ಪಾಲಕರನ್ನು ನಾನಾ ರೀತಿಯಲ್ಲಿ ಪ್ರಚೋದಿಸಲು ಮಕ್ಕಳು ಯತ್ನಿಸುತ್ತಲೇ ಇರುತ್ತಾರೆ. ಆ ಮೂಲಕ ತಾವು ಅಂದುಕೊಂಡಿದ್ದನ್ನು ಪೂರೈಸಿಕೊಳ್ಳುವುದಷ್ಟೇ ಅವರ ಗುರಿಯಾಗಿರುತ್ತದೆ. ಪಾಲಕರಿಂದ ಕೆಲಸ ಮಾಡಿಸಿಕೊಳ್ಳಲು ಮಕ್ಕಳು ಅನುಸರಿಸುವ ಕೆಲವು ಪ್ರಚೋದನಾತ್ಮಕ ವರ್ತನೆಗಳನ್ನು ಅರಿತುಕೊಳ್ಳಿ.
ಮಕ್ಕಳು ದೇವರಿದ್ದಂತೆ. ಆದರೆ, ಅವರೂ ಸಹ ಎಷ್ಟೆಂದರೂ ಪುಟ್ಟ ಮಾನವರು. ತಮಗೆ ಬೇಕಾದುದನ್ನು ಪಡೆದುಕೊಳ್ಳಲು ಪಾಲಕರನ್ನು ಹೇಗೆ ಪ್ರಚೋದಿಸಬೇಕು ಎನ್ನುವುದನ್ನು ಅವರಷ್ಟು ಚೆನ್ನಾಗಿ ಬೇರೆ ಯಾರಿಗೂ ಗೊತ್ತಿರುವುದಿಲ್ಲ. ಪ್ರತಿ ಮಕ್ಕಳೂ ಇದರಲ್ಲಿ ಎಕ್ಸ್ ಪರ್ಟ್ ಆಗಿರುತ್ತಾರೆ ಎಂದರೆ ತಪ್ಪೇನಿಲ್ಲ. ಪಾಲಕರನ್ನು ವಿವಿಧ ರೀತಿಯಲ್ಲಿ ಪ್ರಚೋದನೆಗೆ ಗುರಿ ಮಾಡಿ ತಮಗೆ ಬೇಕಾದುದನ್ನು ಪಡೆದುಕೊಳ್ಳುವುದಷ್ಟೇ ಅವರ ಗುರಿಯಾಗಿರುತ್ತದೆ. ಅದಕ್ಕಾಗಿ ಸಾಕಷ್ಟು ನಾಟಕಗಳನ್ನು ಮಾಡುತ್ತಾರೆ. ವಿವಿಧ ರೀತಿಯ ಪ್ರಚೋದನಾತ್ಮಕ ವರ್ತನೆಗಳನ್ನು ಅನುಸರಿಸುತ್ತಾರೆ. ಅವರಿಗೆ ಕೆಟ್ಟದ್ದು ಯಾವುದು, ಒಳ್ಳೆಯದು ಯಾವುದು ಎನ್ನುವ ಅರಿವು ಇಲ್ಲವಾದ ಕಾರಣ ಹೇಗೆ ಬೇಕಾದರೂ ವರ್ತಿಸುತ್ತಾರೆ. ಪಾಲಕರು ಎಚ್ಚರಿಕೆ ವಹಿಸಬೇಕಾದುದು ಇಲ್ಲೇ. ಕೆಟ್ಟ ರೀತಿಯಲ್ಲಿ ಅವರು ಪಾಲಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂದರೆ, ಪಾಲಕರು ಅವರ ಒಳ್ಳೆಯ ಗುಣಗಳನ್ನು, ಯಾವುದು ಮೆಚ್ಚುಗೆಗೆ ಅರ್ಹವೋ ಅದನ್ನಷ್ಟೇ ಗುರುತಿಸಿ ಮೆಚ್ಚಿಕೊಳ್ಳಬೇಕು.
