ಗಂಡ- ಹೆಂಡತಿ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲು ಮಾತು ಬಹಳ ಮುಖ್ಯ. ಹಾಸ್ಯ, ವಿನೋದ, ಸರಸ, ಸಲ್ಲಾಪಗಳಿದ್ದರೆ ಆ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ. ಇಬ್ಬರ ನಡುವೆ ಆಡುವುದಕ್ಕೆ ಮಾತೇ ಇಲ್ಲ ಎನಿಸಲು ಶುರುವಾದಾಗ ಅಲ್ಲಿ ಬಿರುಕಿಗೆ ಹಾದಿ ಮಾಡಿಕೊಟ್ಟಂತೆ.
ಯಾಕೋ ಇತ್ತೀಚಿಗೆ ತಮ್ಮಿಬ್ಬರ ಸಂವಹನ ತೀರಾ ಕಡಿಮೆಯಾಗುತ್ತಿದೆ ಎನಿಸಿತು ಅವಳಿಗೆ. ಮಾತನಾಡಿದರೂ ಒಂದೆರೆಡು ಸಂಭಾಷಣೆಗಳಿಗೆ ಸೀಮಿತ. ಫೋನು ಮಾಡಿದರೆ ಏನು ಮಾತನಾಡುವುದು ಎಂದು ಯೋಚಿಸುವಂತಾಗಿದೆ. ಅವನದೋ ಇತ್ತೀಚಿಗೆ ನಿರ್ಲಿಪ್ತ ಉತ್ತರ. ಏನು? ಫೋನು ಮಾಡಿದ್ದು? ಏನಿಲ್ಲ, ಹೀಗೇ ಮಾಡಿದ್ದು. ಸರಿ ಹಾಗಿದ್ರೆ,ಹೇಳು. ಏನೂ ಇಲ್ಲ.. ಹಾಗಿದ್ರೆ ಫೋನಿಡ್ಲಾ? ಅದೆಷ್ಟೋ ಬಾರಿ ಅವನ ನಂಬರ್ ಡಯಲ್ ಮಾಡಿ ಕಾಲ್‌ಕಟ್ ಮಾಡಿದ್ದಿದೆ.
undefined
ವರ್ಷಗಳ ಬೇಸರ, ದುಃಖ, ಅಸಹನೆ ಎಲ್ಲವೂ ಒತ್ತರಿಸಿ ಬಂದಿತ್ತು ಅವಳಿಗೆ. ಫೋನು ಮಾಡಿದರೆ ತಾನು ಸರಿಯಾಗಿ ಮಾತನಾಡದೆ ಹೋಗಬಹುದೆಂದು, ಸಾವಕಾಶವಾಗಿ ಅವನಿಗೆ ಮೆಸೇಜ್ ಟೈಪ್ ಮಾಡತೊಡಗಿದಳು. ‘ರೀ, ನಾನಿಲ್ಲಿ ಒಂಟಿ. ಕೆಲಸಗಳೆಲ್ಲ ಮುಗಿದ ಮೇಲೆ ಒಂಟಿತನ, ಏಕತಾನತೆ ಕಿತ್ತು ತಿನ್ನುತ್ತೆ. ನನ್ನನ್ನು ಯಾರೂ ಮಾತನಾಡಿಸುವವರಿಲ್ಲ. ನಾನೂ ಯಾರಿಗೂ ಬೇಕಾಗಿಲ್ಲ ಅನ್ನಿಸುತ್ತಿದೆ.
ಶಬ್ದಗಳಿಗಾಗಿ, ಪ್ರೀತಿಯ ಮಾತುಗಳಿಗಾಗಿ ಹಪಹಪಿಸುತ್ತಿರುತ್ತೇನೆ. ನಮ್ಮವರೆನಿಸಿಕೊಂಡ ವ್ಯಕ್ತಿಗಳೇ ನಮ್ಮ ಬಳಿ ಮಾತನಾಡಲು ಇಷ್ಟಪಡುತ್ತಿಲ್ಲವೆಂದರೆ ಬದುಕಿರುವುದೇಕೆ ಎನ್ನುವ ಆಲೋಚನೆ ಬರುತ್ತದೆ. ನಾನು ಇಷ್ಟು ಬರೆದ ಮೇಲೆ ನೀವು ಖಂಡಿತಾ ಅರ್ಥಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ. ಅರ್ಥವಾಗದಿದ್ದರೆ ಈ ಸಂದೇಶವನ್ನು ನಿರ್ಲಕ್ಷಿಸಿ.’ ಅವನಿಂದ ಉತ್ತರ ಬಂತು.
ಬ್ಯುಸಿ ಬ್ಯುಸಿ ಎಂದು ಕಳೆದು ಹೋಗದಿರಿ; ಮನೆಯವರಿಗೂ ಕೊಡಿ ಸಮಯ!
‘ನೀನು ನನಗೆ ಬರೆದ ಸಂದೇಶವನ್ನು ನಮ್ಮದೇ ಮನೆಯಲ್ಲಿರುವ ನನ್ನ ಅಮ್ಮ ನಿನಗೆ ಬರೆದಿದ್ದಾರೆ ಎಂದುಕೊಂಡು ಓದಿಕೋ. ಅರ್ಥವಾದರೆ ಬದುಕು ಸುಂದರ, ಅರ್ಥವಾಗದಿದ್ದರೆ ಈ ಸಂದೇಶವನ್ನು ನಿರ್ಲಕ್ಷಿಸು’. ತಕ್ಷಣಕ್ಕೆ ಏನೆಂದು
ಅರ್ಥವಾಗದಿದ್ದರೂ, ಎರಡು ಮೂರು ಸಲ ಅದೇ ಸಂದೇಶವನ್ನು ಓದಿದಳು. ಅರ್ಥವಾಯ್ತು. ಕೂಡಲೇ ಮೊಬೈಲ್ ಕೆಳಗಿಟ್ಟು ‘ಅತ್ತೆ, ಹೊತ್ತಾಯ್ತು, ಹಸಿವೆಯಾಗ್ತಿಲ್ವಾ, ಬನ್ನಿ ಊಟ ಮಾಡೋಣ’ ಎಂದು ಕೂಗಿ ಕರೆದಳು. ‘ಅಯ್ಯೋ, ಹಸಿವೆಯಾಗ್ತಿದೆಯಮ್ಮಾ, ನೀನು ಕರೆಯುವುದನ್ನೇ ಕಾಯ್ತಾ ಇದ್ದೆ’ ಎಂದರು ಅತ್ತೆ. ಇಬ್ಬರೂ ಜೋರಾಗಿ ನಕ್ಕರು.