
ಇತ್ತೀಚೆಗೆ ಲಕ್ಷಾಂತರ ಹೆಣ್ಣು ಮಕ್ಕಳು ಸ್ತನ ಕ್ಯಾನ್ಸರ್ ಹಾಗೂ ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿರುವುದು ಸುದ್ದಿಯಾಗುತ್ತಿದೆ. ಕ್ಯಾನ್ಸರ್ ಆರಂಭಿಕ ಹಂತದಲ್ಲೇ ಗೊತ್ತಾದರೆ ಅದಕ್ಕೆ ಸೂಕ್ತ ಚಿಕಿತ್ಸೆ ಇದೆ. ಆದರೆ 3 ಹಾಗೂ 4ನೇ ಹಂತದಲ್ಲಿ ಗೊತ್ತಾದರೆ ಚಿಕಿತ್ಸೆ ನೀಡಿ ಬದುಕಿಸಿಕೊಳ್ಳುವುದು ಕಷ್ಟಕರವಾಗಿರುತ್ತದೆ. ಹೀಗಿರುವಾಗ ಸ್ತನ ಕ್ಯಾನ್ಸರ್‌ಗೆ ತುತ್ತಾದ ಮಹಿಳೆಯೊಬ್ಬರಿಗೆ ಆಸ್ಪತ್ರೆಯ ಬೆಡ್‌ನಲ್ಲೇ ಅವರ ಕೊನೆಯಾಸೆ ಈಡೇರಿಸುವ ಸಲುವಾಗಿ ಅವರ ಗೆಳೆಯನ ಜೊತೆ ಮದುವೆ ಮಾಡಿಸಲಾಗಿದೆ. ಇದಾಗಿ 18 ಗಂಟೆಯಲ್ಲಿ ಕ್ಯಾನ್ಸರ್ ಪೀಡಿತ ಇಹಲೋಕ ತ್ಯಜಿಸಿದ್ದು, ಈ ಜೋಡಿಯ ಪ್ರೀತಿಯ ಕತೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೀದರ್ ಮೋಷರ್ ಎಂಬುವವರೇ ಹೀಗೆ ಸಾವಿನ ಹಾದಿಯ ನಡುವೆ ಗೆಳೆಯನನ್ನು ಮದುವೆಯಾಗಿ ಇಹಲೋಕ ತ್ಯಜಿಸಿದ ಕ್ಯಾನ್ಸರ್ ಪೀಡಿತ ಮಹಿಳೆ. ಅಮೆರಿಕಾದ ಇಂಡಿಯಾನಾ ರಾಜ್ಯದ ಹಾರ್ಟ್‌ಪೋರ್ಡ್ ಸಿಟಿಯಲ್ಲಿ ಈ ಘಟನೆ ನಡೆದಿದೆ. ಕ್ಯಾನ್ಸರ್ ರೋಗಿಯಾಗಿದ್ದ ಹೀದರ್ ಮೋಷರ್ ತಾನು ಇನ್ನು ಹೆಚ್ಚು ದಿನ ಬದುಕುಳಿಯುವುದಿಲ್ಲ ಎಂಬ ವಿಚಾರವನ್ನು ತಿಳಿದು ತನ್ನ ಗೆಳೆಯ ಡೇವಿಡ್ ಮೋಷರ್ ಅವರನ್ನು ಮದುವೆಯಾಗುವ ಆಸೆ ವ್ಯಕ್ತಪಡಿಸಿದ್ದಾರೆ. ಅದರಂತೆ ಕ್ರಿಸ್‌ಮಸ್‌ಗೂ ಕೆಲ ದಿನಗಳ ಮೊದಲು ಇವರ ಕುಟುಂಬ ಹಾಗೂ ಸ್ನೇಹಿತರು ಈ ಜೋಡಿಯ ಮದುವೆಗೆ ವ್ಯವಸ್ಥೆ ಮಾಡಿದ್ದು, ಹಾರ್ಟ್‌ಫೋರ್ಡ್‌ನ ಸೇಂಟ್ ಫ್ರಾನ್ಸಿಸ್ ಆಸ್ಪತ್ರೆಯಲ್ಲಿ ಮರಣಶಯ್ಯೆಯ ನಡುವೆಯೇ ಹೀದರ್ ಮೋಷರ್ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಡೇವಿಡ್ ಮೋಷರ್ ಅವರನ್ನು ಮದುವೆಯಾಗಿದ್ದಾರೆ. ಆಸ್ಪತ್ರೆಯ ಬೆಡ್‌ನಲ್ಲಿ ನಡೆದ ಈ ಮದುವೆ ಭಾವುಕ ಕ್ಷಣಕ್ಕೆ ಸಾಕ್ಷಿಯಾಯ್ತು.
