಾಡಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
ಪತ್ನಿಯ ಹಠಾತ್ ನಿರ್ಧಾರದಿಂದ ಆಘಾತಕ್ಕೊಳಗಾಗಿರುವ ಪತಿ ಶಿವಂ ಶುಕ್ಲಾ ಕಣ್ಣೀರು ಹಾಕುತ್ತಾ, "ನನ್ನ ಪತ್ನಿಯೇ ನನ್ನ ಜೀವಾಗಿದ್ದಳು. ಆಕೆ ಅನಾರೋಗ್ಯದಿಂದ ಬಳಲುತ್ತಿದ್ದರೂ ನನ್ನ ಸುಖ-ದುಃಖದ ಸಂಗಾತಿಯಾಗಿದ್ದಳು. ಆಕೆ ಯಾಕೆ ಈ ನಿರ್ಧಾರ ತಳೆದಳು ಎಂಬುದು ನನಗೆ ತಿಳಿಯುತ್ತಿಲ್ಲ. ಕಾಯಿಲೆ ಎಷ್ಟೇ ದೊಡ್ಡದಾಗಿದ್ದರೂ ನಾನು ಆಕೆಗೆ ಕೊನೆಯವರೆಗೂ ಚಿಕಿತ್ಸೆ ಕೊಡಿಸುತ್ತಿದ್ದೆ, ನನ್ನನ್ನು ಅಗಲಿ ಹೋಗಬಾರದಿತ್ತು" ಎಂದು ಕಂಬನಿ ಮಿಡಿದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.