
ಅತ್ತೆ ಅತ್ತೆಯೇ ಅಮ್ಮ ಅಮ್ಮನೇ ಅತ್ತೆನ ಅಮ್ಮ ಅಂತ ಕರೆಯಬಹುದು ಆದರೆ ಅವರು ಅಮ್ಮ ಆಗಲು ಸಾಧ್ಯವಿಲ್ಲ ಎಂಬುದು ಬಹುತೇಕ ವಿವಾಹಿತ ಮಹಿಳೆಯರ ಮಾತು. ಅತ್ತೆ ಸೊಸೆಯರ ನಡುವಿನ ಮುಸುಕಿನ ಗುದ್ದಾಟ, ಮಗನ ಮೇಲಿನ ವ್ಯಾಮೋಹ, ಮಾತಿಲ್ಲದ ಮೌನವನ್ನು ಅಪಾರ್ಥ ಮಾಡಿಕೊಳ್ಳುವುದು, ಪೂರ್ವಾಗ್ರಹವಾದ ಯೋಚನೆಗಳು ಇದಕ್ಕೆ ಕಾರಣವಿರಬಹುದು. ಹೀಗಾಗಿ ಬಹುತೇಕ ಸೊಸೆಯರು ಅತ್ತೆಯರನ್ನು ದೂರಿದರೆ ಅತ್ತೆಯರೂ ಅಷ್ಟೇ ತಾವೇನು ಕಡಿಮೆ ಇಲ್ಲ ಎಂದು ಸೊಸೆಯರನ್ನು ಊರು ತುಂಬಾ ದೂರಿಕೊಂಡು ಬರುತ್ತಾರೆ. ಮಗಳಿಗೆ ಏನಾದರೂ ಆದರೆ ನೋವಾಗುತ್ತೆ ಸೊಸೆಗೆ ಆದರೆ ಹಂಗೆ ಆಗ್ಬೇಕು, ಸೊಕ್ಕು ಜಾಸ್ತಿ ಎಂದು ಅಕ್ಕಪಕ್ಕದ ಮನೆಗಳಲ್ಲಿ ದೂರಿಕೊಂಡು ಬರೋದು, ಅದೂ ಸೀದಾ ಬಂದು ಸೊಸೆಯ ಕಿವಿ ಸೇರೋದು ಇದರಿಂದ ಈ ಅತ್ತೆ ಸೊಸೆ ನಡುವಿನ ಅಂತರ ಮತ್ತಷ್ಟು ಹೆಚ್ಚಾಗುತ್ತಾ ಹೋಗುತ್ತದೆ. ಹೀಗಿರುವಾಗ ಅತ್ತೆ ಸೊಸೆ ನಡುವಿನ ಅನುಬಂಧ ಅಮ್ಮ ಮಗಳ ಬಾಂಧವ್ಯದಂತೆ ಇರೋದು ತೀರಾ ಅಪರೂಪವೆನಿಸಿದೆ.
ಆದರೂ ಅಲ್ಲೋ ಇಲ್ಲೋ ಒಳ್ಳೆ ಸೊಸೆಯರು ಇರುವಂತೆ ಒಳ್ಳೆ ಅತ್ತೆಯರು ಇರುತ್ತಾರೆ. ಮಗನಿಗಿಂತಲೂ ಹೆಚ್ಚಾಗಿ ಸೊಸೆಯನ್ನು ಪ್ರೀತಿ ಮಾಡುವ ಅತ್ತೆಯರು ಇರುತ್ತಾರೆ. ತಮ್ಮ ಮನೆ ಮಕ್ಕಳಿಗಿಂತಲೂ ತನ್ನವರೆಲ್ಲರನ್ನು ಬಿಟ್ಟು ಬಂದ ಸೊಸೆಯ ಮೇಲೆ ಹೆಚ್ಚು ಮಮಕಾರ ತೋರುವ ಅತ್ತೆಯರು ಇರುತ್ತಾರೆ. ಇದಕ್ಕೆ ಅನೇಕ ಹೆಂಗೆಳೆಯರು ಸಾಕ್ಷಿಯಾಗಿದ್ದಾರೆ. ಅನೇಕರು ತಮ್ಮ ಅತ್ತೆ ಅಮ್ಮನಿಗಿಂತ ಹೆಚ್ಚು ಎಂದು ಹೇಳಿಕೊಂಡವರು ಇದ್ದಾರೆ. ಅದೇ ರೀತಿ ಇಲ್ಲೊಬ್ಬರು ತಮ್ಮ ಅತ್ತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿ ಕೆಲವಕ್ಷರ ಬರೆದು ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅನೇಕರು ಕಾಮೆಂಟ್ ಮಾಡಿದ್ದಾರೆ.
