ನಮ್ಮೊಳಗೇ ಇದೆ, ಬದುಕಿನ ಆನಂದ: ಗ್ರಹಿಸುವ ಶಕ್ತಿ ನಮಗಿರಬೇಕಷ್ಟೆ...

By Suvarna News  |  First Published May 13, 2020, 4:57 PM IST

ಎಲ್ಲಿಯೂ ಇಲ್ಲದ ಖುಷಿಯನ್ನು ಹುಡುಕಲು ಮನುಷ್ಯ ಹೆಣಗಾಡುತ್ತಾನೆ. ದುಡ್ಡಿನಿಂದ ಈ ಆತ್ಮ ಸಂತೃಪ್ತಿ ಸಿಗಬಹುದೆಂಬ ಸುಳ್ಳು ವಿಶ್ವಾಸದಿಂದ ಜೀವನ ಪೂರ್ತಿ ದುಡ್ಡು ಮಾಡಲು ಸಮಯ ವ್ಯಯಿಸುತ್ತಾನೆ. ಆದರೆ, ಬೇಕಾದ ಖುಷಿ ಸಿಗದಿದ್ದಾಗ ಖಿನ್ನನಾಗುತ್ತಾನೆ. ಬೆಳಗ್ಗೆ ಬೇಗ ಎದ್ದು ಸೂರ್ಯೋದಯ ನೋಡುವ ಖುಷಿಯನ್ನೇ ಮರೆತು, ಜೀವನದಲ್ಲಿ ಪ್ರತಿಯೊಂದೂ ಸಂತೋಷವನ್ನು ಕಳೆದುಕೊಳ್ಳುತ್ತಾನೆ. ಅಷ್ಟಕ್ಕೂ ಆ ಖುಷಿ ಎಲ್ಲಿದೆ?


'ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೋ, ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ' ಎನ್ನುತ್ತಾರೆ, ರಾಷ್ಟ್ರಕವಿ ಕುವೆಂಪುರವರು. ಈ ಜಗತ್ತಿನ ತುಂಬೆಲ್ಲಾ ಆನಂದ ತುಂಬಿದೆ. ಅದನ್ನು ಗ್ರಹಿಸುವ ಮನಸ್ಥಿತಿ ನಮ್ಮಲ್ಲಿರ ಬೇಕಷ್ಟೇ. ಆನಂದವೆಂಬುದು ನಮ್ಮ ಮುಷ್ಟಿಯಲ್ಲೇ ಇರುವ ಬ್ರಹ್ಮಾನುಭವ. ತಿಮ್ಮಗುರು ಹೇಳುವಂತೆ ಈ ಅನುಭೂತಿ ನಿಮಗೆ ಒಮ್ಮೆ ಸುಂದರವಾದ ಹೂದೋಟದಲ್ಲಿ ಸಿಗಬಹುದು, ಇನ್ನೊಮ್ಮೆ ನಿಮ್ಮ ಪರಮಾತ್ಮರ ಸಾಂಗತ್ಯದಲ್ಲಿ ಲಭ್ಯವಾಗಬಹುದು. ಒಮ್ಮೆ ಸಂಸಾರದ ರಸನಿಮಿಷದಲ್ಲಿ ಪ್ರಾಪ್ತವಾಗಬಹುದು, ಮತ್ತೊಮ್ಮೆ ನಿಮ್ಮ ಏಕಾಂತದಲ್ಲಿ ಗೋಚರಿಸಬಹುದು. ಆದರೆ ಅದನ್ನು ಗ್ರಹಿಸುವ 

ಮನೋಭೂಮಿಕೆ ನಮ್ಮಲ್ಲಿರಬೇಕಷ್ಟೇ. ಈ ರೀತಿಯ ಮನಸ್ಥಿತಿ ನಮ್ಮಲ್ಲಿದ್ದಾಗ ಎಂಥದ್ದೇ ವ್ಯತಿರಿಕ್ತ ಪರಿಸ್ಥಿತಿ ಇದ್ದರೂ ನಮ್ಮ ನೆಮ್ಮದಿಗೆ ಖಂಡಿತಾ ಭಂಗ ಬರುವುದಿಲ್ಲ.

