ಹುಡುಗಿಯ ಮುಖದ ಬದ್ಲು ಚಪ್ಪಲಿ ನೋಡಿ ಮದ್ವೆಗೆ ಒಪ್ಕೊಂಡೆ: ಲೇಖಕ ಗಣೇಶ್ ಕಾಸರಗೋಡು ಕುತೂಹಲದ ಸ್ಟೋರಿ

Published : Jan 22, 2026, 08:03 PM IST
Ganesh Kasaragod

ಸಾರಾಂಶ

ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ತಮ್ಮ ಮದುವೆಯ ರೋಚಕ ಕಥೆಯನ್ನು ಹಂಚಿಕೊಂಡಿದ್ದಾರೆ. ಹುಡುಗಿ ನೋಡುವ ಶಾಸ್ತ್ರದ ವೇಳೆ, ಆಕೆಯ ಮುಖದ ಬದಲು ಪಾದಕ್ಕಿಂತ ಉದ್ದವಿದ್ದ ಹವಾಯಿ ಚಪ್ಪಲಿಯನ್ನು ನೋಡಿ ಮದುವೆಗೆ ಒಪ್ಪಿಕೊಂಡಿದ್ದರಂತೆ. ಇದರ ರೋಚಕ ಸ್ಟೋರಿ ಹೇಳಿದ್ದಾರೆ.

ಮದುವೆ ಮಾಡುವ ಸಮಯದಲ್ಲಿ, ಹುಡುಗನಿಗಾಗಲೀ, ಹುಡುಗಿಗಾಗಲೀ ವಿಷಯ ತಿಳಿದಾಗ ಮೊದಲು ಕೇಳುವುದು ಅವರು ನೋಡಲು ಹೇಗಿದ್ದಾರೆ ಎಂದು. ಕೊನೆಗೆ ಉಳಿದ ಮಾತುಕತೆ. ಆದರೆ ಕನ್ನಡದ ಹಿರಿಯ ಪತ್ರಕರ್ತ, ಸಿನಿಮಾ ವಿಮರ್ಶಕ, ಬರಹಗಾರ ಮತ್ತು ಅಂಕಣಕಾರರಾಗಿರುವ ಗಣೇಶ್ ಕಾಸರಗೋಡು ಅವರು ತಮ್ಮ ರೋಚಕ ಮದುವೆಯ ವಿಷಯವನ್ನು ತೆರೆದಿಟ್ಟಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, ತಾವು ಹುಡುಗಿಯನ್ನು ನೋಡಲು ಹೋದಾಗ, ಆಕೆಯ ಮುಖವನ್ನಲ್ಲ, ಬದಲಿಗೆ ಆಕೆ ಹಾಕಿದ್ದ ಹವಾಯಿ ಚಪ್ಪಲಿ ನೋಡಿ ಮದುವೆಗೆ ಒಪ್ಪಿಕೊಂಡೆ. ಮುಖ ನೋಡಿದ್ದು ಇನ್ಯಾವಾಗಲೋ ಎಂದು ವಿಷಯ ತೆರೆದಿಟ್ಟಿದ್ದಾರೆ.

