
ಬೆಂಗಳೂರು (ಜೂ.06): ರಾಜ್ಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋತ ಬೆನ್ನಲ್ಲಿಯೇ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ನೋವು ಮರೆಯುವುದಕ್ಕಾಗಿ ತಾಯಿಯ ಮಡಿಲು ಸೇರಿಕೊಂಡಿದ್ದಾರೆ.
ಹೌದು, ಇಡೀ ರಾಜ್ಯದಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳನ್ನು ಡಿ.ಕೆ. ಬ್ರದರ್ಸ ಭದ್ರಕೋಟೆ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಡಿ.ಕೆ. ಬ್ರದರ್ಸ್ ವಿರುದ್ಧ ರಾಜಕೀಯ ಎದುರಾಳಿಗಳೇ ಬರುತ್ತಿರಲಿಲ್ಲ. ಒಂದು ವೇಳೆ ಡಿ.ಕೆ. ಶಿವಕುಮಾರ್ ಅಥವಾ ಡಿ.ಕೆ. ಸುರೇಶ್ ಅವರ ವಿರುದ್ಧ ಸ್ಪರ್ಧೆ ಮಾಡಿದರೂ ಶೇ.30 ಮತಗಳನ್ನೂ ಪಡೆಯದೇ ಸೋಲನುಭವಿಸುತ್ತಿದ್ದರು. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್. ಮಂಜುನಾಥ್ ಅವರು ಸ್ಪರ್ಧೆ ಮಾಡಿದ್ದು, ಅವರ ವಿರುದ್ಧ ಡಿ.ಕೆ. ಸುರೇಶ್ ಅವರು ಬರೋಬ್ಬರಿ 2.69 ಲಕ್ಷ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.
ಲೋಕಸಭೆ ಫಲಿತಾಂಶ: ಮಲ್ಲಿಕಾರ್ಜುನ ಖರ್ಗೆಗೆ ಲಕ್, ಡಿ.ಕೆ. ಬ್ರದರ್ಸ್‌ಗೆ ಪವರ್ ಬ್ರೇಕ್; ಸಿದ್ದು ಗದ್ದುಗೆ ಡೋಂಟ್ ಶೇಕ್
ಇನ್ನು ಚುನಾವಣಾ ಫಲಿತಾಂಶದ ದಿನ ಎಲ್ಲ ಮತ ಎಣಿಕೆಯ ಹಂತಗಳಲ್ಲಿಯೂ ಡಾ.ಸಿ.ಎನ್. ಮಂಜುನಾಥ್ ಅವರು ಮುನ್ನಡೆಯನ್ನು ಕಾಯ್ದುಕೊಂಡಿದ್ದರು. ಇನ್ನು ಕನಕಪುರ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿದರೆ ಬೇರೆ ಯಾವ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರಿಗೆ ಮುನ್ನಡೆಯನ್ನು ತಂದುಕೊಡಲೇ ಇಲ್ಲ. ಇನ್ನು ಟಿವಿ ಮಾಧ್ಯಮಗಳಲ್ಲಿ ಮತ ಎಣಿಕೆಯ ಫಲಿತಾಂಶ ನೋಡುತ್ತಾ ಕುಳಿತಿದ್ದ ಡಿ.ಕೆ. ಸುರೇಶ್ ಅವರು ಮನೆಯಿಂದ ಹೊರಗೆ ಬಂದಿರಲೇ ಇಲ್ಲ. ಇನ್ನು ಪೂರ್ಣ ಫಲಿತಾಂಶ ಹೊರಬಿದ್ದು ತಮಗೆ ಸೋಲಾಗಿದೆ ಎಂಬುದು ಖಚಿತವಾಗಿ ಎಷ್ಟೋ ಸಮಯದ ನಂತರ ವಾಸ್ತವಾಂಶವನ್ನು ಅರಿತುಕೊಂಡು ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾದರು. ಆಗ ತಾವು ಮತದಾರರ ತೀರ್ಮಾನವನ್ನು ಸ್ವಾಗತ ಮಾಡುತ್ತೇನೆ ಎಂದು ಹೇಳಿದ್ದರು.
