
ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಸದಾ ಆಲೋಚನೆ ಮಾಡ್ತಿರುತ್ತಾರೆ. ಮಕ್ಕಳು ಒಳ್ಳೆಯ ವಿದ್ಯೆ ಕಲಿತು ಸುಂದರ ಭವಿಷ್ಯ ಕಟ್ಟಿಕೊಳ್ಳಲಿ ಎನ್ನುವುದು ಪಾಲಕರ ಆಸೆಯಾಗಿರುತ್ತದೆ. ಕೆಲವರಿಗೆ ಮಕ್ಕಳನ್ನು ಓದಿಸಲು ಸಮಯವಿರೋದಿಲ್ಲ. ಮತ್ತೆ ಕೆಲ ಪಾಲಕರು, ಮಕ್ಕಳು ಮನೆಯಿಂದ ದೂರವಿದ್ರೆ ಒಳ್ಳೆ ಸಂಸ್ಕಾರ ಕಲಿಯುತ್ತಾರೆ, ಜವಾಬ್ದಾರಿ ಅರಿಯುತ್ತಾರೆ ಎನ್ನುವ ಕಾರಣಕ್ಕೆ ಅವರನ್ನು ಹಾಸ್ಟೆಲ್ ಗೆ ಸೇರಿಸುವ ನಿರ್ಧಾರ ತೆಗೆದುಕೊಳ್ತಾರೆ. ಮಕ್ಕಳನ್ನು ಹಾಸ್ಟೆಲ್ ಗೆ ಸೇರಿಸುವುದ್ರಿಂದ ಲಾಭವೂ ಇದೆ, ನಷ್ಟವೂ ಇದೆ. ಮಕ್ಕಳನ್ನು ಹಾಸ್ಟೆಲ್ ಗೆ ಕಳುಹಿಸುವ ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ. ಮಕ್ಕಳಂತೆ ಪಾಲಕರಿಗೂ ಅದು ಕಠಿಣ ಸಮಯವಾಗಿರುತ್ತದೆ.
ಮಕ್ಕಳ (Children) ನ್ನು ಹಾಸ್ಟೆಲ್ (Hostel) ಗೆ ಕಳುಹಿಸುವುದು ಅನಿವಾರ್ಯ ಎನ್ನುವ ಪಾಲಕರು ಕೆಲವೊಂದು ವಿಷ್ಯವನ್ನು ಮಕ್ಕಳಿಗೆ ಮೊದಲೇ ಕಲಿಸಬೇಕಾಗುತ್ತದೆ. ಇದ್ರಿಂದ ಮಕ್ಕಳು ಅಪರಿಚಿತ ಜಾಗದಲ್ಲಿ ತೊಂದರೆ ಅನುಭವಿಸುವುದು ತಪ್ಪುತ್ತದೆ. ಆಗ ಮಕ್ಕಳು ಹಾಸ್ಟೆಲ್ ನಲ್ಲಿ ಆರಾಮವಾಗಿ ಓದಬಹುದು. ನಾವಿಂದು ಹಾಸ್ಟೆಲ್ ಗೆ ಮಕ್ಕಳನ್ನು ಕಳುಹಿಸುವ ಮೊದಲು ಪಾಲಕರು ಏನು ಮಾಡ್ಬೇಕು ಎಂಬುದನ್ನು ಹೇಳ್ತೆವೆ.
