ನಿಮ್ಮದು ಒನ್ ಸೈಡ್ ಲವ್ವಾ? ಅದರಿಂದ ಈಚೆ ಬರಲು ಹೀಗ್ಮಾಡಿ!

By Web Desk  |  First Published Nov 9, 2019, 3:21 PM IST

ಒನ್ ವೇ ಲವ್‌ನಲ್ಲೇ ವರ್ಷಗಟ್ಟಲೆ ಬದುಕು ಸವೆಸಿದವರು ನೀವಾಗಿದ್ದರೆ, ನೀವು ನಿಜವಾಗಿಯೂ ಮಾಡಬೇಕಾದುದು ಏನು ಎಂದು ಇಲ್ಲಿ ಓದಿ. 


ಬಹುತೇಕ ಯುವಕರು, ಒಂದಿಷ್ಟು ಯುವತಿಯರು ಒನ್ ಸೈಡೆಡ್ ಲವ್ ಸ್ಟೋರಿಯ ರುಚಿ ನೋಡಿರುತ್ತಾರೆ. ಅದರ ನೋವೇನು, ಕಷ್ಟ, ಯಾತನೆಯೇನು ಅನುಭವಿಸಿರುತ್ತಾರೆ. ನಿಮಗೆ ಸಿಕ್ಕ ಹುಡುಗಿ ಪರ್ಫೆಕ್ಟ್ ಎನಿಸಬಹುದು, ಆಕೆ ಬಗ್ಗೆ ನಿಮ್ಮ ಎಮೋಶನ್‌ಗಳೆಲ್ಲವೂ ನಿಜವಿರಬಹುದು. ಆದರೆ, ಆ ಫೀಲಿಂಗ್ಸ್ ಹೇಳಿಕೊಳ್ಳಲು ನಿಮ್ಮನ್ನು ತಡೆಯುತ್ತಿರುವುದೇನು? 

ಹಲವು ಕಾರಣಗಳಿರಬಹುದು- ಆಕೆ ಬೇರೊಬ್ಬರನ್ನು ಪ್ರೀತಿಸುತ್ತಿರಬಹುದು, ಅಥವಾ ಪ್ರೀತಿಗೀತಿಗೆಲ್ಲ ತನ್ನ ಬಳಿ ಸಮಯವಿಲ್ಲವೆಂದು ಆಕೆ ನಿಮಗೆ ಹೇಳಿರಬಹುದು, ಅಥವಾ ನೀವು ಕೇವಲ ಆಕೆಯ ಉತ್ತಮ ಗೆಳೆಯ ಎಂದು ಆಕೆ ಹೇಳಿದ್ದರಿಂದ ಫೀಲಿಂಗ್ಸ್ ಹೇಳಿಕೊಂಡರೆ ಎಲ್ಲಿ ಆಕೆಯ ಬದುಕಿನಲ್ಲಿ ಇರುವ ಸ್ಥಾನವನ್ನೂ ಕಳೆದುಕೊಂಡು ಬಿಡುವೆನೋ ಎಂಬ ಭಯವಿರಬಹುದು, ಜಾತಿ ಅಡ್ಡ ಬರುತ್ತಿರಬಹುದು... ಅಯ್ಯೋ ಎಲ್ಲ ನಿಜ ಕಾರಣವನ್ನೇ ಹೇಳುತ್ತಿದ್ದಾರಲ್ಲ ಎಂದು ಅಂದುಕೊಳ್ಳುತ್ತಿದ್ದೀರಾ? ಒಟ್ಟಿನಲ್ಲಿ ನಿಮ್ಮ ಒನ್ ಸೈಡೆಡ್ ಲವ್‌ಗಾಗಿ ನೀವು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೀರಿ, ಒಳಗೊಳಗೇ ಯಾತನೆ ಅನುಭವಿಸುತ್ತಿದ್ದೀರಿ, ಇದೇ ಹಣೆಬರಹ ಅಂದುಕೊಂಡು ಬಾಯಿ ಮುಚ್ಚಿಕೊಂಡು ಆಕೆ ಎದಿರು ಏನೂ ಆಗಿಲ್ಲವೆಂದು ನಟಿಸುತ್ತಿದ್ದೀರಿ. 

Latest Videos

undefined

ಪಾರ್ಟ್ನರ್ ಜೊತೆ ಆಗಾಗ ಜಗಳವಾಡೋದು ಸಂಬಂಧಕ್ಕೆ ಒಳ್ಳೆಯದಂತೆ! .

