ಅಮ್ಮನ ಪ್ರೀತಿಯ ಬಗ್ಗೆ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಅಪ್ಪನ ಮಮತೆಯ ನೆನಪು ಯಾಕಿಲ್ಲ. ಅಮ್ಮ ಕೈ ತುತ್ತಿಟ್ಟಿದ್ದು ಎಲ್ಲರಿಗೂ ನೆನಪಿದೆ, ಅಪ್ಪ ದಿನವಿಡೀ ದುಡಿದು ಮೂಟೆ ಅಕ್ಕಿ ತಂದು ಹಾಕಿದ್ದು ಮರೆತೀರಾ? ಅಮ್ಮಂದಿರ ದಿನವಲ್ಲ..ಅಪ್ಪಂದಿರಿಗೂ ಒಂದು ದಿನವಿದೆ. ಹೆತ್ತು, ಹೊತ್ತು ಸಾಕಿ ಸಲಹಿದ, ಮಕ್ಕಳನ್ನು ಸಲಹಲು ಜೀವನವನ್ನೇ ಮುಡಿಪಾಗಿಟ್ಟ ಅಪ್ಪನಿಗೊಂದು ದಿನ.
ಅಮ್ಮ ಹೀಗೆ ಮಾಡಿದ್ದಳು..ಹಾಗೆ ಮಾಡಿದ್ದಳು..ಬೆಳೆಸೋಕೆ, ಓದಿಸೋಕೆ ಅಷ್ಟೆಲ್ಲಾ ಮಾಡಿದಳು, ಒದ್ದಾಡಿದಳು. ಇದೆಲ್ಲವೂ ಎಲ್ಲರಿಗೂ ನೆನಪಿದೆ. ಅಪ್ಪನ ತ್ಯಾಗ ಯಾಕೆ ನೆನಪಿಲ್ಲ. ಅಪ್ಪ ಏನು ಮಾಡಿದ್ದರು, ಹೇಗೆ ಮಾಡಿದ್ದರು ಅನ್ನೋದು ನೋಡಿಲ್ಲ ಅನ್ನೋ ಕಾರಣಕ್ಕಾ. ಅಪ್ಪ ಎದುರಲ್ಲಿ ಪ್ರೀತಿ ತೋರಿಸಿಲ್ಲ ಗದರಿದ್ದಾ ಅನ್ನೋ ಕಾರಣಕ್ಕಾ. ಯಾಕೆ ಗೊತ್ತಿಲ್ಲ, ಅದೆಷ್ಟೋ ಮಂದಿಗೆ ಅಮ್ಮನ ಪ್ರೀತಿ, ಅಮ್ಮನ ತ್ಯಾಗ, ಅಮ್ಮನ ಕಷ್ಟ, ಅಮ್ಮನ ಅಸಹಾಯಕತೆ ಕಂಡರೂ ಅಪ್ಪನಲ್ಲಿ ಇದ್ಯಾವುದೂ ಕಾಣುವುದಿಲ್ಲ. ಆದರೆ ಮಕ್ಕಳನ್ನು ಕಾಣಲು ನಾವು ಕಂಡಂತೆ ಅಮ್ಮ ಪಟ್ಟಿರುವ ಕಷ್ಟ ಇಷ್ಟಾದರೆ ಅಪ್ಪನ ಮಮತೆ, ಅಪ್ಪನ ತ್ಯಾಗ ಇದರ ದುಪ್ಪಟ್ಟು. ಯಾರಿಗೂ ನೆನಪಿರದ, ಅಪ್ಪನಿಗೂ ಗೊತ್ತಿರದ ಇವತ್ತು ಫಾದರ್ಸ್ ಡೇ. ಪ್ರೀತಿಯ ಅಪ್ಪನಿಗೆ, ಅಪ್ಪಂದಿರ ದಿನದ ಶುಭಾಶಯಗಳು.
