
ಮನೆಯ ಬಳಿಯೇ ಆಡುತ್ತಿದ್ದ ಇಬ್ಬರು ಗಂಡುಮಕ್ಕಳು ಏಕಾಏಕಿ ನಾಪತ್ತೆ... ಬಹುತೇಕ ಪ್ರಕರಣಗಳಂತೆ, ಒಂದಿಷ್ಟು ಹುಡುಕಿದಂತೆ ಮಾಡಿ 'ನಿಮ್ಮ ಮಕ್ಕಳು ಸಿಗುತ್ತಿಲ್ಲ, ನಾವೇನೂ ಮಾಡಲು ಸಾಧ್ಯವಿಲ್ಲ' ಎಂದ ಪೊಲೀಸರು... ನಮ್ಮಂಥ ಸಾಮಾನ್ಯ ಜನರು ಪೊಲೀಸ್ ಠಾಣೆ ಮೆಟ್ಟಿಲೇರಿದರೆ ಸಿಗುವ ಉತ್ತವೇ ಇಷ್ಟು, ನಮ್ಮ ಹಣೆಬರಹವೇ ಇಷ್ಟು ಎಂದು ಗೋಳೋ ಎಂದು ಪೊಲೀಸರನ್ನು ನಂಬಿ ಕುಳಿತುಕೊಳ್ಳದೇ ಮಕ್ಕಳನ್ನು ತಾವೇ ಹುಡುಕುವ ಪಣ ತೊಟ್ಟು ಭಿಕ್ಷುರಾಗಿ ಊರೂರು ಸುತ್ತಿದ ಅಪ್ಪ-ಅಮ್ಮ... ಕೊನೆಗೆ ಆಗಿದ್ದೆಲ್ಲವೂ ರೋಚಕ. ಸಿನಿಮಾ ಸ್ಟೋರಿಯನ್ನೂ ಮೀರಿಸುವ ರಿಯಲ್ ಹೀರೋ ಈ ಅಪ್ಪ-ಅಮ್ಮನ ಸ್ಟೋರಿ ಈಗ ವೈರಲ್ ಆಗಿದ್ದು, ಇನ್ನು ಮುಂದೆ ಇದು ಸಿನಿಮಾ ಆದರೂ ಅಚ್ಚರಿಯೇನಿಲ್ಲ.
ಇಂಥದ್ದೊಂದು ಘಟನೆ ನಡೆದಿರುವುದು, ಗುಜರಾತಿನಲ್ಲಿ. ಬಿಹಾರದ ದಂಪತಿ ಇಲ್ಲಿ ಕೆಲಸ ಸಮಾಡುತ್ತಿದ್ದರು. ಕಳೆದ ಜನವರಿ ತಿಂಗಳಿನಲ್ಲಿ ಮನೆಯ ಬಳಿ ಆಡುತ್ತಿದ್ದ ಇಬ್ಬರು ಚಿಕ್ಕ ಗಂಡು ಮಕ್ಕಳು ನಾಪತ್ತೆಯಾಗಿಬಿಟ್ಟರು. ಅಪ್ಪ-ಅಮ್ಮ ಅವರನ್ನು ಹುಡುಕಲು ತೀವ್ರವಾಗಿ ಪ್ರಯತ್ನಿಸಿದರು, ಆದರೆ ಅವರಿಗೆ ಸಾಧ್ಯವಾಗಲಿಲ್ಲ. ಪೊಲೀಸರಿಗೂ ಅವರಿಬ್ಬರೂ ಸಿಗಲಿಲ್ಲ. ನಂತರ ಪೋಷಕರು ಭಿಕ್ಷುಕರ ವೇಷ ಧರಿಸಿ ತಮ್ಮ ಗಂಡು ಮಕ್ಕಳನ್ನು ಹುಡುಕಲು ದೇಶಾದ್ಯಂತ ಪ್ರಯಾಣಿಸಲು ನಿರ್ಧರಿಸಿದರು. ತಮಗೆ ಇದ್ದ ಚಿಕ್ಕ ಉದ್ಯೋಗವನ್ನೂ ಬಿಟ್ಟು, ಮಕ್ಕಳು ಎಲ್ಲಿಯಾದರೂ ಸಿಕ್ಕೇ ಸಿಗುತ್ತಾರೆ ಎನ್ನುವ ಅದಮ್ಯ ಆಸೆಯಿಂದ ಅವರು ಭಿಕ್ಷುರಾಗಿ ಊರೂರು ಸುತ್ತಿದರು. ತಮ್ಮ ಮಕ್ಕಳನ್ನು ಭಿಕ್ಷಾಟನೆಗೆ ಯಾರಾದರೂ ತಳ್ಳಿರುತ್ತಾರೆ ಎನ್ನುವ ಅನಿಸಿಕೆ ಅವರದ್ದು. ಆದ್ದರಿಂದ ಛಲ ಬಿಡದೇ ಅಪ್ಪ-ಅಮ್ಮ ಭಿಕ್ಷೆ ಬೇಡುತ್ತಲೇ ಊರೂರು ಸುತ್ತಿದರು.
