
ಶಾಲೆಗೆ ಮಕ್ಕಳನ್ನು ಬಿಟ್ಟರೆ ಮುಗಿಯಿತು ನಮ್ಮ ಡ್ಯೂಟಿ, ಉಳಿದದ್ದನ್ನು ಶಾಲಾ ಶಿಕ್ಷಕರು ನೋಡಿಕೊಳ್ಳುತ್ತಾರೆ ಎನ್ನುವ ಮನಸ್ಥಿತಿಯ ಹಲವು ಪಾಲಕರಿದ್ದಾರೆ. ಮತ್ತೆ ಕೆಲವು ಮಕ್ಕಳು ಶಾಲೆಯಲ್ಲಿ ಆದ ಘಟನೆಗಳ ಬಗ್ಗೆ ಮನೆಯಲ್ಲಿ ಹೇಳುವುದೇ ಇಲ್ಲ. ಈಗಂತೂ ಮಕ್ಕಳ ನೋವನ್ನು, ಅವರಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಲು ಅಪ್ಪ-ಅಮ್ಮ ಇಬ್ಬರಿಗೂ ಟೈಮೇ ಇರುವುದಿಲ್ಲ. ದುರಂತ ಎಂದರೆ, ಮಕ್ಕಳ ಭವಿಷ್ಯಕ್ಕಾಗಿ ದುಡಿಯಬೇಕು ಎಂದು ಬಯಸುವ ಅಪ್ಪ-ಅಮ್ಮ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಆಗದೇ ಕೊನೆಗೆ ಮಕ್ಕಳ ದುರಂತ ಅಂತ್ಯವನ್ನೂ ನೋಡಬೇಕಾದ ಹಲವು ಘಟನೆಗಳೂ ನಡೆಯುತ್ತಿವೆ. ಕಾರಣ ಏನೇ ಇರಲಿ, ಶಾಲಾ-ಕಾಲೇಜುಗಳನ್ನು ನಮ್ಮ ಮಕ್ಕಳು ಎಷ್ಟು ಸೇಫ್ ಎನ್ನುವ ಬಗ್ಗೆ ಪ್ರತಿಯೊಬ್ಬ ಪಾಲಕರೂ ಚಿಂತಿಸುವಂಥ ಭಯಾನಕ ಘಟನೆಯೊಂದು ಕೇರಳದ ಕೊಚ್ಚಿಯಲ್ಲಿ ನಡೆದಿದೆ.
15 ವರ್ಷದ ಶಾಲಾ ಬಾಲಕ ಮಿಹೀರ್, ತಮ್ಮ ಮನೆಯ 26ನೇ ಮಹಡಿಯಿಂದ ಬಿದ್ದು ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂಥದ್ದೊಂದು ಘೋರ ಕೃತ್ಯಕ್ಕೆ ಆತ ಕೈಹಾಕುವಾಗ ಶಾಲೆಯಲ್ಲಿ ಅದೆಷ್ಟು ಮಾನಸಿಕ ಹಿಂಸೆ ಅನುಭವಿಸಿದ್ದಾನೆ ಎನ್ನುವುದು ಆತ ಸತ್ತ ಮೇಲೆ ತಿಳಿದಿದೆ! ಮಿಹೀರ್ಗೆ ಶಾಲೆಯಲ್ಲಿ ಕೆಲವು ಸೀನಿಯರ್ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿದ್ದಾರೆ. ಟಾಯ್ಲೆಟ್ ಸೀಟನ್ನು ನೆಕ್ಕಿಸಿದ್ದಾರೆ. ಮುಖವನ್ನು ಟಾಯ್ಲೆಟ್ನಲ್ಲಿಟ್ಟು ಫ್ಲಷ್ ಮಾಡಿದ್ದಾರೆ... ಇಂಥ ಒಂದೊಂದು ಕೃತ್ಯವನ್ನು ಕೇಳುತ್ತಾ ಹೋದರೆ ಮೈಯೆಲ್ಲಾ ಝುಂ ಎನ್ನುವಂಥ ಕೆಲಸ ಮಾಡಿದ್ದಾರೆ ಕ್ರೂರ ಮಕ್ಕಳು. ಆತನ ಬಣ್ಣವನ್ನು ನಿಂದಿಸಿದ್ದಾರೆ. ಇಷ್ಟಾದರೂ ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ಈ ವಿಷಯ ಗೊತ್ತಾಗಲೇ ಇಲ್ಲ!
ಅಮ್ಮನನ್ನು ಮನೆಯಲ್ಲಿ ಕೂಡಿ ಹಾಕಿ, ಪಾಪ ತೊಳೆದುಕೊಳ್ಳಲು ಕುಂಭಮೇಳಕ್ಕೆ ಹೋದ ಪುತ್ರ! ಆಗಿದ್ದೇನು ನೋಡಿ...
