
ಸೋನಿಪತ್ (ನ.22) ಮದುವೆ ಫಿಕ್ಸ್ ಆಗಿದೆ. ಹುಡುಗ ಪೊಲೀಸ್, ಮಗಳ ಪೋಷಕರಿಗೆ ಎಲ್ಲಿಲ್ಲದ ಖುಷಿ. ತನ್ನ ಮಗಳ ಜೀವನ ಸುಂದರವಾಗಿರುತ್ತೆ ಅನ್ನೋ ನೆಮ್ಮದಿ. ಜಾತಕ, ಕುಂಡಲಿ ಒಕೆ, ಎಲ್ಲರಿಗೂ ಒಕೆ. ಮದುವೆ ದಿನಾಂಕ ನಿಗದಿಯಾಯಿತು. ಇದರ ನಡುವೆ ವರನ ಕೆಲ ಡಿಮ್ಯಾಂಡ್ ರಾಕೆಟ್‌ನಂತೆ ವಧುವಿನ ಮನೆಗೆ ಬಂದಿತ್ತು. 2 ತೊಲೆ ಬಂಗಾರ, ವರನ ತಾಯಿಗೆ ಆಭರಣ, ಮದುವೆ ಖರ್ಚು ವೆಚ್ಚ ಹಾಗೂ ಮದುವೆ ಬಳಿಕ ಓಡಾಡಲು ಕಾರು. ಹುಡುಗನಿಗೆ ಪೊಲೀಸ್ ಕೆಲಸ, ಏನೇ ಮಾಡಿದರು ಅಳಿಯನಿಗೆ ತಾನೆ ಎಂದು ಪೋಷಕರು ಒಕೆ ಎಂದಿದ್ದಾರೆ. 9.5 ಲಕ್ಷ ರೂಪಾಯಿ ಮೌಲ್ಯದ ಹ್ಯುಂಡೈ ಔರಾ ಕಾರು ಕೂಡ ಬುಕ್ ಮಾಡಿದ್ದಾರೆ. ಮದುವೆಗೆ ಕೆಲವೇ ದಿನ ಮೊದಲು ಹೇ..ಔರಾ ಕಾರು ಅಲ್ಲಪ್ಪಾ, 13 ಲಕ್ಷದ ಬ್ರೆಜಾ ಕಾರು ಎಂದಿದ್ದಾನೆ. ಹೀಗಾಗಿ ತಕ್ಷಣವೇ ಬುಕಿಂಗ್ ಕ್ಯಾನ್ಸಲ್ ಮಾಡಿ ಬ್ರೆಜಾ ಬುಕ್ ಮಾಡಿದ್ದಾರೆ. ಆದರೆ ಮದುವೆ ದಿನ ಡೆಲಿವರಿ ಆಗಲಿಲ್ಲ. ಇಷ್ಟೇ ನೋಡಿ ಪೊಲೀಸಪ್ಪ ಮದುವೆಯನ್ನೇ ನಿಲ್ಲಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.
ವರ ಕುಲದೀಪ್ ದೆಹಲಿ ಪೊಲೀಸ್. ಮದುವೆ ಮಾತುಕತೆಯಲ್ಲಿ ಒಂದಷ್ಟು ಡಿಮ್ಯಾಂಡ್ ಇಟ್ಟಿದ್ದ. ಆ ಪೈಕಿ ಕಾರು ಒಂದು. ಯಾವ ಕಾರು ಅನ್ನೋದು ಸ್ಪಷ್ಟವಾಗಿ ಹೇಳಿರಲಿಲ್ಲ. ಹೀಗಾಗಿ ವಧುವಿನ ಪೋಷಕರಾದ ಸುಭಾಷ್ ಕುಮಾರ್ ಹ್ಯುಂಡೈ ಔರಾ ಕಾರು ಬುಕ್ ಮಾಡಿದ್ದಾರೆ. 9.5 ಲಕ್ಷ ರೂಪಾಯಿ ಮೌಲ್ಯದ ಟಾಪ್ ಮಾಡೆಲ್ ಕಾರು. ಇತರ ಡಿಮ್ಯಾಂಡ್‌ಗಳಾದ ಚಿನ್ನ, ಮದುವೆ ಖರ್ಚು ಎಲ್ಲವನ್ನೂ ಹೊಂದಿಸಿದ್ದಾರೆ. ಮದುವೆಗೆ ಕೆಲವೇ ದಿನ ಇರುವಾಗ ವಧುವಿನ ಪೋಷಕರು ಔರಾ ಬುಕ್ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ಪೊಲೀಸಪ್ಪ ಕುಲದೀಪ್ ನೇರವಾಗಿ ಹುಡುಗಿಯ ತಂದೆಗೆ ಕರೆ ಮಾಡಿ, ಯಾಕಪ್ಪ ಹ್ಯುಂಡೈ ಔರಾ ಬುಕ್ ಮಾಡಿದ್ದಿಯಾ, 13 ಲಕ್ಷದ ಟಾಪ್ಎಂಡ್ ಮಾಡೆಲ್ ಮಾರುತಿ ಬ್ರೆಜಾ ಕೇಳಿದ್ದು ಎಂದಿದ್ದಾನೆ.
