ಕಾರನ್ನು ಬೆನ್ನಟ್ಟಿ ಕೊನೆಗೂ ಕಂದಮ್ಮನ ಕಾಪಾಡಿದ ಹಸುಗಳು! ಮನ ಮಿಡಿಯುವ ವಿಡಿಯೋ ವೈರಲ್

By Suchethana D  |  First Published Dec 30, 2024, 5:24 PM IST

 ಕಾರನ್ನು ಬೆನ್ನಟ್ಟಿ ಬಂದು ಕೊನೆಗೂ ಅಡಿಯಲ್ಲಿ ಸಿಲುಕಿರುವ ಕರುವನ್ನು ಉಳಿಸಿಕೊಳ್ಳಲು ಯಶಸ್ವಿಯಾದ ಹಸುಗಳ ಮನ ಮಿಡಿಯುವ ವಿಡಿಯೋ ವೈರಲ್​ ಆಗಿದೆ.
 


ಮೂಕ ಪ್ರಾಣಿಗಳಿಗೆ ಮಾತು ಬರುವುದಿಲ್ಲ ಎನ್ನುವುದು ಬಿಟ್ಟರೆ, ಮನುಷ್ಯರಿಗಿಂತಲೂ ಹೆಚ್ಚು ಮಾನವೀಯತೆ, ನಿಯತ್ತು ಇರುವುದು ಅವುಗಳಿಗೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಯಾವ ಮಟ್ಟಿಗೆ ಬೇಕಾದರೂ ಹೋಗಬಲ್ಲ. ಹತ್ತು ಪೀಳಿಗೆಗಾಗುವಷ್ಟು ಐಶ್ವರ್ಯ ಇದ್ದರೂ ಮತ್ತಷ್ಟು ದುಡ್ಡು ಗಳಿಸುವ ಹಪಾಹಪಿತನ ಬಿಡುವುದೇ ಇಲ್ಲ. ಅಧಿಕಾರ, ಹಣಕ್ಕಾಗಿ ಎಷ್ಟೇ ಕೀಳು ಮಟ್ಟಕ್ಕೂ ಇಳಿಯುವ ತಾಕತ್ತು ಇರುವುದು ಮನುಷ್ಯರಿಗೆ ಮಾತ್ರ. ಆದರೆ ಪ್ರಾಣಿಗಳಿಗೆ ನಿಯತ್ತಿದೆ. ಅಂದಿನ ಆಹಾರ ಸಿಕ್ಕರೆ ಸಾಕು, ತನ್ನ ಯಜಮಾನನಿಗಾಗಿ ಏನು ಬೇಕಾದರೂ ಮಾಡುವ ಪ್ರಾಮಾಣಿಕತೆಯಂತೂ ಸಾಕು ಪ್ರಾಣಿಗಳಿಗೆ ಇದ್ದೇ ಇದೆ. ಆದರೆ ಕೆಲವೊಮ್ಮೆ ಮನುಷ್ಯ ಅವುಗಳ ಮೇಲೂ ತನ್ನ ಕ್ರೂರತನ ತೋರಿಸುವುದು ಇದೆ.

ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಇದು ಛತ್ತೀಸಗಢದಲ್ಲಿ ನಡೆದಿರುವ ಘಟನೆ ಎನ್ನಲಾಗಿದೆ. ರಸ್ತೆಯ ಮೇಲಿದ್ದ ಪ್ರಾಣಿಗಳ ಮೇಲೆ ಮನುಷ್ಯನೆಂಬ ಕ್ರೂರಿ ದರ್ಪ ತೋರುವುದು ಹೊಸ ವಿಷಯವೇನಲ್ಲ. ಅದೇ ರೀತಿ ಯಾರೋ ಒಬ್ಬ ದುಷ್ಟ ಕರುವಿಗೆ ಅಪಘಾತ ಮಾಡಿಕೊಂಡು ಹೋಗಿದ್ದಾನೆ. ಕರು ಕಾರಿನ ಅಡಿ ಸಿಲುಕಿಕೊಂಡಿದೆ. ಇದು ಆ ಕರುವಿನ ಅಮ್ಮನಿಗೆ ಬಹುಶಃ ತಿಳಿದಿರಬೇಕು. ಬೇರೆಲ್ಲಾ ಹಸುಗಳಿಗೆ ಅದು ಹೇಗೆ ಸಂದೇಶ ಕಳುಹಿಸಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಒಂದಿಷ್ಟು ಹಸುಗಳು ಆ ಕಾರನ್ನು ಬೆನ್ನಟ್ಟಿ ಬಂದಿವೆ.  ಆದರೂ ಕಾರಿನ ಚಾಲಕ ಕಾರನ್ನು ಮುಂದೆ ಓಡಿಸಿಕೊಂಡು ಹೋಗುತ್ತಿದ್ದನೋ ಗೊತ್ತಿಲ್ಲ. ಆದರೆ ಹಸುಗಳನ್ನು ನೋಡಿ ಕಾರನ್ನು ಸ್ಲೋ ಮಾಡಿದ್ದಾನೆ. ಆಗ ಬೆನ್ನು ಬಿಡದ ಹಸುಗಳು ಕಾರಿನ ಎದುರು ಬಂದು  ನಿಂತಿವೆ.