Latest Videos

undefined

ಅಜ್ಜ-ಅಜ್ಜಿ ಸಾಂಗತ್ಯದಲ್ಲಿ ಮಕ್ಕಳು ಲಾಕ್‌ಡೌನ್: ಹಿರಿ ಜೀವ ಫುಲ್ ಖುಷ್
 
ಆನಂದವೆಂಬುದು ಹಣದಿಂದ ಖರೀದಿ ಮಾಡಬಹುದಾದ ವಸ್ತುವಲ್ಲ. ಹಣದಿಂದ ನಮ್ಮ ಅಗತ್ಯಗಳನ್ನೆಲ್ಲಾ ಈಡೇರಿಸಿಕೊಳ್ಳಬಹುದು. ಅದಕ್ಕೂ ಮೀರಿ ನಮ್ಮ ಐಷಾರಾಮೀ ಅಸೆಗಳನ್ನೂ ಹಣ ಪೂರೈಸಬಹುದು. ಆದರೆ ಅದು ಅದು ಆನಂದವನ್ನು ತಂದುಕೊಡುತ್ತದೆ ಎಂದು ಹೇಳಲಾಗದು. ನೀವು ಬೆಳ್ಳಿತಟ್ಟೆಯಲ್ಲೇ ಊಟ ಮಾಡಬಹುದು, ಆದರೆ ಊಟದ ರುಚಿ ನಿಮ್ಮ ತಟ್ಟೆಯಿಂದ ಬದಲಾಗುವುದಿಲ್ಲ. ಮೆತ್ತನೆಯ ಹಾಸಿಗೆ, ಹವಾನಿಯಂತ್ರಿತ ಕೋಣೆ ಇದ್ದ ಮಾತ್ರಕ್ಕೆ ನಿಮಗೆ ಸುಖದ ನಿದ್ರೆ ಹತ್ತೀತು ಎಂಬ ಖಾತ್ರಿಯೇನಿಲ್ಲ. ಅಲ್ಯೂಮಿನಿಯಂ ತಟ್ಟೆಯಲ್ಲಿ ಗಂಜಿ ಕುಡಿವ ಬಡವನಿಗೆ ಅವನ ಊಟ, ಪಂಚಭಕ್ಷ್ಯ ಪರಮಾನ್ನವೆನ್ನಿಸಿ ಆನಂದ ನೀಡಬಹುದು. ನೆಲವೇ ಹಾಸಿಗೆ, ಆಕಾಶವೇ ಸೂರಾದ ನಿರ್ಗತಿಕನಿಗೆ ಅಸಲಿಗೆ ಕಳೆದುಕೊಳ್ಳಲು ಏನೂ ಇರದಿರುವುದರಿಂದ ಕಣ್ತುಂಬಾ ನಿದ್ರೆ ಬರಬಹುದು. ಹಾಗಾದರೆ ಆನಂದವೆಂಬ ಅನುಭವ ವಸ್ತು ನಿರ್ಧರಿತವಲ್ಲ, ಮನೋನಿರ್ಧರಿತ ಎಂದಾಯಿತು. ನಿತ್ಯವೂ ಹೊಸತಾಗಿ ತೆರೆದುಕೊಳ್ಳುವ ತೆರೆದುಕೊಳ್ಳುವ ಪ್ರಕೃತಿಯೇ ನಮ್ಮ ಬದುಕಿನ ಆನಂದದ ಬಾಗಿಲು. ನೀಲಿನಭದಲ್ಲಿ ರಂಗಿನೋಕುಳಿಯಾಡುತ್ತಾ ಮೂಡುವ ಸೂರ್ಯ, 'ಸೃಷ್ಟಿಯ ಉದಯಕೆ ಪ್ರಾಣಾಗ್ನಿಯ ಹೊಳೆ ಹರಿಯಿಸಿ ರವಿ ದಯಮಾಡುವನು' ಎಂಬ ಭಾವನೆಯನ್ನು ಕುವೆಂಪುರವರಲ್ಲಿ ಮೂಡಿಸುತ್ತಾನೆ. ಇದನ್ನು ಸರಿಯಾಗಿ ಗ್ರಹಿಸಿದರೆ, ಪ್ರತಿದಿನವೂ ಒಂದು ಹೊಸ ಜನ್ಮ, ಆ ಜನ್ಮಕ್ಕೆ ನಿತ್ಯ ಪ್ರಾಣ ತುಂಬುವುದೇ ಬೆಳಗಿನ ಸೂರ್ಯೋದಯ. ಆ ಬೆಳಕಿನುದಯಕ್ಕೆ ಹಕ್ಕಿಗಳ ಸುಮಧುರ ಇಂಚರದ ಸ್ವಾಗತಗೀತೆ. ಇದಕ್ಕಿಂತ ಅದ್ಭುತ ಆನಂದ 
ಬದುಕಿಗೆ ಬೇರೇನು ಬೇಕು? ಹಕ್ಕಿ-ಪಕ್ಷಿಗಳ ಚಲನವಲನಗಳನ್ನು ಗಮನಿಸುವುದಕ್ಕಿಂತ ದೊಡ್ಡ ಆನಂದ ಬೇರೊಂದಿಲ್ಲ. ಅವುಗಳಿಗೆ ನಾಳೆಗಾಗಿ ಕೂಡಿಡಬೇಕೆಂಬ ಯಾವುದೇ ಅನಿವಾರ್ಯತೆಯಿಲ್ಲ. ಹುದ್ದೆಯಲ್ಲಿ ಮೇಲೇರಬೇಕೆಂಬ ತವಕವಿಲ್ಲ. ನಾನೇ ದೊಡ್ಡವನೆಂಬ ಪ್ರತಿಷ್ಠೆಗಳಿಲ್ಲ. ಆರೋಗ್ಯ ತಪ್ಪಿದರೆ ಏನಪ್ಪಾ ಎಂಬ ಆತಂಕಗಳಿಲ್ಲ. ಅಂದು ಸಿಕ್ಕಿದ್ದು ಅಂದಿಗೆ. ಪ್ರಕೃತಿ ಇಟ್ಟಂತೆ ಇದ್ದರಾಯಿತು. ಇವೂ ಕೂಡಾ ಈ ಭೂಮಿಯ ಮೇಲೆ ನಮ್ಮಂತೆಯೇ ಹುಟ್ಟಿ ಸಾಯುವ ಜೀವಿಗಳಲ್ಲವೇ? 

