ಅಮ್ಮ ಎಂಬ ಮಮಕಾರಕ್ಕೆ ನಮಸ್ಕಾರ; ತಾಯಿಯ ಬಗ್ಗೆ ಸೆಲಬ್ರಿಟಿಗಳ ಮಾತು!

By Suvarna News  |  First Published May 10, 2020, 9:38 AM IST

ಸುಮ್ಮನೆ ಕುಳಿತಾಗ ನೆನಪಾಗುವಳು ತಾಯಿ, ಕೊನೆಯ ತನಕವೂ ಅವಳೇ ಮಹಾಮಾಯಿ, ತಾಯಿಯೆಂದರೆ ತವರು, ತವರ ನೆನೆದರೆ ಹುರುಪು, ತಾಯ್ನೆಲಕೆ, ತಾಯ್ನುಡಿಗೆ, ತಾಯ್ತನಕೆ ಅಮ್ಮನೇ ಮೊದಲು, ಅಮ್ಮನೇ ಕಲಶ. ಅಮ್ಮನ ದಿವಸದಂದು ತವರೂರ ತಿಟ್ಹತ್ತಿ ತಿರುಗಿ ನೋಡುವ ಎಳೆಮನಸ್ಸನ್ನು ಮೈಗೂಡಿಸಿಕೊಂಡು ಬರೆದ ಬರಹಗಳು ಇಲ್ಲಿವೆ. ಇವು ಎಲ್ಲ ಅಮ್ಮಂದಿರಿಗೂ ಅರ್ಪಣೆ.


ಅಮ್ಮ ನನ್ನ ಜೀವನದ ರಿಯಲ್‌ ಹೀರೋ

- ಪುನೀತ್‌ ರಾಜ್‌ಕುಮಾರ್‌

Latest Videos

undefined

ನಮಗೆ ಜನ್ಮಕೊಟ್ಟು ಜೀವನ ರೂಪಿಸುವುದೇ ತಾಯಿ. ಜೀವನಕ್ಕಿಂತ ದೊಡ್ಡ ಪಾಠ ಮತ್ತೊಂದಿಲ್ಲ. ನನಗೆ ನೆನಪಿರುವ ಹಾಗೆ ನಾನು ತುಂಬಾ ಹಠ ಮಾಡುತ್ತಿದ್ದವನು. ಬಾಲ ನಟನಾಗಿ ಶೂಟಿಂಗ್‌ ಸೆಟ್‌ಗೆ ಬರುತ್ತಿದ್ದಾಗಲೇ ನನ್ನ ಹಠ, ತರಲೆಗಳು ಒಂದೆರಡಲ್ಲ. ಅದನ್ನೆಲ್ಲ ತಾಳ್ಮೆಯಿಂದ ಸಹಿಸಿಕೊಂಡು ಪ್ರೀತಿ ತೋರಿದ್ದು ಅಮ್ಮ. ನನಗೆ ತಿಳುವಳಿಕೆ ಬಂದ ಮೇಲೆ ಅಮ್ಮ ನನಗೆ ಕಂಡಿದ್ದು ಶ್ರಮ ಜೀವಿ ಆಗಿ. ಯಾವಾಗಲೂ ಕೈಯಲ್ಲೊಂದು ಪರ್ಸ್‌ ಹಿಡಿದುಕೊಂಡು ಪ್ರತಿ ದಿನ ಕೆಲಸ ಕೆಲಸ ಅಂತ ಓಡುತ್ತಿದ್ದರು. ಎಷ್ಟುಕೆಲಸ ಮಾಡುತ್ತಿದ್ದರು ಅಂದರೆ ಒಂದು ಕಡೆ ಮನೆ, ಸಂಸಾರ, ಮಕ್ಕಳು ಮತ್ತೊಂದು ಕಡೆ ಸಿನಿಮಾಗಳ ನಿರ್ಮಾಣ, ಅಪ್ಪಾಜಿ ಅವರನ್ನು ನೋಡಿಕೊಳ್ಳುವುದು. ಇಷ್ಟೆಲ್ಲ ಕೆಲಸಗಳನ್ನು ಮಾಡುತ್ತಿದ್ದಾಗಲೂ ಅವರು ಎಂದೂ ಆಯಾಸಗೊಂಡವರಲ್ಲ.

