ಕೆಲವೊಮ್ಮೆ ನಾವು ನಿಷ್ಪ್ರಯೋಜಕರು ಅನಿಸುತ್ತದೆ. ನಮ್ಮ ಬಳಿ ಏನೂ ಇಲ್ಲ ಅನಿಸುತ್ತದೆ. ಆದರೆ ನಾನು ಏನನ್ನಾದರೂ ಸಾಧಿಸಬಲ್ಲೆ, ನಮ್ಮ ಬದುಕು ಕೂಡ ಸುಂದರ ಅನ್ನಿಸುವ ವಿಷಯಗಳು ನಮ್ಮ ಬಳಿಯೇ ಇರುತ್ತದೆ. ನಮಗದು ಗೊತ್ತಿರುವುದಿಲ್ಲ ಅಷ್ಟೇ.
ಕತೆ ಒಂದು
ಒಂದು ಗ್ರಾಮದಲ್ಲಿ ಒಬ್ಬಳು ಅಜ್ಜಿ ವಾಸವಾಗಿದ್ದಳು. ಪ್ರತಿದಿನ ಆಕೆ ಕೆರೆಯಿಂದ ಎರಡು ಕೊಡಗಳಲ್ಲಿ ನೀರನ್ನು ತುಂಬಿ ಮನೆಯಲ್ಲಿ ಶೇಖರಿಸುತ್ತಿದ್ದಳು. ಆದರೆ, ಆ ಎರಡು ಕೊಡಗಳಲ್ಲಿ ಒಂದು ತೂತಾದ ಕೊಡವಾಗಿತ್ತು. ಮನೆ ತಲುಪುತ್ತಿದ್ದಂತೆ ಆ ಕೊಡದ ನೀರು ಅರ್ಧದಷ್ಟು ಕಡಿಮೆಯಾಗಿರುತ್ತಿತ್ತು. ಸುಮಾರು ಒಂದು ವರ್ಷ ಕಳೆಯಿತು. ತೂತಾದ ಕೊಡಕ್ಕೆ ತನ್ನ ಬಗ್ಗೆ ನೆನೆದು ನಾಚಿಕೆ ಅನಿಸತೊಡಗಿತು.
ಒಳ್ಳೆಯ ಕೊಡ ಕೂಡಾ ತೂತಾದ ಕೊಡವನ್ನು ಹಿಯ್ಯಾಳಿಸತೊಡಗಿತು. ಗೇಲಿ ಮಾತುಗಳು ಮತ್ತು ಅವಮಾನದಿಂದ ತೂತಾದ ಕೊಡಕ್ಕೆ ತುಂಬಾ ಬೇಸರವಾಯಿತು. ನನ್ನಿಂದ ಯಾರಿಗೂ ಉಪಯೋಗವಿಲ್ಲ ಅಂತ ಕೊರಗುತ್ತಾ ತನ್ನನ್ನು ತಾನೇ ದ್ವೇಷಿಸತೊಡಗಿತ್ತು. ಕೊನೆಗೆ ಆ ಕೊಡವು ಅಜ್ಜಿಯ ಬಳಿ ಹೇಳಿತು – ಯಾರಿಗೂ ಬೇಡವಾದ, ಉಪಯೋಗ ಆಗದ ನನ್ನನ್ನು ನಾಶಮಾಡಿಬಿಡಿ. ಅದಕ್ಕೆ ಅಜ್ಜಿಯು ಮುಗುಳ್ನಗುತ್ತಾ ಹೇಳಿದಳು– ನಾನು ನಿನ್ನನ್ನು ಕೊಂಡೊಯ್ಯುವಾಗ ನೀರು ತುಂಬಿ ಎತ್ತಿಕೊಂಡು ಹೋಗುವ ಬದಿಯನ್ನು ನೋಡು.