ಅಷ್ಟಕ್ಕೂ ಎಷ್ಟೋ ಅಪ್ಪ-ಅಮ್ಮ ತಮ್ಮ ಮಕ್ಕಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಎಷ್ಟೇ ವೆಚ್ಚವಾದರೂ ಸರಿ, ಯಾವ ವೇಷ ತೊಡಬೇಕಾದರೂ ಸರಿ.ಅದನ್ನೇ ಈ ಅಪ್ಪ-ಅಮ್ಮ ಮಾಡಿದರು. ಬಿಹಾರದ ಒಂದು ಕುಟುಂಬವು ಕೆಲಸ ಹುಡುಕುತ್ತಾ ಗುಜರಾತ್‌ಗೆ ಬಂದಿತ್ತು. ಕುಟುಂಬವು ಗಂಡ, ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಒಳಗೊಂಡಿದೆ. ಹಿರಿಯ ಮಗ ರಾಹುಲ್ (14) ಮತ್ತು ಕಿರಿಯ ಮಗ ಅರ್ಪಿತ್ (11). ಜನವರಿ 15 ರಂದು ರಾಹುಲ್ ಮತ್ತು ಅರ್ಪಿತ್ ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದರು. ಅವರು ಮತ್ತೆ ಹಿಂತಿರುಗಲಿಲ್ಲ. ದಂಪತಿ ಅವರನ್ನು ತೀವ್ರವಾಗಿ ಹುಡುಕಿದರು.
ತಮ್ಮ ಪುತ್ರರು ಎಲ್ಲಿದ್ದಾರೆ ಎಂದು ನೆರೆಹೊರೆಯವರು ಮತ್ತು ಸ್ನೇಹಿತರಲ್ಲಿ ವಿಚಾರಿಸಿದರು, ಆದರೆ ನಿರಾಶೆಗೊಂಡರು. ನಂತರ ಅವರು ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಮಕ್ಕಳಿಗಾಗಿ ಹುಡುಕಾಟ ನಡೆಸಿದರು, ಆದರೆ ಅವರು ಎಲ್ಲಿಯೂ ಪತ್ತೆಯಾಗಲಿಲ್ಲ. ಪೋಷಕರು ಅವರಿಗಾಗಿ ಹುಡುಕಾಟ ಮುಂದುವರೆಸಿದರು. ಮೂರು ತಿಂಗಳುಗಳು ಕಳೆದವು, ಮತ್ತು ಅವರ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ. ಭಿಕ್ಷುಕರ ಗುಂಪೊಂದು ತಮ್ಮ ಪುತ್ರರನ್ನು ಅಪಹರಿಸಿದೆ ಎಂದು ಪೋಷಕರು ಅನುಮಾನಿಸಿದರು. ಆದ್ದರಿಂದ, ಏನೇ ಆದರೂ ಅವರನ್ನು ಸ್ವತಃ ಹುಡುಕಲು ಅವರು ನಿರ್ಧರಿಸಿದರು.