ಮಗಳು ನಟಿ ಮೇಘ ಶ್ರೀ ಬಗ್ಗೆ ಮಾತೆಯ ಮಾತುಗಳು!

ತಾಯಿ ಭೂಮಿಗಿಂತ ಮಿಗಿಲು, ಜಗತ್ತಿನಲ್ಲಿ ತಾಯಿಗಿಂತ ದೊಡ್ಡ ಪ್ರೀತಿ ಮತ್ತೊಂದು ಇಲ್ಲ ಅಂತ ಗೊತ್ತಾಗಿದ್ದು ನಮ್ಮ ತಾಯಿಯ ಆ ಶ್ರಮವನ್ನು ನೋಡಿಯೇ. ಎಲ್ಲವನ್ನೂ ಪ್ರೀತಿಯಿಂದ ನಿಭಾಯಿಸಿಕೊಂಡು ಹೋಗುವ ಅಮ್ಮನ ಆ ಗುಣ ನನಗೆ ಪಾಠ. ಎಷ್ಟೇ ಕೆಲಸ ಇದ್ದರೂ ಬೇಸರ ಮಾಡಿಕೊಳ್ಳಬಾರದು, ಆಯಾಸ ನಮ್ಮ ಹತ್ತಿರಕ್ಕೂ ಬರಬಾರದು ಅಂತ ಕಲಿತಿದ್ದು ಅಮ್ಮನಿಂದಲೇ. ಹಾಗೆ ನೋಡಿದರೆ ನಾನು ಜೀವನದಲ್ಲಿ ಏನಾಗದಿದ್ದರೂ ಅಮ್ಮನ ಹಾಗೆ ಕಷ್ಟಪಟ್ಟು ಕೆಲಸ ಮಾಡುವಂತಾಗಬೇಕು ಅಂದುಕೊಳ್ಳುತ್ತಿದ್ದೆ. ಅವರ ನಗು, ಅವರ ಪ್ರೀತಿ, ಎಲ್ಲರ ಮೇಲೂ ಅವರು ತೋರುತ್ತಿದ್ದ ಅಭಿಮಾನ, ಸಂಸಾರವನ್ನು ಶ್ರದ್ಧೆಯಿಂದ ರೂಪಿಸುವ ಅವರ ತಾಯ್ತನ... ಹೀಗೆ ಪ್ರತಿಯೊಂದು ನನಗೆ ಒಂದು ಪಾಠ ಅಂತಲೇ ಭಾವಿಸುತ್ತೇನೆ. ಅಮ್ಮ ನನ್ನ ಜೀವನದ ರಿಯಲ್‌ ಹೀರೋ. ಅಮ್ಮ ನನ್ನ ಬದುಕಿನ ಬಹು ದೊಡ್ಡ ದಾರಿ.

