
ನೂರಾರು ಕನಸುಗಳನ್ನು ಕಟ್ಟಿಕೊಂಡು ಬೆಳೆಸಿದ ಸಂಬಂಧವೊಂದು ಈಗೀಗ ಒಂದೊಂದಾಗಿ ಕನಸುಗಳನ್ನು ಚೂರು ಮಾಡುತ್ತಾ ಬರುತ್ತಿದೆ. ಅಲ್ಲಿ ಹಲವಷ್ಟು ಸರಿಯಿಲ್ಲ. ಯಾವುದೂ ಮುಂಚಿನಂತಿಲ್ಲ. ಮೊದಲಿನಂತಿರುವುದು ಸಾಧ್ಯವಿಲ್ಲ ಎನಿಸುತ್ತಿದೆ ಎಂದರೆ ಬ್ರೇಕಪ್ ಹಾದಿಯಲ್ಲಿದ್ದೀರಿ ಎಂದರ್ಥ. ನಿಮ್ಮ ಸಂಬಂಧ ಬಹಳ ವರ್ಷಗಳದ್ದೋ, ಕೆಲ ತಿಂಗಳುಗಳದ್ದೋ- ಒಟ್ಟಿನಲ್ಲಿ ಬ್ರೇಕಪ್ ಎಂಬುದು ಆಯಿತೆಂದರೆ ಅದು ನೋವು ನೀಡಿಯೇ ನೀಡುತ್ತದೆ. ಆದರೆ, ಈ ಬ್ರೇಕಪ್ಪನ್ನು ಜಗಳವಾಡಿಕೊಂಡು, ಒಬ್ಬರು ಮತ್ತೊಬ್ಬರ ಮೇಲೆ ಆರೋಪಗಳನ್ನು ಹೊರಿಸಿಕೊಳ್ಳುತ್ತಾ, ಕೆಸರೆರಚಾಟದಲ್ಲಿ ತೊಡಗಿ ಮತ್ತಷ್ಟು ನೋವು ಹೆಚ್ಚಿಸಿಕೊಂಡು ಕೆಟ್ಟದಾಗಿ ಮಾಡಿಕೊಳ್ಳುವುದಕ್ಕಿಂತ, ನಿಮ್ಮಲ್ಲಿ ಕನಸುಗಳನ್ನು ಹುಟ್ಟಿಸಿದ ಆ ಸಂಬಂಧವನ್ನು ಸ್ನೇಹಪೂರ್ವಕವಾಗಿಯೇ ಕೊನೆಗೊಳಿಸಿಕೊಳ್ಳಬಹುದು. ಕಾರಣಗಳೇನೇ ಇರಲಿ, ಮಾತುಕತೆ ಮೂಲಕ ಬೇರಾಗುವ ಪ್ರಬುದ್ಧತೆ ತೋರುವ ಆಯ್ಕೆ ಬ್ರೇಕಪ್ ಅನಿವಾರ್ಯವೆನಿಸಿದ ಪ್ರತೀ ಜೋಡಿಗೂ ಇದ್ದೇ ಇರುತ್ತದೆ. ಹಾಗಾದಾಗ ನೋವು ಕಡಿಮೆ ಇರುತ್ತದೆ, ಜೊತೆಗೆ ಪರಸ್ಪರ ಗೌರವ ಉಳಿದುಕೊಳ್ಳುತ್ತದೆ.