ರೂಪಕ್ಕಿಂತ ಹೆಚ್ಚಾಗಿ ಗುಣ

ರೂಪಕ್ಕಿಂತ ಹೆಚ್ಚಾಗಿ ಗುಣವನ್ನು ಕಲ್ಪನೆ ಮಾಡಿಕೊಂಡು ನಾನು ಮದುವೆಗೆ ಒಪ್ಪಿದ್ದು ಎಂದಿದ್ದಾರೆ. ಹುಡುಗಿ ನೋಡುವ ಶಾಸ್ತ್ರದ ದಿನ ನಡೆದ ರೋಚಕ ಘಟನೆಯನ್ನು ಅವರು ತೆರೆದಿಟ್ಟಿದ್ದಾರೆ. ಸಾಮಾನ್ಯವಾಗಿ ಹುಡುಗನ ಮನೆಯವರು ಹುಡುಗಿ ನೋಡಲು ಬರುತ್ತಾರೆ ಎಂದರೆ, ಹುಡುಗಿ ಮನೆಯವರು ಆಕೆಗೆ ಮೇಕಪ್​ ಮಾಡಿಸಿ, ಒಳ್ಳೆಯ ಡ್ರೆಸ್ ಹಾಕಿ, ಹುಡುಗ ಬರುವುದನ್ನೇ ಕಾಯುತ್ತಿರುತ್ತಾರೆ. ಆದರೆ ನಾನು ಹುಡುಗಿ ನೋಡಲು ಹೋದಾಗ ಅಲ್ಲಿಯ ಸೀನೇ ಬದಲಾಗಿತ್ತು. ಹುಡುಗಿ ಎಲ್ಲಿದ್ದಾಳೆ ಎಂದು ಕೇಳಿದಾಗ, ಆಕೆ ಬಟ್ಟೆ ತೊಳೆಯುತ್ತಿದ್ದಾಳೆ ಎಂದರು. ಆ ಕ್ಷಣದಲ್ಲಿ ನನಗೆ ಶಾಕ್​ ಆಯ್ತು ಎಂದು ಮುಂದೆ ನಡೆದ ಘಟನೆಯನ್ನು ಹೇಳಿದ್ದಾರೆ.

ಎಲ್ಲಿಯಾದರೂ ಅಡ್ಜಸ್ಟ್​ ಆಗುವ ಗುಣ

ಸರಿ ಬಟ್ಟೆ ತೊಳೆಯುವಲ್ಲಿಯೇ ಹುಡುಗಿಯನ್ನು ನೋಡೋಣ ಎಂದು ಹೋದಾಗ, ಮೊದಲಿಗೆ ಆಕೆ ಧರಿಸಿದ್ದ ಹವಾಯಿ ಚಪ್ಪಲಿ ಕಾಣಿಸಿತು. ಅದು ಅವಳ ಪಾದಕ್ಕಿಂತಲೂ ಉದ್ದ ಇತ್ತು. ಆಕೆಯ ಮುಖವನ್ನೂ ನಾನು ನೋಡಲಿಲ್ಲ. ನನಗೆ ಹುಡುಗಿ ಓಕೆ, ಮದುವೆಗೆ ಒಪ್ಪಿಗೆ ಇದೆ ಎಂದು ಸೂಚಿಸಿದೆ ಎಂದಿದ್ದಾರೆ ಗಣೇಶ್​. ಪಾದಕ್ಕಿಂತಲೂ ಉದ್ದ ಇದ್ದ ಚಪ್ಪಲಿಯಲ್ಲಿ ತಮಗೆ ಅಂಥದ್ದೇನು ಕಂಡಿತು ಎಂದು ತಿಳಿಸಿರುವ ಅವರು, ಕಾಲಿನ ಸೈಜ್​ಗಿಂತ ಉದ್ದದ ಚಪ್ಪಲಿ ಹಾಕಿಕೊಂಡು ಕೆಲಸ ಮಾಡುತ್ತಿದ್ದಾಳೆ ಎಂದರೆ, ಆಕೆಗೆ ಎಲ್ಲಿಯಾದರೂ ಅಡ್ಜಸ್ಟ್​ ಆಗುವ ಗುಣ ಇದೆ ಎಂದು ನನಗೆ ತಿಳಿಯಿತು ಎಂದಿದ್ದಾರೆ.

