ಈ ಕ್ಷಣದಲ್ಲಿ ನೀವಿರುವಾಗ ಒಂದು ದಿವ್ಯತೆಯ, ಖುಷಿಯ ಅನುಭವ ನಿಮ್ಮ ಮನಸ್ಸಿಗೆ ಆಗ್ತಾ ಇರುತ್ತೆ. ಆಗ ನಿಮ್ಮಲ್ಲಿ ಭೂತಕಾಲವೂ ಇರುವುದಿಲ್ಲ, ಭವಿಷ್ಯವೂ ಇರುವುದಿಲ್ಲ. ನೀವು ಹಂಡ್ರಡ್ ಪರ್ಸೆಂಟ್ ನಿಮ್ಮಲ್ಲೇ ಇರುತ್ತೀರಿ. ಇದೇ ನಿಜವಾದ ಆಧ್ಯಾತ್ಮ. ಇದೇ ನಿಜವಾದ ಸಂತೋಷದ ಒಳಗುಟ್ಟು.
ಕಳೆದ ವರ್ಷ ಸುಲಜಾ ಮತ್ತು ಸುಮಂತ್ ಹಿಮಾಚಲ ಪ್ರದೇಶದ ಹಲವು ಜಾಗಗಳಿಗೆ ಹೋಗಿದ್ದರು. ಹೋಗಿ ಬಂದ ನಂತರ, ಏನೇನು ನೋಡಿದರಿ ಎಂದು ಕೇಳಿದಾಗ ಅವರು ತಮ್ಮ ಕ್ಯಾಮೆರಾ ಮತ್ತು ಸ್ಮಾರ್ಟ್ ಫೋನ್ ತೆಗೆದು ಒಂದೊಂದೇ ಫೋಟೋಗಳನ್ನು ತೋರಿಸತೊಡಗಿದರು. ನಿಜಕ್ಕೂ ಫೋಟೋಗಳು ಅದ್ಭುತವಾಗಿದ್ದವು. ಯಾವ ಕಾಂಪಿಟಿಶನ್‌ನಲ್ಲಿ ಇಟ್ಟರೂ ಪ್ರೈಸ್ ಬರುವ ಹಾಗಿತ್ತು. ಆದರೆ ಈ ಫೋಟೊಗಳಲ್ಲಿದ್ದ ಜನ, ಅವರ ಬದುಕು, ಅಲ್ಲಿನ ದಿನಚರಿ ಇವುಗಳ ಬಗ್ಗೆ ಅವರಿಗೆ ಏನೂ ಗೊತ್ತಿರಲಿಲ್ಲ. ಅವರಿಬ್ಬರೂ ಮನಾಲಿಗೆ ಹೋಗಿದ್ದರು. ಅಲ್ಲಿ ಹಿಡಿಂಬಾ ದೇವಿ ದೇವಸ್ಥಾನವಿದೆ. ಸಂಪೂರ್ಣವಾಗಿ ಮರದಿಂದ ಕಟ್ಟಿದ ಈ ದೇವಸ್ಥಾನದ ಸೊಗಸಾದ ಫೋಟೋಗಳನ್ನು ತಂದಿದ್ದರು. ಈ ಹಿಡಿಂಬಾ ದೇವಿ ಮಹಾಭಾರತದಲ್ಲಿ ಬರುವ ಭೀಮನ ಹೆಂಡತಿ ಎಂಬುದನ್ನು ಬಿಟ್ಟರೆ ಬೇರೇನೂ ಅವರಿಗೆ ತಿಳಿದಿರಲಿಲ್ಲ. ಅವಳನ್ನು ಯಾಕೆ ಅಲ್ಲಿನವರು ಪೂಜಿಸುತ್ತಾರೆ, ಪೂಜಿಸುವವರು ಯಾರು, ಅಲ್ಲಿನ ಅರ್ಚಕರು ಇಲ್ಲಿನವರ ಹಾಗಲ್ಲದೆ ಮೈತುಂಬಾ ಬಟ್ಟೆ ಹೊದ್ದುಕೊಂಡೇ ಯಾಕಿರುತ್ತಾರೆ, ಆ ದೇವಸ್ಥಾನದ ಪಕ್ಕದಲ್ಲಿರುವ ಘಟೋತ್ಕಚನ ದೇವಸ್ಥಾನದಲ್ಲಿ ಪ್ರಾಣಿಬಲಿ ಯಾಕೆ ಕೊಡುತ್ತಾರೆ - ಇದನ್ನೆಲ್ಲ ಅವರು ತಿಳಿದೇ ಇರಲಿಲ್ಲ. ಈ ಬಗ್ಗೆ ಕೇಳಿದರೆ, ಗೂಗಲ್ ಮಾಡಿದರಾಯ್ತು, ಅದರಲ್ಲೇನಿದೆ ಎಂದರು.
