
ಲವ್, ಬ್ರೇಕ್ ಅಪ್ ಅನ್ನೋದು ಈಗಿನ ಮಾತಲ್ಲ. ತಲೆತಲಾಂತರಗಳಿಂದಲೂ ಇದು ನಡೆದೇ ಇದೆ. ಗಂಡು ಹೆಣ್ಣಿನ ನಡುವೆ ಆಕರ್ಷಣೆ, ಅದು ಪ್ರೀತಿ ಎಂದು ಮೊದಲು ತಿಳಿಯುವುದು, ಆಮೇಲೆ ಬೋರ್ ಆದ್ಮೇಲೆ ಬಿಡುವುದು, ಇನ್ನೊಬ್ಬರ ಜೊತೆ ಹೋಗುವುದು, ಹೀಗೆ ಹೋದ ಸಿಟ್ಟಿಗೆ ಸೇಡಿನ ಭರದಲ್ಲಿ ಅನಾಹುತ ಸೃಷ್ಟಿಸುವುದು, ಜೈಲಿಗೆ ಹೋಗುವುದು ಇಲ್ಲವೇ ಪರಾರಿಯಾಗಿ ತಲೆ ಮರೆಸಿಕೊಳ್ಳುವುದು... ಇವೆಲ್ಲವೂ ಹಿಂದಿನಿಂದಲೂ ನಡೆಯುತ್ತಿದ್ದು, ಇದಕ್ಕೆ ಕೊನೆಯೇ ಇಲ್ಲ ಎನ್ನಿ. ಪ್ರೀತಿ, ಪ್ರೇಮ, ಬ್ರೇಕಪ್ ವಿಷ್ಯ ಬಂದಾಗ ಇವತ್ತಿನ ಮಕ್ಕಳೇ ಸರಿಯಿಲ್ಲ ಎನ್ನುವುದು ಆ ಕಾಲದಿಂದಲೂ ಹೇಳಿಕೊಂಡು ಬರಲಾಗಿದೆ.
ಆದರೆ, ಸೋಷಿಯಲ್ ಮೀಡಿಯಾ ಯುಗ ಇದಾಗಿರುವ ಕಾರಣ, ಹಿಂದಿನ ಪ್ರೇಮಿಯ ಮೇಲೆ ಇನ್ನೂ ಆಕೆನೋ, ಆತನೋ ಲವ್ ಇಟ್ಟುಕೊಂಡಿದ್ದಾನಾ ಎನ್ನುವುದು ತಿಳಿಯುವುದು ಹಾಲಿ ಪ್ರೇಮಿಗಳಿಗೆ ಸ್ವಲ್ಪ ಸಲೀಸಾಗಿದೆ ಅಷ್ಟೇ. ಮಾಜಿ ಪ್ರಿಯತಮನೋ, ಪ್ರೇಯಸಿಯೋ ಯಾವುದಾದರೂ ಫೋಟೋ ಶೇರ್ ಮಾಡಿದಾಗ, ಮನಸ್ಸು ನಿಲ್ಲದೇ ಒಂದೇ ಒಂದು ಲೈಕ್ ಒತ್ತಿದರೆ ಎಷ್ಟೋ ಬಾರಿ ಅದೇ ಭಯಾನಕ ಘಟನೆಗಳಿಗೂ ಕಾರಣ ಆಗಬಹುದು. ಆದ್ದರಿಂದ ಎಕ್ಸ್ಗಳ ಜಾಲತಾಣದಲ್ಲಿ ಲೈಕ್ ಒತ್ತುವ ಮುನ್ನ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಈ ಘಟನೆ ತೋರಿಸಿದೆ.
ಇದರಲ್ಲಿ ಯುವತಿಯೊಬ್ಬಳು ತನ್ನ ಬಾಯ್ಫ್ರೆಂಡ್, ಆತನ ಎಕ್ಸ್ ಗರ್ಲ್ಫ್ರೆಂಡ್ ಹಾಕಿದ ಇನ್‌ಸ್ಟಾಗ್ರಾಮ್ ಫೋಟೋಗೆ ಲೈಕ್ ಒತ್ತಿದ್ದರಿಂದ ಅವಾಂತರವಾಗಿದೆ. ಹಾಗೆಂದು ಪುಣ್ಯಕ್ಕೆ ಆತನ ಜೀವ ತೆಗೆದಿಲ್ಲ ಅಷ್ಟೇ. ಆದರೆ ಆತನ ಜೀವವಾಗಿದ್ದ ದುಬಾರಿ ಅಂದರೆ ಸುಮಾರು ನಾಲ್ಕು ಲಕ್ಷ ರೂಪಾಯಿ ಬೆಲೆ ಬಾಳುವ ಬೈಕ್ ಅನ್ನು ಮಾರಾಟ ಮಾಡಿದ್ದಾಳೆ! ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 (Royal Enfield Continental GT 650) ಬೈಕ್ ಅನ್ನು ಮಾರಿ ಸೇಡು ತೀರಿಸಿಕೊಂಡಿದ್ದಾಳೆ.
ತನ್ನ ಬೈಕ್ ಕಾಣೆಯಾಗಿದ್ದನ್ನು ನೋಡಿ ಶಾಕ್ ಆದ ಯುವಕ ಇನ್ನೇನು ಪೊಲೀಸ್ ಕಂಪ್ಲೇಂಟ್ ಕೊಡುವುದರಲ್ಲಿದ್ದ. ಕಂಪ್ಲೇಂಟ್ ಕೊಟ್ಟರೆ ಕೆಲಸ ಕೆಡುತ್ತದೆ ಎಂದು ಹಾಲಿ ಪ್ರೇಯಸಿ ಇರುವ ವಿಷಯವನ್ನು ತಿಳಿಸಿದ್ದಾಳೆ. ಪಾಪ ಆ ಯುವಕನಿಗೆ ಏನು ಮಾಡಬೇಕು ಎನ್ನೋದೇ ತಿಳಿಯದಾಗಿದೆ. ಏಕೆಂದರೆ ಹಾಲಿಯನ್ನು ಪಕ್ಕದಲ್ಲಿ ಇಟ್ಟುಕೊಂಡು ಮಾಜಿಯ ಫೋಟೋಗೆ ಲೈಕ್ ಮಾಡುವುದಕ್ಕಿಂತ ದೊಡ್ಡ ಅಪರಾಧ ಬೇರೊಂದಿಲ್ಲವಲ್ಲ. ಅದಕ್ಕೇ ಆತ ಬಾಯಿ ಮುಚ್ಕೊಂಡು ಸುಮ್ಮನಾಗಿದ್ದಾನೆ! ಇದರ ಸುದ್ದಿ ವೈರಲ್ ಆಗುತ್ತಲೇ, ಮಾಜಿ ಪ್ರೇಮಿಗಳ ಜೊತೆ ಸಂಬಂಧ ಮುಂದುವರಿಸಿದ್ರೆ ಹೀಗೆ ಖುಲ್ಲಂ ಖುಲ್ಲಾ ಲೈಕ್ ಒತ್ತಬೇಡಿ, ಒಂದು ವೇಳೆ ಲೈಕ್ ಇದಾಗಲೇ ಒತ್ತಿದ್ರೆ ಅನ್ಲೈಕ್ ಮಾಡಿಬಿಡಿ ಎಂದು ನೆಟ್ಟಿಗರು ಸಲಹೆ ಕೊಡುತ್ತಿದ್ದಾರೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.