ಚಾಣಕ್ಯ ನೀತಿ: ಸಿಹಿ ಮಾತಿನ ವ್ಯಕ್ತಿಯ ಅಸಲಿ ಮುಖ ತಿಳಿಯೋದು ಹೀಗೆ!

Published : Jan 25, 2026, 05:18 PM IST
chanakya niti

ಸಾರಾಂಶ

ಚಾಣಕ್ಯ ನೀತಿಯ ಪ್ರಕಾರ, ನಿಮ್ಮೊಡೆ ಸಿಹಿಯಾಗಿ ಮಾತನಾಡುವ ಎಲ್ಲರೂ ಒಳ್ಳೆಯವರಲ್ಲ. ಒಬ್ಬ ವ್ಯಕ್ತಿಯ ನಿಜವಾದ ಸ್ವಭಾವವೇನು, ನಟನೆಯೇನು ಎಂದು ಗುರುತಿಸಿದರೆ ಮಾತ್ರ ಬದುಕಿಕೊಳ್ಳುತ್ತೀರಿ. ಅಸಲಿ ಮುಖ ಗುರುತಿಸುವ ಐದು ಪ್ರಮುಖ ಸೂಚನೆಗಳು ಇಲ್ಲಿದೆ.

ಕೆಲವರು ತುಂಬಾ ನಯವಾಗಿ ಮಾತನಾಡ್ತಾರೆ. ಅವರ ಮಾತುಗಳೆಲ್ಲ ಸಿಹಿಯಾಗಿರುತ್ತವೆ. ಕಾಳಜಿ ಇರುವಂತೆ ಕಾಣುತ್ತದೆ. ತುಂಬಾ ಜನ ಇದರಿಂದಲೇ ಮೋಸ ಹೋಗುತ್ತಾರೆ. ಆದರೆ ಎಚ್ಚರ. ಇದರಿಂದ ಮೋಸ ಹೋಗಬೇಡಿ. ಚಾಣಕ್ಯನ ಪ್ರಕಾರ ಒಬ್ಬ ಮನುಷ್ಯನನ್ನು ಅಳೆಯಬೇಕಾದುದು ಅವನು ಹೇಳುವ ಮಾತುಗಳಿಂದಲ್ಲ, ಅವನು ತೋರಿಸುವ ಪ್ರತಿಕ್ರಿಯೆಗಳಿಂದ. ಎಲ್ಲಾ “ನೈಸ್ ಗೈ”ಗಳು ಒಳ್ಳೆಯವರೇ ಆಗಿರೋದಿಲ್ಲ. ಇಂದಿನ ದಿನಗಳಲ್ಲಿ ಹಲವರು ಪ್ರೀತಿಯನ್ನು ಒಂದು ನಾಟಕದಂತೆ ಆಡುತ್ತಾರೆ. ನಗು, ಸಿಹಿ ಮಾತು, ಕಾಳಜಿ – ಎಲ್ಲವೂ ನಟನೆಗಳು. ನಿಮ್ಮ ಮನಸ್ಸೇ ಅವರ ನಟನೆಯ ವೇದಿಕೆ. ಚಾಣಕ್ಯ ಹೇಳ್ತಾರೆ – ನಿಜವಾದ ಸ್ವಭಾವ ಹೊರಗಿನ ಮಾತುಗಳಲ್ಲಿ ಕಾಣುವುದಿಲ್ಲ. ಅದು ಅವರು ತಾಳ್ಮೆ ಕಳೆದುಕೊಂಡ ಕ್ಷಣದಲ್ಲಿ, ನಿರಾಕರಣೆ ಎದುರಾದಾಗ, ಸೋಲಿನ ವೇಳೆಯಲ್ಲಿ ಕಾಣುತ್ತದೆ. ಹಾಗಾದರೆ, ಯಾವಾಗ ಒಳ್ಳೆಯತನದ ಹಿಂದಿನ ಕಠೋರತೆಯನ್ನು ಗುರುತಿಸುವುದು? ಅದು ಹೀಗೆ.

1. ತುಂಬಾ ಒಳ್ಳೆಯವನಂತೆ ನಟಿಸುವವನು

ಮೊದಲೇ ಅತಿಯಾದ ಕಾಳಜಿ, ಗೌರವ, ಸೇವೆ… ನಿಮಗಾಗಿ ಬಾಗಿಲು ತೆಗೆಯೋದು, ಚೀಲ ಹೊರುವುದು, ಊಟ ಬಡಿಸುವುದು. ನಿಮಗೆ ಅನಿಸಬಹುದು – “ಅಯ್ಯೋ, ಇವನು ಎಷ್ಟು ಜಂಟಲ್‌ಮ್ಯಾನ್!” ಅಂತ. ಚಾಣಕ್ಯ ಇಲ್ಲಿ ಎಚ್ಚರ ನೀಡ್ತಾರೆ. ನಿಜವಾದ ಪ್ರೀತಿ ಇರುವವನು ಪರಿಪೂರ್ಣನಂತೆ ನಟಿಸೋದಿಲ್ಲ, ಅವನು ಸರಳವಾಗಿ, ನಿರಂತರವಾಗಿ ಜೊತೆ ಇರುತ್ತಾನೆ. ಆದರೆ ಏನನ್ನಾದರೂ ಪಡೆಯಬೇಕೆಂದು ಬಂದವನು ಮೊದಲೇ ಅತಿಯಾದ ಸಿಹಿ ತೋರಿಸುತ್ತಾನೆ. ಅತಿಯಾದ ಸಿಹಿ ಮಾತಿನ ಹಿಂದೆ ಸ್ವಾರ್ಥ ಅಡಗಿ ಕುಳಿತಿರುತ್ತದೆ.