ಕಳೆದ 15 ವರ್ಷಗಳಿಂದ ಸತತ ಮೂರು ಬಾರಿ ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಡಿ.ಕೆ. ಸುರೇಶ್ ಅವರು ಸಂಸದರಾಗಿ ಅಧಿಕಾರ ಅನುಭವಿಸಿದ್ದರು. ಒಂದು ದಿನವೂ ರಾಜಕೀಯ ಕ್ಷೇತ್ರದಲ್ಲಿ ಅಧಿಕಾರವಿಲ್ಲದೇ ಕಳೆದಿರಲಿಲ್ಲ. ಸದಾ ರಾಜಕೀಯದಲ್ಲಿ ತೊಡಗುತ್ತಾ ಜನಸೇವೆಯಲ್ಲಿ ತೊಡಗಿದ್ದ ಮಾಜಿ ಸಂಸದ ಡಿ.ಕೆ. ಸುರೇಶ್ ಅವರಿಗೆ ಈಗ ಕೆಲಸವೇ ಇಲ್ಲದಂತಾಗಿದೆ. ತನ್ನ ಸುತ್ತಲೂ ಪ್ರತಿನಿತ್ಯ ನೂರಾರು ಕಾರ್ಯಕರ್ತರು ಬಂದು ವಿವಿಧ ಸೇವೆಗಳನ್ನು ಪಡೆಯಲು ದುಂಬಾಲು ಬೀಳುತ್ತಿದ್ದರು. ಈಗ ಅಧಿಕಾರ ಕಳೆದುಕೊಂಡ ಬೆನ್ನಲ್ಲಿಯೇ ತನ್ನ ಸುತ್ತಲೂ ಇದ್ದ ಬೆಂಬಲಿಗರು ಕೂಡ ಕಾಣೆಯಾಗಿದ್ದಾರೆ. ಆದರೂ ತಮ್ಮ ಸಹೋದರ ಡಿ.ಕೆ. ಶಿವಕುಮಾರ್ ಅವರು ಉಪ ಮುಖ್ಯಮಂತ್ರಿ ಆಗಿದ್ದು, ರಾಜ್ಯದ ರಾಜಕಾರಣದ ಮೇಲೆ ಹಿಡಿತ ಸಾಧಿಸಿದ್ದರೂ ತಮ್ಮ ಮಾತ್ರ ಮನೆಯಲ್ಲಿ ಕೂರುವಂತಹ ಸ್ಥಿತಿ ನಿರ್ಮಾಣವಾಗಿದೆ.
'ಡಿಕೆ ಸುರೇಶ್‌ರಂತೆ ಯಾರೂ ಕೆಲಸ ಮಾಡಿಲ್ಲ; ಜನ ಯಾಕೆ ಕಠಿಣ ನಿಲುವು ತಗೊಂಡ್ರೋ ಗೊತ್ತಿಲ್ಲ': ಎಸ್‌ಟಿಎಸ್ ಬೇಸರ
ಲೋಕಸಭಾ ಚುನಾವಣೆಗೂ ಮೊದಲೇ ತಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸ್ವತಃ ಡಿ.ಕೆ. ಸುರೇಶ್ ಅವರು ಹೇಳಿಕೊಂಡಿದ್ದರು. ಇದರ ಹೊರತಾಗಿಯೂ ಅವರ ಸಹೋದರ ಮನವೊಲಿಸಿ ಪುನಃ ಸ್ಪರ್ಧೆಗೆ ಅನುಗೊಳಿಸಿದರು. ಆದರೆ, ಈಗ ಡಾ.ಮಂಜುನಾಥ್ ವಿರುದ್ಧ ಹೀನಾಯವಾಗಿ ಸೋತ ಬೆನ್ನಲ್ಲಿಯೇ ಮಾನಸಿಕವಾಗಿ ಜರ್ಝಿರಿತಗೊಂಡಿದ್ದಾರೆ. ಹೀಗಾಗಿ, ಯಾರೊಂದಿಗೂ ನೋವು ತೋಡಿಕೊಳ್ಳಲಾಗದೇ ತಾಯಿಯ ಮೊರೆ ಹೋಗಿದ್ದಾರೆ. ತಾಯಿ ಮಡಿಲಿನಲ್ಲಿ ತನ್ನೆಲ್ಲ ನೋವನ್ನು ಹೇಳಿಕೊಂಡು ದುಃಖ ಮರೆಯಲು ಮುಂದಾಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.