ಕೆಟ್ಟ ವರ್ತನೆಗಳಿಗೆ ಪ್ರತಿಕ್ರಿಯೆ ನೀಡುತ್ತ ಹೋದರೆ ಅವರು ಅದನ್ನೇ ಹೆಚ್ಚಿಸುತ್ತಾರೆ. ಕೆಲವೊಮ್ಮೆ ಮಕ್ಕಳನ್ನು ಗುಮಾನಿಯಿಂದ ನೋಡಿದರೂ ಪರವಾಗಿಲ್ಲ. ಕೆಲವು ತಪ್ಪುಗಳನ್ನು ಮಾಡಿದಾಗ ಪತ್ತೆ ಮಾಡಿ ಅಂಥದ್ದನ್ನು ಮಾಡದಂತೆ ಎಚ್ಚರಿಕೆ ನೀಡಬೇಕು. ತಿಳಿಸಿ ಹೇಳುವ ಜತೆಗೆ, ಕೆಲವು ಬಾರಿ ಕಟ್ಟುನಿಟ್ಟಾಗಿಯೂ ನಿಯಮ ಹೇರಬೇಕು. ಅಂದ ಹಾಗೆ, ಪಾಲಕರಿಂದ ತಮ್ಮ ಕೆಲಸ ಮಾಡಿಸಿಕೊಳ್ಳಲು ಮಕ್ಕಳು ಹೇಗೆಲ್ಲ ಯತ್ನಿಸುತ್ತಾರೆ ಎಂದು ನೋಡಿ.
• ಸುಳ್ಳು ಹೇಳುವುದು (Lying)
ಇತರರಿಂದ ತಮಗೆ ಬೇಕಾದುದನ್ನು ಪಡೆದುಕೊಳ್ಳುವುದಕ್ಕಾಗಿ ಸುಳ್ಳು ಹೇಳುವುದು ಮನುಷ್ಯರ (Person) ಸಹಜ ವರ್ತನೆಗಳಲ್ಲಿ ಒಂದು. ಇದು ಮಕ್ಕಳಿಗೂ (Children) ಅನ್ವಯಿಸುತ್ತದೆ. ಬೆಳೆಯುವ ಹಂತದಲ್ಲಿ ಕೆಲವರು ಸುಳ್ಳು ಹೇಳಿದರೆ ಮತ್ತೆ ಕೆಲವರು ಬರೀ ವಾದ ಮಾಡುತ್ತಾರೆ. ಅವರು ಸುಳ್ಳು (Lie) ಹೇಳುತ್ತಿರುವುದನ್ನು ಮೊದಲೇ ಗುರುತಿಸಿ ಅದಕ್ಕೆ ನಿಯಂತ್ರಣ (Control) ಹೇರುವುದು ಅಗತ್ಯ. ಇಲ್ಲವಾದಲ್ಲಿ ಅದೇ ಪರಿಪಾಠ ಮುಂದುವರಿಸುತ್ತಾರೆ. ವ್ಯಕ್ತಿತ್ವಕ್ಕೆ ಹಾನಿ ಮಾಡದ ಸುಳ್ಳುಗಳ ಬಗ್ಗೆ ಗಮನ ಹರಿಸಬೇಕೆಂದಿಲ್ಲ.
Personality Tips: ನೀವು ವಿಶಿಷ್ಟ ವ್ಯಕ್ತಿತ್ವ ಹೊಂದಿದ್ರೆ ಜನ ನಿಮ್ಮನ್ನು ಹೀಗೆಲ್ಲ ಕಾಣೋದು ಸಹಜ!
• ಕೋಪೋದ್ರೇಕಗಳು (Tuntrums)
ಮಕ್ಕಳು ಕೋಪದಿಂದ (Angry) ಅಳುವುದು, ವಸ್ತುಗಳನ್ನು ಬಿಸಾಕುವುದು, ತಮಗೇ ಹಾನಿ ಮಾಡಿಕೊಳ್ಳುವುದು ಸಾಮಾನ್ಯ ಗುಣ. ಪಾಲಕರನ್ನು ಪ್ರಚೋದಿಸುವುದಕ್ಕಾಗಿ (Manipulate) ಅವರು ಹೀಗೆ ಮಾಡುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಮನೆಗೆ ಯಾರಾದರೂ ನೆಂಟರಿಷ್ಟರು ಬಂದಾಗ ಮಕ್ಕಳು ಹಠ ಜಾಸ್ತಿ ಮಾಡುವುದು ಇದೇ ಕಾರಣಕ್ಕೆ. ಆ ಸಮಯದಲ್ಲಿ ತಾವು ಅಂದುಕೊಂಡಿದ್ದನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎನ್ನುವುದು ಅವರಿಗೆ ತಿಳಿದಿರುತ್ತದೆ. ಅಲ್ಲದೆ, ಮಕ್ಕಳು ತಮ್ಮ ಭಾವನೆಗಳನ್ನು (Feelings) ವ್ಯಕ್ತಪಡಿಸುವ ಮಾರ್ಗವೂ ಇದಾಗಿರಬಹುದು. ಕೋಪೋದ್ರೇಕಗಳನ್ನು ಮಕ್ಕಳಲ್ಲಿ ಕಡಿಮೆ ಮಾಡುವ ನಿಟ್ಟಿನಲ್ಲಿ ಪಾಲಕರು ಶ್ರಮವಹಿಸಬೇಕಾಗುತ್ತದೆ.
