ಈಗಿನ ಆಧುನಿಕ ಬದುಕಿನಲ್ಲಿ ಎಲ್ಲರೂ ಸಮಯದ ಹಿಂದೆ ಓಡುವವರೇ. ಯಾರಿಗೂ ಪುರುಸೊತ್ತಿರುವುದಿಲ್ಲ. ಕೊನೆ ಕೊನೆಗೆ ಮನೆಯವರಿಗೆ ಕೊಡಲು ಸಮಯವಿಲ್ಲ ಎನ್ನುವ ಸ್ಥಿತಿಗೆ ತಲುಪಿ ಬಿಡುತ್ತೇವೆ. ಇದು ಅತಿಯಾದರೆ ನಮ್ಮ ಸಂಬಂಧಗಳಿಗೆ ಮುಳುವಾಗಬಹುದು.
ಆತ ಸಾಫ್ಟ್‌ಸ್ಕಿಲ್ ಟ್ರೇನರ್. ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಹೆಸರು ಪಡೆದಿದ್ದರು. ಸಾಕಷ್ಟು ಜನ ಅವರ ಬಳಿ ಸಾಫ್ಟ್‌ಸ್ಕಿಲ್ ಕಲಿಯಲು ಬರುತ್ತಿದ್ದರು. ಒಮ್ಮೆ ವಿದೇಶದಿಂದ ಬಂದ ಅವರ ಸ್ನೇಹಿತ ಸಿಕ್ಕಿದ. ಸ್ಟ್ರೆಸ್ ಮ್ಯಾನೇಜ್‌ಮೆಂಟ್ ಗುರುಗಳಿಗೆ ವಿದೇಶದಲ್ಲಿ ಭಾರೀ ಡಿಮ್ಯಾಂಡ್ ಇದೆ ಎಂದೂ ತುಂಬಾ ಹಣ ಮಾಡಬಹುದೆಂದೂ ತಿಳಿಸಿದ. ಗುರುಗಳು ತಕ್ಷಣ ವಿದೇಶಕ್ಕೆ ಹೊರಟರು. ಸ್ನೇಹಿತ ಹೇಳಿದಂತೆ ತುಂಬಾ ಹಣ ಸಂಪಾದಿಸತೊಡಗಿದರು.
undefined
ಕೆಲವೇ ತಿಂಗಳುಗಳಲ್ಲಿ ಮಡದಿ, ಮಗುವನ್ನು ಕರೆಸಿಕೊಂಡರು. ಮಡದಿಯೂ ಅವರ ಶಿಬಿರಗಳಲ್ಲಿ ತೊಡಗಿಸಿಕೊಂಡರು. ಕೆಲವೇ ವರ್ಷಗಳಲ್ಲಿ ಸಾಕಷ್ಟು ಸಂಪಾದನೆ ಮಾಡಿದರು. ಊರಿನಿಂದ ಒಮ್ಮೆಯಾದ್ರೂ ಹೋಗುವಂತೆ ಪೋನು ಬರುತ್ತಿದ್ದವು. ಆದರೆ ಗುರುಗಳಿಗೆ ಒಂದು ನಿಮಿಷವೂ ಬಿಡುವಿರುತ್ತಿರಲಿಲ್ಲ. ಸದಾ ತರಗತಿಗಳು, ಮೀಟಿಂಗ್, ಬಿಜಿಯಾಗಿರುತ್ತಿದ್ದರು. ಇತ್ತ ಮಡದಿಯೂ ದೊಡ್ಡ ಕಂಪನಿಗಳ ಉದ್ಯೋಗಿಗಳಿಗೆ ಒತ್ತಡ ನಿರ್ವಹಣೆ ಹಾಗೂ ಸಂಬಂಧಗಳ ನಿರ್ವಹಣೆ ಬಗ್ಗೆ ಕೋಚಿಂಗ್‌ಗಳನ್ನು ನಡೆಸಿಕೊಡುತ್ತಿದ್ದರು. ಅದ್ಯಾಕೋ ಗುರುಗಳಿಗೆ ಪದೇ ಪದೇ ತಲೇನೋವು ಕಾಣಿಸಿಕೊಳ್ಳಲಾರಂಭಿಸಿತು. ತಪಾಸಣೆ ಮಾಡಿದ ವೈದ್ಯರು ಏನೂ ತೊಂದರೆಯಿಲ್ಲ ಎಂದು ಹೇಳಿದರೂ ನೋವು ಕಾಣಿಸಿಕೊಳ್ಳುವುದು ನಿಲ್ಲಲಿಲ್ಲ.
ಎಲ್ಲಾ ತಜ್ಞರಿಗೆ ತೋರಿಸಿದರು. ಗುರುಗಳೊಂದಿಗೆ ಸುದೀರ್ಘವಾಗಿ ಮಾತನಾಡಿದ ತಜ್ಞರು ನೀವು ಸ್ವಲ್ಪ ಸಮಯ ನಿಮ್ಮ ಊರಿಗೆ ಹೋಗಿ ಬರುವುದು ಒಳ್ಳೆಯದು. ವಾತಾವರಣ ಬದಲಾಗಲಿ. ಸಂಬಂಧಿಕರನ್ನೂ, ತಂದೆ-ತಾಯಿಯರನ್ನೂ ಭೇಟಿಮಾಡಿ ನಿಮಗೆ ಸಮಾಧಾನವಾಗಬಹುದು ಎಂದು ಸಲಹೆ ನೀಡಿದರು. ಮೂರು ವರ್ಷ ಕಳೆದಿದ್ದರೂ ಗುರುಗಳ ಮಗ ಹೆಚ್ಚು ಮಾತನಾಡುತ್ತಿರಲಿಲ್ಲ. ಮಕ್ಕಳ ವೈದ್ಯರನ್ನೂ ಭೇಟಿಮಾಡಿದ್ದರು. ಯಾವ ತೊಂದರೆಯೂ ಇಲ್ಲ. ಮಗುವಿನೊಂದಿಗೆ ಹೆಚ್ಚು ಹೆಚ್ಚು ಮಾತನಾಡಿ ಎಂದು ಸಲಹೆಯನ್ನಿತ್ತರು.
ಪೇರೆಂಟಿಂಗ್ ನಲ್ಲಿ ಉದ್ಯೋಗಿ ತಾಯಂದಿರು ಎಡವುದೆಲ್ಲಿ?
ಗುರುಗಳು ಕೆಲವು ತಿಂಗಳು ರಜೆ ಹಾಕಿ, ಮಡದಿ ಮಗುವಿನೊಂದಿಗೆ ಊರಿಗೆ ಬಂದರು. ಪವಾಡವೆಂಬಂತೆ ದಿನೇ ದಿನೇ ಅವರ ತಲೇ ನೋವು ಕಡಿಮೆಯಾಗತೊಡಗಿತು. ಮಗುವಿಗೆ ಅಜ್ಜ-ಅಜ್ಜಿಯಂದಿರ ಪ್ರೀತಿ-ವಾತ್ಸಲ್ಯದ ‘ಯೋಗ’ ಕೂಡಿಬಂದಿತ್ತು. ಅದುವರೆಗೂ ಹೆಚ್ಚಿನ ಶಬ್ದಗಳನ್ನು ಮಾತನಾಡದ ಅವರ ಮಗು ಮಾತನಾಡಲಾರಂಭಿಸಿತು. ಮಗು ದಿನೇ ದಿನೇ ಮಾತನಾಡುವುದನ್ನು ಕಂಡ ಗುರುಗಳ ಮಡದಿಯ ಒತ್ತಡವೂ ಕಡಿಮೆಯಾಗತೊಡಗಿತು.