ಕೊಡವು ಆ ಕಡೆ ನೋಡಿದಾಗ ಹಚ್ಚ ಹಸಿರಾಗಿ ಬೆಳೆದು ನಿಂತ ಹೂಗಿಡಗಳು ಮತ್ತು ಸುವಾಸನೆ ಬೀರುತ್ತಾ ಅರಳಿ ನಿಂತಿರುವ ಹೂಗಳು ಕಂಡವು. ಅಜ್ಜಿ ಮುಂದುವರಿಸುತ್ತಾ – ನಿನಗೆ ತೂತಾಗಿದ್ದುದು ನನಗೆ ಮೊದಲೇ ಗೊತ್ತಿತ್ತು. ಆದ್ದರಿಂದಲೇ ನಿನ್ನನ್ನು ಎತ್ತಿಕೊಂಡು ಹೋಗುವ ಬದಿಯಲ್ಲಿ ಹೂಗಿಡಗಳನ್ನು ನೆಟ್ಟದ್ದು. ಆ ಸುಂದರವಾದ ಹೂ ಗಿಡಗಳಿಗೆ ಕಾರಣಕರ್ತ ನೀನೇ. ಅಜ್ಜಿಯ ಮಾತನ್ನು ಕೇಳಿದ ತೂತಾದ ಕೊಡಕ್ಕೆ ತನ್ನ ಬೆಲೆ ಏನು ಅಂತ ಅರಿವಾಯಿತು.
ನಾವೂ ಹೀಗೇ ಅಲ್ಲವೇ. ನಮಗೂ ನಮ್ಮ ಶಕ್ತಿ ಸಾಮರ್ಥ್ಯಗಳು ಸರಿಯಾಗಿ ಗೊತ್ತಿರುವುದಿಲ್ಲ. ಆದರೂ ನಮ್ಮಿಂದ ಯಾವುದೋ ಕೆಲಸ ಆಗುತ್ತಿರುತ್ತದೆ. ನಮ್ಮ ಶಕ್ತಿ ನಮಗೆ ಗೊತ್ತಿಲ್ಲದಿದ್ದರೂ ಇನ್ಯಾರಿಗೋ ಗೊತ್ತಿರುತ್ತದೆ. ಅದನ್ನು ಇನ್ಯಾರೋ ಬಳಸುತ್ತಿರುತ್ತಾರೆ. ಅದಕ್ಕೆ ಇನ್ನೊಂಧು ಕತೆಯಿದೆ.
ಈ ಕ್ಷಣ ಎಂಜಾಯ್ ಮಾಡಲು ದಂಪತಿಗೆ ಟಿಪ್ಸ್
ಕತೆ ಎರಡು
ಸೀತೆಯನ್ನು ರಾವಣ ಕದ್ದುಕೊಂಡು ಹೋದ ಕತೆ ನಿಮಗೆ ಗೊತ್ತಿದೆಯಷ್ಟೆ. ರಾವಣ ಆಕೆಯನ್ನು ಲಂಕೆಗೆ ಕದ್ದುಕೊಂಡು ಹೋಗಿರುತ್ತಾನೆ. ಆಕೆಯನ್ನು ಹುಡುಕಿಕೊಂಡು ಬರಲು ರಾಮನ ಮೂಲಕ ಆಜ್ಞೆ ಪಡೆದ ಸುಗ್ರೀವ, ವಾನರವೀರನ್ನು ಬಿಟ್ಟಿರುತ್ತಾನೆ. ಅವರು ಎಲ್ಲೆಲ್ಲೋ ಅಲೆದಾಡಿ, ಸೀತೆಯ ಸುಳಿವಿಲ್ಲದೆ ದಕ್ಷಿಣ ಭಾಗದ ಕನ್ಯಾಕುಮಾರಿಯ ಬಳಿ ಬರುತ್ತಾರೆ. ಮುಂದೆ ಇರುವ ಅಪಾರವಾದ ಸಮುದ್ರವನ್ನು ನೋಡುತ್ತ ಕುಳಿತುಕೊಳ್ಳುತ್ತಾರೆ. ಅವರಿಗೆ, ಮುಂದೆ ಸಮುದ್ರವನ್ನು ದಾಟಿದ ಬಳಿಕ ಲಂಕೆ ಇದೆಯೆಂದೂ, ಅಲ್ಲಿಗೆ ರಾವಣ ಸೀತೆಯನ್ನು ಒಯ್ದಿದ್ದಾನೆಂದೂ ಜಟಾಯು ಎಂಬ ಪಕ್ಷಿರಾಜ ಹೇಳಿರುತ್ತಾನೆ. ಆದರೆ ನೂರು ಯೋಜನಗಳಷ್ಟು ಉದ್ದವಾದ ಸಮುದ್ರವನ್ನು ದಾಟುವುದು ಹೇಗೆ? ಯಾರಿಗೂ ಗೊತ್ತಾಗುವುದಿಲ್ಲ.
