ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿ ಇತಿಹಾಸ ಸೃಷ್ಟಿಸಿದ ತೃತೀಯಲಿಂಗಿ ಚರಿತಾ ಅವರು ರಾಜಕಾರಣಿ ಜೊತೆಗಿನ ಒಡನಾಟವನ್ನು ತೆರೆದಿಟ್ಟಿದ್ದಾರೆ. ಹೆಣ್ಣೆಂದು ತಿಳಿದು ಅವರು ತಮ್ಮ ಜೊತೆ ನಡೆದುಕೊಂಡ ರೀತಿಯಲ್ಲಿ ವಿವರಿಸಿದ್ದಾರೆ.
ಚರಿತಾ ಕೊಂಕಲ್ ಹೆಸರು ರಾಜಕೀಯ ಕ್ಷೇತ್ರದವರಿಗೆ ಚಿರಪರಿಚಿತ. ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿ ಇತಿಹಾಸ ಸೃಷ್ಟಿಸಿದವರು ಇವರು. ಮೊದಲ ತೃತೀಯಲಿಂಗಿಯೊಬ್ಬರು ರಾಷ್ಟ್ರಮಟ್ಟದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡವರು. ಮುಂಬೈನಿಂದ ಬೆಂಗಳೂರಿಗೆ ಬಂದು ಇಲ್ಲಿಯ ರಾಜಕಾರಣಿಯೊಬ್ಬರ ಪ್ರೀತಿಗೆ ಬಿದ್ದು ಆಮೇಲೆ ಅನುಭವಿಸಿದ ನೋವುಗಳ ಬಗ್ಗೆ ಯೂಟ್ಯೂಬರ್ ರಾಜೇಶ್ ಗೌಡ ಅವರ ಚಾನೆಲ್ನಲ್ಲಿ ಚರಿತಾ ಅವರು ನೋವಿನ ಮಾತುಗಳನ್ನಾಡಿದ್ದಾರೆ. ಥೇಟ್ ಹೆಣ್ಣಿನಂತೆಯೇ ಕಾಣುವ, ಸುಂದರವಾಗಿರುವ ಚರಿತಾ ಅವರನ್ನು ನೋಡಿದ ರಾಜಕಾರಣಿ ಹೆಣ್ಣೆಂದೇ ತಿಳಿದು ಕೆಲ ತಿಂಗಳು ಒಟ್ಟಿಗೇ ಇದ್ದು, ಆಮೇಲೆ ಅವರಿಗೆ ದೂರವಾಗಿ ನೋವು ಕೊಟ್ಟ ಘಟನೆಯನ್ನು ಚರಿತಾ ಈ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ. ರಾಜಕಾರಣಿಯ ಹೆಸರನ್ನು ನೇರವಾಗಿ ಹೇಳದೇ ತಾವು ಅನುಭವಿಸಿದ ಕಹಿ ದಿನಗಳನ್ನು ಅವರು ಹೇಳಿಕೊಂಡಿದ್ದಾರೆ.
'ನಾನು ಮುಂಬೈನಿಂದ ಬೆಂಗಳೂರಿಗೆ ನನ್ನ ಗುರುಗಳ ಜೊತೆ ಬಂದಿದ್ದೆ. ಇಲ್ಲಿಯೇ ಉಳಿಯುವ ಆಸೆಯಾಗಿ, ವಾಪಸ್ ಮುಂಬೈಗೆ ಹೋಗಲಿಲ್ಲ. ನನ್ನ ಗುರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಪಬ್, ಪಾರ್ಟಿ ಅಂತೆಲ್ಲಾ ಕರೆದುಕೊಂಡು ಹೋಗುತ್ತಿದ್ದರು. ಒಂದು ದಿನ ಪಬ್ಗೆ ಹೋದಾಗ ಆ ರಾಜಕಾರಣಿ ನನ್ನನ್ನು ನೋಡಿದರು. ಅವರು ನನ್ನ ಇತಿಹಾಸವನ್ನೆಲ್ಲಾ ಕೇಳಲೇ ಇಲ್ಲ. ನನ್ನ ಗುರುವನ್ನು ಕರೆದು ನನ್ನ ಜೊತೆ ಇರಬೇಕು ಎಂದು ಇಷ್ಟಪಟ್ಟರು. ಗುರುಗಳು ಅವರನ್ನು ನನಗೆ ಪರಿಚಯಿಸಿದರು. ನನಗೂ ಅವರು ಇಷ್ಟವಾಗಿ ಹೋದರು' ಎನ್ನುತ್ತಲೇ ಆ ರಾಜಕಾರಣಿಯ ಜೊತೆಗಿನ ಅನುಭವವನ್ನು ತೆರೆದಿಟ್ಟಿದ್ದಾರೆ ಚರಿತಾ.