2. ನಿಮ್ಮ ಸ್ನೇಹಿತರ ಮುಂದೆ ಅವನು ಹೇಗಿರುತ್ತಾನೆ?

ಇದು ಬಹಳ ಮುಖ್ಯ. ನಿಮ್ಮ ಸ್ನೇಹಿತರ ಮುಂದೆ ಅವನು ಏಕಾಏಕಿ ಹೆಚ್ಚು ಜೋಕು, ಹೆಚ್ಚು ಶೋ ತೋರಿಸ್ತಾನಾ? ಎಲ್ಲರಿಗೂ ಇಷ್ಟವಾಗುವ ವ್ಯಕ್ತಿಯಾಗಿ ಬದಲಾಗುತ್ತಾನಾ? ಅದು ಸ್ನೇಹವಲ್ಲ, ಅದು ತಂತ್ರ. ನಿಮ್ಮ ಸ್ನೇಹಿತರ ಮೆಚ್ಚುಗೆ ಪಡೆಯಲು ಅವನು ನಟಿಸುತ್ತಿದ್ದಾನೆ ಅಂದ್ರೆ, ಅವನು ನಿಮ್ಮನ್ನಲ್ಲ, ತನ್ನ ಇಮೇಜ್‌ನ್ನು ಮಾರಾಟ ಮಾಡ್ತಿದ್ದಾನೆ. ಚಾಣಕ್ಯ ಹೇಳ್ತಾರೆ: “ಯಾರು ಇತರರನ್ನು ಸಂತೋಷಪಡಿಸಲು ಅತಿಯಾಗಿ ಪ್ರಯತ್ನಿಸುತ್ತಾರೋ, ಅವರ ಉದ್ದೇಶ ಶುದ್ಧವಿರೋದಿಲ್ಲ.”

3. “ನಾನು ಬೇರೆ ಗಂಡಸರಂತಲ್ಲ” ಅನ್ನೋ ಡೈಲಾಗ್

ಇದು ಕ್ಲಾಸಿಕ್ ಟ್ರಿಕ್. “ನಿನ್ನನ್ನು ಎಷ್ಟು ಜನ ನೋಯಿಸಿದ್ದಾರೆ ಗೊತ್ತಾ?” “ನೀನು ಇನ್ನೂ ಉತ್ತಮ ವ್ಯಕ್ತಿಗೆ ಅರ್ಹಳು” “ನಾನು ಅಂಥವನು ಅಲ್ಲ…” ಎಂದೆಲ್ಲಾ ಹೇಳುವವನು, ಅವನು ಇತರ ಗಂಡಸರೊಂದಿಗೆ ಸ್ಪರ್ಧೆ ಮಾಡೋದಿಲ್ಲ, ಅವನು ನಿಮ್ಮ ನೋವಿನ ಜೊತೆ ಸ್ಪರ್ಧೆ ಮಾಡ್ತಾನೆ. ನಿಮ್ಮ ದೌರ್ಬಲ್ಯಗಳನ್ನು ತಿಳಿದುಕೊಳ್ಳಲು ಕಾಳಜಿ ತೋರಿಸುತ್ತಾನೆ. ಅರ್ಥ ಮಾಡಿಕೊಳ್ಳಲು ಅಲ್ಲ, ಬಳಸಿಕೊಳ್ಳಲು ಯತ್ನಿಸ್ತಾನೆ. “ಅತಿಯಾಗಿ ಹೊಗಳುವವನು, ನಿಮ್ಮ ಮನಸ್ಸನ್ನು ನಿಯಂತ್ರಿಸಲು ಬಯಸುತ್ತಾನೆ” ಎಂಬುದು ಚಾಣಕ್ಯನ ಎಚ್ಚರಿಕೆ.

