
ಲಕ್ನೋ (ನ.23): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ತಾಯಿ ಸಾವಿತ್ರಿ ದೇವಿ ಅವರನ್ನು ಸ್ಮರಿಸಿ ಸೋಮವಾರ ಭಾವುಕ ಪತ್ರ ಬರೆದಿದ್ದಾರೆ. ತಾಯಿಯ ನಿಸ್ವಾರ್ಥ ಮಮತೆ, ಅವರು ಕಲಿಸಿದ ಜೀವನ ಮೌಲ್ಯಗಳು ಹಾಗೂ ಲೌಕಿಕ ಜೀವನವನ್ನು ತ್ಯಜಿಸಿ ಸನ್ಯಾಸ ಸ್ವೀಕರಿಸಿದ ನಂತರ ತಾಯಿಯನ್ನು ಭೇಟಿಯಾದ ಹೃದಯಸ್ಪರ್ಶಿ ಕ್ಷಣಗಳನ್ನು ಸಿಎಂ ಯೋಗಿ ಈ ಪತ್ರದಲ್ಲಿ ಮೆಲುಕು ಹಾಕಿದ್ದಾರೆ. 'ಎಕ್ಸ್' (X) ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ಯೋಗಿ ಆದಿತ್ಯನಾಥ್, ತಾಯಿ ಮತ್ತು ಮಗುವಿನ ನಡುವಿನ ಅಜರಾಮರ ಬಾಂಧವ್ಯಕ್ಕೆ ನುಡಿನಮನ ಸಲ್ಲಿಸಿದ್ದಾರೆ. ಮಾತೃತ್ವವನ್ನು ಜಗತ್ತಿನ ಅತ್ಯಂತ ಸುಂದರ ಭಾವನೆ ಎಂದು ಬಣ್ಣಿಸಿರುವ ಅವರು, ತಮ್ಮ ಈ ಸಂದೇಶವನ್ನು ಜಗತ್ತಿನ ಎಲ್ಲಾ ತಾಯಂದಿರಿಗೆ ಸಮರ್ಪಿಸಿದ್ದಾರೆ.
ಯಾರಿಲ್ಲದೆ ಜೀವನವೇ ಇರುತ್ತಿರಲಿಲ್ಲವೋ, ಯಾರಿಲ್ಲದೆ ನೀವೂ ಇರುತ್ತಿರಲಿಲ್ಲ, ನಾನೂ ಇರುತ್ತಿರಲಿಲ್ಲವೋ, ಯಾವುದೇ ಜೀವಿಗೂ ಅಸ್ತಿತ್ವವಿರುತ್ತಿರಲಿಲ್ಲವೋ ಮತ್ತು ಈ ಜಗತ್ತೇ ಇರುತ್ತಿರಲಿಲ್ಲವೋ..ಅಂತಹ ಪ್ರತಿಯೊಬ್ಬ ತಾಯಿಗೂ ಈ ಪತ್ರವನ್ನು ಅರ್ಪಿಸುತ್ತಿದ್ದೇನೆ. ತಾಯಿ ಎಂದರೆ ಕೇವಲ ಜನ್ಮ ನೀಡುವವಳಲ್ಲ. ಆಕೆ ಜಗನ್ಮಾತೆ. ದೇವರಿಗೂ ಒಬ್ಬ ತಾಯಿ ಇದ್ದಾಳೆ ಎಂದು ಯೋಗಿ ಬರೆದುಕೊಂಡಿದ್ದಾರೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ತಾಯಿಯ ಮಹತ್ವವನ್ನು ಸ್ಮರಿಸಿದ ಯೋಗಿ, ಭಗವಾನ್ ಶ್ರೀರಾಮ ವನವಾಸಕ್ಕೆ ತೆರಳುವಾಗ ಮಾತೆ ಕೌಸಲ್ಯೆ ನೀಡಿದ ಆಶೀರ್ವಾದವನ್ನು ಮತ್ತು ತಾಯಿಯ ಇಚ್ಛೆಯಂತೆ ಮಥುರಾದ ಜೈಲಿನಿಂದ ಶ್ರೀಕೃಷ್ಣನನ್ನು ಗೋಕುಲಕ್ಕೆ ಕರೆದೊಯ್ದ ಪ್ರಸಂಗವನ್ನು ಉಲ್ಲೇಖಿಸಿದರು. ಅಲ್ಲದೆ, ತಾಯಿಯ ಸಂಸ್ಕಾರ ಮತ್ತು ಮೌಲ್ಯಗಳು ಮಗುವನ್ನು ಧ್ರುವ ಮತ್ತು ಪ್ರಹ್ಲಾದನಂತಹ ಮಹಾನ್ ವ್ಯಕ್ತಿತ್ವಗಳನ್ನಾಗಿ ಹೇಗೆ ರೂಪಿಸಬಲ್ಲವು ಎಂಬುದನ್ನೂ ಅವರು ನೆನಪಿಸಿಕೊಂಡರು.