undefined
ಅವತ್ತು ಬಟ್ಟೆ ತೊಳೆಯುತ್ತಿದ್ದಾಗ ಅವನು ಬಂದು... ಬದುಕು ಬದಲಿಸಿದ ಆ ದಿನ ನೆನೆದ ಬಿಗ್ಬಾಸ್ ನೀತು
ಎರಡು ತಿಂಗಳು ಹೀಗೆಯೇ ಇದ್ದೆವು. ಅವರೂ ನನ್ನ ಜೊತೆ ಪ್ರೀತಿಯಲ್ಲಿ ಬಿದ್ದರು. ನನಗೆ ಅಪ್ಪ-ಅಮ್ಮ, ಬಂಧು-ಬಳಗ, ಅಣ್ಣ-ತಮ್ಮ, ಸಹಪಾಠಿಗಳು... ಹೀಗೆ ಯಾರ ಪ್ರೀತಿಯನ್ನೂ ಬಲ್ಲವಳಲ್ಲ. ಹೀಗಾಗಿ ಮೂರನೆಯ ವ್ಯಕ್ತಿ ಬಂದು ನನ್ನನ್ನು ಈ ಪರಿಯಲ್ಲಿ ಪ್ರೀತಿಸುತ್ತಿದ್ದಾರೆ ಎಂದು ತಿಳಿದು ನಾನೂ ಪ್ರೀತಿಯ ಬಲೆಗೆ ಬಿದ್ದು ಬಿಟ್ಟೆ. ಮೊದಲ ಎರಡು ತಿಂಗಳು ನಮ್ಮ ನಡುವೆ ಶಾರೀರಿಕ ಸಂಪರ್ಕ ಇರಲಿಲ್ಲ. ಆದ್ದರಿಂದ ಅವರಿಗೆ ನಾನು ಟ್ರಾನ್ಸ್ಜೆಂಡರ್ ಎನ್ನುವುದು ತಿಳಿಯಲಿಲ್ಲ. ನನ್ನ ಗುರುಗಳಿಂದ ನನ್ನ ಇತಿಹಾಸವನ್ನು ಅವರು ತಿಳಿದುಕೊಂಡಿದ್ದರೂ ನನ್ನನ್ನು ಪ್ರೀತಿಸ್ತಾರೆ ಎಂದುಕೊಂಡು ನಾನು ಕೂಡ ನನ್ನ ಬಗ್ಗೆ ಹೇಳಲು ಹೋಗಲೇ ಇಲ್ಲ ಎಂದಿದ್ದಾರೆ ಚರಿತಾ. ಎರಡು ತಿಂಗಳು ಕಳೆದ ಮೇಲೆ ಅದೊಂದು ದಿನ ನನ್ನ ಸತ್ಯ ಅವರಿಗೆ ತಿಳಿಯಿತು. ನನ್ನನ್ನು ಬಿಟ್ಟು ಹೋದರು. ಆಗ ನಾನು ಅನುಭವಿಸಿದ ನೋವು ಅಷ್ಟಿಷ್ಟಲ್ಲ ಎಂದು ದುಃಖದ ದಿನಗಳನ್ನು ಚರಿತಾ ನೆನೆದಿದ್ದಾರೆ.
ತುಂಬಾ ಡಿಪ್ರೆಷನ್ಗೆ ಹೋಗಿಬಿಟ್ಟಿದ್ದೆ. ನನ್ನನ್ನು ಅವರು ದೊಡ್ಡ ಫ್ಲ್ಯಾಟ್ನಲ್ಲಿ ಇರಿಸಿದ್ದರು. ಆದರೆ ಒಂಟಿಯಾಗಿಬಿಟ್ಟೆ. ಅದಾದ ಸ್ವಲ್ಪ ದಿನಗಳಲ್ಲಿಯೇ ಅವರು ವಾಪಸ್ ಬಂದು, ನೀನು ಟ್ರಾನ್ಸ್ಜೆಂಡರ್ ಆದರೇನು, ನೀನೂ ಮನುಷ್ಯಳಲ್ವಾ? ನಮ್ಮ ಹಾಗೆ ನಿನಗೂ ಆಸೆ ಆಕಾಂಕ್ಷೆಗಳು ಇರತ್ತಲ್ವಾ ಎಂದು ಸಮಾಧಾನ ಪಡಿಸಿ ನನ್ನ ಜೊತೆಯಲ್ಲಿಯೇ ಉಳಿದುಕೊಂಡರು. ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಪಬ್, ಪಾರ್ಟಿಗಳಿಗೆಲ್ಲಾ ಕರೆದುಕೊಂಡು ಹೋಗುತ್ತಿದ್ದರು. ಅಷ್ಟನ್ನು ಬಿಟ್ಟರೆ ಮತ್ತೆಲ್ಲಿಯೂ ಕರೆದುಕೊಂಡು ಹೋಗ್ತಿರಲಿಲ್ಲ, ಮಾತ್ರವಲ್ಲದೇ ಫೋಟೋ, ವಿಡಿಯೋ ಯಾವುದಕ್ಕೂ ಅವಕಾಶ ಕೊಡುತ್ತಿರಲಿಲ್ಲ ಎಂದು ಚರಿತಾ ಹೇಳಿದ್ದಾರೆ. ನಾನು ಅವರನ್ನು ಮದುವೆಯಾಗುವ ಆಸೆ ಇಟ್ಟುಕೊಂಡಿದ್ದೆ. ಅದೊಮ್ಮೆ ಅವರಿಗೆ ನೀವು ಯಾಕೆ ಎಲ್ಲಿಯೂ ಕರೆದುಕೊಂಡು ಹೋಗುವುದಿಲ್ಲ, ಫೋಟೋ, ವಿಡಿಯೋ ಯಾವುದಕ್ಕೂ ಆಸ್ಪದ ಕೊಡುವುದಿಲ್ಲ ಎಂದು ಪ್ರಶ್ನಿಸಿದೆ. ಆಗಲೇ ನನಗೆ ಗೊತ್ತಾದದ್ದು ಅವರು ರಾಜಕಾರಣಿ ಎಂದು. ನಾನು ಸಾರ್ವಜನಿಕವಾಗಿ ಗುರುತಿಸಿಕೊಂಡವನು, ಹೀಗೆ ನಿನ್ನ ಜೊತೆ ಇರುವುದು ಗೊತ್ತಾದರೆ ಸಮಾಜ ಒಪ್ಪುವುದಿಲ್ಲ ಎಂದೆಲ್ಲಾ ಹೇಳಿದರು. ನನಗೂ ಅದು ಸರಿಯೆನಿಸಿ ಮತ್ತೆ ಆ ಬಗ್ಗೆ ಕೇಳಲಿಲ್ಲ ಎಂದಿದ್ದಾರೆ ಚರಿತಾ.
ನನಗೂ ರಾಜಕೀಯವಾಗಿ ಗುರುತಿಸಿಕೊಳ್ಳಬೇಕು ಎನ್ನುವ ಆಸೆಯಾಯಿತು. ಅದನ್ನೇ ಅವರಿಗೂ ಹೇಳಿದೆ. ಆದರೆ ಅವರು ಅದಕ್ಕೆ ಒಪ್ಪಿಗೆ ಕೊಡಲಿಲ್ಲ. ಈ ವಿಷಯವಾಗಿಯೇ ನಮ್ಮಿಬ್ಬರಲ್ಲಿ ಜಗಳವಾಯಿತು. ಇದು ಅತಿಯಾಗಿ ವಿಕೋಪಕ್ಕೆ ಹೋಗಿ ಅವರು ನನ್ನನ್ನು ಶಾಶ್ವತವಾಗಿ ಬಿಟ್ಟು ಹೋದರು. ನಾಲ್ಕೈದು ತಿಂಗಳು ಡಿಪ್ರೆಷನ್ಗೆ ಹೋದೆ. ನನ್ನನ್ನು ಖಿನ್ನತೆಯಿಂದ ಹೊರಕ್ಕೆ ತರಲು ನನ್ನ ಗುರುಗಳು ಸಾಕಷ್ಟು ಪ್ರಯತ್ನಿಸಿದರು. ಆದರೆ ತುಂಬಾ ಸೋತು ಹೋಗಿದ್ದೆ. ಕುಡಿಯಲು ಶುರು ಮಾಡಿದೆ. ಗಾಡಿ ತೆಗೆದುಕೊಂಡು ಹೋದಾಗ ಆ್ಯಕ್ಸಿಡೆಂಟ್ ಕೂಡ ಆಯಿತು. ತುಂಬಾ ನೊಂದು ಹೋದೆ. ಆಮೇಲೆ ನಿಧಾನವಾಗಿ ಇದರಿಂದ ಹೊರಬಂದೆ ಎಂದಿರೋ ಚರಿತಾ ಅವರಿಗೆ ಕೊನೆಗೆ ರಾಜಕಾರಣದಲ್ಲಿ ಅವಕಾಶ ಸಿಕ್ಕು, ಈಗ ಕಾಂಗ್ರೆಸ್ನಲ್ಲಿ ಉನ್ನತ ಹುದ್ದೆ ಏರಿದ್ದಾರೆ.
ಬಿಗ್ಬಾಸ್ ನೀತು ಲವ್ ಮಾಡ್ತಿದ್ದಾರಾ? ಮದ್ವೆಯಾಗೋ ಯೋಚ್ನೆ ಇದ್ಯಾ? ನಟಿಯ ಮನದಾಳದ ಮಾತು ಇಲ್ಲಿದೆ...