ಆ್ಯಟಿಟ್ಯೂಡ್ ಸರಿಯಿದ್ದರೆ ನೀವು ಪ್ರೀತಿಪಾತ್ರರಿಂದ ದೇಶ ಬಿಟ್ಟು ದೂರವಿದ್ರೂ ಮನಸ್ಸಿನಿಂದ ಹತ್ತಿರವಾಗಿರಬಹುದು. ಆದರೆ, ನಿಮ್ಮ ಆ್ಯಟಿಟ್ಯೂಡ್ ಸರಿಯಿಲ್ಲವಾದ್ರೆ ಹತ್ತಿರವಿದ್ರೂ ಪ್ರೀತಿಪಾತ್ರರು ದೂರಾಗತೊಡಗುತ್ತಾರೆ.
ದೈಹಿಕವಾಗಿ ದೂರವಿದ್ದ ಮಾತ್ರಕ್ಕೆ ನಿಮ್ಮ ಪ್ರೇಮಿಯಿಂದ ನೀವು ದೂರವಿದ್ದೀರೆಂದಲ್ಲ. ಕೆಲವೊಮ್ಮೆ ಅವರು ನಿಮ್ಮ ಪಕ್ಕದಲ್ಲೇ ಇದ್ದರೂ ಅವರಲ್ಲಿಲ್ಲ ಎನಿಸತೊಡಗುತ್ತದೆ. ಸಂಬಂಧವು ಪ್ರೀತಿ, ನಿಮ್ಮ ನಡುವಳಿಕೆ, ಮಾತುಕತೆ, ಉದ್ದೇಶ ಎಲ್ಲದನ್ನು ಅವಲಂಬಿಸಿ ಬೆಳೆಯುತ್ತದೆ.
ಮನುಷ್ಯರು ಸಾಮಾಜಿಕ ಜೀವಿಗಳು. ಆದ್ದರಿಂದ ಕೇವಲ ಸೈಕಾಲಜಿಕಲ್ ಸಮಸ್ಯೆಗಳು ಮಾತ್ರ ನಿಮ್ಮನ್ನು ಇತರರಿಂದ ದೂರ ಉಳಿಯುವಂತೆ ಮಾಡುವುದು. ಯಾರಾದರೂ ನಿರಂತರವಾಗಿ ಇತರೆ ಜನರೊಂದಿಗೆ ಇರಲು, ಬೆರೆಯಲು ನಿರಾಕರಿಸುತ್ತಿದ್ದಾರೆಂದರೆ ಅವರು ಮನೋರೋಗಗಳಿಂದ ಬಳಲುತ್ತಿರಬಹುದು. ಇದಲ್ಲದೆ, ಕೆಲ ಆ್ಯಟಿಟ್ಯೂಡ್‌ಗಳು ಕೂಡಾ ನಿಮ್ಮನ್ನು ಜನರಿಂದ ದೂರವಿಡುತ್ತಿರಬಹುದು. ಅವು ಕಾಯಿಲೆಗಳಲ್ಲವಾದರೂ ನಿಮ್ಮ ಸಂಬಂಧಕ್ಕೆ ಅವುಗಳಿಂದ ಹಾನಿಯಾಗುತ್ತಿದೆ ಎಂಬುದನ್ನು ಗಮನಿಸಬೇಕು. ಹಾಗಾಗಿಯೇ ನಿಮ್ಮ ಆ್ಯಟಿಟ್ಯೂಡ್ ವಿಷಯದಲ್ಲಿ ಬಹಳಷ್ಟು ಕೇರ್‌ಫುಲ್ ಆಗಿರಬೇಕು.
