ಕೊರೋನಾ ಕಾಟ ಒಂದಾ? ಎರಡಾ? ಮಾರ್ಚ್‍ನಿಂದ ಪ್ರಾರಂಭವಾಗುತ್ತಿದ್ದ ಮದುವೆಗಳ ಮೇಲೂ ವಕ್ರದೃಷ್ಟಿ ಬೀರಿದೆ. ಇನ್ನೇನು ಹಸೆಮಣೆಯೇರುತ್ತೇವೆ ಅಂದ್ಕೊಂಡಿದ್ದ ಜೋಡಿಗಳು ಮದುವೆ ಮುಂದೂಡಿಕೆಯಿಂದ ಸಿಕ್ಕಾಪಟ್ಟೆ ಅಪ್‍ಸೆಟ್ ಆಗಿರುವ ಜೊತೆಗೆ ಕೊರೋನಾಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಮದುವೆ ಬಗ್ಗೆ ಪ್ರತಿಯೊಬ್ಬರಿಗೂ ನೂರಾರು ಕನಸುಗಳಿರುತ್ತವೆ. ಮದುವೆಗೆ 2-3 ತಿಂಗಳಿರುವಾಗಲೇ ಸಿದ್ಧತೆಗಳು ಪ್ರಾರಂಭಗೊಂಡಿರುತ್ತವೆ. ಏನೇನು, ಎಲ್ಲೆಲ್ಲಿ ಶಾಪಿಂಗ್ ಮಾಡ್ಬೇಕು ಎಂಬ ದೊಡ್ಡ ಪಟ್ಟಿಯನ್ನೇ ಮಾಡಿಕೊಂಡಿರುತ್ತೇವೆ. ಆದ್ರೆ ಈ ವರ್ಷ ಅನೇಕರ ಮದುವೆ ಕನಸುಗಳಿಗೆ ಕೊರೋನಾ ವೈರಸ್ ಅಡ್ಡಲಾಗಿ ನಿಂತಿದೆ.ಅದ್ರಲ್ಲೂ ಮಾರ್ಚ್‍ನಿಂದ ಮೇ ಅಂದ್ರೇನೆ ಮದುವೆ ಸೀಸನ್. ಆದ್ರೆ ಈ ವರ್ಷ ಲಾಕ್‍ಡೌನ್ ಪರಿಣಾಮವಾಗಿ ಕೆಲವರು ಸರಳವಾಗಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರೆ,ಇನ್ನೂ ಕೆಲವರು ಮದುವೆ ಮುಂದೂಡಿದ್ದಾರೆ. ಅನಿಶ್ಚಿತತೆಯ ಈ ಸಮಯದಲ್ಲಿ ಮದುವೆ ಪ್ಲ್ಯಾನ್ ಮಾಡಿಕೊಂಡ ಜೋಡಿಗಳಿಗೆ ಡಿಸ್ಪಾಯಿಂಟ್ ಆಗಿರೋದಂತೂ ನಿಜ. ಹಾಗಂತ ಇದು ಯಾರು ಬೇಕೂಂತಲೇ ಸೃಷ್ಟಿಸಿದ ಸ್ಥಿತಿಯಲ್ಲ. ಅಷ್ಟಕ್ಕೂ ಮದುವೆ ಸ್ವಲ್ಪ ಸಮಯ ಮುಂದೂಡಲ್ಪಟ್ಟಿದೆ ಅಷ್ಟೆ. ಅದಕ್ಕಾಗಿ ಟೆನ್ಷನ್ ಮಾಡಿಕೊಳ್ಳೋದು, ಮನಸ್ಸು ಕೆಡಿಸಿಕೊಳ್ಳೋದು ಮಾಡ್ಬೇಡಿ. ನೀವು ಲವ್ ಮಾಡಿ ಮದುವೆಯಾಗುತ್ತಿರುವವರಾದ್ರೆ ಇಷ್ಟು ವರ್ಷ ಅಥವಾ ತಿಂಗಳುಗಳ ನಿಮ್ಮ ಲವ್ ಲೈಫ್ ಎಕ್ಸ್ಟೆಂಡ್ ಆಗಿದೆ ಎಂದು ಭಾವಿಸಿ. ಅದೇ ಆರೇಂಜ್ ಮ್ಯಾರೇಜ್ ಆಗುತ್ತಿದ್ರೆ ಒಬ್ಬರನ್ನೊಬ್ಬರು ಅರಿಯಲು ಇನ್ನಷ್ಟು ಸಮಯ ಸಿಕ್ಕಿತೆಂದು ಖುಷಿಪಡಿ.