ಅಪ್ಪನ ಪ್ರೀತಿಗೆ (Fathers love), ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಅಮ್ಮ ತುತ್ತಿಟ್ಟು ಸಾಕಿದರೆ, ಅಪ್ಪ ಕೂಳು ತಂದಿಟ್ಟು ಸಲಹಿದರು. ಅಮ್ಮನ ಪ್ರೀತಿ ಕಂಡವರು, ಅಪ್ಪನ ತ್ಯಾಗವನ್ನೂ (Sacrifice) ಅರಿಯಬೇಕು. ಮಗು ಹುಟ್ಟಿದಾಗ ಅಪ್ಪ ಅತ್ಯಂತ ಹೆಚ್ಚು ಖುಷಿಪಡುತ್ತಾರೆ. ಸಾಲ-ಸೋಲ ಮಾಡಿ ಆಸ್ಪತ್ರೆಯ ಖರ್ಚು ಭರಿಸುತ್ತಾರೆ. ಆ ಮಗುವಿಗೆ ಅನುಕೂಲ ಮಾಡಿಕೊಡಲು ತನ್ನಿಂದಾಗುವ ಎಲ್ಲವನ್ನೂ ಮಾಡುತ್ತಾರೆ. ಮಗು ದೊಡ್ಡದಾಗುತ್ತಾ ಹೋದಂತೆ ಅದಕ್ಕೆ ಬೇಕಾಗುವ ಬಟ್ಟೆ, ಆಟಿಕೆ ತರಲು ದುಡ್ಡನ್ನು ಹೊಂದಿಸುತ್ತಾರೆ. ಆ ಪುಟ್ಟ ಕೈಗಳಲ್ಲಿ ತನ್ನ ಕೈಗಳನ್ನಿಟ್ಟು ಖುಷಿ ಪಡುತ್ತಾರೆ. ಮಗು ಅಂಗನವಾಡಿ, ಸ್ಕೂಲ್ ಹೋದಂತೆಲ್ಲಾ ಮಗುವಿಗೆ ಬೇಕಾದ್ದನ್ನೆಲ್ಲಾ ಕೊಡಿಸಿ ಖುಷಿ ಪಡುತ್ತಾನೆ.
undefined
Happy Fathers Day 2023: ಅಪ್ಪಂದಿರ ದಿನದ ಇತಿಹಾಸ, ಮಹತ್ವದ ಕುರಿತು ಮಾಹಿತಿ
ಮತ್ತೊಬ್ಬರ ಸೈಕಲ್ ನೋಡಿ ಆಸೆ ಪಟ್ಟಾಗ, ತನ್ನಿಂದ ಕೊಡಿಸಲಾಗುತ್ತಿಲ್ಲವಲ್ಲಾ ಎಂದು ಮರುಕಪಡುತ್ತಾನೆ. ಹಗಲೂ ರಾತ್ರಿ ಕೆಲಸ ಮಾಡಿ ಹಣ ಕೂಡಿಟ್ಟು ಕೊನೆಗೂ ಒಮ್ಮೆ ಸೈಕಲ್ ಕೊಡಿಸುತ್ತಾನೆ. ಮಗುವಿನ ಆನಂದ (Happiness) ನೋಡಿ ಜೀವನ ಸಾರ್ಥಕ ಅಂದುಕೊಳ್ಳುತ್ತಾನೆ. ಮಗುವಿಗೆ ಸ್ಕೂಲ್ ಟೂರ್ ಎಂದಾಗಲೂ ಎದುರಲ್ಲಿ ರೇಗಾಡಿದರೂ ಮತ್ತೆ ಅಮ್ಮನ ಕೈಯಲ್ಲಿ ದುಡ್ಡಿಟ್ಟು ಹೋಗಲಿ ಬಿಡು ಅನ್ನೋದನ್ನು ಮರೆಯುವುದಿಲ್ಲ. ಹೀಗೆ ಜೀವನ ರೂಪಿಸಲು ಹೆಜ್ಜೆ ಹೆಜ್ಜೆಗೂ ಒಂದಾಗಿದ್ದ ಅಪ್ಪನ ಪ್ರೀತಿ, ತ್ಯಾಗ ಮಾತ್ರ ಎಷ್ಟೋ ಮಂದಿಗೆ ಕಾಣಿಸುವುದೇ ಇಲ್ಲ.
