ತಮ್ಮ ಮಗು ಬೇರೆ ಮಗುವಿನಿಂದ ಹೊಡೆತ ತಿನ್ನುವುದು, ಛೇಡಿಸಿಕೊಳ್ಳುವುದು, ಇತರೆ ಸಂಕಟಗಳಿಗೊಳಗಾಗುವುದನ್ನು ಯಾವ ಪೋಷಕರು ಕೂಡಾ ಸಹಿಸುವುದಿಲ್ಲ. ಆದರೆ ನಿಮ್ಮ ಮಗುವೇ ಇಂಥ ಬುಲ್ಲೀಯಿಂಗ್‌ನಲ್ಲಿ ತೊಡಗಿದ್ದರೆ ಏನು ಮಾಡುತ್ತೀರಿ?
ನಿಮ್ಮ ಮಗು ಬೇರೆ ಮಗುವಿನಿಂದ ಹೊಡೆಸಿಕೊಂಡು, ತಳ್ಳಿಸಿಕೊಂಡು, ಚೂಟಿಸಿಕೊಂಡೋ ಬಂದರೆ ಹೊಟ್ಟೆಯೆಲ್ಲ ಉರಿಯುತ್ತದಲ್ಲವೇ? ಇದರಿಂದ ಮಗುವಿನ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುವ ಜೊತೆಗೆ ದೈಹಿಕ ನೋವನ್ನೂ ಅನುಭವಿಸಬೇಕಾಗುತ್ತದೆ. ಪೋಷಕರಾಗಿ ಈ ಬಗ್ಗೆ ಕೇಳಲೇ ಕಷ್ಟವಾಗುತ್ತದೆ. ಅದಕ್ಕಿಂತ ಕೇಳಲು ಕಷ್ಟದ ವಿಷಯ ಯಾವುದು ಗೊತ್ತಾ? ನಿಮ್ಮ ಮಗುವೇ ಬೇರೆ ಮಕ್ಕಳಿಗೆ ಹೀಗೆ ತೊಂದರೆ ಕೊಡುತ್ತಿದೆ ಎಂಬ ದೂರುಗಳನ್ನು ಪದೇ ಪದೆ ಕೇಳುವುದು.
ಹೌದು, ಶಾಲೆಗೆ ಹೋದ ಮಗು ಸಹಪಾಠಿಗೆ ಹೊಡೆಯುವುದು, ತಳ್ಳುವುದು, ಆಡಿಕೊಳ್ಳುವುದು, ಬೆದರಿಸುವುದು ಮುಂತಾದುದನ್ನು ಮಾಡಿದಾಗ ಆ ಮಕ್ಕಳ ಪೇರೆಂಟ್ಸ್ ಶಾಲೆಗೆ ದೂರುತ್ತಾರೆ. ಶಾಲೆಯ ಆಡಳಿತ ನಿಮ್ಮನ್ನು ಕರೆಸಿ ಮಕ್ಕಳನ್ನು ಸರಿಯಾಗಿ ಬೆಳೆಸಿಲ್ಲವೆಂದು ದೂರುತ್ತದೆ. ಅಷ್ಟೇ ಅಲ್ಲ, ಈ ಗುಣದಿಂದಾಗಿ ನಿಮ್ಮ ಮಗುವಿಗೆ ಯಾವ ಮಕ್ಕಳೂ ಗೆಳೆಯರಾಗಲು ಬಯಸುವುದಿಲ್ಲ. ಅಲ್ಲದೆ, ಬೆಳೆವ ಸಿರಿ ಮೊಳಕೆಯಲ್ಲೇ ಎಂಬುದನ್ನು ನೆನಪಿಡಿ. ಹಾಗಾಗಿ, ಮಕ್ಕಳಲ್ಲಿ ಬುಲ್ಲೀಯಿಂಗ್ ಅಭ್ಯಾಸಗಳು ಕಂಡುಬಂದಾಗ ಆರಂಭದಲ್ಲೇ ಅದನ್ನು ಬದಲಾಯಿಸುವುದು ಮುಖ್ಯ. ಮಗುವಿನಲ್ಲಿ ಬುಲ್ಲೀಯಿಂಗ್ ಅಭ್ಯಾಸಗಳಿವೆ ಎಂಬುದನ್ನು ಕಂಡುಕೊಳ್ಳಲು ಈ ವರ್ತನೆಗಳನ್ನು ಗಮನಿಸಿ.
ಅವರ ಗೆಳೆಯರೆಂಥವರು?
