ನಿಮ್ಮಿಬ್ಬರ ಈ ಗುಟ್ಟನ್ನು ಯಾರಿಗೂ ಬಿಟ್ಟುಕೊಡ್ಬೇಡಿ

By Suvarna News  |  First Published Apr 21, 2022, 3:29 PM IST

ಮನೆಗೆ ಯಾರೇ ಬರಲಿ, `ನಮ್ಮನೆಯವರು ಹಾಗೆ, ನಮ್ಮನೆಯವಳು ಹೀಗೆ..’ ಹೀಗೆ ಸಂಗಾತಿ ಬಗ್ಗೆ ದೂರು – ಹೊಗಳಿಕೆ ಶುರುವಾಗಿರುತ್ತದೆ. ಮಾತಿನ ಭರದಲ್ಲಿ ಎಲ್ಲವನ್ನೂ ಹೇಳಿರ್ತೇವೆ. ಆದ್ರೆ ದಂಪತಿ ಮಧ್ಯೆ ಒಂದಿಷ್ಟಾದ್ರೂ ಗುಟ್ಟಿರಬೇಕು. ಅದನ್ನು ಎಂದಿಗೂ, ಯಾರಿಗೂ ಹೇಳಬಾರದು.
 


ನಾಲ್ಕು ಜನ ಸೇರಿದಾಗ ಅನೇಕ ವಿಷ್ಯಗಳು ಬಂದು ಹೋಗ್ತವೆ. ರಾಜಕೀಯ (Politics) ದಿಂದ ಹಿಡಿದು ಸೀರೆ (Saree) ಯವರೆಗೆ ಎಲ್ಲ ವಿಷ್ಯವನ್ನು ಮಾತನಾಡಿರ್ತೇವೆ. ಈ ಟೀಂನಲ್ಲಿ ದಾಂಪತ್ಯ (Marriage) ದ ಚರ್ಚೆಯೂ ಬಂದು ಹೋಗುತ್ತದೆ. ಸ್ನೇಹಿತರು (Friends) , ಸಂಬಂಧಿಕರ ಮುಂದೆ ಸಾಮಾನ್ಯವಾಗಿ ಸಂಗಾತಿ (Partner) ಬಗ್ಗೆ ಮಾತನಾಡ್ತೇವೆ. ಸಂಗಾತಿ ಒಳ್ಳೆತನ, ಕೆಲಸದ ಬಗ್ಗೆ ಮಾತನಾಡುವುದಕ್ಕಿಂತ ಅವರ ಬಗ್ಗೆ ಅಸಮಾಧಾನದ ಮಾತುಗಳು ಹೆಚ್ಚಿರುತ್ತವೆ. ಸ್ನೇಹಿತರು ಅಥವಾ ಕುಟುಂಬ (Family) ದವರ ಮುಂದೆ ಸಂಗಾತಿಯ ಬಗ್ಗೆ ಮಾತನಾಡುವುದು ತಪ್ಪಲ್ಲ. ಆದರೆ ಕೆಲವೊಮ್ಮೆ ತಿಳಿದೋ ಅಥವಾ ತಿಳಿಯದೆಯೋ ಜನರು ತಮ್ಮ ಸಂಗಾತಿ ಜೊತೆಗಿರುವ ಸಂಬಂಧದ ಬಗ್ಗೆ ಹೇಳಿಕೊಳ್ತಾರೆ. ಇಬ್ಬರ ಮಧ್ಯೆ ಕೋಣೆಯಲ್ಲಿ ನಡೆಯುವ ವಿಷ್ಯವನ್ನು ಬೇರೆಯವರ ಮುಂದೆ ಹೇಳಬಾರದು. ಇದು ದಾಂಪತ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅತಿ ಉತ್ಸಾಹದಲ್ಲಿ ಜನರು ತಮ್ಮ ಪ್ರೀತಿಯ ಜೀವನದ ವೈಯಕ್ತಿಕ ವಿಷಯಗಳನ್ನು ಇತರ ಜನರೊಂದಿಗೆ ಹಂಚಿಕೊಳ್ಳುತ್ತಾರೆ. ನೀವು ಖುಷಿಯಲ್ಲಿ ಅಥವಾ ಬೇಸರದಲ್ಲಿ ಇದನ್ನು ಎಲ್ಲರ ಮುಂದೆ ಹೇಳಿದ್ದರೂ ನಿಮ್ಮ ಸಂಗಾತಿ ಇದನ್ನು ಇಷ್ಟಪಡಬೇಕೆಂದೇನಿಲ್ಲ. ಇದು ಅವರ ಬೇಸರ ಅಥವಾ ಕೋಪಕ್ಕೆ ಕಾರಣವಾಗಬಹುದು. ಹಾಗಾಗಿ ದಂಪತಿ ತಮ್ಮ ಮಧ್ಯೆ ನಡೆಯುವ ಕೆಲ ಸಂಗತಿಯನ್ನು ಎಂದಿಗೂ, ಯಾರ ಮುಂದೆಯೂ ಹಂಚಿಕೊಳ್ಳಬಾರದು. ಇಂದು ನಾವು ದಂಪತಿಯ ಯಾವ ಸಂಗತಿ ಗುಟ್ಟಾಗಿರಬೇಕೆನ್ನುವುದನ್ನು ಹೇಳ್ತೇವೆ.