• ಭಾವನಾತ್ಮಕ ಬ್ಲಾಕ್ ಮೇಲ್ (Blackmail)
ಭಾವನಾತ್ಮಕವಾಗಿ (Emotional) ಪಾಲಕರನ್ನು (Parents) ಬ್ಲಾಕ್ ಮೇಲ್ ಮಾಡುವುದು ಸಹ ಮಕ್ಕಳಿಗೆ ಚೆನ್ನಾಗಿ ತಿಳಿದಿರುತ್ತದೆ. ಪಾಲಕರನ್ನು ಸೆಳೆಯುವುದಕ್ಕಾಗಿ ಅವರು ಅತಿಯಾದ ದುಃಖ ವ್ಯಕ್ತಪಡಿಸುವುದು, ಹುಷಾರಿಲ್ಲದಂತೆ ವರ್ತಿಸುವುದು, ದೈಹಿಕವಾಗಿ ನೋವು ಉಂಟಾದಂತೆ ಮಾಡಬಹುದು. ಇಂತಹ ಸಮಯದಲ್ಲಿ ಯಾವಾಗ ಕಟ್ಟುನಿಟ್ಟಾಗಿ “ನೋʼ ಎನ್ನಬೇಕು, ಯಾವಾಗ ಅನುಮತಿ ನೀಡಬೇಕು ಎನ್ನುವುದನ್ನು ಪಾಲಕರು ತಿಳಿದಿರಬೇಕು.
• ಚೌಕಾಸಿ (Negotiation)
ಸಾಕಷ್ಟು ಮಕ್ಕಳು ಇದರಲ್ಲಿ ನಿಪುಣರಾಗಿರುತ್ತಾರೆ. ಯಾವುದೋ ವಸ್ತುವನ್ನು ಪಾಲಕರು ನೀಡಿದರೆ, ಹೋಂವರ್ಕ್ ಮುಗಿಸುವುದಾಗಿಯೋ, ಮಾತನ್ನು ಕೇಳುವುದಾಗಿಯೋ ಹೇಳುತ್ತಾರೆ. ಇದು ಪಕ್ಕಾ ಚೌಕಾಸಿ ವ್ಯವಹಾರವಾಗಿದ್ದು, ನೀವು ಅವರಿಂದ ಉತ್ತಮ ವರ್ತನೆ (Good Behave) ನಿರೀಕ್ಷೆ ಮಾಡುವುದಕ್ಕೆ ಪ್ರತಿಯಾಗಿ ಏನಾದರೂ ಕೇಳುತ್ತಾರೆ.
ಮಳೆ ಬಂದ್ರೆ ಮಕ್ಳು ನೆನೆಯದೇ ಇರ್ತಾರ, ಆರೋಗ್ಯ ಹದಗೆಡಬಾರ್ದು ಅಂದ್ರೆ ಹೀಗ್ ಮಾಡಿ
• ಉದ್ದೇಶಪೂರ್ವಕ ಕೆಟ್ಟವರ್ತನೆ (Misbehavior)
ಕೆಲ ಮಕ್ಕಳು ಉದ್ದೇಶಪೂರ್ವಕವಾಗಿ ಕೆಟ್ಟ ತುಂಟತನ ಮಾಡುತ್ತಾರೆ. ಅವರು ಬಯಸುತ್ತಿರುವುದು ನಿಮ್ಮಿಂದ ಸಿಗುತ್ತಿಲ್ಲ ಎಂದಾದರೆ ಬೇರೆ ಬೇರೆ ವರ್ತನೆಗಳನ ಮೂಲಕ ಅದನ್ನು ವ್ಯಕ್ತಪಡಿಸುತ್ತಾರೆ. ಪಾಲಕರಿಂದ ಅನಾದರಕ್ಕೆ ಒಳಗಾದ ಮಕ್ಕಳೂ ಸಹ ಅತ್ಯಂತ ಆಳವಾದ ಭಾವನೆಗಳಿಂದ ಹೀಗೆ ಮಾಡಬಹುದು. ಹೀಗಾಗಿ, ಇದನ್ನು ಗುರುತಿಸಿ ನಿವಾರಿಸುವುದು ಅಗತ್ಯ.