ಮನೆಗೆ ಬಂದು ಈತ ವಿಷಯವನ್ನು ತಿಳಿಸಿದ್ದಾನೋ ಇಲ್ಲವೋ ಗೊತ್ತಿಲ್ಲ. ಅಥವಾ ಆತನಲ್ಲಿ ಆದ ಬದಲಾವಣೆಯಲ್ಲಿ ಅಪ್ಪ-ಅಮ್ಮ ಗಮನಿಸಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಇಂಥದ್ದೊಂದು ಕ್ರೂರತನಕ್ಕೆ ಬಲಿಯಾದ ಬಾಲಕ 26ನೇ ಮಹಡಿಯಿಂದ ಬಿದ್ದು ಜೀವ ಕಳೆದುಕೊಂಡಿದ್ದಾನೆ. ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ, ಆದರೆ ಮಿಹಿರ್ ತಾಯಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿ ಮತ್ತು ಕೇರಳ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದು ತಮ್ಮ ಮಗನ ಸಾವಿನ ಬಗ್ಗೆ ತಕ್ಷಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿದ್ದಾರೆ.
"ಅವನ ಮರಣದ ನಂತರ, ನನ್ನ ಪತಿ ಮತ್ತು ನಾನು ಮಿಹಿರ್ ಅಂತಹ ಕಠಿಣ ಹೆಜ್ಜೆ ಇಟ್ಟಿದ್ದನ್ನು ಅರ್ಥಮಾಡಿಕೊಳ್ಳಲು ಮಾಹಿತಿಯನ್ನು ಸಂಗ್ರಹಿಸಿದೆವು. ಅವನ ಸ್ನೇಹಿತರು, ಸಹಪಾಠಿಗಳ ಮಾತುಗಳ ಬಗ್ಗೆ ಸಂಗ್ರಹ ಕಲೆ ಹಾಕಿದೆವು. ಮೆಸೇಜ್ಗಳನ್ನು ನೋಡಿದೆವು. ಆಗಲೇ ಅವನು ಅನುಭವಿಸಿದ ಭಯಾನಕ ಘಟನೆಗಳು ನಮಗೆ ತಿಳಿದಿವೆ. ಮಿಹೀರ್ನನ್ನು ಶಾಲೆಯಲ್ಲಿ ಮತ್ತು ಶಾಲಾ ಬಸ್‌ನಲ್ಲಿ ವಿದ್ಯಾರ್ಥಿಗಳ ಗುಂಪೊಂದು ಕ್ರೂರವಾಗಿ ರ‍್ಯಾಗ್ಗಿಂಗ್ ಮಾಡಿದೆ ಎಂದಿದ್ದಾರೆ ತಾಯಿ.
ಮಿಹಿರ್ನನ್ನು ಕೊನೆಯ ದಿನವೂ ರ್ಯಾಗಿಂಗ್ ಮಾಡಲಾಗಿದೆ. ಊಹಿಸಲಾಗದ ಅವಮಾನ ಮಾಡಲಾಗಿದೆ. ಬಲವಂತವಾಗಿ ಆತನನ್ನು ವಾಶ್‌ರೂಮ್‌ಗೆ ಕರೆದೊಯ್ಯಲಾಯಿತು, ಟಾಯ್ಲೆಟ್ ಸೀಟನ್ನು ನೆಕ್ಕುವಂತೆ ಮಾಡಲಾಯಿತು ಮತ್ತು ಅವರ ತಲೆಯನ್ನು ಶೌಚಾಲಯಕ್ಕೆ ತಳ್ಳಲಾಯಿತು. ಈ ಕ್ರೌರ್ಯದ ಕೃತ್ಯಗಳು ನಾವು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ನಡೆದಿವೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಬಣ್ಣಕ್ಕಾಗಿ ಅವನನ್ನು ಟೀಕಿಸಲಾಗಿದೆ. ಇದೀಗ ತನ್ನ ಸ್ನೇಹಿತನ ಸಾವಿಗೆ ನ್ಯಾಯ ಒದಗಿಸಲು 'ಜಸ್ಟೀಸ್ ಫಾರ್ ಮಿಹಿರ್' ಎಂಬ ಶೀರ್ಷಿಕೆಯ ಇನ್‌ಸ್ಟಾಗ್ರಾಮ್ ಪುಟವನ್ನು ಆರಂಭಿಸಲಾಗಿತ್ತು. ಆದರೆ ಅದ್ಯಾಕೋ ಗೊತ್ತಿಲ್ಲ, ಅದನ್ನೂ ಡಿಲೀಟ್ ಮಾಡಲಾಗಿದೆ. ಶಾಲೆಯಿಂದ ಬೆದರಿಕೆ ಬರುತ್ತಿದೆ ಎನ್ನಲಾಗುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.