
'ಲವ್ ಮಾಕ್ಟೇಲ್' ಸಿನಿಮಾದಲ್ಲಿ ಪ್ರೀತಿಸಿ ಮದುವೆಯಾದ ಹುಡುಗಿ ನಿಧಿಮಾ ಮಾರಕ ರೋಗಕ್ಕೆ ಬಲಿಯಾಗುತ್ತಾಳೆ. ಆಮೇಲೆ ಅವಳ ಸಮಾಧಿಗೆ ಆದಿ ನಿತ್ಯವೂ ಹೂ ಇಡುತ್ತಾನೆ. ಅಂತೆಯೇ ಇಲ್ಲೋರ್ವ ಪ್ರೇಮಿ ತನ್ನ ಪತ್ನಿ ಸಮಾಧಿಯನ್ನು ಅದ್ದೂರಿಯಾಗಿ ಕಟ್ಟಿಸಿ ಹೂವು ಇಡುತ್ತಿದ್ದಾರೆ.
ಪ್ರಶಾಂತ್ ಅವರು ಪತ್ನಿ ಸಮಾಧಿಯನ್ನು ಕಟ್ಟಿಸಿದ್ದು, ಅಲ್ಲಿ ಹೂವಿನ ಅಲಂಕಾರವನ್ನೇ ಮಾಡಿಸಿದ್ದಾರೆ. ಈ ವಿಡಿಯೋ ನೋಡಿದವರಿಗೆ ಪ್ರಶಾಂತ್ ಪ್ರೀತಿ ಎಂಥಹದ್ದು ಎಂದು ಅರ್ಥ ಆಗುವುದು. ಅಷ್ಟೆಲ್ಲ ವರ್ಷಗಳ ಕಾಲ ಪ್ರೀತಿಸಿದರೂ ಕೂಡ ಈ ಜೋಡಿಗೆ ಒಟ್ಟಿಗೆ ಬಾಳಲು ಅದೃಷ್ಟ ಇರಲಿಲ್ಲ.
ಲವ್ ಮ್ಯಾರೇಜ್ ಮಾಡಿಕೊಂಡಿದ್ದ ಹರ್ಷಿತಾ, ಪ್ರಶಾಂತ್!
ಹರ್ಷಿತಾ ಹಾಗೂ ಪ್ರಶಾಂತ್ ಹದಿನಾಲ್ಕು ವರ್ಷಗಳ ಕಾಲ ಪ್ರೀತಿಸಿದ್ದರು. ಹರ್ಷಿತಾ ಮಾಸ್ಟರ್ ಡಿಗ್ರಿ ಮಾಡಿದ್ದರು. ಆದರೆ ಪ್ರಶಾಂತ್ ಮಾತ್ರ ಅರ್ಧಕ್ಕೆ ಬಿಕಾಂ ಓದುವುದನ್ನು ನಿಲ್ಲಿಸಿ, ಕ್ಯಾಟರಿಂಗ್ ಬ್ಯುಸಿನೆಸ್ ಆರಂಭಿಸಿದ್ದರು. ಎರಡೂ ಕುಟುಂಬಗಳನ್ನು ಒಪ್ಪಿಸಿ ಈ ಜೋಡಿ ಮದುವೆ ಆಗಿತ್ತು. ಹರ್ಷಿತಾ ಮನೆಯಲ್ಲಿ ಆರಂಭದಲ್ಲಿ ಈ ಮದುವೆಗೆ ಒಪ್ಪಿಗೆ ಇರಲಿಲ್ಲ. ಆದರೂ ಇವರ ಪ್ರೀತಿಗೆ ಎರಡು ಕುಟುಂಬ ಮಣಿದಿತ್ತು. ಹರ್ಷಿತಾ ಅವರು ಎಂಕಾಂ ಓದಿದ್ದು, ಪ್ರತಿಷ್ಠಿತ ಕಂಪೆನಿಯಲ್ಲಿ ನಾಲ್ಕು ವರ್ಷ ಕೆಲಸ ಮಾಡಿದ್ದರು. ಮದುವೆಯಾದ್ಮೇಲೂ ಕೂಡ ಹರ್ಷಿತಾ ಅವರೇ ಖುಷಿಯಿಂದ ಕೆಲಸ ಮಾಡುತ್ತಿದ್ದರು.
ಜೋಡಿಯಾಗಿ ಬದುಕುವ ಅದೃಷ್ಟ ಇರಲಿಲ್ಲ!