4. ತನಗಾಗಿ ಮಾತ್ರ ಕೇಳ್ತಾನೆ

ಅವನು ನಿಮ್ಮ ಮಾತು ಕೇಳ್ತಾನೆ. ನಿಮ್ಮ ಇಷ್ಟ, ನಿಮ್ಮ ಕಥೆ, ನಿಮ್ಮ ಕಾಫಿ ಕುಡಿಯೋ ಸ್ಟೈಲ್ ಎಲ್ಲವೂ ಗೊತ್ತು. ನಿಮಗೆ “ಇವನು ನನ್ನನ್ನು ತುಂಬಾ ಅರ್ಥಮಾಡಿಕೊಂಡಿದ್ದಾನೆ” ಅನಿಸಬಹುದು. ಆದರೆ ಗಮನಿಸಿ- ಆಳವಾದ ಪ್ರಶ್ನೆ ಕೇಳಿದಾಗ ಅವನು ಉತ್ತರ ಕೊಡ್ತಾನಾ? ಅಥವಾ ಮಾತನ್ನು ಮತ್ತೆ ತನ್ನ ಬಗ್ಗೆ ತಿರುಗಿಸ್ತಾನಾ? ಇದು ಕೇಳುವಿಕೆ ಅಲ್ಲ. ಇದು ಸ್ವಾರ್ಥದ ಗಮನ. ಚಾಣಕ್ಯ ಹೇಳ್ತಾರೆ: “ಕೆಲವರು ಅರ್ಥಮಾಡಿಕೊಳ್ಳಲು ಕೇಳೋದಿಲ್ಲ, ಮಾತನಾಡಲು ಕೇಳುತ್ತಾರೆ.”

5. ಒಮ್ಮೆ ‘ಇಲ್ಲ’ ಎಂದು ಹೇಳಿ ನೋಡಿ

ಇದು ಅತ್ಯಂತ ಕಠಿಣ ಪರೀಕ್ಷೆ. ತಕ್ಷಣ ಮೆಸೇಜ್‌ಗೆ ಉತ್ತರಿಸಬೇಡಿ. ಎಲ್ಲಕ್ಕೂ ‘ಹೌದು’ ಎನ್ನಬೇಡಿ. ನಿಮ್ಮ ಸಮಯ ಬದಲಾಯಿಸಿಕೊಳ್ಳಬೇಡಿ. ಒಮ್ಮೆ ಶಾಂತವಾಗಿ, ದೃಢವಾಗಿ ‘ಇಲ್ಲ’ ಎಂದು ಹೇಳಿ. ಆ ಕ್ಷಣದಲ್ಲಿ ಅವನ ಧ್ವನಿ ಬದಲಾಗುತ್ತದಾ? ಅವನ ನಗು ಕಳೆದುಹೋಗುತ್ತದಾ? ಗೊಂದಲ, ಕೋಪ, ಬೇಸರ ಕಾಣುತ್ತದಾ? ಅಷ್ಟೇ. ಅದು ಅವನ ನಿಜ ಮುಖ. “ಮನುಷ್ಯನ ಸ್ವಭಾವ ಸೌಲಭ್ಯವಿರುವಾಗಲಲ್ಲ, ನಿರಾಕರಣೆಯಲ್ಲಿ ಹೊರಬರುತ್ತದೆ.”

ನಿಮಗಿವು ಗೊತ್ತಿರಲಿ

ಬಹುತೇಕ ಜನ ಪ್ರೀತಿಯನ್ನು ನಾಟಕವನ್ನಾಗಿ ಮಾಡಿಕೊಂಡಿದ್ದಾರೆ. ನಿಮ್ಮ ಮನಸ್ಸು ಅವರ ವೇದಿಕೆ. ಹೆಣ್ಣುಮಕ್ಕಳು ಈ ಎಲ್ಲ ಸೂಚನೆಗಳನ್ನು ಮೊದಲೇ ಅನುಭವಿಸುತ್ತಾರೆ. ಆದರೆ ಕಥೆ ಚೆನ್ನಾಗಿದೆ ಅಂತ ಅವನ್ನೆಲ್ಲಾ ಕಡೆಗಣಿಸುತ್ತಾರೆ. ಆದರೆ ಸತ್ಯ ತಪ್ಪಿಸಿಕೊಳ್ಳುವುದಿಲ್ಲ. ಸತ್ಯ ಹೊರಬರುವುದು ಹೂವಿನ ಬೊಕೆ, ಸಿಹಿ ಮಾತು, Instagram ಫೋಟೋಗಳಲ್ಲಿ ಅಲ್ಲ. ಮೌನದಲ್ಲಿ, ತಾಳ್ಮೆ ಕಳೆದುಕೊಂಡ ಕ್ಷಣದಲ್ಲಿ, ಸಣ್ಣ ಸ್ವಭಾವದ ದ್ರೋಹಗಳಲ್ಲಿ ಸತ್ಯ ಹೊರಬರುತ್ತದೆ. ಕಾಣಿಸಿಕೊಳ್ಳುವ ಪ್ರೀತಿ ಅಲ್ಲ, ತೋರಿಸುವ ಸ್ವಭಾವವೇ ನಿಜ ಎಂದು ಚಾಣಕ್ಯ ಹೇಳ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುರುಷರು ಯಾವ ವಯಸ್ಸಿನಲ್ಲಿ ತಂದೆಯಾಗುವುದು ಸೂಕ್ತ? ಇಲ್ಲಿದೆ ನೋಡಿ ಎಲ್ಲೂ ಸಿಗದ ಮಾಹಿತಿ!
ಪತಿಯೊಂದಿಗೆ ಮುಂಬೈನಲ್ಲಿ ಪ್ರತ್ಯಕ್ಷರಾದ ಸಮಂತಾ.. ಮದುವೆ ಬಳಿಕ ಸಿಂಗಲ್ ಸುತ್ತಾಟದಿಂದ ದೂರ!