ಆಟೋದಲ್ಲಿ ಬೀದಿನಾಯಿಗಳ ಜಾಲಿ ರೈಡ್: ಶ್ವಾನಕ್ಕಾಗಿ ಆಟೋ ಖರೀದಿಸಿದ ಬೆಂಗಳೂರಿನ ದಂಪತಿ

By Suvarna NewsFirst Published Jul 13, 2022, 12:13 PM IST
Highlights

ಶ್ವಾನಪ್ರಿಯರಿಗೆ ತಮ್ಮ ಮುದ್ದಿನ ಶ್ವಾನಗಳ ಮೇಲಿರುವ ಪ್ರೀತಿ ಒಂದು ಪಟು ಹೆಚ್ಚೆ ಇರುತ್ತದೆ. ಶ್ವಾನಗಳನ್ನು ಎಲ್ಲಿಗೆಲ್ಲಾ ಕರೆದೊಯ್ಯಲು ಸಾಧ್ಯವೋ ಅಲ್ಲಿಗೆಲ್ಲಾ ಅದರ ಕೆಲ ಮಾಲೀಕರು ಕರೆದೊಯ್ಯಲು ನೋಡುತ್ತಾರೆ.

ಸಾಕು ಪ್ರಾಣಿಗಳಿಗಾಗಿ ಕೆಲವರು ಏನು ಮಾಡಲು ಬೇಕಾದರೂ ಸಿದ್ಧರಿರುತ್ತಾರೆ. ಅದರಲ್ಲೂ ಶ್ವಾನಪ್ರಿಯರಿಗೆ ತಮ್ಮ ಮುದ್ದಿನ ಶ್ವಾನಗಳ ಮೇಲಿರುವ ಪ್ರೀತಿ ಒಂದು ಪಟು ಹೆಚ್ಚೆ ಇರುತ್ತದೆ. ಶ್ವಾನಗಳನ್ನು ಎಲ್ಲಿಗೆಲ್ಲಾ ಕರೆದೊಯ್ಯಲು ಸಾಧ್ಯವೋ ಅಲ್ಲಿಗೆಲ್ಲಾ ಅದರ ಕೆಲ ಮಾಲೀಕರು ಕರೆದೊಯ್ಯಲು ನೋಡುತ್ತಾರೆ. ಕೆಲ ದಿನಗಳ ಹಿಂದೆ ಕರ್ನಾಟಕದ ಬೆಳಗಾವಿಯಲ್ಲಿ ವ್ಯಕ್ತಿಯೊಬ್ಬರು 100 ಕೆಜಿಯ ಕೇಕ್‌ ಕತ್ತರಿಸಿ ಊರಿಗೆಲ್ಲಾ ಊಟ ಹಾಕಿ ಶ್ವಾನದ ಹುಟ್ಟುಹಬ್ಬ ಆಚರಿಸಿದ್ದರು. ಹಾಗೆಯೇ ಈಗ ಜೋಡಿಯೊಂದು ಶ್ವಾನಗಳ ಸಾಗಣೆಗಾಗಿ ರಿಕ್ಷಾವೊಂದನ್ನು ಖರೀದಿಸುವ ಮೂಲಕ ಸುದ್ದಿಯ ಕೇಂದ್ರವಾಗಿದ್ದಾರೆ.

