
ರಾಮನಗರ (ಜೂ.05): ರಾಷ್ಟ್ರಮಟ್ಟದಲ್ಲಿ ಕುತೂಹಲ ಕೆರಳಿಸಿದ್ದ ಕ್ಷೇತ್ರದವಾದ ಡಿ.ಕೆ. ಬ್ರದರ್ಸ್ ಭದ್ರಕೋಟೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು ಮೂರು ಬಾರಿಯ ಸಂಸದ ಡಿ.ಕೆ. ಸುರೇಶ್ ವಿರುದ್ಧ ಸ್ಪರ್ಧಿಸಿದ್ದರು. ಆದರೆ, ಇಲ್ಲಿ ಹೃದಯವಂತ ಡಾ.ಮಂಜುನಾಥ್ ಅವರ ಗೆಲುವಿಗಾಗಿ ಇನ್ಫೋಸಿಸ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷೆ ಡಾ. ಸುಧಾಮೂರ್ತಿ ಹರಕೆ ಹೊತ್ತಿದ್ದರು. ಇವರ ಹರಕೆಯ ಫಲ ಲಭಿಸಿದ್ದು, ದೇವರ ಪವಾಡವೆಂಬಂತೆ ಡಾ.ಸಿ.ಎನ್. ಮಂಜುನಾಥ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಲೋಕಸಭೆ ಚುನಾವಣೆಗೆ ಅತ್ಯಂತ ಜಿದ್ದಿನ ಕ್ಷೇತ್ರವಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾಕ್ಟರ್ ಸಿಎನ್ ಮಂಜುನಾಥ್ ಸ್ಪರ್ಧಿಸಿದ್ದರು. ಈ ಕ್ಷೇತ್ರದಲ್ಲಿ ಹಾಲಿ ಸಂಸದ ಕಾಂಗ್ರೆಸ್‌ನ ಡಿ.ಕೆ. ಸುರೇಶ್ ವಿರುದ್ಧ ಸ್ಪರ್ಧಿಸಿದ್ದು, ಅವರ ವಿರುದ್ಧ ಡಾ.ಮಂಜುನಾಥ್ ಗೆಲುವು ಸಾಧಿಸುವುದಕ್ಕೆ ದೇವರ ಪವಾಡವೇ ನಡೆಯಬೇಕು ಎಂಬ ವಾತಾವರಣವಿತ್ತು. ಆದರೆ, ಇಲ್ಲಿ ದೇವರ ಪವಾಡವೆಂಬಂತೆ ಡಿ.ಕೆ. ಬ್ರದರ್ಸ್ ಭದ್ರಕೋಟೆಯನ್ನು ಬೇಧಿಸಿ ಡಾ.ಮಂಜುನಾಥ್ ಅವರು ಬರೋಬ್ಬರಿ 2.69 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಡಾ. ಮಂಜುನಾಥ್ ಒಳ್ಳೆಯ ವ್ಯಕ್ತಿ ಅಂತ ಜನ ಗೆಲ್ಲಿಸಿದ್ದಾರೆ, ಬಿಜೆಪಿಗೆ ಓಟ್ ಹಾಕಿಲ್ಲ: ಡಿ.ಕೆ.ಶಿವಕುಮಾರ್
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಫಲಿತಾಂಶದ ಬಗ್ಗೆ ಭಾರೀ ಕುತೂಹಲ ಇರುವಾಗಲೇ ಇನ್ಫೋಸಿಸ್ ಫೌಂಡೇಷನ್‌ನ ಅಧ್ಯಕ್ಷ ಹಾಗೂ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರು ಡಾಕ್ಟರ್ ಸಿ.ಎನ್. ಮಂಜುನಾಥ್ ಅವರ ಗೆಲುವಿಗಾಗಿ ಹರಕೆ ಹೊತ್ತಿದ್ದಾರೆ. ಮಂತ್ರಾಲಯದಲ್ಲಿ 6 ಕಿಲೋಮೀಟರ್ ಪಾದಯಾತ್ರೆ ನಡೆಸಿ ರಾಯರ ಸೇವೆ ಮಾಡುವ ಹರಕೆಯನ್ನು ಸುಧಾಮೂರ್ತಿ ಹೊತ್ತಿದ್ದರು. ಈ ಬಗ್ಗೆ ಸ್ವತಃ ಡಾಕ್ಟರ್ ಸಿ.ಎನ್. ಮಂಜುನಾಥ್ ಖಾಸಗಿ ಕಾರ್ಯಕ್ರಮವೊಂದರಲ್ಲಿ ಅವರೇ ತಿಳಿಸಿದ್ದರು. ಇತ್ತೀಚೆಗೆ ತಾವು ಸುಧಾಮೂರ್ತಿ ಅವರ ಮನೆಗೆ ಹೋದಾಗ ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ಹರಕೆ ಹೊತ್ತುಕೊಂಡಿರುವುದಾಗಿ ತಿಳಿಸಿದ್ದರು. ರಾಯರ ಸನ್ನಿಧಿಯಲ್ಲಿ 6 ಕಿಲೋಮೀಟರ್ ಪಾದಯಾತ್ರೆ ಮಾಡಿ ಸೇವೆ ಮಾಡಿದ್ದಾಗಿ ಹೇಳಿದ್ದಾರೆ. ಅವರ ಅಭಿಮಾನಕ್ಕೆ ನಾನು ಚಿರರುಣಿ ಎಂದು ಡಾಕ್ಟರ್ ಸಿಎನ್ ಮಂಜುನಾಥ್ ತಿಳಿಸಿದ್ದರು. ಇದರ ಬೆನ್ನಲ್ಲಿಯೇ ನಿನ್ನೆ ಫಲಿತಾಂಶ ಹೊರ ಬಿದಿದ್ದು, ದೇವರ ಪವಾಡವೆಂಬಂತೆ ಡಿ.ಕೆ. ಬ್ರದರ್ಸ್ ಭದ್ರಕೋಟೆಯನ್ನು ಬೇಧಿಸಿ ಮಂಜುನಾಥ್ ಜಯಭೇರಿ ಬಾರಿಸಿದ್ದಾರೆ.