ಯಾವ ಗಂಡೂ ಶ್ರೀ ರಾಮಚಂದ್ರನಲ್ಲಿ ಬಿಡಿ
ಆಗ ಒಬ್ಬೊಬ್ಬನೇ ಕಪಿ, ಎದ್ದು ತನ್ನ ಸಾಮರ್ಥ್ಯವೆಷ್ಟು ಎಂದು ಹೇಳಿಕೊಳ್ಳುತ್ತಾನೆ. ನಾನು ಒಂದು ಯೋಜನ ಹಾರಬಲ್ಲೆ, ನಾನು ಹತ್ತು ಯೋಜನ ಹಾರಬಲ್ಲೆ, ನಾನು ಇಪ್ಪತ್ತು, ಮೂವತ್ತು ಎಂದೆಲ್ಲ ಹೇಳಿಕೊಳ್ಳುತ್ತಾರೆ. ಅಂಗದನೂ ಕೂಡ, ನಾನು ಐವತ್ತು ಯೋಜನ ಹಾರಬಲ್ಲೆ, ಆದರೆ ಹಿಂದೆ ಬರಲಾರೆ ಎನ್ನುತ್ತಾನೆ. ಆಗ ವೃದ್ಧನಾದ ಜಾಂಬವಂತ, ಹನುಮಂತನ ಬಳಿಗೆ ಬರುತ್ತಾನೆ. ಹೇಳುತ್ತಾನೆ- "ಹನುಮ, ನೀನು ವಾಯುವಿನ ಮಗ. ಈ ಸಮುದ್ರದ ನೂರು ಯೋಜನ ವಿಸ್ತೀರ್ಣವನ್ನು ದಾಟಿ ಹೋಗಿ ಸೀತೆಯ ಅನ್ವೇಷಣೆ ಮಾಡಿ, ನಂತರ ಮರಳಿ ಬರಬೇಕಾದರೆ ನೀನೇ ಆಗಬೇಕಷ್ಟೆ. ಯಾಕೆಂದರೆ ನೀನು ನಿನ್ನ ಬಾಲ್ಯದಲ್ಲೇ ಭೂಮಿಯಿಂದ ಸೂರ್ಯನತ್ತ ಹಾರಿದವನು. ಸೂರ್ಯ ಒಂದು ಹಣ್ಣು ಎಂದು ಭಾವಿಸಿ ಅದನ್ನು ಹಿಡಿಯಲು ನೀನು ಬಾನಿಗೆ ಹಾರಿದೆ. ಸರ್ಯನ ಹತ್ತಿರವೇ ಹೋದೆ. ಅಂಥ ನಿನಗೆ ಈ ನೂರು ಯೋಜನದ ಸಮುದ್ರವನ್ನು ದಾಟುವುದು ದೊಡ್ಡ ಕೆಲಸವೇ ಅಲ್ಲ. ಮನ ಮಾಡು, ಧೈರ್ಯ ಮಾಡು.''
ವೃದ್ಧ ಹಾಗೂ ವಿವೇಕಿ, ಜ್ಞಾನವಂತನಾದ ಜಾಂಬವಂತನ ಮಾತುಗಳನ್ನು ಕೇಳಿ ಮನದಲ್ಲಿ ಉಲ್ಲಾಸ ತುಂಬಿಕೊಂಡ ಹನುಮಂತ, ತನ್ನ ದೇಹವನ್ನು ಎತ್ತರವಾಗಿ ಬೃಹತ್ತಾಗಿ ಬೆಳೆಸಿ, ಮಹೇಂದ್ರಾಚಲವನ್ನುಏರಿ, ಅಲ್ಲಿಂದ ಲಂಕೆಗೆ ಹಾರುತ್ತಾನೆ. ಸೀತೆಯನ್ನು ಹುಡುಕುತ್ತಾನೆ.
ಮಕ್ಕಳನ್ನು ನೋಡಿಕೊಳ್ಳಲು ಇಲ್ಲಿವೆ ಟಿಪ್ಸ್
ಹೀಗೆ ನಮ್ಮ ಸಾಮರ್ಥ್ಯವನ್ನು ಹುಡುಕಿ ತೆಗೆದು, ಪ್ರೋತ್ಸಾಹಿಸುವ ಇನ್ಯಾರೋ ಇರುತ್ತಾರೆ. ನಾವು ನಮ್ಮದೇ ಸಾಮರ್ಥ್ಯವನ್ನು ಗುರುತಿಸಿ, ಅದನ್ನು ಬೆಳೆಸಿಕೊಂಡಾಗ ನಮ್ಮ ವ್ಯಕ್ತಿತ್ವ ಬೆಳೆಯಲು, ಯಶಸ್ಸು ಕಾಣಲು ಸಾಧ್ಯ. ಅಲ್ಲವೇ?