ಅಮ್ಮನಿಂದ ಪ್ರತಿಫಲ ನಿರೀಕ್ಷೆ ಮಾಡದಿರುವುದು ಕಲಿತೆ

-ನೆನಪಿರಲಿ ಪ್ರೇಮ್‌, ನಟ

ನನ್ನ ತಾಯಿಯಿಂದ ನಾನು ಕಲಿತಿದ್ದು ತಾನೇ ಮಾಡಿದ ಕೆಲಸಕ್ಕೆ ಪ್ರತಿಫಲ ನಿರೀಕ್ಷೆ ಮಾಡದಿರುವುದು. ಹೊರಗಿನವರಿಂದ ಮಾತ್ರವಲ್ಲ ಗಂಡ ಮತ್ತು ಮಕ್ಕಳು ಯಾರಿಂದಲೂ ಏನನ್ನೂ ನಿರೀಕ್ಷೆ ಮಾಡದೆ ಪ್ರೀತಿಸುವುದು, ಕೆಲಸ ಮಾಡುವ ಅವರ ಆ ಗುಣವನ್ನು ನಾನು ನನ್ನ ತಾಯಿಂದ ಕಲಿತಿದ್ದೇನೆ. ಮತ್ತೊಂದು ತಾಳ್ಮೆ. ಅಂದರೆ ತಾಳ್ಮೆಗೆ ಮತ್ತೊಂದು ಹೆಸರು ಹೆಣ್ಣು ಅಂತಾರೆ. ಈ ಮಾತನನ್ನ ನಾನು ನಿಜವಾಗಲೂ ನೋಡಿದ್ದು ನನ್ನ ತಾಯಿ ಅವರಲ್ಲಿ. ನಾನು ಈಗ ನಟನಾಗಿ ಏನೆಲ್ಲ ಸಾಧನೆ ಕಟ್ಟಿಕೊಂಡು, ಮತ್ತಷ್ಟುಸಾಧನೆ ಅತವಾ ಗೆಲುವಿಗಾಗಿ ಹೋರಾಡುತ್ತಿದ್ದೇವೆ ಅಂದರೆ ತಾಳ್ಮೆಯೇ ಕಾರಣ. ಅದನ್ನು ನಾನು ಮೊದಲು ನೋಡಿದ್ದು ನನ್ನ ತಾಯಿ ಶಕುಂತಲಾ ಅವರಲ್ಲಿ. ತಾಳ್ಮೆ ಮತ್ತು ಪ್ರತಿಫಲ ನಿರೀಕ್ಷೆ ಮಾಡದಿರುವುದು... ಈ ಎರಡು ನನಗೆ ಅಮ್ಮ ಹೇಳದೆ ಕಲಿಸಿಕೊಟ್ಟಪಾಠಗಳು.

ಅವರ ಸಹನೆಯೇ ನನಗೆ ದಾರಿದೀಪ

-ಅಜಯ್‌ ರಾವ್‌

ನನ್ನ ತಾಯಿ ಹೆಸರು ಬಕುಲ ದೇವಿ. ಅಮ್ಮನಿಂದ ನಾನು ಹಲವು ಪಾಠಗಳನ್ನು ಕಲಿತಿದ್ದೇನೆ. ಯಾವುದೋ ಒಂದು ಘಟನೆ, ಒಂದು ಪಾಠ ಅಂತ ಹೇಳಲಾಗದು. ಆದರೆ, ಕಳೆದ ವರ್ಷ 22 ವರ್ಷಗಳಿಂದ ನನ್ನ ತಾಯಿ ಕಾಲು ನೋವಿನಿಂದ ಬಳಲುತ್ತಿದ್ದಾರೆ. ಅವರಿಗೆ ಆ ಕಾಲಿನ ನೋವು ಎಷ್ಟಿದೆ ಎಂಬುದು ಮನೆಯಲ್ಲಿ ಎಲ್ಲರಿಗೂ ಗೊತ್ತು. ಆದರೆ, ನಾನು ಹೋಗಿ ನೋವು ಇದೆಯಾ ಅಂತ ಕೇಳಿದರೆ, ಇಲ್ಲ ಅಂತ ನಗುತ್ತಾರೆ. ಮಗ ಸೇರಿದತೆ ತನ್ನ ನೋವನ್ನ ಯಾರಲ್ಲೂ ಹೇಳಿಕೊಳ್ಳದೆ, ಮಗನ ಮುಂದೆ ನಗುತ್ತ ನೋವು ಭರಿಸುವ ಶಕ್ತಿ. ಅವರ ತಾಳ್ಮೆ, ಸಹನೆ ಇದೆಯಲ್ಲ ಅದೇ ನನಗೆ ದೊಡ್ಡ ಪಾಠ. ನನಗೆ ಏನಾದರೂ ಜೀವನದಲ್ಲಿ ಕಷ್ಟಅಂತ ಯೋಚನೆ ಮಾಡುವಾಗ ನನ್ನ ತಾಯಿಯ ಆ ಕಾಲಿನ ನೋವು, ಅವರ ನಗು ಎರಡೂ ಕಣ್ಣ ಮುಂದೆ ಬಂದು ಎಲ್ಲ ಕಷ್ಟಗಳನ್ನು ಮರೆಸಿಬಿಡುತ್ತದೆ. ಅವರ ನೋವಿನ ಮುಂದೆ ನಮ್ಮ ಕಷ್ಟಗಳು ಯಾವ ಲೆಕ್ಕ ಅನ್ನುವ ಯೋಚನೆ ಬರುತ್ತದೆ. ಮತ್ತೆ ಉತ್ಸಾಹ ತುಂಬಿಕೊಂಡು ಮುಂದಿನ ದಾರಿ ಕಡೆ ನೋಡುತ್ತೇನೆ ಅಂದರೆ ಅದಕ್ಕೆ ನೋವಿನಲ್ಲೂ ನಗುವ ನನ್ನ ತಾಯಿಯ ಜೀವನವೇ ಸ್ಫೂರ್ತಿ ಮತ್ತು ಪಾಠ.