ಜೀವನದ (Life) ಕೆಲವೊಂದು ಘಟ್ಟಗಳಲ್ಲಿ ಅಪ್ಪ ಅಕ್ಷರಶಃ ವಿಲನ್ ಆಗಿಬಿಡುತ್ತಾರೆ. ಅಪ್ಪ ಯಾಕೆ ಎಲ್ಲದಕ್ಕೂ ಬೈಯುತ್ತಾನೆ, ಅಪ್ಪ ಯಾಕೆ ಎಲ್ಲದರಲ್ಲೂ ತಪ್ಪು ಹುಡುಕುತ್ತಾನೆ, ಅಪ್ಪನಿಗೆ ನನ್ನ ಮೇಲೆ ಪ್ರೀತಿಯೇ ಇಲ್ಲ, ಅಪ್ಪ ಹಿಟ್ಲರ್ ತರ ಆಡುತ್ತಾನೆ, ಅಪ್ಪ ಅರ್ಥ ಮಾಡಿಕೊಳ್ಳುವುದೇ ಇಲ್ಲ. ಹೀಗೆ ದೂರುಗಳ ಪಟ್ಟಿಗಳೇ ಇರುತ್ತದೆ.
Happy Fathers Day 2023: ಪ್ರೀತಿಯ ಅಪ್ಪನಿಗೆ ಈ ರೀತಿ ಶುಭಾಶಯ ತಿಳಿಸಿ
ಆದ್ರೆ ಅಪ್ಪನ ಬೈಗುಳದ ಹಿಂದೆ ಅದೆಷ್ಟು ಕಾಳಜಿಯಿತ್ತು. ಫ್ರೆಂಡ್ಸ್ ಜೊತೆ ತಿರುಗಾಡಲು ಹೋಗುವಾಗ ಬೇಡ ಎನ್ನುವುದರ ಹಿಂದೆ ಮಗ ಕೆಟ್ಟವರ ಸಹವಾಸದಿಂದ ಹಾಳಾಗಿ ಹೋದರೆ ಎಂಬ ಭಯವಿತ್ತು. ಬೈಕ್‌ಗಾಗಿ ಹಠ ಹಿಡಿದಾಗ ರಸ್ತೆಯಲ್ಲಿ ಏನಾದರೂ ಆದರೆ ಎಂಬ ಭೀತಿ ಕಾಡುತ್ತಿತ್ತು. ಎಲ್ಲದಕ್ಕೂ ಹಣ ಪೋಲು ಮಾಡುವ ಮಗನಿಗೆ ಉಳಿತಾಯದ ಪಾಠ ಕಲಿಸಬೇಕಿತ್ತು. ಎಲ್ಲದಕ್ಕೂ ಮುದ್ದು ಮಾಡುವ ಅಮ್ಮನ ಮುಂದೆ ಮಗ ದಾರಿ ತಪ್ಪದಿರಲು ಅಪ್ಪ ಸ್ಪಲ್ಪ ಸ್ಟ್ರಿಕ್ಟ್ ಆಗಲೇ ಬೇಕಿತ್ತು. ಆದರೆ ಜೀವನದ ಅದೆಷ್ಟೋ ಹಂತಗಳಲ್ಲಿ ಅಪ್ಪ ಕೆಟ್ಟವನಂತೆ ಅನಿಸಿದರೂ ಅಪ್ಪ ಕೆಟ್ಟವನಲ್ಲ.
ಅಪ್ಪನೆಂದರೆ ಆಕಾಶ..ಮಕ್ಕಳ ಜೀವನ ಬೆಳಗಲು ಎಲ್ಲವನ್ನೂ ತ್ಯಾಗ ಮಾಡಿದ ಮಹಾನುಭಾವ. ಬದುಕಿಗೆ ಆತನೇ ಶಕ್ತಿ, ಸಾಧನೆಗೆ ಸ್ಫೂರ್ತಿ. ಅಪ್ಪಂದಿರಿಗೊಂದು ದಿನ ಬೇಡ. ವರ್ಷದ ಅಷ್ಟು ದಿನವೂ ಅಷ್ಟೂ ದಿನವೂ ಅಪ್ಪನ ಪ್ರೀತಿಗೇ ಮೀಸಲು. ಐ ಲವ್ ಯೂ ಅಪ್ಪ.