ಆಯ್ಕೆ ತಪ್ಪಾಗಲಿಲ್ಲ

ನಾನೊಬ್ಬ ಬಡ ಪತ್ರಕರ್ತನಾಗಿದ್ದೆ. ಆಕೆ ತುಂಬಾ ಕನಸು ಕಟ್ಟಿಕೊಂಡು ಬಂದಿದ್ದರೆ ಅವಳಿಗೆ ನಿರಾಸೆ ಆಗಬಹುದು. ಚಪ್ಪಲಿಯಲ್ಲಿಯೇ ಆಕೆಯ ಗುಣ ಅರ್ಥ ಮಾಡಿಕೊಂಡೆ. ನನ್ನ ಆಯ್ಕೆ ತಪ್ಪು ಆಗಿರಲಿಲ್ಲ, ನನ್ನ ಅನಿಸಿಕೆ ಸರಿಯಾಗಿತ್ತು. ಆಕೆಯೇ ನನಗೆ ಒಳ್ಳೆಯ ಜೋಡಿಯಾದಳು. ಮದುವೆಯಾಗಿ 40 ವರ್ಷಗಳಾಗ್ತಾ ಬಂತು. ಇಂದಿಗೂ ಆಕೆಯಲ್ಲಿ ಆ ಗುಣ ಇದೆ ಎಂದು ಪತ್ನಿಯ ಗುಣಗಾನ ಮಾಡಿದ್ದಾರೆ.

ಗಣೇಶ್​ ಕಾಸರಗೋಡು ಕುರಿತು..

ಇನ್ನು ಗಣೇಶ್​ ಕಾಸರಗೋಡು ಅವರ ಕುರಿತು ಹೇಳುವುದಾದರೆ, ಇವರು, ಸಿನಿಮಾ ಪತ್ರಿಕೋದ್ಯಮದಲ್ಲಿ ದೊಡ್ಡ ಹೆಸರು ಮಾಡಿದವರು. ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. 'ಚದುರಿದ ಚಿತ್ರಗಳು', 'ಮೌನ ಮಾತಾದಾಗ', 'ನೆನಪಿನಂಗಳದಲ್ಲಿ ಶಂಕರನಾಗ್', 'ಬೆಳ್ಳಿ ತೆರೆಯ ಅಮೃತ ಕಳಶ: ರವಿಚಂದ್ರನ್', 'ಕನ್ನಡದ ಕಣ್ಮಣಿ: ಕಾಳಿಂಗರಾಯರು', 'ನೂರು ಚಿತ್ರಗಳು - ನೂರಾರು ನೆನಪುಗಳು', 'ಆಫ್ ದಿ ರೆಕಾರ್ಡ್' ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. 'ನೆನಪಿನಂಗಳದಲ್ಲಿ ಶಂಕರನಾಗ್' ಪುಸ್ತಕವನ್ನು ಅಂಧರಿಗಾಗಿ ಬ್ರೈಲ್ ಲಿಪಿಯಲ್ಲಿ ತರಸಿದ್ದಾರೆ. ಇವರ ಸಾಧನೆಗೆ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ, ವಿಜಯ ವಿಠಲ ಪ್ರಶಸ್ತಿ, ವೈಎನೈ ಸಾಹಿತ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕರ್ನಾಟಕ ರಾಜ್ಯ ಮಾಧ್ಯಮ ಪ್ರಶಸ್ತಿಗಳು ಸೇರಿದಂತೆ ಹಲವು ಗೌರವಗಳು ಸಿಕ್ಕಿವೆ. 'ಚದುರಿದ ಚಿತ್ರಗಳು' ಪುಸ್ತಕಕ್ಕೆ 2012ರ ರಾಜ್ಯ ಸರ್ಕಾರದ ಸಿನಿಮಾ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಪ್ಪನ ಹಳೇ ಪೆಟ್ಟಿಗೆಯಲ್ಲಿದ್ದ 'ನಿಧಿ': 60 ವರ್ಷಗಳ ಬಳಿಕ ಮಗನ ಪಾಲಿಗೆ ಒಲಿದು ಬಂತು ಅದೃಷ್ಟದ 10 ಕೋಟಿ!
40 ವರ್ಷ ಆಗ್ತಿದ್ದಂತೆ ಮಹಿಳೆಯರೇಕೆ ಅಕ್ರಮ ಸಂಬಂಧದತ್ತ ವಾಲೋದು?