ಇನ್ನೊಬ್ಬರಿಗೆ ನೆರವಾಗುವ ಗುಣ ಅವರಿಂದಲೇ ಬಂದಿದ್ದು

-ರಾಗಿಣಿ

ಹೆಣ್ಣು ಮಕ್ಕಳ ನಿಜವಾದ ಜಗತ್ತೇ ತಾಯಿ. ಆಕೆ ನಮಗೆ ಜನ್ಮ ಕೊಟ್ಟು ಸಾಕಿ ಬೆಳೆಸುವುದನ್ನು ನಾವು ಈಗ ಪದಗಳಲ್ಲಿ ಹೇಳಕ್ಕೆ ಆಗಲ್ಲ. ಆದರೆ, ದೊಡ್ಡವರಾದ ಮೇಲೆ ಅವರು ಕೆಲವಾರು ಗುಣಗಳನ್ನಾದರೂ ನಾವು ಅಳವಡಿಸಿಕೊಂಡಾಗ ಅದು ನಮಗೆ ಪಾಠವಾಗಿ ಕಾಣುತ್ತದೆ. ನಾನು ಈಗ ಏನೇ ನೆರವು, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಿದ್ದೇನೆ ಅಂದರೆ ಅದು ನನ್ನ ತಾಯಿ ರೋಹಿಣಿ ಅವರಿಂದ ಕಲಿತಿದ್ದು. ಅವರು ಯಾವಾಗಲೂ ಹೇಳುವುದು ಒಂದೇ, ಸಾಧ್ಯವಾದರೇ ನಾಲ್ಕು ಜನಕ್ಕೆ ಸಹಾಯ ಮಾಡು. ನೀವು ಮಾಡುವ ಆ ಸಹಾಯ ಮುಂದೆ ನಿನ್ನ ಜೀವನಕ್ಕೆ ನೆರವಾಗುತ್ತದೆ ಎನ್ನುತ್ತಿದ್ದರು. ಇದರಲ್ಲಿ ಎರಡು ಅರ್ಥ ಇದೆ. ಒಂದು ಸಹಾಯ ಮಾಡುವ ಗುಣ ಬೆಳೆಸಿದ್ದು, ಜತೆಗೆ ಆ ಸಹಾಯ ಮುಂದೆ ತನ್ನ ಮಗಳಿಗೆ ನೆರವಾಗಲಿ ಎನ್ನುವ ತಾಯಿಯ ಸಹಜ ಪ್ರೀತಿ. ನನ್ನ ತಾಯಿಯ ಅವರ ಈ ನಿಸ್ವಾರ್ಥವಾದ ಮಾತುಗಳೇ ಈ ಕ್ಷಣಕ್ಕೂ ನಾನು ಮಾಡುತ್ತಿರುವ ನೆರವಿನ ಕೆಲಸಗಳಿಗೆ ಕಾರಣ ಆಗಿದೆ.