ಕೊನೆಯ ಕ್ಷಣದಲ್ಲಿ ಹೇಳಿದರೆ ಹೇಗೆ ಎಂದು ಸುಭಾಷ್ ಕುಮಾರ್ ಹೇಳಿದ್ದಾರೆ. ಬ್ರೆಜಾ ಬಿಟ್ಟು ಬೇರೆ ಕಾರು ನನಗೆ ಬೇಡ. ನೀವು ಯೋಚನೆ ಮಾಡಿ ನಿರ್ಧಾರ ಮಾಡಿ ಎಂದು ಫೋನ್ ಕಟ್ ಮಾಡಿದ್ದಾನೆ. ಸರಿ ಈ ಒಂದು ಕಾರಣಕ್ಕೆ ಮಗಳ ಭವಿಷ್ಯ ಹಾಳಾಗಬಾರದು ಎಂದು ಔರಾ ಕಾರು ಕ್ಯಾನ್ಸಲ್ ಮಾಡಿದ್ದಾರೆ. ಕೊನೆಯ ಕ್ಷಣದಲ್ಲಿ ಕ್ಯಾನ್ಸಲ್ ಮಾಡಿದ ಕಾರಣ ಒಂದಷ್ಟ ಮೊತ್ತ ಕಳೆದುಕೊಳ್ಳಬೇಕಾಯಿತು. ವರ ಕುಲದೀಪ್ ಹೇಳಿದಂತೆ ಮಾರುತಿ ಬ್ರೆಜಾ ಬುಕ್ ಮಾಡಿದ್ದಾರೆ. ಬಳಿಕ ಮದುವೆ ದಿನ ಡೆಲಿವರಿಗಾಗಿ ಎಲ್ಲಾ ಶೋ ರೂಂ, ಡೀಲರ್ ಬಳಿ ಮನವಿ ಮಾಡಿದರೂ ಸಾಧ್ಯವಾಗಲಿಲ್ಲ. ಮದುವೆ ದಿನ ಬ್ರೆಜಾ ಕಾರು ಡೆಲಿವರಿ ಆಗಲಿಲ್ಲ.
ಮದುವೆ ದಿನ ಬ್ರೆಜಾ ಕಾರು ಬರಲಿಲ್ಲ, ಕೆಂಡಾಮಂಡಲನಾದ ಪೊಲೀಸ್ ವರ ಕುಲದೀಪ್ ರಂಪಾಟ ಮಾಡಿದ್ದಾನೆ. ಬಳಿಕ ಈ ಮದುವೆ ಬೇಡ ಎಂದು ಆಪ್ತರ ಜೊತೆ ಮರಳಿದ್ದಾನೆ. ಇತ್ತ ವಧುವಿನ ಪೋಷಕರು ಕಂಗಾಲಾಗಿದ್ದಾರೆ. ನೇರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ವರನ ವರದಕ್ಷಿಣ ಬೇಡಿಕೆ ಕುರಿತು ದೂರು ನೀಡಿದ್ದಾರೆ. ಮದುವೆಗೆ 25 ರಿಂದ 30 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಎಲ್ಲವೂ ನೀರಿನಲ್ಲಿ ಮಾಡಿದ ಹೋಮದಂತೆ ಆಗಿದೆ. ಕಾರು ಎದುರಿಗೆ ಇರಲಿಲ್ಲ ಎಂದು ಮದುವೆ ರದ್ದು ಮಾಡಿದ್ದಾರೆ. ಕುಲದೀಪ್ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.