ಹೀಗೆ ಫ್ರೆಂಡ್ಲಿಯಾಗಿ ಬ್ರೇಕಪ್ ಮಾಡಿಕೊಳ್ಳಲು ಇಲ್ಲಿವೆ ಟಿಪ್ಸ್
- ಧಾರಾವಾಹಿಯಂತೆ ಎಳೆಯಬೇಡಿ
ಕೆಲವೊಮ್ಮೆ ಈ ಸಂಬಂಧ ಮುಂದೆ ಹೋಗಲಾರದು ಎಂದು ಗೊತ್ತಿದ್ದೂ ಅದನ್ನು ಮುಂದುವರಿಸಿಕೊಂಡು ಹೋಗಿರುತ್ತೇವೆ. ಏಕೆಂದರೆ ನಮಗೆ ನಮ್ಮ ಪಾರ್ಟ್ನರ್ ಫೀಲಿಂಗ್ಸ್‌ಗೆ ನೋವುಂಟು ಮಾಡುವ ಭಯ ಕಾಡುತ್ತಿರುತ್ತದೆ. ಆದರೆ, ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದುದೇನೆಂದರೆ ಬ್ರೇಕಪ್ ಮುಂದೆ ಹಾಕುವುದರಿಂದ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿರುತ್ತೇವೆ. ಒಬ್ಬರೊಂದಿಗೆ ಖುಷಿಯಾಗಿರುವುದು ಸಾಧ್ಯವಿಲ್ಲವೆಂದು ನಿಮಗೆ ಅನಿಸಿದ ಮೇಲೂ ಅವರೊಂದಿಗೆ ಒತ್ತಾಯಪೂರ್ವಕವಾಗಿ ಇರುವುದರಿಂದ ಜೀವನ ಹಳಿ ತಪ್ಪುತ್ತದೆ. ಸಣ್ಣ ಗಾಯವಾಗುತ್ತಿದ್ದುದನ್ನು ತಪ್ಪಿಸಲು ಹೋಗಿ ದೊಡ್ಡ ಮಟ್ಟದ ನೋವನ್ನು ಮೈಮೇಲೆಳೆದುಕೊಂಡಿರುತ್ತೇವೆ. ಹಾಗಾಗಿ, ಬ್ರೇಕಪ್ ಅಗತ್ಯ ಎನಿಸಿದ ಮೇಲೆ ತಕ್ಷಣದಲ್ಲೇ ಆ ಸಂಬಂಧಕ್ಕೆ ಇತಿ ಹಾಡಿ.
- ಬ್ಲೇಮ್ ಗೇಮ್ ಬೇಡ
ನಿಮ್ಮ ಸಂಬಂಧದಲ್ಲಿ ಯಾವುದೂ ಸರಿಯಾಗುತ್ತಿಲ್ಲವೆಂದ ಮಾತ್ರಕ್ಕೆ ಅವೆಲ್ಲಕ್ಕೂ ನಿಮ್ಮ ಪಾರ್ಟ್ನರನ್ನೇ ಹೊಣೆಯಾಗಿಸುವ ಕೆಲಸ ಮಾಡಬೇಡಿ. ನೀವೆಷ್ಟೇ ಇಲ್ಲವೆಂದರೂ ಅಲ್ಲಿ ಇಬ್ಬರದೂ ತಪ್ಪುಗಳಿದ್ದೇ ಇರುತ್ತವೆ. ನೀವದನ್ನು ಒಪ್ಪಿಕೊಳ್ಳದಿದ್ದರೂ, ಪಾರ್ಟ್ನರನ್ನು ತಪ್ಪಿತಸ್ಥರಾಗಿಸಿ, ಅವರಲ್ಲಿ ಅಪರಾಧಿ ಭಾವ ತರುವುದು ಸರಿಯಲ್ಲ. ಬ್ರೇಕಪ್ ಮಾಡಿಕೊಳ್ಳುವ ಅತ್ಯುತ್ತಮ ವಿಧಾನ ಎಂದರೆ, ಶಾಂತಿಯುತವಾಗಿ ಮಾತನಾಡಿ- ನಿಮ್ಮಿಬ್ಬರ ನಡುವಿನ ಸುಂದರ ನೆನಪುಗಳನ್ನು, ಒಟ್ಟಾಗಿ ಕಳೆದ ಸಮಯಕ್ಕಾಗಿ ಧನ್ಯವಾದ ಹೇಳಿ, ಎಲ್ಲಿ ಏನು ತಪ್ಪಿತು ಎಂಬುದನ್ನು ಯಾವುದೇ ದೂರು ಇಲ್ಲದಂತೆ ಹೇಳುವುದು.
- ಎದುರು ನಿಂತು ಮಾತನಾಡಿ
ಬ್ರೇಕಪ್ಪನ್ನು ಮೆಸೇಜ್ ಮೂಲಕವೋ ಅಥವಾ ಫೋನ್ ಕಾಲ್ ಮೂಲಕವೋ ಮುಗಿಸಬೇಡಿ. ಇದರಿಂದ ಸರಿಯಾದ ಕೊನೆ ಸಿಗದೆ ವಿಷಯಗಳು ವಿಷಮವಾಗಬಹುದು. ಬದಲಿಗೆ ವೈಯಕ್ತಿಕವಾಗಿ ಭೇಟಿ ಮಾಡಿ ಮಾತನಾಡಿ, ಒಳ್ಳೆಯ ರೀತಿಯಲ್ಲಿ ಇದಕ್ಕೆ ಅಂತ್ಯ ಹಾಡುವ ನಿಮ್ಮ ಬಯಕೆಯನ್ನು ವ್ಯಕ್ತಪಡಿಸಿ.
