
ಭಾರತದ ಹೆಮ್ಮಯ ಕ್ರಿಕೆಟರ್ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನಾ ಜಹಾನ್ ಅವರು ವಿಚ್ಚೇದನ ಪಡೆದು ಪರಸ್ಪರ ದೂರಾಗಿರುವುದು ಎಲ್ಲರಿಗೂ ಗೊತ್ತೆ. ಗಂಡ ಹೆಂಡತಿ ದೂರವಾದರೂ ಈ ಜೋಡಿಗೆ ಒಂದು ಹೆಣ್ಣು ಮಗುವಿದೆ. ಇತ್ತೀಚೆಗೆ ಕ್ರಿಕೆಟರ್ ತುಂಬಾ ದಿನಗಳ ನಂತರ ಪುತ್ರಿ ಅಯಿರಾಳನ್ನು ಭೇಟಿ ಮಾಡಿದ್ದರು. ಅಲ್ಲದೇ ಮಗಳ ಜೊತೆಗೆ ಹೋಗಿ ಶಾಪಿಂಗ್ ಕೂಡ ಮಾಡಿದ್ದರು. ಬಹಳ ಕಾಲದ ನಂತರ ಮಗಳನ್ನು ನೋಡಿ ಭಾವುಕರಾದ ಮೊಹಮ್ಮದ್ ಶಮಿ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್ ಮಾಡಿಕೊಂಡಿದ್ದರು. ಆದರೆ ಈಗ ಅವರ ಮಾಜಿ ಪತ್ನಿ ಹಸೀನಾ ಜಹಾನ್ ಮೊಹಮ್ಮದ್ ಶಮಿ ವಿರುದ್ಧ ಏನೇನೋ ಆರೋಪ ಮಾಡಿದ್ದು, ಮತ್ತೆ ಸುದ್ದಿಯಲ್ಲಿದ್ದಾರೆ.
2018ರಲ್ಲಿ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನಾ ಜಹಾನ್ ಇಲ್ಲಸಲ್ಲದ ಆರೋಪ ಮಾಡಿದಾಗ ಅದು ಮಾಧ್ಯಮಗಳಲ್ಲಿ ಹೆಡ್‌ಲೈನ್ ಆಗಿತ್ತು. ಪತ್ನಿಯ ಕಿರುಕುಳದಿಂದ ತಾನು ಹಲವು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದಾಗಿ ಮೊಹಮ್ಮದ್ ಶಮಿ ಹೇಳಿಕೊಂಡಿದ್ದರು. ಆದರೆ ಈಗ ವಿಚ್ಛೇದನದ ನಂತರವೂ ಕೂಡ ಹಸೀನಾ ಜಹಾನ್, ಮೊಹಮ್ಮದ್ ಶಮಿ ವಿರುದ್ಧ ಹಸೀನಾ ದೂರುಗಳು ಕಡಿಮೆ ಆಗಿಲ್ಲ, ಆತ ಮಗಳನ್ನು ಕೇವಲ ತೋರಿಕೆಗೆ ಭೇಟಿಯಾಗಿದ್ದಾನೆ. ಆಕೆ ಕೇಳಿದ ಏನನ್ನೂ ಆಕೆ ತೆಗೆದುಕೊಟ್ಟಿಲ್ಲ, ಆಕೆ ಕ್ಯಾಮರಾ ಕೇಳಿದ್ದಳು ಅದನ್ನು ಕೊಡಿಸಲಿಲ್ಲ, ಗಿಟಾರ್ ಕೇಳಿದ್ದಳು, ಅದನ್ನು ಕೊಡಿಸಲಿಲ್ಲ ಎಂದು ಹಸೀನಾ ದೂರಿದ್ದಾರೆ.
ಮೂರು ದಿನಗಳ ಹಿಂದೆ ಶಮಿ ಮಗಳ ಜೊತೆ ಕಳೆದ ಕ್ಷಣಗಳ ಬಗ್ಗೆ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಜೊತೆಗೆ, 'ಬಹಳ ಸಮಯದ ನಂತರ ಆಕೆಯನ್ನು ಮತ್ತೆ ನೋಡಿದಾಗ ಸಮಯ ನಿಂತಿತು. ಪದಗಳಲ್ಲಿ ಹೇಳಿಕೊಳ್ಳಲಾಗದಷ್ಟು ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಶಮಿ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು. ಈ ವೀಡಿಯೋ ಸಖತ್ ವೈರಲ್ ಆಗಿತ್ತು, ಶಮಿ ಅಭಿಮಾನಿಗಳು ಅನೇಕರು ಈ ಅಪ್ಪ ಮಗಳ ಜೋಡಿಗೆ ಶುಭ ಹಾರೈಸಿ ಹೃದಯದ ಇಮೋಜಿಯ ಕಾಮೆಂಟ್ ಮಾಡಿದ್ದರು. ಆದರೆ ಇದಾದ ನಂತರ ಶಮಿ ಮಾಜಿ ಪತ್ನಿ ಹಸೀನಾ ಜಹಾನ್ ಆರೋಪಗಳ ಸುರಿಮಳೆಗೈದಿದ್ದಾರೆ.