ಮಗುವಿನ ದಯದಿ ತಾಯಿಯ ಪದವಿ: ಶ್ವೇತಾ ಶ್ರೀವಾಸ್ತವ್'ಗೆ ತಾಯ್ತನದ ಅನುಭೂತಿ!

ನಾನು ನನ್ನಮ್ಮನ ಅಪ್‌ಡೇಟೆಡ್‌ ವರ್ಷನ್‌

ರಮೇಶ್‌ ಅರವಿಂದ್‌, ನಟ-ನಿರ್ದೇಶಕ

ನನ್ನ ತಾಯಿಯ ಹೆಸರು ಸರೋಜ. ನನಗೆ ತಿಳುವಳಿಕೆ ಬಂದ ಮೇಲೆ ಅಮ್ಮನಿಂದ ಕಲಿತ ಪಾಠ ಅನಿಸಿದ್ದು ಎರಡು ವಿಷಯಗಳು. ತೃಪ್ತಿ ಮತ್ತು ತಾಳ್ಮೆ. ಈ ಎರಡು ನನ್ನ ಜೀವನವನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಈಗ ನಮ್ಮ ಮನೆಯಲ್ಲಿ ಹಾಲ್‌ನಷ್ಟೇ ಆಗ ಇಡೀ ಮನೆಯ ಸೈಜ್‌ ಇತ್ತು. ಅಷ್ಟುಪುಟ್ಟಮನೆಯೇ ಸಾಕು ಎಂದುಕೊಂಡು ಇಡೀ ಸಂಸಾರವನ್ನು ಹೇಗೆ ಸಾಕಿದರು ಅಂದುಕೊಂಡಾಗ ನನಗೆ ಇಷ್ಟೇ ಸಾಕು, ಇಷ್ಟರಲ್ಲೇ ಜೀವನ ಮಾಡುವೆ, ನಮ್ಮ ಮಕ್ಕಳ ಭವಿಷ್ಯ ರೂಪಿಸುವೆ ಎನ್ನುವ ತಾಯಿಯ ಆ ತೃಪ್ತಿಕರ ಮನಸ್ಸು ಇತ್ತು. ಅದಕ್ಕೆ ಜೀವನದಲ್ಲಿ ಅವರಿಗೆ ನೆಮ್ಮದಿ, ಸಂತೋಷ ಇತ್ತು. ಹಾಗೆ ತಾಳ್ಮೆ. ನನ್ನ ತಾಯಿ ಅಡುಗೆ ಮನೆ ಬಿಟ್ಟು ಬೇರೆ ಜಗತ್ತು ನೋಡೇ ಇಲ್ಲ. ಆದರೂ ಆಕೆಗೆ ಆ ಬಗ್ಗೆ ಒಂದೇ ಒಂದು ದೂರು ಇಲ್ಲ, ತಾಳ್ಮೆಯಿಂದ ಕಿಚನ್‌ನಲ್ಲೇ ಜೀವನ ಕಂಡ ತಾಯಿ, ನಮಗೆ ಮಾತ್ರ ಇಡೀ ಪ್ರಪಂಚ ನೋಡುವ ಜೀವನ ರೂಪಿಸಿಕೊಟ್ಟಳು. ನಾನು ತಾಳ್ಮೆಯಿಂದ ಕಾದೆ ಬಹುಭಾಷಾ ನಟ ರಮೇಶ್‌ ಅರವಿಂದ್‌ ಆದೆ. ನನಗೆ ಇಷ್ಟುಸಾಕು ಎನ್ನುವ ತೃಪ್ತಿಯಲ್ಲಿದ್ದಾಗ ಎಲ್ಲವೂ ನನ್ನ ಹುಡುಕಿಕೊಂಡು ಬಂತು. ನನ್ನ ಅಮ್ಮನಿಂದ ಕಲಿತ ಈ ಪಾಠಗಳು ಹೀಗೆ ನನ್ನ ಜೀವನಕ್ಕೂ ದಾರಿ ದೀಪಗಳಾದವು. ಮಕ್ಕಳು ಹೆತ್ತವರ ಮುಂದುವರಿದ ಭಾಗ. ಅವರ ಮತ್ತೊಂದು ರೂಪ. ನಾನು ನನ್ನ ತಾಯಿಯ ಅಪ್‌ಡೇಟೆಡ್‌ ವರ್ಷನ್‌ ಅಷ್ಟೆ.