ಮಕ್ಕಳು ಬೆಳೆಯುವ ಹಂತದಲ್ಲಿದ್ದಾಗ ಗೆಳೆಯರೂ ಸೇರಿದಂತೆ ಅವರ ಸುತ್ತಲೂ ಸರಿಯಾದ ರೀತಿಯ ವ್ಯಕ್ತಿಗಳಿದ್ದಾರೆ ಎಂಬುದನ್ನು ಪೋಷಕರು ಖಚಿತಪಡಿಸಿಕೊಳ್ಳುತ್ತಿರಬೇಕು. ಏಕೆಂದರೆ ಸಹವಾಸದಿಂದಲೇ ಸನ್ಯಾಸಿ ಕೆಡುವುದು. ತಮ್ಮ ಸುತ್ತಮುತ್ತಲೂ ಪಾಸಿಟಿವ್ ರೋಲ್ ಮಾಡೆಲ್‌ಗಳಿದ್ದಾಗ ಮಕ್ಕಳೂ ಅವರನ್ನೇ ಅನುಸರಿಸುತ್ತಾ ಸರಿಯಾದ ರೀತಿಯಲ್ಲಿ ಬೆಳೆಯುತ್ತಾರೆ. ಸುತ್ತಲಿದ್ದವರು ಸರಿಯಿಲ್ಲವಾದರೆ, ದುರ್ನಡತೆ ಹೊಂದಿದ್ದರೆ ಅದನ್ನು ಕೂಡಾ ಅನುಕರಿಸುವ ಅಪಾಯ ಹೆಚ್ಚು. ಸಾಮಾನ್ಯವಾಗಿ ತನ್ನ ಗೆಳೆಯರು ಬೆದರಿಸುವ, ರೌಡಿಸಂ ವರ್ತನೆ ತೋರುತ್ತಿದ್ದರೆ ಅದರಿಂದ ಮಗು ಇನ್ಫ್ಲುಯೆನ್ಸ್ ಆಗುವ ಸಾಧ್ಯತೆ ಹೆಚ್ಚು. ಅವರೊಂದಿಗೆ ಗೆಳೆತನ ಮುಂದುವರೆಸಲು ಕೂಡಾ ಅವರಂತೆಯೇ ದುರ್ನಡತೆಗಳನ್ನು ಅಭ್ಯಾಸ ಮಾಡಿಕೊಳ್ಳಬಹುದು. ಹಾಗಾಗಿ, ತಮ್ಮ ಮಕ್ಕಳ ಗೆಳೆಯರು ಎಂಥವರು ಎಂಬುದನ್ನು ಪೋಷಕರು ಗಮನ ಹರಿಸುತ್ತಿರಬೇಕು. ಜೊತೆಗೆ, ತಮ್ಮ ಒಡಹುಟ್ಟಿದವರೊಡನೆಯೂ ಮಗು ಜಗಳಗಂಟ ವರ್ತನೆ ತೋರುತ್ತದೆಯೇ ಎಂಬುದನ್ನೂ ನೋಡುತ್ತಿರಿ. ಒಂದು ವೇಳೆ ಹೌದಾದರೆ, ತಕ್ಷಣ ಆ ಅಭ್ಯಾಸಕ್ಕೆ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳಬೇಕು.
ಶಾಲೆಯಿಂದ ಪದೇ ಪದೆ ಫೋನ್ ಬರುತ್ತದೆಯೇ?
ನಿಮ್ಮ ಮಗು ಇತರರಿಗೆ ಟ್ರಬಲ್ ಮಾಡುತ್ತಿರುವುದರ ಬಗ್ಗೆ ಶಾಲೆಯಿಂದ ಪದೇ ಪದೆ ದೂರುಗಳು ಬರುತ್ತಿದ್ದರೆ, ಬಹುಷಃ ಮಗು ಅಸಮರ್ಪಕ ವರ್ತನೆ ತೋರುತ್ತಿರಬೇಕು. ಸಾಮಾನ್ಯವಾಗಿ ತಮ್ಮ ಓದು ಹಾಗೂ ಇತರೆ ಪ್ರತಿಭೆಗಳಿಂದ ಅಟೆನ್ಷನ್ ಪಡೆಯಲಾಗದ ಮಕ್ಕಳು, ಟೀಚರ್ ಹಾಗೂ ಸಹಪಾಠಿಗಳು ತನ್ನನ್ನು ಗುರುತಿಸಲೆಂದು ಅಟೆನ್ಷನ್‌ಗಾಗಿ ಬುಲ್ಲೀಯಿಂಗ್ ವರ್ತನೆ ತೋರಬಹುದು.
ಹಿಂದೆ ದೌರ್ಜನ್ಯಕ್ಕೊಳಗಾಗಿದ್ದರೇ?