- ಕಾರಣಗಳ ಬಗ್ಗೆ ಸ್ಪಷ್ಟತೆ ಇರಲಿ
ಬಹಳಷ್ಟು ಸಮಯ ನಿಮ್ಮ ತಲೆಯಲ್ಲೇನು ಓಡುತ್ತಿದೆ ಎಂಬುದು ನಿಮ್ಮ ಪಾರ್ಟ್ನರ್‌ಗೆ ತಿಳಿಯದೇ ಹೋಗಬಹುದು. ಹಾಗಾಗಿ, ಬ್ರೇಕಪ್ ನಿರ್ಧಾರದ ಬಗ್ಗೆ ನಿಮ್ಮಲ್ಲಿ ಸ್ಪಷ್ಟತೆ ಇರುವುದು ಮುಖ್ಯ. ನಿಮ್ಮ ನಿರ್ಧಾರಕ್ಕೆ ಸರಿಯಾದ ಕಾರಣಗಳನ್ನು ಒದಗಿಸಿ ಅರ್ಥ ಮಾಡಿಸಿ.
- ಚರ್ಚೆ ಮಧ್ಯೆ ಓಡಬೇಡಿ
ಬ್ರೇಕಪ್ ಸಂದರ್ಭದಲ್ಲಿ ನಿಮಗೊಬ್ಬರಿಗೇ ಅಲ್ಲ, ನಿಮ್ಮ ಪಾರ್ಟ್ನರ್‌ಗೆ ಕೂಡಾ ಹೇಳುವುದು ಹಲವಷ್ಟಿರುತ್ತದೆ. ಅದನ್ನು ಕೇಳಿಸಿಕೊಳ್ಳದೇ ಓಡುವುದು ಪಲಾಯನವಾದವಾಗುತ್ತದೆ. ಅದರಿಂದ ನಿಮಗೆಷ್ಟೇ ನೋವಾಗುತ್ತದೆ ಎಂದು ಗೊತ್ತಿರಲಿ, ಮೊದಲು ಅವರು ಹೇಳುವುದನ್ನು ಸರಿಯಾಗಿ ಕೇಳಿಸಿಕೊಳ್ಳಿ. ನೀವು ಬ್ರೇಕಪ್ ಬಗ್ಗೆ ನಿರ್ಧರಿಸಿಯಾಗಿರಬಹುದು- ಆದರೆ ಅವರ ಅಭಿಪ್ರಾಯ, ಹೇಳಿಕೆಗಳನ್ನು ಕೂಡಾ ಗೌರವಿಸುತ್ತೀರಿ ಎಂಬುದನ್ನು ಸೂಚಿಸಿ.
- ಗೊಂದಲ ಬೇಡ
ಬಹಳ ಬಾರಿ ಬ್ರೇಕಪ್ಪೇ ಸರಿಯಾದ ನಿರ್ಧಾರ ಎಂದು ತಿಳಿದಿರುತ್ತದೆ. ಆದರೂ ಅದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದೆ, ಆ ಸಂಬಂಧದ ಸಿಹಿಯನ್ನು ಸಂಪೂರ್ಣ ಹಾಳುಗೆಡವುವ ಕೆಲಸ ಮಾಡುತ್ತೀರಿ. ನೀವೂ ಅದರಿಂದ ಹೊರ ಹೋಗುವುದಿಲ್ಲ, ನಿಮ್ಮ ಪಾರ್ಟ್ನರ್‌ಗೂ ಹೊರ ಹೋಗಲು ಬಿಡುವುದಿಲ್ಲ, ಇದರಿಂದ ನಿಮ್ಮ ಬಗ್ಗೆ ಪಾರ್ಟ್ನರ್‌ಗೆ ಗೌರವ ಅಳಿಸಿ ಹೋಗಬಹುದು. ಭವಿಷ್ಯ ಇಲ್ಲ ಎಂದ ಮೇಲೆ ಅಂಥ ಸಂಬಂಧವನ್ನು ತಕ್ಷಣ ಕಡಿದುಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.