ತಾಯಿ ಎಲ್ಲರ ಸ್ಥಾನವನ್ನು ತುಂಬಬಲ್ಲಳು, ಆದರೆ ತಾಯಿಯ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ತಾಯಿಯ ಮಮತೆಯೇ ಜಗತ್ತಿನ ಅತ್ಯಂತ ಸುಂದರ ಭಾವನೆ ಎಂದು ಅವರು ಹೇಳಿದ್ದಾರೆ. ತಾಯಿಯ ಅಗಲಿಕೆಯಿಂದ ಉಂಟಾಗುವ ಭಾವನಾತ್ಮಕ ಶೂನ್ಯದ ಬಗ್ಗೆ ಬರೆದಿರುವ ಸಿಎಂ, ತಾಯಿಯ ಅನುಪಸ್ಥಿತಿ ಎಂದರೆ ಕೇವಲ ಜೀವನದಲ್ಲಿ ಒಬ್ಬ ವ್ಯಕ್ತಿ ಇಲ್ಲದಿರುವುದಲ್ಲ. ಅದು ಭಾವನಾತ್ಮಕ ಭದ್ರತೆ, ನಿಸ್ವಾರ್ಥ ಪ್ರೀತಿ ಮತ್ತು ಮನೆಯ ಆಳವಾದ ಆಶ್ರಯವನ್ನು ಕಳೆದುಕೊಂಡಂತೆ ಎಂದು ಭಾವುಕರಾಗಿ ಬಣ್ಣಿಸಿದ್ದಾರೆ.
ತಮಗೆ ಅಕ್ಷರ ಲೋಕವನ್ನು ಪರಿಚಯಿಸಿದ ಮೊದಲ ಗುರುವಾಗಿ ತಾಯಿಯನ್ನು ಸ್ಮರಿಸಿದ ಯೋಗಿ ಆದಿತ್ಯನಾಥ್, ಸನ್ಯಾಸ ಸ್ವೀಕರಿಸಿದ ಮೂರು ವರ್ಷಗಳಿಗೂ ಹೆಚ್ಚು ಕಾಲದ ನಂತರ ತಮ್ಮ ಪೂರ್ವಿಕರ ಮನೆಯಾದ ಪಂಚೂರಿಗೆ (Panchur) ಭೇಟಿ ನೀಡಿದ್ದ ಭಾವುಕ ನೆನಪನ್ನು ಹಂಚಿಕೊಂಡಿದ್ದಾರೆ/ ಗೋರಖ್‌ಪುರದಿಂದ ಪಂಚೂರಿಗೆ ಪ್ರಯಾಣ ಬೆಳೆಸುವಾಗ ಮನಸ್ಸಿನಲ್ಲಿ ಭಾವನೆಗಳ ಮಹಾಪೂರವೇ ಹರಿಯುತ್ತಿತ್ತು ಎಂದು ನೆನೆದಿರುವ ಯೋಗಿ, ಕಾವಿ ವಸ್ತ್ರ ಧರಿಸಿ ತಮ್ಮ ಮನೆಯ ಹೊಸ್ತಿಲ ಹೊರಗೆ ನಿಂತಿದ್ದ ಕ್ಷಣವನ್ನು ವಿವರಿಸಿದ್ದಾರೆ. ಸನ್ಯಾಸ ಪರಂಪರೆಯ ಪ್ರಮುಖ ವಿಧಿಯ ಭಾಗವಾಗಿ ಅವರು ಭಿಕ್ಷೆಗಾಗಿ ಕೂಗಿದರು. ಮಗನ ಧ್ವನಿ ಕೇಳಿ ಹೊರಬಂದ ತಾಯಿಗೆ ತಾವು ಕಾಣುತ್ತಿರುವ ದೃಶ್ಯವನ್ನು ಮೊದಲಿಗೆ ನಂಬಲು ಕಷ್ಟವಾಯಿತು.