ಅಂದಹಾಗೆ ಹೀದರ್ ಹಾಗೂ ಡೇವಿಡ್ ಮೋಷರ್ ಮೊದಲ ಬಾರಿ ಭೇಟಿಯಾಗಿದ್ದು, 2015ರ ಮೇ ತಿಂಗಳಲ್ಲಿ ಸ್ವಿಂಗ್ ಡಾನ್ಸ್ ಕ್ಲಾಸೊಂದರಲ್ಲಿ, ಮೊದಲಿಗೆ ಸ್ನೇಹಿತರಾದ ಇವರು ನಂತರ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಆತ್ಮೀಯರಾದರು. ಆದರೆ 2016ರ ಡಿಸೆಂಬರ್‌ನಲ್ಲಿ ಹೀದರ್‌ಗೆ ಸ್ಥಾನ ಕ್ಯಾನ್ಸರ್ ಇರುವುದು ತಿಳಿದು ಬಂತು. ಆದರೂ ಡೇವಿಡ್ ಆಕೆಗೆ ಪ್ರೇಮ ನಿವೇದನೆ ಮಾಡಿದ್ದು, ಆಕೆಯ ಕಷ್ಟದ ಸಮಯದಲ್ಲಿ ಜೊತೆ ನಿಲ್ಲಲು ಮುಂದಾಗಿದ್ದಾರೆ. ನಂತರದ ವರ್ಷಗಳಲ್ಲಿ ಈ ಜೋಡಿ ಸಾಕಷ್ಟು ಹೋರಾಟಗಳನ್ನು ಕಂಡಿದ್ದಾರೆ.
ಏಕೆಂದರೆ ಅತ್ಯಂತ ಆಕ್ರಮಣಕಾರಿಯಾದ ಸ್ತನ ಕ್ಯಾನ್ಸರ್ ಅನ್ನು ಹೀದರ್ ಹೊಂದಿದ್ದರು, ಅನಾರೋಗ್ಯ ಹರಡುತ್ತಿದ್ದರೂ ಸಹ, ಅವರು ಎಲ್ಲಾ ಅಡೆತಡೆಗಳನ್ನು ಎದುರಿಸಿ ಡಿಸೆಂಬರ್ 30 ರಂದು ಮೂಲತಃ ನಿಗದಿಯಾಗಿದ್ದ ತಮ್ಮ ವಿವಾಹವನ್ನು ಆಗಲು ಮುಂದಾದರು. ಆದರೆ ಅವರ ಆರೋಗ್ಯ ಮತ್ತಷ್ಟು ಕೆಟ್ಟ ಸ್ಥಿತಿ ತಲುಪಿತ್ತು. ಹೀಗಾಗಿ ವೈದ್ಯರು ಮದುವೆಯನ್ನು ಮುಂದೂಡಲು ಹೇಳಿದರು. ಆದರೆ ಡಿಸೆಂಬರ್ 22ರಂದೇ ಆಸ್ಪತ್ರೆಯಲ್ಲೇ ಈ ದಂಪತಿ ಪರಸ್ಪರ ಹಾರ ಬದಲಾಯಿಸಿಕೊಂಡು ಮದುವೆಯಾದರು. ಆದರೆ ಇದಾಗಿ ಮರುದಿನ ಎಂದರೆ ತಮ್ಮ ನಿಶ್ಚತಾರ್ಥದ ಮೊದಲ ವಾರ್ಷಿಕೋತ್ಸವದಂದೇ ಹೀದರ್ ಇಹಲೋಕ ತ್ಯಜಿಸಿದ್ದಾರೆ.
ಅವರ ಮದುವೆಯ ಹಾಗೂ ಅಂತಿಮ ಕ್ಷಣಗಳ ವೀಡಿಯೋದಲ್ಲಿ ಹೀದರ್ ಖುಷಿ ಖುಷಿಯಿಂದಲೇ ಭಾಗಿಯಾಗಿರುವ ಫೋಟೋಗಳು ವೈರಲ್ ಆಗಿವೆ. ನಂತರ ಡಿಸೆಂಬರ್ 30ರಂದು ತಮ್ಮ ಮದುವೆ ನಿಗದಿಯಾದ ಚರ್ಚ್‌ನಲ್ಲೇ ಹೀದರ್ ಅವರ ಅಂತ್ಯಕ್ರಿಯೆಯನ್ನು ಪತಿ ಡೇವಿಡ್ ನೆರವೇರಿಸುತ್ತಾರೆ. ಆಕೆ ನನ್ನ ಅತ್ಯಂತ ಶ್ರೇಷ್ಠ ಪ್ರೀತಿ ಆಕೆ ಹೋದಳು, ಆದರೆ ನಾನು ಅವಳನ್ನು ಶಾಶ್ವತವಾಗಿ ಕಳೆದುಕೊಂಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.