ಏಕೆಂದರೆ, ಸರಿಯಾದ ಆ್ಯಟಿಟ್ಯೂಡ್ ನಿಮ್ಮಿಬ್ಬರನ್ನೂ ಎಷ್ಟು ಹತ್ತಿರಕ್ಕೆ ತರುತ್ತದೋ, ಅದೇ ಆ್ಯಟಿಟ್ಯೂಡ್ ತಪ್ಪಾಗಿದ್ದರೆ ನಿಮ್ಮಿಬ್ಬರನ್ನೂ ದೂರವಾಗಿಸುತ್ತದೆ. ಕೇವಲ ಪ್ರೇಮಿಗಳ ವಿಷಯಕ್ಕಲ್ಲ, ಈ ಕೆಲವು ಆ್ಯಟಿಟ್ಯೂಡ್ ಇದ್ದರೆ ಯಾರೂ ಕೂಡಾ ನಿಮ್ಮ ಜೊತೆಗಿರಲು ಇಷ್ಟ ಪಡುವುದಿಲ್ಲ. ಹಾಗಾಗಿ, ಇಂಥ ಆ್ಯಟಿಟ್ಯೂಡ್ ನೀವು ಹೊಂದಿದ್ದೀರಾ ಎಂಬುದನ್ನು ಪರಾಂಬರಿಸಿಕೊಳ್ಳಿ.
undefined
ಒತ್ತಡ ನಿಭಾಯಿಸೋದು ಕಲಿತರೆ ಯಶಸ್ಸು ಶತಃಸಿದ್ಧ
ಸ್ವಾರ್ಥ
ನೀವು ಕೇವಲ ನಿಮ್ಮ ಇಷ್ಟ, ಲಾಭ, ಸಂತೋಷ, ನೆಮ್ಮದಿಗೆ ಮಾತ್ರ ಅತಿಯಾಗಿ ಗಮನ ಕೊಟ್ಟು ಜೊತೆಗಿರುವವರ ಬೇಕುಬೇಡಗಳನ್ನು, ಆಸೆಆಸಕ್ತಿಗಳನ್ನು ವಿಚಾರಿಸದಿದ್ದರೆ ಅವರು ಏತಕ್ಕಾಗಿ ನಿಮ್ಮೊಬ್ಬರ ಸಂತೋಷಕ್ಕಾಗಿ ನಿಮ್ಮ ಜೊತೆಗಿರುತ್ತಾರೆ? ಇನ್ನೊಬ್ಬರ ಯಾವೊಂದು ವಿಷಯವೂ ನಿಮಗೆ ದೊಡ್ಡದೆನಿಸುವುದಿಲ್ಲ. ಆದರೆ ನಿಮ್ಮದು ಮಾತ್ರ ಎಲ್ಲವೂ ದೊಡ್ಡ ವಿಷಯಗಳೇ ಆಗುತ್ತಿದ್ದಲ್ಲಿ ನೀವು ಬಹಳ ಸ್ವಾರ್ಥದಿಂದ ಕೂಡಿದ್ದೀರಿ ಎಂದರ್ಥ. ನೀವು ಮತ್ತೊಬ್ಬರ ಸಮಸ್ಯೆಗಳ ಬಗ್ಗೆ ಯೋಚಿಸುವುದಿಲ್ಲ. ಆದರೆ ಅವರು ನಿಮ್ಮ ಸಮಸ್ಯೆಗಳನ್ನು ಕೇಳಬೇಕೆಂದು, ಪರಿಹರಿಸಬೇಕೆಂದು ಬಯಸುತ್ತೀರಿ. ಆದರೆ, ಸಂಬಂಧದಲ್ಲಿ ಗೌರವದಿಂದ ಹಿಡಿದು ಪ್ರೀತಿಯ ತನಕ ಎಲ್ಲವನ್ನೂ ಪರಸ್ಪರ ಕೊಟ್ಟು ಪಡೆಯಬೇಕು.