ಇದು ಕೇವಲ ಶಮಿಯ ಶೋ ಆಫ್, ನನ್ನ ಮಗಳ ಪಾಸ್‌ಪೋರ್ಟ್‌ನ ಅವಧಿ ಮುಗಿದಿದೆ. ಹೊಸ ಪಾಸ್‌ಪೋರ್ಟ್‌ಗೆ ಶಮಿಯ ಸಹಿ ಬೇಕು. ಈ ಕಾರಣಕ್ಕೆ ಆಕೆ (ಮಗಳು) ಶಮಿಯನ್ನು ಭೇಟಿ ಮಾಡಲು ಹೋಗಿದ್ದಳು. ಆದರೆ ಶಮಿ ಪಾಸ್‌ಪೋರ್ಟ್‌ಗೆ ಸಹಿ ಹಾಕಲಿಲ್ಲ, ಆತ ಮಗಳನ್ನು ಕರೆದುಕೊಂಡು ಶಾಪಿಂಗ್ ಹೋದ. ಆ ಸಂಸ್ಥೆಯೂ ಶಮಿಗೆ ಜಾಹೀರಾತು ನೀಡುತ್ತಿತ್ತು. ಅಲ್ಲಿಗೆ ಆತ ಮಗಳನ್ನು ಕರೆದುಕೊಂಡು ಹೋದ, ನನ್ನ ಮಗಳು ಅಲ್ಲಿ ಶೂ ಹಾಗೂ ಬಟ್ಟೆ ಶಾಪಿಂಗ್ ಮಾಡಿದಳು. ಅಲ್ಲಿ ಶಾಪಿಂಗ್ ಮಾಡಿದರೆ ಶಮಿ ಅಲ್ಲಿ ಏನನ್ನು ಪಾವತಿ ಮಾಡಬೇಕಾಗಿರುವುದಿಲ್ಲ, ಅದೇ ಕಾರಣಕ್ಕೆ ಶಮಿ ಆಕೆಯನ್ನು ಅಲ್ಲಿಗೆ ಕರೆದೊಯ್ದ, ನನ್ನ ಮಗಳು ಗಿಟಾರ್ ಬೇಕು ಕ್ಯಾಮರಾ ಬೇಕು ಎಂದು ಕೇಳಿದ್ದಳು. ಆದರೆ ಅದಾವುದನ್ನು ಆತ ಮಗಳಿಗೆ ಕೊಡಿಸಲಿಲ್ಲ ಎಂದು ಹಸೀನಾ ಜಹಾನ್ ಮಾಧ್ಯಮವೊಂದರ ಮುಂದೆ ಆರೋಪ ಮಾಡಿದ್ದಾರೆ.
ಶಮಿ ಜತೆಗಿನ ಅರೆನಗ್ನ ಚಿತ್ರ ಹಂಚಿಕೊಂಡ ಹಸೀನಾ; ಕಿಡಿಕಾರಿದ ಫ್ಯಾನ್ಸ್..!
ಅಲ್ಲದೇ ಶಮಿ ನನ್ನ ಮಗಳ ಬಳಿ ಏನನ್ನೂ ಕೇಳಲಿಲ್ಲ, ಆತ ಅವನಷ್ಟಕ್ಕೆ ಬ್ಯುಸಿಯಾಗಿದ್ದ, ಆಕೆಯನ್ನು ಕೇವಲ ತಿಂಗಳ ಹಿಂದಷ್ಟೇ ಭೇಟಿಯಾಗಿದ್ದ. ಆದರೆ ಆಗ ಆತ ಏನನ್ನೂ ಪೋಸ್ಟ್ ಮಾಡಿರಲಿಲ್ಲ, ಈಗ ಆತನಿಗೆ ಪೋಸ್ಟ್ ಮಾಡಲು ಏನು ಇರಲಿಲ್ಲ, ಅದಕ್ಕೆ ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಿದ್ದಾನೆ ಎಂದು ಹಸೀನಾ ಆರೋಪಿಸಿದ್ದಾರೆ.
ಕ್ರಿಕೆಟ್ ವೃತ್ತಿ ಜೀವನದಲ್ಲಿ ಯಶಸ್ವಿ ಸ್ಪಿನ್ನರ್ ಆಗಿರುವ ಮೊಹಮ್ಮದ್ ಶಮಿ ಅವರ ವೈಯಕ್ತಿಕ ಬದುಕು ಮಾತ್ರ ಮದುವೆಯಾದಾಗಿನಿಂದಲೂ ಸಂಪೂರ್ಣ ಏಳು ಬೀಳುಗಳನ್ನು ಕಂಡು ಕೊನೆಗೂ ವಿಚ್ಛೇದನಕ್ಕೊಳಗಾಗಿದ್ದರು. ಪತ್ನಿಯಾಗಿದ್ದ ಹಸೀನಾ ಜಹಾನ್ ಈ ಹಿಂದೆಯೂ ಹಲವು ಪತಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಶಮಿ ಮ್ಯಾಚ್ ಫಿಕ್ಸಿಂಗ್ ಕೂಡ ಮಾಡಿದ್ದಾರೆ ಎಂದು ಆಕೆ ಆರೋಪಿಸಿದ್ದಳು, ಇದರಿಮದ ಶಮಿ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳದಿಂದ ವಿಚಾರಣೆ ಎದುರಿಸುವಂತಾಗಿ ನಂತರ ಆರೋಪ ಮುಕ್ತರಾಗಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.