ನವದೆಹಲಿ: ಇಬ್ಬರ ನಡುವಿನ ಪರಸ್ಪರ ಒಪ್ಪಿಗೆಯಿಂದ (ಸಮ್ಮತಿಯಿಂದ) ಕೂಡಿದ ಪ್ರೇಮ ಸಂಬಂಧವು ಕಾಲಕ್ರಮೇಣ ಮುರಿದುಬಿದ್ದ ತಕ್ಷಣವೇ, ಆ ಹಿಂದಿನ ಶಾರೀರಿಕ ಸಾಮೀಪ್ಯವನ್ನು ‘ಅ*ತ್ಯಾ*ಚಾರ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಸಂಬಂಧಗಳು ವಿಫಲವಾದಾಗಲೆಲ್ಲಾ ಅವುಗಳನ್ನು ಕ್ರಿಮಿನಲ್ ಪ್ರಕರಣಗಳನ್ನಾಗಿ (ರೇ*ಪ್ ಕೇಸ್) ಬದಲಾಯಿಸುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿರುವುದರ ಬಗ್ಗೆ ಸರ್ವೋಚ್ಚ ನ್ಯಾಯಾಲಯ ತೀವ್ರ ಕಳವಳ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠವು ಈ ಮಹತ್ವದ ಆದೇಶ ನೀಡಿದೆ. "ಆರಂಭದಿಂದಲೇ ಉದ್ದೇಶಪೂರ್ವಕವಾಗಿ ವಂಚಿಸಿ ಲೈಂ*ಗಿಕ ಸಮ್ಮತಿ ಪಡೆಯುವುದಕ್ಕೂ ಮತ್ತು ಸಂಬಂಧ ಮುರಿದುಬಿದ್ದ ನಂತರ ವ್ಯಕ್ತವಾಗುವ ಪಶ್ಚಾತ್ತಾಪ ಅಥವಾ ಅಸಮಾಧಾನಕ್ಕೂ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಇದನ್ನು ನ್ಯಾಯಾಲಯಗಳು ಸೂಕ್ಷ್ಮವಾಗಿ ಗಮನಿಸಬೇಕು. ಇಬ್ಬರ ಸಮ್ಮತಿಯಿಂದ ನಡೆದ ದೈಹಿಕ ಸಂಬಂಧವನ್ನು, ಸಂಬಂಧ ಹಳಸಿದ ನಂತರ ಕ್ರೂರ ಅ*ತ್ಯಾ*ಚಾರ ಎಂದು ಬಿಂಬಿಸುವುದು ಸರಿಯಲ್ಲ" ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ನ್ಯಾಯಪೀಠವು ಈ ವೇಳೆ ಮಹತ್ವದ ಪ್ರಶ್ನೆಯೊಂದನ್ನು ಎತ್ತಿದ್ದು, "ಒಂದು ಕಾಲದಲ್ಲಿ ಪರಸ್ಪರ ಒಪ್ಪಿಗೆಯ ಸಂಬಂಧದಲ್ಲಿದ್ದ ಮಾತ್ರಕ್ಕೆ, ಭವಿಷ್ಯದಲ್ಲಿ ಎಲ್ಲಿ ತನ್ನ ಮೇಲೆ ರೇ*ಪ್ ಕೇಸ್ ಹಾಕುತ್ತಾರೋ ಎಂಬ ಭಯದಿಂದ ಆ ಪುರುಷ ಆ ಸಂಬಂಧದಲ್ಲೇ ಜೀತದಾಳಿನಂತೆ (ಬಂದಿಯಾಗಿ) ಉಳಿಯಬೇಕೇ? ಆ ಸಂಬಂಧದಿಂದ ಹೊರಬರುವ ಹಕ್ಕು ಪುರುಷನಿಗೆ ಇರುವುದಿಲ್ಲವೇ? ಸಂಬಂಧದಿಂದ ಆಚೆ ಬಂದಿದ್ದನ್ನೇ ವಂಚನೆ ಎಂದು ಕರೆಯುವುದು ಹೇಗೆ?" ಎಂದು ಕೋರ್ಟ್ ಪ್ರಶ್ನಿಸಿದೆ. ಇಂತಹ ಧೋರಣೆ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವುದಲ್ಲದೆ, ಆರೋಪಿಯ ವೈಯಕ್ತಿಕ ಘನತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದಿದೆ.