ದಂಪತಿ ತಮ್ಮ ಕೆಲಸವನ್ನು ಬಿಟ್ಟು ಭಿಕ್ಷುಕರಾದರು. ಅವರು ಗುಜರಾತ್, ಮಹಾರಾಷ್ಟ್ರ, ಗೋವಾ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಹಗಲು ರಾತ್ರಿ ಅಲೆದಾಡಿದರು. ಮಕ್ಕಳ ಬಗ್ಗೆ ಎಲ್ಲಿಂದಲಾದರೂ ಏನಾದರೂ ಮಾಹಿತಿ ಸಿಗುತ್ತದೆ ಎಂಬ ಭರವಸೆ ಇತ್ತು. ನಂತರ ಅವರ ಹಿರಿಯ ಮಗ ಬಿಹಾರದ ಭಿಕ್ಷುಕರ ಗುಂಪಿನೊಂದಿಗೆ ಕಾಣಿಸಿಕೊಂಡ. ಅವನು ಭಿಕ್ಷೆ ಬೇಡುತ್ತಿದ್ದ. ಬಾಲಕನ ಫೋಟೋ ತೋರಿಸಿದಾಗ, ಯಾರೋ ಈ ವಿಷಯವನ್ನು ಅಪ್ಪ-ಅಮ್ಮನಿಗೆ ತಿಳಿಸಿದರು. ಅವರು, ತಕ್ಷಣ ಭಾಗಲ್ಪುರ ತಲುಪಿದರು. ಆದರೆ, ಅ ವೇಳೆಗಾಗಲೇ ಅವನು ಅಲ್ಲಿಂದ ಓಡಿಹೋಗಿದ್ದ. ದಂಪತಿ ಭಿಕ್ಷುಕರ ವೇಷದಲ್ಲಿರುವ ಮಕ್ಕಳನ್ನು ಹುಡುಕುತ್ತಲೇ ಇದ್ದರು. ಕೊನೆಗೆ ಆತ ಬಿಕಾನೇರ್‌ನಲ್ಲಿ ಭಿಕ್ಷೆ ಬೇಡುತ್ತಿರುವುದನ್ನು ಕಂಡುಕೊಂಡರು. ಆತನನ್ನು ತಮ್ಮ ಬಳಿಗೆ ಕರೆದುಕೊಂಡು ಬಂದರು.
ನಂತರ ಅವರ ಕಿರಿಯ ಮಗನಿಗಾಗಿ ಹುಡುಕಾಟ ನಡೆಯಿತು. ಮತ್ತೆ ಊರೂರು ಸುತ್ತಿದರು. ಕೊನೆಗೆ, 15 ದಿನಗಳ ನಂತರ ಅವರು ಕಿರಿಯ ಮಗನನ್ನು ಪಶ್ಚಿಮ ಬಂಗಾಳದ ಹೌರಾದಲ್ಲಿ ಭಿಕ್ಷೆ ಬೇಡುತ್ತಿರುವುದನ್ನು ಕಂಡರು. ಹೀಗೆ ಅಪ್ಪ-ಅಮ್ಮನ ಶ್ರದ್ಧೆಯಿಂದ ಮಕ್ಕಳು ಸಿಕ್ಕರು. ಬಹುಶಃ ಯಾವ ಸಿನಿಮಾದಲ್ಲಿಯೂ ಇಂಥ ರೋಚಕ ಸ್ಟೋರಿ ಕಾಣಲು ಸಾಧ್ಯವಿಲ್ಲ. ಒಂದೊಮ್ಮೆ ಇಂಥ ಸಿನಿಮಾ ಬಂದರೂ, ಇದು ನಿಜ ಜೀವನದಲ್ಲಿ ಆಗಲ್ಲ ಬಿಡಿ ಎನ್ನುವವರೇ ಎಲ್ಲಾ. ಆದರೆ ಮಕ್ಕಳಿಗಾಗಿ ಅಪ್ಪ-ಅಮ್ಮ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಯಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.