ಸ್ನೇಹಿತರು – ಸಂಬಂಧಿಕರಿಗೆ ಹೇಳ್ಬೇಡಿ ಈ ವಿಷ್ಯ

Tap to resize

Latest Videos

ಹಣಕಾಸಿನ ಸಮಸ್ಯೆಗಳು :  ನಿಮಗೆ ಮದುವೆಯಾಗಿರಲಿ ಅಥವಾ ಇಲ್ಲದಿರಲಿ, ಎಂದಿಗೂ ಪಾಲುದಾರರ ಆರ್ಥಿಕ ಸಮಸ್ಯೆಗಳನ್ನು ಅಥವಾ ಮನೆಯ ಆರ್ಥಿಕ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಇದು ದಂಪತಿ ನಡುವಿನ ವೈಯಕ್ತಿಕ ವಿಷಯವಾಗಿದೆ. ದಂಪತಿ ಯಾವುದೇ ಭವಿಷ್ಯದ ಹೂಡಿಕೆ ಯೋಜನೆಯನ್ನು ಮಾಡಿದ್ದರೆ, ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಹಣಕ್ಕೆ ಸಂಬಂಧಿಸಿದ ವಿಷಯ ಪತಿ –ಪತ್ನಿಗೆ ಮಾತ್ರ ತಿಳಿದಿರಬೇಕು. ಇದನ್ನು ಬೇರೆಯವರಿಗೆ ಹೇಳುವುದು ಒಳ್ಳೆಯದಲ್ಲ.

ನೀವು ಬಾಯ್ಬಿಟ್ಟು ಏನು ಹೇಳ್ಬೇಕಾಗಿಲ್ಲ, ನೀವು ನಿಂತುಕೊಳ್ಳೋ ರೀತಿನೇ ನಿಮ್ಮ ಬಗ್ಗೆ ಎಲ್ಲಾ ಹೇಳುತ್ತೆ !

ಉಡುಗೊರೆ ವಸ್ತುಗಳು : ನಿಮ್ಮ ಸಂಗಾತಿ ನಿಮಗೆ ಉಡುಗೊರೆ ನೀಡಿದರೆ, ಅವರು ನಿಮಗೆ ಏನು ಉಡುಗೊರೆ ನೀಡಿದ್ದಾರೆ ಎಂದು ಯಾರಿಗೂ ಹೇಳಬೇಡಿ. ನಿಮ್ಮ ಸಂಗಾತಿಗೆ ನೀವು ನೀಡಿದ ಉಡುಗೊರೆಯನ್ನು ನೀವು ಯಾರೊಂದಿಗೂ ಹಂಚಿಕೊಳ್ಳಬಾರದು. ಇದು ನಿಮ್ಮಿಬ್ಬರ ನಡುವಿನ ವಿಚಾರ. ನಿಮ್ಮ ಸಂಗಾತಿಗೆ ನೀವು ಯಾವ ಉಡುಗೊರೆಯನ್ನು ನೀಡಲಿದ್ದೀರಿ ಎಂಬುದರ ಕುರಿತು ಸ್ನೇಹಿತರು ಅಥವಾ ಯಾರೊಂದಿಗೂ ಚರ್ಚಿಸುವ ಅಗತ್ಯವಿಲ್ಲ.