ಸುಖ ದಾಂಪತ್ಯಕ್ಕೆ ಸೆಕ್ಸ್ ಒಂದಿದ್ರೆ ಸಾಕಾ! ಬೇರೇನೂ ಬೇಡ್ವಾ?
ಮೊಬೈಲ್ ಇದೆಯಲ್ಲ ಮತ್ತ್ಯಾಕೆ ಚಿಂತೆ
ಮದುವೆ ಮುಂದೂಡಿಕೆ ಆದ್ರೂ ಪರ್ವಾಗಿಲ್ಲ. ಆದ್ರೆ ಮೀಟ್ ಮಾಡೋಕೆ ಆಗುತ್ತಿಲ್ಲ ಎಂಬುದು ನಿಮ್ಮ ಬೇಸರವನ್ನು ಇನ್ನಷ್ಟು ಹೆಚ್ಚಿಸಿರಬಹುದು. ಆ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ, ಮೀಟ್ ಮಾಡದೆಯೋ ಇಬ್ಬರೂ ಇನ್ನಷ್ಟು ಹತ್ತಿರವಾಗಲು ಈ ಆಧುನಿಕ ಯುಗದಲ್ಲಿ ಸಾಕಷ್ಟು ದಾರಿಗಳಂತೂ ಇದ್ದೇಇವೆ. ಎಲ್ಲಕ್ಕಿಂತ ಹೆಚ್ಚಾಗಿ ಕೈಯಲ್ಲಿ ಮೊಬೈಲ್ ಇದೆ, ಮತ್ತ್ಯಾಕೆ ಚಿಂತೆ? ಮನಸ್ಸು ಬಯಸಿದಾಗಲ್ಲೆಲ್ಲ ಇಬ್ಬರೂ ಒಬ್ಬರಿಗೊಬ್ಬರು ಕಾಲ್ ಮಾಡಿ ಮಾತನಾಡಬಹುದು. ನೋಡಬೇಕು ಅನ್ನಿಸಿದ್ರೆ ವಾಟ್ಸ್ಆಪ್ ವಿಡಿಯೋ ಕಾಲ್, ಸ್ಕೈಪ್ ಎಲ್ಲವೂ ಇದೆಯಲ್ಲ. ಇಬ್ಬರೂ ಮದುವೆ ಕುರಿತು ಚರ್ಚಿಸಿ, ಈಗಾಗಲೇ ನೀವು ಮಾಡಿರುವ ಪ್ಲ್ಯಾನ್‍ಗೆ ಇನ್ನೂ ಏನಾದ್ರೂ ಸೇರಿಸಬಹುದಾ ಎಂಬ ಬಗ್ಗೆ ಯೋಚಿಸಿ. ಮದುವೆ ಕುರಿತು ನೀವು ಈ ಹಿಂದೆ ಏನೆಲ್ಲ ಮಾತನಾಡುತ್ತಿದ್ದರೂ ಅದನ್ನು ಈಗಲೂ ಮಾತನಾಡಿ.
ಮದುವೆ ನಿಂತಿಲ್ಲ, ಮುಂದೂಡಿಕೆ ಅಷ್ಟೇ
ಎಲ್ಲ ಸಿದ್ಧತೆ ಮಾಡಿಕೊಂಡ ಬಳಿಕ ಏಕಾಏಕಿ ಮದುವೆ ಮುಂದೂಡಿಕೆ ಆದ್ರೆ, ಬೇರೆ ದಿನಾಂಕ ಯಾವಾಗ ಫಿಕ್ಸ್ ಮಾಡಬೇಕು ಎಂಬ ಗೊಂದಲ ಕಾಡುತ್ತಿದ್ರೆ ಸಹಜವಾಗಿ ಮನಸ್ಸಿಗೆ ಬೇಸರ ಆಗಿಯೇ ಆಗುತ್ತೆ. ಆದ್ರೆ ನಿಮ್ಮ ಮದುವೆ ನಿಂತಿಲ್ಲ, ನೀವು ಮೆಚ್ಚಿದ ಹುಡುಗ ಅಥವಾ ಹುಡುಗಿಯನ್ನೇ ಮದುವೆಯಾಗುತ್ತೀರಾ, ಸ್ವಲ್ಪ ಕಾಯಬೇಕಷ್ಟೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಹೀಗೆ ಯೋಚಿಸೋದ್ರಿಂದ ನಿಮ್ಮ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುವ ಜೊತೆಗೆ ಟೆನ್ಷನ್ ದೂರವಾಗುತ್ತೆ.