ವಿಪರ್ಯಾಸ ಅಂದ್ರೆ ಇಷ್ಟೆಲ್ಲ ಯಾರಿಗಾಗಿ ಮಾಡುತ್ತಿದ್ದೀರೋ ಅವರಿಗೆ ಈ ವಿಷಯವೇ ಗೊತ್ತಿಲ್ಲ. ಇನ್ನು ಕೆಲವರು ಗೊತ್ತಿದ್ದರೂ ಗೊತ್ತಿಲ್ಲದಂತೆ ನಟಿಸಿ ನಿಮ್ಮ ಭಾವನೆಗಳೊಂದಿಗೆ ಆಡುತ್ತಿರುತ್ತಾರೆ. ಕೆಲವೊಮ್ಮೆ ಅವರ ಈ ನಡೆ ನಿಮಗೆ ಗೊತ್ತಿರುತ್ತದೆ, ಆದರೂ ಅವರನ್ನು ಬದುಕಿನಿಂದ ಕಳೆದುಕೊಳ್ಳಲು ಇಷ್ಟವಿಲ್ಲದೆ ಎಲ್ಲ ಸರಿಯಾಗಿರುವವರಂತೆ ಮಾತಾಡಿಕೊಂಡಿರುತ್ತೀರಿ. ಆದರೆ, ಈ ಒನ್ ಸೈಡೆಡ್ ಲವ್ ಸ್ಟೋರಿಯ ಹೀರೋ ಎಂದುಕೊಂಡು ನೀವು ಕನಸು ಕಾಣುತ್ತಿದ್ದೀರಲ್ಲ, ಅದರಲ್ಲಿ ನಿಮಗೇ ಗೊತ್ತಿಲ್ಲದೆ ನೀವು ಸಂತ್ರಸ್ತರಾಗುತ್ತಿದ್ದೀರಿ. ಹಾಗಾಗಿ, ನಮ್ಮ ಮಾತು ಕೇಳಿ, ಒನ್ ವೇ ಲವ್ವನ್ನು ಹೇಗೆ ಡೀಲ್ ಮಾಡಬೇಕು, ಸಿಗದ ಪ್ರೀತಿಯಲ್ಲಿ ಸಂತ್ರಸ್ತರಾಗದೆ ಇರುವುದು ಹೇಗೆಂದು ತಿಳಿಸುತ್ತೇವೆ. 

ನೋ ಎಂಬುದನ್ನು ಒಪ್ಪಿಕೊಳ್ಳಿ

ಆಕೆ ನಿಮ್ಮೊಂದಿಗೆ ಪ್ರೀತಿಯಲ್ಲಿಲ್ಲ ಎಂಬುದು ನಿಮಗೆ ಗೊತ್ತಿದ್ದರೂ, ಅದು ಆಕೆಯ ಬಾಯಿಂದ ಬಂದಾಗಷ್ಟೇ ವಿಷಯವನ್ನು ಒಪ್ಪಿಕೊಳ್ಳಲು ಮನಸ್ಸು ಸಹಕರಿಸುತ್ತದೆ. ಇಲ್ಲದಿದ್ದರೆ, ಇಲ್ಲ ಎಂದು ಗೊತ್ತಿದ್ದೂ, ಎಲ್ಲೋ ಒಂದು ಸಣ್ಣ ಆಶಾಭಾವದಿಂದ ಕಾಯುತ್ತಲೇ ಇರುತ್ತೀರಿ. ಇದು ನಿಮ್ಮ ಭವಿಷ್ಯವನ್ನು ಇನ್ಯಾವುದೇ ದೃಷ್ಟಿಯಲ್ಲಿ ನೋಡದಂತೆ ತಡೆಯುತ್ತಿರುತ್ತದೆ. ಹೊಸ ಕನಸು ಕಾಣಲು ಅಡ್ಡ ಬರುತ್ತಿರುತ್ತದೆ. ಹೊಸ ಜೀವನದ ಯೋಚನೆಯೂ ಬರದಂತೆ ಬ್ಯಾರಿಕೇಡ್ ಹಾಕುತ್ತದೆ. ಹಾಗಾಗಿ, ಕಷ್ಟವೋ ಸುಖವೋ ಏನಾದರಾಗಲಿ ಎಂದುಕೊಂಡು ಆಕೆಯ ಬಳಿ ನಿಮ್ಮ ಫೀಲಿಂಗ್ಸ್ ಹೇಳಿಕೊಂಡು ಬಿಡಿ. ಆಕೆ ನೋ ಹೇಳಿದರೂ ಪರವಾಗಿಲ್ಲ, ಮನಸ್ಸಿನ ಗೊಂದಲಗಳು ನಿವಾರಣೆಯಾಗುತ್ತವೆ. ಭವಿಷ್ಯ ಬೇರೆಯೇ ಇದೆ ಎಂದು ನೋಡಲು ಸಹಾಯವಾಗುತ್ತದೆ. 