chikkus_doctor_mommy ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿರುವ Divya Raju ಎಂಬುವವರು ತಮ್ಮ ಅತ್ತೆಯ ನಿಷ್ಕಲ್ಮಷ ಪ್ರೀತಿಯನ್ನು ಬಣ್ಣಿಸಿ ಪೋಸ್ಟ್ ಮಾಡಿದ್ದಾರೆ. ನಾನು ಆಕೆಯ ಮಗನ ಪ್ರೀತಿಯಲ್ಲಿ ಮೊದಲೇ ಬಿದ್ದಿದ್ದೆ. ಆದರೆ ಈ ಅದ್ಭುತವಾದ ಆತ್ಮದ ಜೊತೆ ಪ್ರೀತಿಯಲ್ಲಿ ಬೀಳದೇ ಇರೋದಕ್ಕೆ ನನಗೆ ಸಾಧ್ಯವಾಗಲಿಲ್ಲ, ನನಗೆ ನಸುಕಿನ ಜಾವ ರೈಲು ಇದ್ದಿದ್ದರಿಂದ ನಾನು ನಿನ್ನೆ ರಾತ್ರಿಯೇ ನಮ್ಮ ಅತ್ತೆಗೆ ನಾನು ತರಬೇತಿಗಾಗಿ ನಸುಕಿನ ಜಾವ ಮನೆ ಬಿಡುತ್ತೇನೆ ಹೀಗಾಗಿ ನನ್ನನ್ನು ಕಳುಹಿಸಿಕೊಡುವುದಕ್ಕಾಗಿ ನೀವು ಬೇಗನೇ ಎದ್ದೇಳುವುದು ಬೇಡ ಎಂದು ಮೊದಲೇ ಹೇಳಿದ್ದೆ. ಆದರೆ ನಾನು ರೆಡಿಯಾಗಿ ಹೊರಗೆ ಬರಬೇಕಾದರೆ ನನಗೆ ಅಚ್ಚರಿ ಕಾದಿತ್ತು. ಬೆಳಗ್ಗೆ 6.30ರ ಸಮಯಕ್ಕೆ ಆಕೆ ಬಿಸಿ ಬಿಸಿಯಾದ ಟೀ ರೆಡಿ ಮಾಡಿ, ಆಹಾರವನ್ನೂ ಸಿದ್ಧಪಡಿಸಿ ನನಗಾಗಿ ಕಾಯುತ್ತಿರುವುದನ್ನು ನೋಡಿ ನಾನು ಭಾವುಕಳಾದೆ ಎಂದು ದಿವ್ಯಾ ರಾಜು ವೀಡಿಯೋದ ಮೇಲೆ ಬರೆದುಕೊಂಡಿದ್ದಾರೆ.
ಜೊತೆಗೆ
'ನನ್ನ ಸುಂದರಿ❣️🥺😍 ಕೆಳಗೆ ಓದಿ!