ಮಗುವಿನ ಜಗಳಗಂಟ ವರ್ತನೆ ಕೆಲವೊಮ್ಮೆ ತಾನು ಅನುಭವಿಸಿದ ನೋವಿನ ಪರಿಣಾಮಗಳಿರಬಹುದು. ಹಿಂದೆ ಇತರೆ ಮಕ್ಕಳು ತನ್ನನ್ನು ಪದೇ ಪದೆ ಛೇಡಿಸುವುದು, ಹೊಡೆಯುವುದು, ಅವಮಾನಿಸುವುದು ಮಾಡಿದ್ದಿದ್ದರೆ, ಈ ಕುರಿತು ನಿಯಂತ್ರಣ ಸಾಧಿಸಲು ಹಾಗೂ ಸ್ವತಃ ನ್ಯಾಯ ಒದಗಿಸಿಕೊಳ್ಳಲು ಮಗು ಜಗಳಗಂಟ ಸ್ವಭಾವ ಅಳವಡಿಸಿಕೊಂಡಿರಬಹುದು. ಇದನ್ನು ಗುರುತಿಸುವುದು ಕಷ್ಟವೇ. ಆದರೆ, ಪೋಷಕರು ಮಕ್ಕಳೊಂದಿಗೆ ಉತ್ತಮ ಸಂವಹನ ಹೊಂದುವ ಮೂಲಕ ಮಕ್ಕಳು ತಮ್ಮ ಬಗ್ಗೆ ಹೇಳಿಕೊಳ್ಳುವಂತೆ ಸಂಬಂಧವಿರಿಸಿಕೊಳ್ಳಬೇಕು. ಮಕ್ಕಳಿಗೇ ತಮ್ಮ ಜಗಳಗಂಟ ಸ್ವಭಾವದ ಕುರಿತು ಗಮನಿಸಿಕೊಂಡು ಪ್ರೀತಿ ಹಾಗೂ ಸಹಾಯಕ್ಕಾಗಿ ಮೊರೆ ಹೋಗುವುದನ್ನು ಹೇಳಿಕೊಡಬೇಕು.
ಸರಿಯಾಗಿ ನಿದ್ರಿಸುತ್ತಿದ್ದಾರೆಯೇ?
ನಿದ್ರಾ ಸಮಸ್ಯೆಗಳು ಹಾಗೂ ಅಗ್ರೆಸಿವ್ ಸ್ವಭಾವದ ನಡುವೆ ಒಂದು ಲಿಂಕ್ ಇದೆ. ಸರಿಯಾಗಿ ನಿದ್ರಿಸದಿದ್ದಾಗ ಅದು ನಮ್ಮ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹಾಗೂ ಮೆದುಳಿನ ಕೌಶಲ್ಯಗಳನ್ನು ಕುಂದಿಸುತ್ತದೆ. ಇದೇ ರೀತಿ ಮಕ್ಕಳಲ್ಲೂ ಆಗುತ್ತದೆ. 2011ರಲ್ಲಿ ಮಿಶಿಗನ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನವು ನಿದ್ರಾ ಸಮಸ್ಯೆ ಇರುವ ಮಕ್ಕಳು ಚೆನ್ನಾಗಿ ನಿದ್ರಿಸುವ ಮಕ್ಕಳಿಗಿಂತ ಎರಡರಷ್ಟು ಬುಲ್ಲೀಯಿಂಗ್ ಸ್ವಭಾವ ಹೊಂದಿರುತ್ತಾರಂತೆ. ಬೆಳೆವ ಮಕ್ಕಳಿಗೆ ದಿನಕ್ಕೆ 8ರಿಂದ 9 ಗಂಟೆ ನಿದ್ರೆ ಬೇಕೇಬೇಕು. ಈ ನಿದ್ರೆಯಲ್ಲಿ ಕೊರತೆಯಾದರೆ ಅಥವಾ ಸಮಸ್ಯೆಗಳು ಕಾಣಿಸಿಕೊಂಡರೆ ಅವರು ಬೇಡದ ವರ್ತನೆ ತೋರುವ ಸಂಭವ ಹೆಚ್ಚು.
ಆನ್‌ಲೈನ್‌ಗೆ ಅಂಟಿಕೊಂಡಿದ್ದಾರೆಯೇ?
ಮಕ್ಕಳು ಅಂತರ್ಜಾಲವನ್ನು ಯಾವುದಕ್ಕೆಲ್ಲ ಬಳಸುತ್ತಾರೆ ಎಂಬ ಬಗ್ಗೆ ಪೋಷಕರು ಸದಾ ಜಾಗೃತೆ ವಹಿಸಿ ಕಣ್ಣಿಡಬೇಕು. ಏಕೆಂದರೆ ಆನ್‌ಲೈನ್‌ನಲ್ಲಿ ಸೈಬರ್ ಬುಲ್ಲೀಯಿಂಗ್ ರಿಸ್ಕ್ ಇರುವ ಜೊತೆಗೆ, ಮಕ್ಕಳಿಗೆ ತಮ್ಮ ಗುರುತನ್ನು ಮರೆಮಾಚಿ ಅನಾಮಿಕರಾಗಿ ಬೇಡದ್ದನ್ನೆಲ್ಲ ಹೇಳುವ ಅವಕಾಶ ಸಿಗುತ್ತದೆ. ಮಕ್ಕಳು ಆನ್‌ಲೈನ್ ವಿಡಿಯೋ ಗೇಮ್ಸ್ ಆಡುವುದರಲ್ಲಿ, ಹಿಂಸಾತ್ಮಕ ವಿಡಿಯೋಗಳನ್ನು ನೋಡುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರೆ ಅದು ಕೂಡಾ ಅವರ ಎಮೋಶನಲ್ ಹೆಲ್ತ್ ಮೇಲೆ ದುಷ್ಪರಿಣಾಮ ಬೀರುತ್ತದೆ.