ಇನ್ನು ರಾಜ್ಯದ ಜಯದೇವ ಹೃದ್ರೋಗ ಆಸ್ಪತ್ರೆ ಅಭಿವೃದ್ಧಿಗೆ ಆಡಳಿತಾತ್ಮಕವಾಗಿ ಡಾ. ಮಂಜುನಾಥ್ ಅವರ ಸಾಧನೆ ಮತ್ತು ಸೇವೆಯನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಆದರೆ, ಇದೇ ಜಯದೇವ ಹೃದ್ರೋಗ ಸಂಸ್ಥೆಯ ಅಭಿವೃದ್ಧಿಯಲ್ಲಿ ಡಾ.ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ದಂಪತಿ ಅಪಾರ ನೆರವು ನೀಡಿದ್ದಾರೆ. ಹೀಗಾಗಿ, ಕಠಿಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರೂ, ಸುಧಾಮೂರ್ತಿ ಅವರಿಗೆ ನನ್ನ ಮೇಲೂ ಕೂಡ ಭಾರೀ ನಂಬಿಕೆ ಇತ್ತು. ಹೀಗಾಗಿಯೇ ಅವರು ದೇವರ ಮೊರೆ ಹೋಗಿ ಹರಕೆ ಹೊತ್ತುಕೊಂಡಿದ್ದರು. ಇನ್ನು ಕಳೆದ 10 ದಿನಗಳ ಹಿಂದೆ ರಾಯರ ಸನ್ನಿಧಿಗೆ ತೆರಳಿ ಹರಕೆಯನ್ನೂ ತೀರಿಸಿದ್ದರು. ಆದರೆ, ಈ ಬಗ್ಗೆ ಅವರು ಎಲ್ಲಿಯೂ ಮಾಹಿತಿ ಹಂಚಿಕೊಂಡಿರಲಿಲ್ಲ.
ಹೀನಾಯ ಸೋಲಿನ ಬಳಿಕ ಚನ್ನಪಟ್ಟಣ ಬೈ ಎಲೆಕ್ಷನ್ ಮೇಲೆ ಕಣ್ಣಿಟ್ಟ ಡಿಕೆ ಬ್ರದರ್ಸ್!
ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಸ್ಥಾನದಿಂದ ನಿವೃತ್ತರಾದ ಮೇಲೆ ರಾಜಕಾರಣ ಪ್ರವೇಶಿಸಿದ ಡಾ.ಸಿ.ಎನ್. ಮಂಜುನಾಥ್ ಚೊಚ್ಚಲ ಚುನಾವಣೆಯಲ್ಲಿಯೇ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರನ್ನು 2,69,647 ಮತಗಳಿಂದ ಮಣಿಸಿ ಸಂಸತ್ ಪ್ರವೇಶಿಸಿದ್ದಾರೆ. ಡಾ.ಸಿ.ಎನ್.ಮಂಜುನಾಥ್ ರವರು ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಹಾಗೂ ಡಿ.ಕೆ.ಸುರೇಶ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರರಾಗಿದ್ದ ಕಾರಣ ಬೆಂಗಳೂರು ಗ್ರಾಮಾಂತರ ಹೈವೋಲ್ಟೇಜ್ ಕ್ಷೇತ್ರವಾಗಿತ್ತು. ಅಲ್ಲದೆ, ಬಿಜೆಪಿ-ಜೆಡಿಎಸ್ ದೋಸ್ತಿ ಪಕ್ಷಗಳು ಹಾಗೂ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಕಣವಾಗಿತ್ತು. ತೀವ್ರ ಹಣಾಹಣಿ ನಿರೀಕ್ಷಿಸಿದ್ದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ-ಜೆಡಿಎಸ್ ಮಿತ್ರಪಕ್ಷಗಳು ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡಿದಂತಾಗಿದೆ. ಈ ಬಾರಿ ಮತದಾರರು ತಿರಸ್ಕರಿಸುವ ಮೂಲಕ ಡಿ.ಕೆ.ಸುರೇಶ್ ಅವರ ನಾಲ್ಕನೇ ಬಾರಿ ಸಂಸತ್ ಪ್ರವೇಶಿಸುವ ಕನಸನ್ನು ಭಗ್ನಗೊಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.