ಅವಳಂತಹ ವಯಸ್ಸಾದ ವ್ಯಕ್ತಿ ಬೇಗನೆ ಎದ್ದು ಯಾರನ್ನಾದರೂ ಕಳುಹಿಸುವುದನ್ನು ಯಾರೂ ಬಯಸುವುದಿಲ್ಲ.. ಆದರೆ ನಾನು ಅಲ್ಲಿಗೆ ತಲುಪುವವರೆಗೂ ಹಸಿವಿನಿಂದ ಇರುವುದನ್ನು ಅವಳು ಬಯಸುವುದಿಲ್ಲ, ನಾನು ಕೇಳದೆಯೇ ಇದ್ದರೂ ಆಹಾರವನ್ನು ತಯಾರಿಸುತ್ತಾಳೆ.. ಅತ್ತೆಯೊಬ್ಬರು ತಮ್ಮ ಸೊಸೆಗಾಗಿ ಏನಾದರೂ ಮಾಡುವುದು ಅಪರೂಪ ಮತ್ತು ಅದನ್ನು ಪ್ರಶಂಸಿಸಬೇಕು ಎಂದು ನನಗೆ ಅನಿಸಿತು.. ಅವರು ಇನ್‌ಸ್ಟಾದಲ್ಲಿ ಇಲ್ಲ ಮತ್ತು ಈ ವೀಡಿಯೊವನ್ನು ಎಂದಿಗೂ ನೋಡುವುದಿಲ್ಲ, ಆದರೆ ಅದು ತುಂಬಾ ಸ್ವಾಭಾವಿಕವಾಗಿ ಸಂಭವಿಸಿದಾಗ ಸಕಾರಾತ್ಮಕ ವಿಷಯಗಳನ್ನು ಹರಡುವುದು ಮುಖ್ಯ' ಎಂದು ದಿವ್ಯ ರಾಜು ಕ್ಯಾಪ್ಸನ್ ನೀಡಿದ್ದಾರೆ. ವೀಡಿಯೋದಲ್ಲಿ ತುಂಬಾ ವಯಸ್ಸಾದ ವೃದ್ಧರೊಬ್ಬರು (ಅತ್ತೆ) ಸೊಸೆ ಬೇಗನೇ ಅಫೀಸ್‌ಗೆ ಹೋಗ್ತಾಳೆ ಎಂಬುದನ್ನು ಅರಿತು ಮುಂಜಾನೆ ಬೇಗನೆ ಎದ್ದು, ಆಹಾರ ಸಿದ್ಧಪಡಿಸುತ್ತಿರುವುದು ವೀಡಿಯೋದಲ್ಲಿದೆ.
ಈ ವೀಡಿಯೋ ನೋಡಿದ ಕೆಲವು ಸೊಸೆಯರು ತಮ್ಮ ಅತ್ತೆಯರ ಗುಣಗಾನ ಮಾಡಿದ್ದಾರೆ. ಅಲ್ಲದೇ ಆಕೆ ನಿಜವಾಗಿಯೂ ಜಂಟಲ್‌ಮ್ಯಾನ್ ರೀತಿ ಮಗನ ಬೆಳೆಸಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಆಗಿನ ಕಾಲದಲ್ಲಿ ಈಗಿನ ಕಾಲದ ಅತ್ತೆಯರು ತಮ್ಮ ಅತ್ತೆಯರಿಂದ ಒಬ್ಬ ಸೊಸೆಯಾಗಿ ಸಾಕಷ್ಟು ಕಿರುಕುಳ ಅನುಭವಿಸಿರುತ್ತಾರೆ. ಆದರೆ ಕೆಲವು ಅತ್ತೆಯರು ಮಾತ್ರ ಅನ್ನು ತಮ್ಮ ಸೊಸೆ ಅನುಭವಿಸುವುದು ಬೇಡ ಎಂದು ಭಾವಿಸುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನೀವು ನಿಜವಾಗಿಯೂ ಅದೃಷ್ಟವಂತರು ಇಂತಹ ಸೊಸೆಯರು ಎಲ್ಲರಿಗೂ ಸಿಗುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಿಮ್ಮ ಅತ್ತೆ ನಿಮ್ಮ ಜೊತೆಯೇ ವಾಸ ಮಾಡುತ್ತಿರುವುದನ್ನು ನೋಡಿ ಖುಷಿಯಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ಈ ವಿಶೇಷ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.