Tap to resize

Latest Videos

ಅಣ್ಣಾವ್ರೇ... ದಾರಿ ಬಿಡಿ... ತನ್ನ ದಾರಿಗೆ ಅಡ್ಡವಾಗಿದ್ದ ವ್ಯಕ್ತಿಗೆ ಸೂಚನೆ ಕೊಟ್ಟ ಆನೆಯ ಕ್ಯೂಟ್​ ವಿಡಿಯೋ ವೈರಲ್​

ಆಗ ಕಾರಿನಿಂದ ಒಬ್ಬ ಯುವತಿ ಗಾಬರಿಯಿಂದ ಹೊರಕ್ಕೆ ಇಳಿದುಬರುವುದನ್ನು ನೋಡಬಹುದು. ಹಸುಗಳು ಏಕೆ ಹೀಗೆ ಮಾಡುತ್ತಿವೆ ಎಂದು ಅಲ್ಲಿದ್ದವರಿಗೆ ಆಶ್ಚರ್ಯ. ಅಲ್ಲಿದ್ದವರು ಓಡಿ ಬಂದಿದ್ದಾರೆ. ಕೊನೆಗೆ ಕರು ಕಾರಿನ ಒಳಗೆ ಸಿಲುಕಿ ಹಾಕಿಕೊಂಡಿದೆ ಎಂದು ತೋರಿಸಲು ಹಸುಗಳು ತಮ್ಮದೇ ಆದ ರೀತಿಯಲ್ಲಿ ತೋರಿಸಿವೆ. ಆಗ ಕಾರಿನ ಚಕ್ರದ ಸಮೀಪ ಕರು ಸಿಲುಕಿರುವುದು ತಿಳಿದಿದೆ. ಕೂಡಲೇ ಕಾರನ್ನು ಹಿಡಿದು ಅದನ್ನು ಮೇಲಕ್ಕೆತ್ತಿ ಕೆಳಗೆ ಇರುವ ಕರುವನ್ನು ಕಾಪಾಡಲಾಗಿದೆ.

ಕರುವಿನ ಕಾಲಿಗೆ ಪೆಟ್ಟಾಗಿರುವುದನ್ನು ನೋಡಬಹುದು. ಕರು ಕುಂಟುತ್ತಾ ಬಂದಿದೆ. ಹಸುವಿನಿಂದಾಗಿ ಕರುವಿನ ಪ್ರಾಣ ಉಳಿದಿದೆ. ಬೆದರಿರುವ ಕರುವನ್ನು ಉಳಿದ ಹಸುಗಳು ಹಿಂಬಾಲಿಸಿಕೊಂಡು ಕರೆದುಕೊಂಡು ಹೋಗುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಕರು ಕಾರಿನಡಿ ಸಿಲುಕಿಕೊಂಡಿದೆ, ಅದು ಬದುಕಿದೆಯೋ ಇಲ್ಲವೋ ಎನ್ನುವ ಸಂಕಟದಲ್ಲಿ ಆ ಹಸುಗಳು ಅದೆಷ್ಟು ವೇದನೆ ಪಡುತ್ತಿರಬಹುದು ಎಂದು ಊಹಿಸಲೂ ಕಷ್ಟ ಎಂದು ಕೆಲವರು ಹೇಳಿದ್ದರೆ, ಹಸು ಕಾರಿನ ಅಡಿ ಬಂದರೂ ಅದು ಚಾಲಕನಿಗೆ  ತಿಳಿಯಲಿಲ್ಲವೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಮೂಕ ಪ್ರಾಣಿಗಳಿಗೆ ಈ ರೀತಿಯ ಚಿತ್ರಹಿಂಸೆ ಕೊಟ್ಟು ಮಜ ನೋಡುವ ಕ್ರೂರಿಗಳೂ ನಮ್ಮ ನಡುವೆಯೇ ಇದ್ದಾರಲ್ಲ ಎಂದು ಮತ್ತೆ ಕೆಲವರು ಪ್ರಶ್ನಿಸುತ್ತಿದ್ದಾರೆ. ಆದರೆ ಈ ಮನಮಿಡಿಯುವ ವಿಡಿಯೋ ನೋಡಿ ಹಲವರು ಕಣ್ಣೀರು ಹಾಕಿದ್ದಂತೂ ದಿಟ. 

ದುಬಾರಿ ಬಟ್ಟೆ ಧರಿಸಿದ್ರೂ ಆನೆ ಲದ್ದಿ ಹಾಕ್ತಿದ್ರೆ ಕ್ಯಾಚ್‌ ಹಿಡಿದೇ ಬಿಡ್ತಾಳೆ ಈ ಸುಂದ್ರಿ... ವಿಡಿಯೋ ವೈರಲ್

click me!