ಹಾಸ್ಟೆಲ್ ಗೆ ಹೋಗುವ ಮಕ್ಕಳಿಗೆ ಈ ವಿಷ್ಯ ಕಲಿಸಿ :
ಶಿಸ್ತು (Discipline) : ಮಗುವನ್ನು ಹಾಸ್ಟೆಲ್‌ಗೆ ಕಳುಹಿಸುತ್ತಿದ್ದರೆ ಅವಶ್ಯಕವಾಗಿ ಮಕ್ಕಳಿಗೆ ಶಿಸ್ತು ಕಲಿಸಬೇಕು. ನಿಮ್ಮ ಮಗು ಹಾಸಿಗೆಯಿಂದ ತಾನಾಗಿಯೇ ಎದ್ದು ಬರುವುದನ್ನು ಕಲಿಸಿ. ಅನೇಕ ಮಕ್ಕಳು ಪಾಲಕರ ಸಹಾಯವಿಲ್ಲದೆ ಹಾಸಿಗೆಯಿಂದ ಏಳೋದಿಲ್ಲ. ಹಾಗೆಯೇ ಬೆಡ್ ಶೀಟುಗಳನ್ನು ಹಾಗೆ ಬಿಟ್ಟು ಬರ್ತಾರೆ. ಬೆಡ್ ಹೇಗಿಟ್ಟುಕೊಳ್ಳಬೇಕು, ಎದ್ದ ತಕ್ಷಣ ಬೆಡ್ ಶೀಟ್ ಹೇಗೆ ಇಡಬೇಕು ಎಂಬುದನ್ನು ಅವರಿಗೆ ಕಲಿಸಬೇಕು. ಬರೀ ಹಾಸಿಗೆ ಮಾತ್ರವಲ್ಲ ಬಟ್ಟೆ, ಪುಸ್ತಕ ಮತ್ತು ಸ್ಟೇಷನರಿ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಇಡುವ ಅಭ್ಯಾಸವನ್ನು ಕಲಿಸಿ. ಆಗ ಮಗು ವಸ್ತುಗಳನ್ನು ಕಳೆದುಕೊಳ್ಳುವುದಿಲ್ಲ. ವೇಳಾಪಟ್ಟಿ ಮತ್ತು ದಿನಚರಿಯನ್ನು ಅನುಸರಿಸಲು ಮಗುವಿಗೆ ಕಲಿಸಿ. ತನ್ನೆಲ್ಲ ಕೆಲಸವನ್ನು ಶಿಸ್ತಿನಿಂದ ಮಗು ಮಾಡಿದ್ರೆ ಬೋರ್ಡಿಂಗ್ ಶಾಲೆಯಲ್ಲಿ ಮಗು ಸುಲಭವಾಗಿ ಬದುಕಬಹುದು. ಯಾವುದೇ ತೊಂದರೆ ಎದುರಾಗುವುದಿಲ್ಲ.
ಮಗುವನ್ನು ಸ್ವತಂತ್ರ (Independent) ಗೊಳಿಸಿ : ಮಗುವನ್ನು ಪಾಲಕರು ಕಟ್ಟಿ ಹಾಕಿದ್ರೆ ಅವರಿಗೆ ಹಾಸ್ಟೆಲ್ ನಲ್ಲಿ ಬದುಕುವುದು ಕಷ್ಟವಾಗುತ್ತದೆ. ಮಗುವನ್ನು ಸ್ವಾತಂತ್ರವಾಗಿ ಬಿಡಬೇಕು. ಅವರು ಎಲ್ಲ ಕೆಲಸಕ್ಕೆ ನಿಮ್ಮನ್ನು ಅವಲಂಬಿಸದಂತೆ ನೋಡಿಕೊಳ್ಳಬೇಕು. ಮಗು ಸ್ವಾತಂತ್ರವಾಗಿದ್ದಾಗ ಆತ್ಮವಿಶ್ವಾಸದ ಬೆಳೆಯುತ್ತದೆ. ಜೊತೆಗೆ ಜವಾಬ್ದಾರಿಯಿಂದ ವರ್ತಿಸಲು ಕಲಿಯುತ್ತಾರೆ. ಮಗುವಿನ ಎಲ್ಲ ನಿರ್ಧಾರವನ್ನು ಪಾಲಕರೇ ತೆಗೆದುಕೊಳ್ಳಬಾರದು. ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಬಿಡಬೇಕು. ತೆಗೆದುಕೊಂಡ ನಿರ್ಧಾರದಲ್ಲಿ ತಪ್ಪಿದ್ದರೆ ಅದನ್ನು ತಿದ್ದಬೇಕೇ ಹೊರತು ಬೈಯ್ಯಬಾರದು. ಹೇಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದನ್ನು ಮಗುವಿಗೆ ಕಲಿಸಬೇಕು. ಆಗ ಬೋರ್ಡಿಂಗ್ ಸ್ಕೂಲಿನಲ್ಲಿ ತನಗೆ ತೊಂದರೆಯಾಗದಂತೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರು ಸಮರ್ಥರಾಗುತ್ತಾರೆ.