ನಮ್ಮಲ್ಲಿ ಹೆಚ್ಚಿನವರ ಸಮಸ್ಯೆಯೇ ಇದು. ಎಲ್ಲೋ ಹೋಗುತ್ತೇವೆ, ಏನೋ ಮಾಡುತ್ತೇವೆ. ಆದರೆ ನಮ್ಮ ಬೆರಳು ಮೊಬೈಲ್ ಕ್ಯಾಮೆರಾ ಬಟನ್ ಅದುಮುವುದಕ್ಕೆ ಸದಾ ಸಜ್ಜಾಗಿಯೇ ಇರುತ್ತದೆ. ನಾವು ವರ್ತಮಾನದ ಆ ಕ್ಷಣದಲ್ಲಿ ಇರುವುದೇ ಇಲ್ಲ. ಬದಲಾಗಿ ಲ್ಯಾಮೆರಾದಲ್ಲೋ, ಮೊಬೈಲ್‌ನಲ್ಲೋ ಜೀವಿಸಿರುತ್ತೇವೆ. ನಮ್ಮ ಆ ಕ್ಷಣದ ತೀವ್ರತೆಯೆಲ್ಲ, ಒಳ್ಳೆಯ ಫೋಟೋ ಹಿಡಿಯುವುದು ಹೇಗೆ ಎಂಬಲ್ಲಿ ಸರಿಹೋಗಿರುತ್ತದೆ. ಸೂರ್ಯಾಸ್ತವಾಗುತ್ತಾ ಇರುತ್ತದೆ. ಆಗಸದಲ್ಲಿ ಬಣ್ಣದ ಓಕುಳಿಯಾಗುತ್ತಾ ಇರುತ್ತದೆ. ಅದನ್ನು ಕಂಗಳಲ್ಲಿ ತುಂಬಿಕೊಳ್ಳಬೇಕು ಅನಿಸುವುದೇ ಇಲ್ಲ. ಬದಲಾಗಿ ಮೊಬೈಲ್‌ನಲ್ಲಿ ಕ್ಲಿಕ್ ಮಾಡಿ, ಸೇವ್ ಮಾಡಿಕೊಂಡು, ನಾಳೆ ಆಫೀಸ್‌ನಲ್ಲಿ ಸಹೋದ್ಯೋಗಿಗಳಿಗೆಲ್ಲ ತೋರಿಸಿ ಹೊಟ್ಟೆ ಉರಿಸೋಣ ಅಂತಲೇ ಇರುತ್ತೆ ಮನಸ್ಸು. ಇದು ಗಂಡಸರು ಹೆಣ್ಣುಮಕ್ಕಳು ಎನ್ನದೆ ಎಲ್ಲರನ್ನೂ ಕಾಡುತ್ತಿರುವ ಚಾಳಿ.
ಭೂಮಿ ಮೇಲಿರುವ ಯಾವ ಗಂಡೂ ಶ್ರೀ ರಾಮಚಂದ್ರನಾಗಿರೋಲ್ಲ: ಅಧ್ಯಯನ
ನೋಡಿ ಬೇಕಿದ್ದರೆ. ಯಾವುದಾದರೂ ಒಂದು ಒಳ್ಳೆಯ ದೃಶ್ಯ ನಿಮ್ಮ ಕಣ್ಣ ಮುಂದಿದ್ದರೆ, ನಿಮ್ಮಲ್ಲಿ ಹತ್ತು ಮಂದಿ ಇದ್ದರೆ ಒಂಬತ್ತು ಮಂದಿ ಸ್ಮಾರ್ಟ್ಫೋನ್ ಕ್ಯಾಮೆರಾ ಓಪನ್ ಮಾಡಿಕೊಂಡಿರುತ್ತಾರೆ. ದೃಶ್ಯವನ್ನು ನೋಡುವುದಿಲ್ಲ. ನಾಳೆಯಾದರೂ ಅದನ್ನು ನೋಡ್ತಾರಾ? ಊಹೂಂ, ಬದುಕಿನ ಇತರ ಸಂಗತಿಗಳಲ್ಲಿ ಬ್ಯುಸಿಯಾಗುತ್ತಾರೆ. ಆ ಫೋಟೊದ ಕಡೆಗೆ ಮತ್ತೆ ಕಣ್ಣು ಹಾಯಿಸಲು ಅವರಿಂದ ಆಗುವುದೇ ಇಲ್ಲ. ಮುಂದೆ ಯಾವತ್ತೋ ಆ ಫೋಟೋ ಕಂಡಾಗ, ಆಹಾ ಆಕ್ಷಣ ಎಷ್ಟು ಚೆನ್ನಾಗಿತ್ತಲ್ಲ, ನಾನು ಇನ್ನೂ ಚೆನ್ನಾಗಿ ಅದನ್ನು ಆನಂದಿಸಬೇಕಿತ್ತು ಅನಿಸುತ್ತದೆ. ಆ ಕ್ಷಣದ ಬಗ್ಗೆ ಪಶ್ಚಾತ್ತಾಪ ಉಳಿಯುತ್ತದೆ ಅಷ್ಟೇ.