ಈ ರಾಶಿಯವರನ್ನು ಮದುವೆ ಆದರೆ ಲೈಫ್‌ ಜಿಂಗಾಲಾಲ!

ಫ್ರೆಂಡ್ ಆಗಿರು ಎಂದೊಡನೆ ಒಪ್ಪಬೇಕಿಲ್ಲ

ನೀವು ಪ್ರೀತಿಸುತ್ತಿರುವ ವ್ಯಕ್ತಿಯೊಡನೆ ಕೇವಲ ಫ್ರೆಂಡ್ ಆಗಿರುವುದು ಮಾತಿನಲ್ಲಿ ಹೇಳಿದಷ್ಟು ಸುಲಭವಲ್ಲ. ನೀವು ಪ್ರೀತಿ ಹೇಳಿಕೊಂಡೊಡನೆ ಅವರು ಕೇವಲ ಫ್ರೆಂಡ್ ಆಗಿರು ಎಂದೊಡನೆ ನೀವು ಕರಗಿ ಒಪ್ಪಬೇಕಿಲ್ಲ. ಅಥವಾ ಹೀಗಾದರೂ ಕೆಲ ಕಾಲ ಜೊತೆಗಿರಬಹುದಲ್ಲ ಎಂದು ಯೋಜಿಸಬೇಡಿ. ನಿಮ್ಮಿಂದ ಕೇವಲ ಫ್ರೆಂಡ್ ಆಗಿರುವುದು ಸಾಧ್ಯವಿಲ್ಲ ಎನಿಸಿದರೆ, ಆ ಸಂಬಂಧದಿಂದ ಸಂಪೂರ್ಣ ಹೊರಬನ್ನಿ. ಇಲ್ಲದಿದ್ದಲ್ಲಿ ಸುಮ್ಮನೆ ನಾಯಿಮರಿಯಂತೆ ಆಕೆಯ ಸುತ್ತಮುತ್ತ ಸುತ್ತುತ್ತಿರುತ್ತೀರಿ. 

ಆಕೆಗೆ ಮಿತಿಯನ್ನು ಅರ್ಥ ಮಾಡಿಸಿ

ಪ್ರೀತಿ ಇಲ್ಲ ಎಂದ ಮೇಲೆ ಸುಮ್ಮನೇ ಆಕೆಯ ಸುತ್ತ ನೀವು ಸುತ್ತಿಕೊಂಡಿರಲಿ ಎಂದು ಆಕೆ ನಿರೀಕ್ಷಿಸಲು ಬಿಟ್ಟು ನಿಮ್ಮ ಘನತೆ ಇಳಿಸಿಕೊಳ್ಳಬೇಡಿ. ಆಕೆ ನಿಮ್ಮ ಫೀಲಿಂಗ್ಸ್‌ನ್ನೇ ದುರುಪಯೋಗಪಡಿಸಿಕೊಂಡು ಅವಳೆಲ್ಲ ಕೆಲಸಕ್ಕೆ ಮಾತ್ರ ಕರೆಯುತ್ತಿರಬಹುದು. ಆದರೆ ಅವಳ ಅಳುವಿಗೆ ನಿಮ್ಮ ಭುಜವಿಲ್ಲ ಎಂಬುದನ್ನು ಸ್ಪಷ್ಟಪಡಿಸಿ. ಫ್ರೆಂಡ್‌ಶಿಪ್ ನೆಪದಲ್ಲಿ ನಿಮ್ಮ ಪ್ರೀತಿಯ ಭಾವನೆಯೊಂದಿಗೆ ಆಡದಂತೆ ನೋಡಿಕೊಳ್ಳಿ. ಆಕೆಯ ಮಿತಿಗಳೇನು ಎಂಬುದನ್ನು ಅರ್ಥಪಡಿಸಿ. 

ಎಲ್ಲರಂಥವನಲ್ಲ ನನ ಗಂಡ, ಬಲ್ಲಿದನು ಪುಂಡ!