ಹಣದ ಬಗ್ಗೆ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ಕಲಿಸಿ : ಮಗುವನ್ನು ಬೋರ್ಡಿಂಗ್ ಶಾಲೆಗೆ ಕಳುಹಿಸುತ್ತಿದ್ದರೆ ಹಣ ನಿರ್ವಹಣೆಯನ್ನು ಕಲಿಯುವುದು ಮುಖ್ಯ. ಹಾಸ್ಟೆಲ್ ನಲ್ಲಿರುವ ಮಗುವಿಗೆ ಪಾಕೆಟ್ ಮನಿ ಸಿಗುತ್ತದೆ. ಹಣದ ನಿರ್ವಹಣೆ ಗೊತ್ತಿಲ್ಲದೆ ಹೋದ್ರೆ ಮಕ್ಕಳು ಹಣವನ್ನು ಯರ್ರಾಬಿರ್ರಿ ಖರ್ಚು ಮಾಡ್ತಾರೆ. ಹಣದ ಮೌಲ್ಯವನ್ನು ಕಲಿಸಿದ್ರೆ ಅನಗತ್ಯವಾಗಿ ಖರ್ಚು ಮಾಡುವುದನ್ನು ತಪ್ಪಿಸಬೇಕು. ಹಾಗೆಯೇ ಮಕ್ಕಳಿಗೆ ಉಳಿತಾಯವನ್ನೂ ಕಲಿಸಬೇಕು.
ಮಗು ಸದಾ ಡಲ್ ಇರುತ್ತಾ? ಮೂಡ್ ಆಫ್ ಆಗುತ್ತಿದ್ದರೆ ಈ ಸಮಸ್ಯೆ ಇರ್ಬಹುದು
ಹೊಸ ಸಂಬಂಧಕ್ಕೆ ಹೊಂದಿಕೊಳ್ಳಲು ಕಲಿಸಿ : ಹಾಸ್ಟೆಲ್ ನಲ್ಲಿ ಮಕ್ಕಳ ಜೊತೆಗಿರುವವರು ಹೊಸಬರಾಗಿರ್ತಾರೆ. ಅವರ ಜೊತೆ ಹೊಂದಾಣಿಕೆ ಮುಖ್ಯವಾಗುತ್ತದೆ. ಏಕಾಂಗಿಯಾಗಿರುವ ಮಗುವಿಗೆ ಸ್ನೇಹಿತರ ಜೊತೆ ಹೇಗೆ ಬೆರೆಯಬೇಕು ಎಂಬುದನ್ನು ಕಲಿಸಬೇಕು.
ಮಕ್ಕಳ ಮನಸ್ಸಲ್ಲಿ ಧನಾತ್ಮಕ ಚಿಂತನೆ ಬೆಳೆಸುವುದು ಹೀಗೆ
ಮಕ್ಕಳ ಜೊತೆ ಸಂಪರ್ಕದಲ್ಲಿರುವುದು ಮುಖ್ಯ : ಮಕ್ಕಳನ್ನು ಹಾಸ್ಟೆಲ್ ಗೆ ಬಿಟ್ಟರಾಗಲಿಲ್ಲ. ಅವರ ಜೊತೆ ಸಂಪರ್ಕದಲ್ಲಿರಬೇಕು. 2 – 3 ದಿನಕ್ಕೊಮ್ಮೆ ಕರೆ ಮಾಡ್ಬೇಕು. ಮಗುವಿಗೆ ಸಮಸ್ಯೆಯಾದ್ರೆ ತಕ್ಷಣ ಕರೆ ಮಾಡುವಂತೆ ಅವರಿಗೆ ಕಲಿಸಿ. ಅವರ ನೋವಿಗೆ ಪಾಲಕರಾದವರು ಸ್ಪಂದಿಸಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.