ಸಹಾಯ ಮಾಡುವ ಗುಣ ಅವರಿಂದಲೇ ಬಂದಿದ್ದು

-ನೀನಾಸಂ ಸತೀಶ್‌, ನಟ

ಒಮ್ಮೆ ನನ್ನ ಗೆಳೆಯ ಒಬ್ಬ ಮನೆಗೆ ಬಂದಿದ್ದ. ಅವನೂ ಕೂಡ ನನ್ನ ಹಾಗೆ ನಟ ಆಗಬೇಕು ಅಂತ ಒದ್ದಾಡುತ್ತಿದ್ದ ದಿನಗಳು. ನನ್ನ ತಾಯಿ ಅವರನ್ನು ನೋಡಿ ಯಾರು, ಏನ್‌ ಮಾಡ್ತಾರೆ ಅಂತೆ ಕೇಳಿದ್ರು. ಅವರೂ ನಟ ಆಗಬೇಕೆಂದು ಕಷ್ಟಪಡುತ್ತಿದ್ದಾರೆ ಎಂದರೆ ಈಗ ಅವರಿಗೆ ದುಡಿಮೆ ಎಷ್ಟುಅಂದ್ರು. ಏನೋ ಬರುತ್ತೆ ಬಿಡಿ. ಆದರೆ, ಜೀವನಕ್ಕೆ ಸಾಕಾಗುತ್ತಿಲ್ಲ ಎಂದೆ. ಆ ನನ್ನ ತಾಯಿ ಹೇಳಿದ್ದು, ನೀನು ಮಾತ್ರ ಚೆನ್ನಾಗಿರೋದು ಅಲ್ಲ, ನಿನ್ನ ಜತೆಯಲ್ಲಿರುವ ಫ್ರೆಂಡ್ಸು ಚೆನ್ನಾಗಿರಬೇಕು. ನಿನ್ನ ಜತೆಗೆ ನಿನ್ನ ಸ್ನೇಹಿತರು ಬೆಳೆಯುವುದೇ ನಿಜವಾದ ಸ್ನೇಹ ಎಂದರು. ಎಷ್ಟುನಿಸ್ವಾರ್ಥವಾದ ಭಾವನೆ ನನ್ನ ತಾಯಿಯಲ್ಲಿದೆ ಅಂತ ಗೊತ್ತಾಯಿತು. ಅವರ ಈ ಸ್ವಾರ್ಥವಿಲ್ಲದ ಯೋಚನೆ ಮಾಡುವ ಗುಣವೇ ನನಗೆ ಪಾಠ. ನನ್ನಲ್ಲಿ ಏನಾದರೂ ಸಹಾಯ ಮಾಡುವ ಗುಣ ಬಂದಿದ್ದರೆ ಅದು ನನ್ನ ತಾಯಿ ಅವರಿಂದ ಕಲಿತಿದ್ದು. ನನ್ನ ತಾಯಿ ಹೆಸರು ಚಿಕ್ಕತಾಯಮ್ಮ.