ಅಂತರ್ಮುಖಿ ಮಗುವಿನ ಪೋಷಕರಿಗಿಷ್ಟು ಟಿಪ್ಸ್
ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ
ಮನೆಯಲ್ಲಿದ್ದರೂ ಆಫೀಸ್ ಕೆಲಸವಂತೂ ಇದ್ದೇಇದೆ. ಇಬ್ಬರೂ ನಿಮ್ಮ ನಿಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿ. ಇದರಿಂದ ಮದುವೆ ಪೋಸ್ಟ್ಪೋನ್ ಹಾಗೂ ಅದಕ್ಕೆ ಸಂಬಂಧಿಸಿದ ಸಂಗತಿಗಳ ಬಗ್ಗೆ ಪದೇಪದೆ ಯೋಚಿಸಲು ಸಮಯ ಸಾಲುವುದಿಲ್ಲ.ಆಫೀಸ್ ಕೆಲಸದಲ್ಲಿ ಬ್ಯುಸಿಯಾದಾಗ ಸಹಜವಾಗಿ ಮನಸ್ಸು ಕೂಡ ಸಕಾರಾತ್ಮಕವಾಗಿ ಸ್ಪಂದಿಸಲು ಪ್ರಾರಂಭಿಸುತ್ತದೆ. ಮನಸ್ಸು ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತದೆ.
ಬೇರೆಯವರ ಮಾತುಗಳಿಗೆ ಡೋಂಟ್ ಕೇರ್
ಕೆಲವರಿಗೆ ಗಾಸಿಪ್ ಮಾಡೋದೇ ಕೆಲಸ. ಬೇರೆಯವರ ಮನೆ ವಿಚಾರಗಳ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿಯಿರುತ್ತದೆ. ಇಂಥವರು ನಿಮ್ಮ ಮದುವೆ ಕುರಿತು ನಾನಾ ಪ್ರಶ್ನೆಗಳನ್ನು ಕೇಳಬಹುದು. ಕೆಲವರಂತೂ ಮದುವೆ ಮುಂದೂಡಿಕೆ ಆಗೋದು ಶುಭಸೂಚಕವಲ್ಲ, ಹಾಗೇ ಹೀಗೆ ಎಂದು ಬಾಯಿಗೆ ಬಂದಂತೆ ಮಾತನಾಡಬಹುದು. ಇಂಥ ಮಾತುಗಳಿಗೆ ಸೊಪ್ಪು ಹಾಕಬೇಡಿ. ಕೊರೋನಾ ಪೆಂಡಾಮಿಕ್ ನಿಮ್ಮೊಬ್ಬರಿಗೆ ಮಾತ್ರವಲ್ಲ, ಇಡೀ ಜಗತ್ತಿನಾದ್ಯಂತ ಕೋಟ್ಯಂತರ ಮಂದಿಗೆ ನಾನಾ ರೀತಿಯಲ್ಲಿ ಸಮಸ್ಯೆಯನ್ನು ತಂದೊಡ್ಡಿದೆ. ಅವರಿಗೆಲ್ಲ ಹೋಲಿಸಿದ್ರೆ ನಿಮ್ಮ ಮದುವೆ ಮುಂದೂಡಿಕೆ ಒಂದು ಸಮಸ್ಯೆಯೇ ಅಲ್ಲ.
ನಿಮ್ಮ ಮಗು ಜಗಳಗಂಟನೇ? ಈ ವಾರ್ನಿಂಗ್ ಸೈನ್ಸ್ ಗಮನಿಸಿ
ಇನ್ನೊಮ್ಮೆ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಯೋಚಿಸಿ
ಮದುವೆಗೆ ಸಾಕಷ್ಟು ಸಿದ್ಧತೆ ಮಾಡಿರುತ್ತೀರಿ. ಆದ್ರೆ ಅದ್ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಹಾಗಾಗಿ ಈಗ ಇನ್ನೊಮ್ಮೆ ಹೊಸತಾಗಿ ಪ್ಲ್ಯಾನಿಂಗ್ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಆ ಬಗ್ಗೆ ನೀವು ನಿಮ್ಮ ಸಂಗಾತಿ ಹಾಗೂ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ. ಜಾಸ್ತಿ ಜನರ ಸಮುಖದಲ್ಲೇ ಮದುವೆಯಾಗಬೇಕು ಎಂಬ ಬಯಕೆ ನಿಮ್ಮಿಬ್ಬರಿಗಿದ್ದರೆ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಹೇಳೋದಾದ್ರೆ ಮದುವೆಯನ್ನು ಕೆಲವು ತಿಂಗಳುಗಳ ಕಾಲ ಮುಂದೂಡುವುದೇ ಉತ್ತಮ ನಿರ್ಧಾರ ಎಂದೆನಿಸುತ್ತದೆ.