ಒಂದು ವರ್ಷದ ಹಿಂದೆ ನಡೆದಿದ್ದ ಒಂದೇ ಒಂದು ಅಪಘಾತದಿಂದ 14 ವರ್ಷಗಳ ಪ್ರೀತಿ, 35 ದಿನದ ಮ್ಯಾರೀಡ್ ಲೈಫ್ ಎಂಡ್ ಆಗಿದೆ. ಮದುವೆಯಾದ ಬಳಿಕ ಹೊಸ ಜೋಡಿ, ದೇವಸ್ಥಾನ, ನೆಂಟರ ಮನೆ ಎಂದು ಓಡಾಡಿಕೊಂಡಿದೆ. ಬಹಳ ಗ್ರ್ಯಾಂಡ್ ಆಗಿ ಈ ಜೋಡಿ ಮದುವೆ ಆಗಿದೆ. ಮದುವೆ ವಿಡಿಯೋಗಳನ್ನು ನೋಡಿದ ಎಂಥವರಿಗೂ ಛೇ ಈ ರೀತಿ ಆಗಬಾರದು ಎಂದು ಅನಿಸುವುದು.
ಅಪಘಾತ ಹೇಗೆ ಆಯ್ತು?
ಹರ್ಷಿತಾಗೆ ಅವರ ಫ್ರೆಂಡ್ಸ್ ಜೊತೆ ಗೋವಾ ಹೋಗಬೇಕು ಎಂಬ ಆಸೆ ಇತ್ತು. ಪ್ರಶಾಂತ್‌ಗೆ ಗೋವಾ ಹೋಗೋದು ಇಷ್ಟವೇ ಇರಲಿಲ್ಲ. ಕೊನೆಗೂ ಹರ್ಷಿತಾ ಆಸೆಗೆ ಮಣಿದು ಅವರು ಒಪ್ಪಿಕೊಂಡಿದ್ದರು. ಎರಡು ಕಾರ್‌ನಲ್ಲಿ ಹರ್ಷಿತಾ ಹಾಗೂ ಪ್ರಶಾಂತ್ ಫ್ರೆಂಡ್ಸ್ ಜೊತೆಗೆ ಗೋವಾ ಹೊರಟರು. ಯಾವಾಗಲೂ ಪ್ರಶಾಂತ್ ಜೊತೆ ಕಾರ್‌ನಲ್ಲಿ ಹೋಗುತ್ತಿದ್ದ ಹರ್ಷಿತಾ ಈ ಬಾರಿ ಇನ್ನೊಂದು ಕಾರ್‌ನಲ್ಲಿ ಹೋಗಿದ್ದರು. ಮಕ್ಕಳು, ಮಹಿಳೆಯರು ಇದ್ದರು ಎಂದು ಎರಡು ಕಾರ್‌ನಲ್ಲಿ ಹೊರಟಿದ್ದರು. ಬೆಳಗ್ಗೆ ಮನೆಯಿಂದ 4.30ಕ್ಕೆ ಕಾರ್ ಹೊರಟಿದ್ದು, 7.30ಕ್ಕೆ ಅಪಘಾತ ಆಯ್ತು. ಓವರ್‌ಸ್ಪೀಡ್ ಮಾಡಿದ್ದಕ್ಕೆ ಅಪಘಾತ ಆಗಿದೆ. ದಾವಣಗೆರೆಯಲ್ಲಿ ನನ್ನ ಕಾರ್‌ಗೆ ಹರ್ಷಿತಾ ಬರಬೇಕಿತ್ತು, ಆದರೆ ಪ್ರಶಾಂತ್ ಕಾರ್ ರೀಚ್ ಆದರೂ ಕೂಡ ಹರ್ಷಿತಾ ಇದ್ದ ಕಾರ್ ರೀಚ್ ಆಗಲೇ ಇಲ್ಲ.
ಪ್ರಶಾಂತ್ ಏನು ಹೇಳ್ತಾರೆ?
ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡುವ ಪ್ರಶಾಂತ್, “ನಾವಿಬ್ಬರು ಮನಸ್ಸು ನೋಡಿ ಇಷ್ಟಪಟ್ಟಿದ್ದೆವು. ನನ್ನ ಜೊತೆ ಯಾವಾಗಲೂ ಹರ್ಷಿತಾ ಇದ್ದಳು. ಆರಂಭದಲ್ಲಿ ಅವಳು ನೋಡೋಕೆ ಚೆನ್ನಾಗಿ ಕೂಡ ಇರಲಿಲ್ಲ. ನಾನು ಅಂದ ನೋಡಿ ಪ್ರೀತಿ ಮಾಡಿರಲಿಲ್ಲ. ಈಗ ನನ್ನ ಮಾವನ ಜೊತೆಯೂ ನಾನು ಚೆನ್ನಾಗಿದ್ದೇನೆ. ಅವರ ಆರೋಗ್ಯ ಸರಿ ಇರೋದಿಲ್ಲ. ಮಗಳು ಹೋದಳು ಅಂತ ನಾನು ಮಾವನಿಂದ ದೂರ ಆಗಿಲ್ಲ” ಎಂದು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.