ಬ*ಲಾತ್ಕಾರ, ನಿಜವಾದ ಲೈಂ*ಗಿಕ ದೌರ್ಜನ್ಯ ಅಥವಾ ಮೋಸದಿಂದ ಒಪ್ಪಿಗೆ ಪಡೆದಂತಹ ಗಂಭೀರ ಪ್ರಕರಣಗಳಲ್ಲಿ ಮಾತ್ರ ಅ*ತ್ಯಾ*ಚಾರ ವಿರೋಧಿ ಕಠಿಣ ಕಾನೂನುಗಳನ್ನು ಬಳಸಬೇಕು. ಮುರಿದುಬಿದ್ದ ಪ್ರತಿಯೊಂದು ಸಮ್ಮತಿಯ ಸಂಬಂಧವನ್ನೂ ರೇ*ಪ್ ಎಂದು ಬಿಂಬಿಸಿದರೆ, ನೈಜ ಲೈಂ*ಗಿಕ ಅಪರಾಧಗಳ ಗಂಭೀರತೆ ಕಡಿಮೆಯಾಗುತ್ತದೆ ಎಂದು ನ್ಯಾಯಾಧೀಶರು ಎಚ್ಚರಿಸಿದ್ದಾರೆ.
ಕೇರಳ ಮೂಲದ ಸಂತೋಷ್ ಕುಮಾರ್ ಎನ್.ಪಿ. ಎಂಬುವವರ ವಿರುದ್ಧ ದಾಖಲಾಗಿದ್ದ ಅ*ತ್ಯಾ*ಚಾರ, ವಂಚನೆ ಮತ್ತು ನಂಬಿಕೆದ್ರೋಹದ ಪ್ರಕರಣವನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ದೂರುದಾರ ಮಹಿಳೆ, "ಸಂತೋಷ್ ಕುಮಾರ್ ಮೊದಲ ಮದುವೆಯನ್ನು ಮುಚ್ಚಿಟ್ಟು ನನ್ನನ್ನು ಎರಡನೇ ವಿವಾಹವಾಗಿ, ಸಮ್ಮತಿ ಪಡೆದು ಶಾರೀರಿಕ ಸಂಬಂಧ ಬೆಳೆಸಿದ್ದರು" ಎಂದು ಆರೋಪಿಸಿದ್ದರು. ಇವರಿಬ್ಬರು 1996 ರಿಂದ 2003 ರವರೆಗೆ ಮೈಸೂರಿನಲ್ಲಿ ಒಟ್ಟಿಗೆ ವಾಸವಾಗಿದ್ದರು. ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ಸುಪ್ರೀಂ ಕೋರ್ಟ್, ಸಂತೋಷ್ ಕುಮಾರ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.
ದೇಶದಲ್ಲಿ ಜಾರಿಗೆ ಬಂದಿರುವ ನೂತನ ಕ್ರಿಮಿನಲ್ ಕಾನೂನು ‘ಭಾರತೀಯ ನ್ಯಾಯ ಸಂಹಿತೆ’ಯ (BNS) ಸೆಕ್ಷನ್ 69ರ ಅಡಿಯಲ್ಲಿ 'ಮದುವೆಯ ಸುಳ್ಳು ಭರವಸೆ ನೀಡಿ ಶಾರೀರಿಕ ಸಂಪರ್ಕ ಬೆಳೆಸುವುದು' ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು, ಕೇವಲ ಬ್ರೇಕಪ್ ಆದ ಮಾತ್ರಕ್ಕೆ ಸುಳ್ಳು ಕೇಸ್ ದಾಖಲಿಸುವುದನ್ನು ತಡೆಯಲು ಅತ್ಯಂತ ನಿರ್ಣಾಯಕ ಮಾರ್ಗಸೂಚಿಯಾಗಲಿದೆ.
ಈ ಪ್ರಕರಣದಲ್ಲಿ ಆರೋಪಿ ಸಂತೋಷ್ ಕುಮಾರ್ ತನಗಾದ ಅನ್ಯಾಯದ ವಿರುದ್ಧ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಪ್ರಕರಣ ರದ್ದುಗೊಳಿಸಲು (Quash) ನಿರಾಕರಿಸಿತ್ತು. ಹೈಕೋರ್ಟ್‌ನ ಆ ಆದೇಶವನ್ನು ದೋಷಪೂರಿತ ಎಂದಿರುವ ಸುಪ್ರೀಂ ಕೋರ್ಟ್, ಕಾನೂನಿನ ದುರುಪಯೋಗವನ್ನು ತಡೆಯಲು ಕ್ರಿಮಿನಲ್ ಮೊಕದ್ದಮೆಯನ್ನು ಸಂಪೂರ್ಣವಾಗಿ ವಜಾಗೊಳಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.