ಬಹುತೇಕ ಶ್ವಾನ ಪ್ರಿಯರು ತಾವು ಹೋದಲೆಲ್ಲಾ ಶ್ವಾನವನ್ನು ಕರೆದೊಯ್ಯಬೇಕು ಎಂದು ಬಯಸುತ್ತಾರೆ. ಆದರೆ ಸ್ವಂತ ವಾಹನವಿದ್ದರೆ ಕೇಳುವವರು ಯಾರೂ ಇರುವುದಿಲ್ಲ. ಎಲ್ಲಿಗೆ ಬೇಕಾದರು ನೀವು ನಿಮ್ಮ ಶ್ವಾನವನ್ನು ಒಟ್ಟಿಗೆ ಒಯ್ಯಬಹುದು. ಆದರೆ ಖಾಸಗಿ ಅಥವಾ  ಸಾರ್ವಜನಿಕರು ಪ್ರಯಾಣಿಸುವ ರೈಲು ಬಸ್‌ಗಳಲ್ಲಿ ಪ್ರಾಣಿಗಳ ಸಾಗಣೆಗೆ ಅವಕಾಶವಿಲ್ಲ. ಇದೇ ಕಾರಣಕ್ಕೆ ದಂಪತಿಗಳು ಆಟೋ ರಿಕ್ಷಾವೊಂದನ್ನು ಖರೀದಿಸಿದ್ದು, ತಾವು ಹೋಗುವಲ್ಲೆಲ್ಲಾ ಈ ಶ್ವಾನವನ್ನು ಕರೆದೊಯ್ಯುತ್ತಿದ್ದಾರೆ.

ನಮ್ಮ ಪ್ರೀತಿಗೆ ಯಾವ ಗೇಟ್ ಕೂಡ ಅಡ್ಡಿಯಾಗದು... ಶ್ವಾನಗಳ ಮುದ್ದಾದ ಫೋಟೋ ವೈರಲ್‌

ಸಾಮಾನ್ಯವಾಗಿ ಬೀದಿ ನಾಯಿಗಳು ಎಂದರೆ ಬಹುತೇಕರು ಮೂಗು ಮುರಿಯುವುದೇ ಹೆಚ್ಚು. ಅವುಗಳು ನಮ್ಮಂತೆ ಜೀವ ಇರುವವು ಎಂದು ಯೋಚಿಸುವವರು ಬಹಳ ಕಡಿಮೆ. ಅವುಗಳಿಗೆ ಕಲ್ಲು ತೂರಿ ಗಾಯಗೊಳಿಸಿ ಕುಂಟುವಂತೆ ಮಾಡಿ ವಿಕೃತ ಆನಂದ ಪಡುವ ಅನೇಕರಿದ್ದಾರೆ. ಇಂತಹವರ ಮಧ್ಯೆ ಬೆಂಗಳೂರಿನಲ್ಲಿ ನೆಲೆಸಿರುವ ಜರ್ಮನ್‌-ಐರಿಶ್ ಜೋಡಿಯೊಂದು  ಎರಡು ಬೀದಿನಾಯಿಗಳನ್ನು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಸಲಹುತ್ತಿದ್ದು, ಅವುಗಳನ್ನು ತಮ್ಮ ಜೊತೆ ಜೊತೆಯಲ್ಲೇ ಕರೆದೊಯ್ಯುವ ಸಲುವಾಗಿ ಒಂದು ಆಟೋವನ್ನು ಖರೀದಿಸಿದ್ದಾರೆ. ಐರಿಶ್-ಜರ್ಮನ್ ದಂಪತಿ ಕೇಟೀ ಬೋಯ್ಲ್ ಮತ್ತು ಅರ್ನೆ ಜಾಚ್ ಕಳೆದ ವರ್ಷ ತಮ್ಮ ಎರಡು ಶ್ವಾನಗಳನ್ನು ತಾವು ಹೋದಲ್ಲಿಗೆ ಕರೆದೊಯ್ಯುವ ಸಲುವಾಗಿ ಆಟೋವನ್ನು ಖರೀದಿಸಿದ್ದರು. 