ನಿಮ್ಮ ಮಗು ನಗೋಕೆ ಶುರು ಮಾಡೋದು ಯಾವಾಗ?
ಬದುಕು ಜೀವಂತವಾಗಿ ಇರುವುದು ಫೋಟೋಗಳಲ್ಲಿ ಅಲ್ಲ. ಬದಲು ನಮ್ಮ ನೆನಪುಗಳಲ್ಲಿ. ಹಾಗೇ ನಮ್ಮ ವರ್ತಮಾನದ ಕ್ಷಣಗಳಲ್ಲಿ. ನಮ್ಮ ಈಗಿನ ಕ್ಷಣಗಳನ್ನು ನಾವು ಚೆನ್ನಾಗಿ ಎಂಜಾಯ್ ಮಾಡಲು ಕಲಿತರೆ ಅದು ಸೊಗಸಾದ ಭೂತಕಾಲವಾಗಿ ಬದಲಾಗುತ್ತದೆ. ನಾವು ಮುಂದೆಂದೋ ಆ ಕ್ಷಣಗಳನ್ನು ಕಲ್ಪಿಸಿಕೊಂಡರೆ, ಆಹಾ ಆ ಕ್ಷಣ ಎಷ್ಟು ದಿವ್ಯವಾಗಿತ್ತು ಅನಿಸುತ್ತದೆ. ಪಶ್ಚಾತ್ತಾಪದ ಫೀಲಿಂಗ್ ಇರುವುದಿಲ್ಲ. ನಾವಿರಬೇಕಾದ್ದು ಈ ಕ್ಷಣದಲ್ಲಿ. ಇನ್ಯಾವತ್ತೋ ನೋಡಿ ಎಂಜಾಯ್ ಮಾಡ್ತೀನಿ ಅಂತ ಶೇಖರಿಸಿಡುವ ಕ್ಷಣಗಳಲ್ಲಿ ಅಲ್ಲ. ಈ ಕ್ಷಣದಲ್ಲಿ ನೀವಿರುವಾಗ ಒಂದು ದಿವ್ಯತೆಯ, ಖುಷಿಯ ಅನುಭವ ನಿಮ್ಮ ಮನಸ್ಸಿಗೆ ಆಗ್ತಾ ಇರುತ್ತೆ. ಆಗ ನಿಮ್ಮಲ್ಲಿ ಭೂತಕಾಲವೂ ಇರುವುದಿಲ್ಲ, ಭವಿಷ್ಯವೂ ಇರುವುದಿಲ್ಲ. ನೀವು ಹಂಡ್ರಡ್ ಪರ್ಸೆಂಟ್ ನಿಮ್ಮಲ್ಲೇ ಇರುತ್ತೀರಿ. ಇದೇ ನಿಜವಾದ ಆಧ್ಯಾತ್ಮ. ಇದೇ ನಿಜವಾದ ಸಂತೋಷದ ಒಳಗುಟ್ಟು.
ಇದಕ್ಕೆ ಇನ್ನೂ ಒಂದು ಕಾರಣವಿದೆ. ನಾಳೆ ಎಂಬುದು ಇದೆಯೋ ಇಲ್ಲವೋ ಬಲ್ಲವರ್ಯಾರು? ನಾಳೆ ನಾವು ಇರುತ್ತೀವಿ ಎನ್ನುವ ಗ್ಯಾರಂಟಿ ಯಾರಿಗೂ ಇಲ್ಲ. ನಾಳೆಗೆ ಅಂತ್ಲೇ ಎಲ್ಲವನ್ನೂ ಇಟ್ಟುಕೊಂಡರೆ ಇವತ್ತಿನ ಕ್ಷಣವೂ ಜಾರಿಹೋಗುತ್ತೆ. ಅಲ್ಲವೇ?
ನೀವು ಮಕ್ಕಳನ್ನು ನೋಡ್ಕೊಳೋದು ಕೋತಿ ಥರಾನಾ, ಬೆಕ್ಕಿನ ಥರಾನಾ?