ನಿಮ್ಮನ್ನು ಬ್ಯುಸಿಯಾಗಿಟ್ಟುಕೊಳ್ಳಿ

ಖಾಲಿ ಬಿದ್ದ ಮನಸ್ಸು ದೆವ್ವದ ಮನೆಯಂತೆ. ನಿಮ್ಮಿಂದ ನಿಯಂತ್ರಿಸಲಾಗದ ಭಾವನೆಗಳಿದ್ದಾಗ ಆದಷ್ಟು ನಿಮ್ಮನ್ನು ನೀವು ಬ್ಯುಸಿಯಾಗಿಟ್ಟುಕೊಳ್ಳಿ. ಆಕೆ/ಆತನ ಬಗ್ಗೆ ಯೋಚಿಸಲು ಸಮಯವೇ ಸಿಗದಷ್ಟು ಬ್ಯುಸಿಯಾಗಿ. ಗೆಳೆಯರನ್ನು ಭೇಟಿಯಾಗಿ, ಒಂದಿಷ್ಟು ದೂರದ ಸ್ಥಳಗಳಿಗೆ ಪ್ರಯಾಣ ಮಾಡಿ. ನಿಮ್ಮ ಆಸಕ್ತಿಯ ತರಗತಿಗಳಿಗೆ ಸೇರಿಕೊಳ್ಳಿ. ಕಚೇರಿಯ ಕೆಲಸಗಳಲ್ಲಿ ಸಂಪೂರ್ಣ ಮನಸ್ಸಿಡಿ. ಹೊಸ ಪರಿಚಯಗಳನ್ನು ಮಾಡಲು ಆಸಕ್ತಿ ತೋರಿ.

ಸರಿಯಾದ ವ್ಯಕ್ತಿ ಹುಡುಕಿ

ಈ ವ್ಯಕ್ತಿ ನಿಮಗೆ ಸಿಗಲ್ಲ ಎಂದು ಗೊತ್ತಾದ ಮೇಲೂ ಎನರ್ಜಿಯನ್ನು ಅಲ್ಲೇ ಹಾಕಬೇಡಿ. ನಿಮ್ಮ ಸೋಲ್‌ಮೇಟ್ ಬೇರೆಲ್ಲೋ ಇದ್ದೇ ಇದ್ದಾರೆ. ಈ ವಿಫಲ ಪ್ರೀತಿಯನ್ನು, ನೀವು ತಪ್ಪು ಬಾಗಿಲನ್ನು ಬಡಿಯುತ್ತಿದ್ದೀರಿ ಎಂದು ಪ್ರಕೃತಿ ಸೂಚಿಸುತ್ತಿರುವುದಾಗಿ ತಿಳಿಯಿರಿ. ಸುಳ್ಳು ನಂಬಿಕೆಗಳೊಂದಿಗೆ ಬದುಕುವ ಬದಲು, ಸತ್ಯ ಒಪ್ಪಿಕೊಂಡು ಹೊಸ ಹೊಸ ಜನರನ್ನು ಭೇಟಿಯಾಗಿ, ಹೊಸ ಫ್ರೆಂಡ್ಸ್ ಮಾಡಿಕೊಳ್ಳಿ. ಯಾರಿಗೆ ಗೊತ್ತು, ಈ ಹೊಸ ಪರಿಚಯದಲ್ಲಿ ನಿಮ್ಮ ಜೀವನಸಂಗಾತಿಯೂ ಸಿಗಬಹುದು. 

ಅಭಿಪ್ರಾಯ ಕೇಳಿದಷ್ಟೇ ಸುಲಭವಲ್ಲ, ಅಳವಡಿಸಿಕೊಳ್ಳುವುದು!

ನಿಮ್ಮ ಸಂತೋಷದ ಕೀಯನ್ನು ಬೇರೆಯವರಿಗೆ ಕೊಡಬೇಡಿ

ನೀವು ಯಾರೊಂದಿಗಾದರೂ ಪ್ರೀತಿಸಿ ಅಥವಾ ಕೇವಲ ಫ್ರೆಂಡ್ಸ್ ಆಗಿರಿ, ಆದರೆ ನಿಮ್ಮ ಸಂತೋಷದ ಕೀಲಿಕೈಯ್ಯನ್ನು ಮಾತ್ರ ಅವರಿಗೆ ಕೊಡಬೇಡಿ. ಭವಿಷ್ಯವಿಲ್ಲದ ಪ್ರೀತಿಯಲ್ಲಿ ಸಂತೋಷ ಹುಡುಕುವುದು ಬಿಟ್ಟು ನಿಮ್ಮನ್ನು ನೀವು ಪ್ರೀತಿಸಿಕೊಳ್ಳುವ ಮಾರ್ಗಗಳನ್ನು ಅರಿಯಿರಿ. 

click me!