ಪಾಲುದಾರರ ತೆಗಳಿಕೆ : ಪ್ರೀತಿ ಇದ್ಮೇಲೆ ಜಗಳ ಇರೋದು ಮಾಮೂಲಿ. ಅನೇಕ ಬಾರಿ ಸಣ್ಣಪುಟ್ಟ ವಿಚಾರಕ್ಕೆ ದಂಪತಿ ಮಧ್ಯೆ ಗಲಾಟೆ ನಡೆದಿರುತ್ತದೆ. ಇದೇ ಕೋಪದಲ್ಲಿ ಸಂಗಾತಿ ಬಗ್ಗೆ ಸಂಬಂಧಿಕರು ಅಥವಾ ಸ್ನೇಹಿತರಿಗೆ ದೂರು ಹೇಳ್ತೇವೆ. ನಿಮಗೆ ಸಂಗಾತಿ ಬಗ್ಗೆ ಎಷ್ಟೇ ಅಸಮಾಧಾನವಿದ್ದರೂ ಅದನ್ನು ನಿಮ್ಮೊಳಗೆ ಇಟ್ಟುಕೊಳ್ಳುವುದನ್ನು ಕಲಿಯಿರಿ. ಸಂಬಂಧಿಕರು ಹಾಗೂ ಸ್ನೇಹಿತರ ಮುಂದೆ ನಿಮ್ಮ ಸಂಗಾತಿಯ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ನಿಮ್ಮಿಬ್ಬರ ಮಧ್ಯೆ ಯಾವ ಕಾರಣಕ್ಕೆ ಟೆನ್ಷನ್ ಆಗ್ತಿದೆ ಎಂಬುದನ್ನು ಹೇಳಬೇಡಿ.

ಹೆಂಡ್ತಿ ಯಾವಾಗ್ಲೂ ಕಿರುಚಾಡಿ ಇರಿಟೇಟ್ ಮಾಡ್ತಾಳ ? ಸಮಸ್ಯೆಯನ್ನು ಹೀಗೆ ನಿಭಾಯಿಸಿ

ಮಲಗುವ ಕೋಣೆಯ ರಹಸ್ಯ : ಮಲಗುವ ಕೋಣೆಯ ರಹಸ್ಯಗಳನ್ನು ಉದ್ದೇಶಪೂರ್ವಕವಾಗಿ ಹೊರಗಿನವರಿಗೆ ತಿಳಿಸಬೇಡಿ. ಸೆಕ್ಸ್ ಗೆ ಸಂಬಂಧಿಸಿದ ವಿಷ್ಯವನ್ನು ಬೇರೆಯವರ ಜೊತೆ ಹಂಚಿಕೊಳ್ಳಬಾರದು. ಅದು ನಿಮ್ಮ ವೈಯಕ್ತಿಕ ವಿಷ್ಯವಾಗಿದೆ. ಹಾಗೆ ನಿಮ್ಮ ಸಂಗಾತಿ ಕಚೇರಿ, ಕೆಲಸ ಅಥವಾ ಅನಾರೋಗ್ಯ ಅಥವಾ ಇನ್ನಾವುದೇ ಕಾರಣದಿಂದ ಒತ್ತಡದಲ್ಲಿದ್ದರೆ, ಅವರು ಅದನ್ನು ನಿಮ್ಮ ಬಳಿ ಹೇಳಿಕೊಳ್ತಾರೆ. ಅದನ್ನು ನೀವು ಗುಟ್ಟಾಗಿ ಕಾಪಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬೇರೆಯವರಿಗೆ ಹೇಳಬಾರದು.  

click me!