ಬದುಕು ಕಲಿಸುವ ದೊಡ್ಡ ಮೇಷ್ಟು್ರ ಅಮ್ಮ

-ಪ್ರೇಮ್‌, ನಿರ್ದೇಶಕ-ನಟ

ಪ್ರತಿಯೊಬ್ಬ ಮಗ, ಮಗಳಿಗೂ ಅಮ್ಮನೇ ಮೊದಲ ಪಾಠ ಶಾಲೆ ಅಂತಾರೆ. ಇದು ಕೇವಲ ಪುಸ್ತಕದ ಕೊಟೇಷನ್‌ ಅಲ್ಲ. ಎಲ್ಲ ಮಕ್ಕಳ ಜೀವನದಲ್ಲೂ ಇದು ನಿಜವಾಗಿದೆ. ನನ್ನ ಬದುಕಿನಲ್ಲಂತೂ ತಾಯಿಯೇ ಮೊದಲ ಗುರು ಎಂಬುದು ಜಾಸ್ತಿಯೇ ನಿಜ ಆಗಿದೆ. ಒಬ್ಬ ಮಾಮೂಲಿ ಪ್ರೇಮ್‌ ಹೆಸರಿನ ಹುಡುಗ, ನಿರ್ದೇಶಕ-ನಟ, ನಿರ್ಮಾಪಕ ಆದ ಈ ಪಯಣಕ್ಕೆ ನನ್ನ ತಾಯಿ ಹೇಳಿಕೊಟ್ಟಪಾಠವೇ ಕಾರಣ ಎನ್ನಬಹುದು. ಮಕ್ಕಳು ಹೇಗೆ ಇರಲಿ, ನಾವು ಅವರನ್ನ ಪ್ರೀತಿ ಮಾಡದೆ ಇರಬಹುದು, ನೋಡಿಕೊಳ್ಳದೆ ಇರಬಹುದು, ನಮ್ಮ ನಿತ್ಯ ಜೀವನದ ಓಟದಲ್ಲಿ ಅವರನ್ನ ಹಿಂದೆ ಬಿಟ್ಟು ಹೋಗಿಬರಹುದು, ಆದರೆ, ತಾಯಿ ಮಾತ್ರ ಮಕ್ಕಳನ್ನ ಯಾವತ್ತೂ ಹಿಂದೆ ಬಿಟ್ಟು ಹೋಗಲ್ಲ. ನಗರಕ್ಕೆ ಬಂದ ಮಗ ಏನೇನೋ ಆಗಿ ಹೋಗಿರುತ್ತಾನೆ. ಆದರೆ, ಅದು ತನ್ನ ಕೂಸು ಅಂತ ಅಮ್ಮ ಹುಡುಕುತ್ತಲೇ ಜೀವನ ಕಳೆದುಬಿಡುತ್ತಾಳೆ ಎನ್ನುವ ಜೋಗಿ ಕತೆಗೆ ನನ್ನ ನಿಜ ಜೀವನದ ತಾಯಿಯ ಪ್ರೀತಿಯೇ ಸ್ಫೂರ್ತಿ. ಹೀಗಾಗಿ ಅಮ್ಮನಿಂದ ಯಾವುದೋ ಒಂದು ಪಾಠ ಅಂತ ಕಲಿಯಲ್ಲ. ಇಡೀ ಜೀವನವನ್ನೇ ಕಲಿತಿರುತ್ತೇವೆ. ಜೀವನಕ್ಕಿಂತ ದೊಡ್ಡ ಪಾಠ ಇಲ್ಲ. ಆ ಪಠ್ಯದ ಮೊದಲ ಪುಟದ ಮೇಷ್ಟು್ರ ಅಮ್ಮನೇ.

click me!