ಬದುಕಲ್ಲಿ ಖುಷಿಯಾಗಿರಲು ಹೀಗ್ ಮಾಡಿ

'ಇರುವ ಭಾಗ್ಯವ ನೆನೆದು ಬಾರನೆಂಬುದ ಬಿಡು, ಹರುಷಕ್ಕಿದೆ ದಾರಿ' ಎಂಬ ಡಿ.ವಿ.ಜಿ.ಯವರ ಸಾಲಿನಂತೆ ಇರುವುದರಲ್ಲಿಯೇ ಸಂತೋಷ ಪಡುವ ಮನಸ್ಥಿತಿ ನಮ್ಮದಾದಾಗ, ನಮ್ಮ ಬದುಕಿನ ಕ್ಷಣಗಳಲ್ಲಿ ಹುದುಗಿರುವ ಆನಂದ ಖಂಡಿತವಾಗಿಯೂ ನಮ್ಮ ಕೈಗೆಟಕುತ್ತದೆ. 'ಆಸೆಯೇ ದುಃಖಕ್ಕೆ ಮೂಲ' ಎಂಬ ಬುದ್ಧದೇವನ ಮಾತಿನಂತೆ, ಆಸೆಗಳನ್ನು ಕಡಿಮೆ ಮಾಡಿಕೊಳ್ಳುವುದೇ ಜೀವನದಲ್ಲಿ ಆನಂದದ ಮಾರ್ಗ. ನಮ್ಮ ಕಾಯಕವನ್ನು ಸರಿಯಾಗಿ ಮಾಡುವುದೇ ಬದುಕಿನ ನಿಜವಾದ ಆನಂದ ಎಂದರು, ಬಸವಣ್ಣನವರು. ಆ ಕಾಯಕದ ಪ್ರಾಮಾಣಿಕ ನಿರ್ವಹಣೆಯೇ ಕೈಲಾಸದ ದಾರಿ. ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಾ ಪ್ರಕೃತಿ ನಮಗೆ ನೀಡುವ ಸವಿಯನ್ನು ಸವಿಯುತ್ತಾ ದಿನವನ್ನು ಆಸ್ವಾದಿಸಿದರೆ ಆನಂದವೆಂಬ ಬ್ರಹ್ಮಾನುಭವದ ದರ್ಶನ ಖಂಡಿತವಾಗಿಯೂ ನಮ್ಮೆಲ್ಲರಿಗೂ ಆದೀತು.

 - ಎಚ್.ಎಸ್.ನವೀನಕುಮಾರ್ ಹೊಸದುರ್ಗ
  ವ್ಯಕ್ತಿ ವಿಕಸನ ತರಬೇತುದಾರರು

click me!