ನನ್ನ ತಾಯಿ ಏನಾದರೂ ಹೇಳುವ ಮೊದಲೇ ನಾನು, 'ಅಮ್ಮಾ, ದಯವಿಟ್ಟು ನನಗೆ ಭಿಕ್ಷೆ ನೀಡು' ಎಂದೆ. ಆಗ ನನ್ನ ತಾಯಿ ತಮ್ಮನ್ನು ತಾವು ಸಾವರಿಸಿಕೊಂಡು, 'ಮಗನೇ, ನಿನ್ನನ್ನು ನೀನು ಏನು ಮಾಡಿಕೊಂಡಿದ್ದೀಯಾ? ನೀನು ಭಿಕ್ಷೆ ಬೇಡುವಂತಹ ಪರಿಸ್ಥಿತಿ ಬರಲು ಮನೆಯಲ್ಲಿ ಯಾವುದಕ್ಕೆ ಕೊರತೆಯಿತ್ತು?' ಎಂದು ಕೇಳಿದರು. ಅದಕ್ಕೆ ನಾನು, 'ಅಮ್ಮಾ, ಸನ್ಯಾಸವೇ ನನ್ನ ಧರ್ಮ. ಒಬ್ಬ ಯೋಗಿಯ ಹಸಿವು ಭಿಕ್ಷೆಯಿಂದ ಮಾತ್ರ ತಣಿಯಲು ಸಾಧ್ಯ. ಅಮ್ಮ, ನಾನು ಇಲ್ಲಿ ಉಳಿದುಕೊಳ್ಳಲು ಬಂದಿಲ್ಲ, ಭಿಕ್ಷೆ ಬೇಡಲು ಬಂದಿದ್ದೇನೆ. ನೀನು ಭಿಕ್ಷೆಯಾಗಿ ಏನು ನೀಡುತ್ತೀಯೋ ಅದು ನನ್ನ ಉದ್ದೇಶವನ್ನು ಪೂರೈಸುತ್ತದೆ' ಎಂದು ಉತ್ತರಿಸಿದ್ದೆ ಎಂದು ಹೇಳಿದ್ದಾರೆ. ಕೊನೆಗೆ ಸನ್ಯಾಸ ಮಾರ್ಗವನ್ನು ಆರಿಸಿಕೊಂಡಿದ್ದ ಮಗನ ದೃಢಸಂಕಲ್ಪವನ್ನು ತಾಯಿಯ ಮಮತೆ ಗೌರವಿಸಿತು ಎಂದು ಯೋಗಿ ಸ್ಮರಿಸಿದ್ದಾರೆ.
ಸನಾತನ ಪರಂಪರೆಯಲ್ಲಿ ಮಾತೃ ಗೌರವದ ಮಹತ್ವವನ್ನು ಒತ್ತಿ ಹೇಳಿದ ಮುಖ್ಯಮಂತ್ರಿಗಳು, ಕೆಲವು ಋಣಗಳನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ, ಆದರೆ ನಮ್ಮ ಜವಾಬ್ದಾರಿಗಳನ್ನು ಖಂಡಿತವಾಗಿಯೂ ನಿಭಾಯಿಸಬಹುದು ಎಂದರು. 'ತಾಯಂದಿರ ಬಗೆಗಿನ ಗೌರವದಿಂದಲೇ ಸನಾತನ ಮೌಲ್ಯಗಳು ಪೋಷಿಸಲ್ಪಟ್ಟಿವೆ. ಸಾರ್ವಜನಿಕ ಜೀವನಕ್ಕೆ ಬಂದ ನಂತರ, ರಾಜ್ಯದ ಮಹಿಳೆಯರ ಪರವಾಗಿ ಇದೇ ಕರ್ತವ್ಯವನ್ನು ನಿಭಾಯಿಸಲು ನಾನು ಪ್ರಯತ್ನಿಸುತ್ತಿದ್ದೇನೆ' ಎಂದು ಅವರು ಬರೆದಿದ್ದಾರೆ.
ಉತ್ತರ ಪ್ರದೇಶದ ಜನತೆಗೆ ಕರೆ ನೀಡಿರುವ ಸಿಎಂ ಯೋಗಿ, ನಿರ್ಲಕ್ಷಿತ ಮತ್ತು ವಂಚಿತರಿಗೆ ಬೆಂಬಲ ನೀಡುವುದೇ ಪ್ರತಿಯೊಬ್ಬ ತಾಯಿಗೂ ಸಲ್ಲಿಸುವ ನಿಜವಾದ ಗೌರವ. 'ಯಾರೂ ಇಲ್ಲದ ತಾಯಿಗೆ ನಾನು ಆಸರೆಯಾಗುತ್ತೇನೆ, ವಂಚಿತ ತಾಯಿಯ ನೋವನ್ನು ಅರ್ಥಮಾಡಿಕೊಳ್ಳುತ್ತೇನೆ ಮತ್ತು ನೋವಿನಲ್ಲಿರುವ ತಾಯಿಯ ಮುಖದಲ್ಲಿ ನಗು ತರುತ್ತೇನೆ ಎಂದು ರಾಜ್ಯದ ಪ್ರತಿಯೊಬ್ಬ ನಿವಾಸಿಯೂ ಇಂದು ಸಂಕಲ್ಪ ಮಾಡುವುದೇ ಪ್ರತಿಯೊಬ್ಬ ತಾಯಿಗೂ ಸಲ್ಲಿಸುವ ನಿಜವಾದ ಗೌರವ' ಎಂದು ತಿಳಿಸಿದ್ದಾರೆ. ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ತಮ್ಮ ಪೂರ್ವಿಕರ ಗ್ರಾಮವಾದ ಪಂಚೂರಿನಲ್ಲಿ ಸಿಎಂ ಯೋಗಿ ಅವರ ತಾಯಿ ಸಾವಿತ್ರಿ ದೇವಿ ಅವರು ಶುಕ್ರವಾರ ತಮ್ಮ 91ನೇ ವಯಸ್ಸಿನಲ್ಲಿ ನಿಧನರಾಗಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.