2020ರ ಡಿಸೆಂಬರ್‌ ಒಂದು ಸಂಜೆ ಕೇಟೀ ಬೋಯ್ಲ್ ಮತ್ತು ಅವರ ಸಂಗಾತಿ ಅರ್ನೆ ಜಾಚ್ ಅವರ ಶ್ವಾನ ರೆಕ್ಸ್ ಮನೆಯ ಔಷಧಿ ಕ್ಯಾಬಿನ್‌ನಿಂದ ಕೆಲವು ನೋವು ನಿವಾರಕ ಮಾತ್ರೆಗಳನ್ನು ಆಟವಾಡುತ್ತಾ ಜಗಿದು ಹಾಕಿರುವುದು ಅವರ ಗಮನಕ್ಕೆ ಬಂದಿದೆ. ಕೂಡಲೇ ಅವರು ಶ್ವಾನವನ್ನು ಪಶು ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಯಾವುದೇ ಆಟೋವಾಗಲಿ ಅಥವಾ ಕ್ಯಾಬ್‌ ಆಗಲಿ ಶ್ವಾನಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಒಪ್ಪದೇ ನಿರಾಕರಿಸಿವೆ. ಸುಮಾರು ಒಂದು ಗಂಟೆ ಕಾದ ಬಳಿಕ ಒಂದು ವಾಹನವನ್ನು ಹಿಡಿಯಲು ಅವರು ಯಶಸ್ವಿಯಾಗಿ ಶ್ವಾನಕ್ಕೆ ಚಿಕಿತ್ಸೆ ನೀಡಲು ಸಾಧ್ಯವಾಯಿತು.

ಈ ಘಟನೆಯ ಬಳಿಕ ಅವರು ಶ್ವಾನಗಳನ್ನು ಸಾಗಿಸುವ ಸಲುವಾಗಿ ಆಟೋವೊಂದನ್ನು ಖರೀದಿಸಿದ್ದಾರೆ. ಬಹುತೇಕ ಜಾತಿ ನಾಯಿಗಳನ್ನು ಸಾಕುವವರು ಕಾರುಗಳನ್ನು ಹೊಂದಿರುತ್ತಾರೆ. ಆದರೆ ಈ ಜೋಡಿ ಬೀದಿನಾಯಗಳನ್ನು ತುಂಬಾ ಮುದ್ದಾಗಿ ಸಾಕುತ್ತಿದ್ದು, ಅವುಗಳ ಖರೀದಿಗೆ ಆಟೋವೊಂದನ್ನು ಖರೀದಿಸಿದ್ದಾರೆ. ಈ ಆಟೋದಲ್ಲಿ ಇವರ ಎರಡು ಮುದ್ದಿನ ಶ್ವಾನಗಳನ್ನು ಅಗತ್ಯ ಬಿದ್ದಾಗ ಪಶು ಆಸ್ಪತ್ರೆಗೆ ಮತ್ತೆ ಕೆಲವೊಮ್ಮೆ  ನಗರಗಳಲ್ಲಿ ಸುತ್ತಾಡಲು ಕರೆದೊಯ್ಯುತ್ತಾರೆ. ಒಟ್ಟಿನಲ್ಲಿ ಈ ದಂಪತಿ ತಮ್ಮ ಕಾರ್ಯಗಳ ಮೂಲಕ, ಬೀದಿ ನಾಯಿಗಳ ಬಗ್ಗೆ ಅಸಹ್ಯವಾಗಿ ನೋಡುವ ಅನೇಕರ ಕಣ್ಣು ತರೆಸುವ ಪ್ರಯತ್ನ ಮಾಡುತ್ತಿದ್ದಾರೆ.

ಶ್ವಾನ ಪ್ರೀತಿಯಿಂದ ಗಳಿಸಿದ ಹಣವನ್ನು ಶ್ವಾನಕ್ಕೇ ಅರ್ಪಿಸಲು ಮುಂದಾದ ಸಿಂಪಲ್ ಸ್ಟಾರ್ 

ಕೆಲ ದಿನಗಳ ಹಿಂದೆ ಯುವಕನೋರ್ವ ತನ್ನ ಶ್ವಾನವನ್ನು ಹಿಂದೂ ಧಾರ್ಮಿಕ ಕ್ಷೇತ್ರ ಕೇದರನಾಥಕ್ಕೆ ಕರೆದೊಯ್ಯುವ ಮೂಲಕ ಭಾರಿ ಸುದ್ದಿಯಾಗಿದ್ದ. 

click me!