ದೌರ್ಜನ್ಯ
ದೌರ್ಜನ್ಯವೆಂದರೆ ನಿರಂತರವಾಗಿ ಮತ್ತೊಬ್ಬರಿಗೆ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡುವುದು. ಇನ್ನೊಬ್ಬರನ್ನು ವಸ್ತುವಿನಂತೆ ನೋಡುವುದು. ಕೆಲವರಿಗೆ ಹಾಗೆನಿಸುತ್ತದೆ, ಯಾರಾದರೂ ಹತ್ತಿರಾದರೆಂದರೆ ಅವರ ಮೇಲೆ ತಾನು ಅಧಿಕಾರ ಚಲಾಯಿಸಬಹುದೆಂದು. ಅಥವಾ ಅವರು ತಾನು ಹೇಳಿದಂತೆಯೇ ಕೇಳಬೇಕು, ತಾನು ಹೊಡೆದರೂ ಹೊಡೆಸಿಕೊಳ್ಳಬೇಕು, ಬೈದರೆ ಬೈಸಿಕೊಳ್ಳಬೇಕು ಎಂದು. ಹಾಗಿದ್ದರೂ ಅವರು ಬಿಟ್ಟು ಹೋಗುತ್ತಾರೆಂದಾಗ ಪ್ರೀತಿಯ ಕಾರಣಕ್ಕಾಗಿ ತಾನು ಹಾಗೆ ಮಾಡಿದೆನೆಂದು ಹೇಳುವುದು... ಆದರೆ, ಇದರಿಂದ ಮತ್ತೊಬ್ಬ ವ್ಯಕ್ತಿ ಕೆಲ ಕಾಲ ಸಹಿಸಿಕೊಂಡು ಜೊತೆಗಿರಬಹುದೇ ಹೊರತು ನಿರಂತರವಾಗಿ ಇಂಥವರೊಂದಿಗೆ ಬದುಕಲು ಸಾಧ್ಯವಿಲ್ಲ. ಹಾಗಾಗಿ, ಇಂಥವರಿಂದ ಮಾನಸಿಕವಾಗಿ, ದೈಹಿಕವಾಗಿ ಅವರು ದೂರವಿರಲು ಆರಂಭಿಸುತ್ತಾರೆ. ಇಂಥವರೊಂದಿಗೆ ಆರೋಗ್ಯಕರ ಸಂಬಂಧ ಹೊಂದಲು ಯಾರಿಂದಲೂ ಸಾಧ್ಯವಿಲ್ಲ.
ನಿಂದನೆ
ಇದೂ ಕೂಡಾ ದೌರ್ಜನ್ಯದ ಭಾಗವೇ. ಆದರೆ ಇದು ವಿವಿಧ ರೂಪ ತೆಗೆದುಕೊಳ್ಳಬಹುದು. ಪ್ರತಿ ಮಾತಿನಲ್ಲೂ ವ್ಯಂಗ್ಯ, ಅಥವಾ ಹಾಸ್ಯ ಮಾಡಿದಂತೆ, ತಮಾಷೆಯಾಗಿ ಮಾಡಿದಂತೆ ಮಾತಾಡುತ್ತಾ ಅದರಲ್ಲಿ ಟಾಂಟ್ ನೀುವುದು, ಮತ್ತೊಬ್ಬರನ್ನು ನೋಯಿಸುವ ಉದ್ದೇಶದಿಂದಲೇ ಮಾತನಾಡುವುದು, ಅವರ ಪ್ರತಿ ಕೆಲಸ ಕಾರ್ಯಗಳನ್ನು ತೆಗಳುವುದು, ಅವರ ರೂಪ, ಬುದ್ದಿಮತ್ತೆಯನ್ನು ಆಡಿಕೊಳ್ಳುವುದು ನಿಂದನೆ ಎನಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಇಂಥ ಸ್ವಭಾವದವರೊಡನೆ ಯಾರೂ ಕೂಡಾ ಇರಲು ಇಷ್ಟಪಡುವುದಿಲ್ಲ. ಇವರಿಗೆ ತಾನು ಮೇಲೆಂಬ ಮೇಲರಿಮೆ ಇರುತ್ತದೆ. ಈ ಮೇಲರಿಮೆ ಇರುವವರೊಡನೆ ವ್ಯವಹರಿಸಲು ಜನರು ಇಷ್ಟಪಡುವುದಿಲ್ಲ.
ಮದುವೆಯಾದರೆ ಅಮ್ಮನ ಬೈಗುಳ ಅರ್ಥವಾಗುತ್ತೆ
ಸುಳ್ಳು
ಇದು ಜನರಿಂದ ನಿಮ್ಮನ್ನು ದೂರವಿಡುವ ಬಹಳ ಸಾಮಾನ್ಯ ಗುಣ. ಕೆಲವೊಮ್ಮೆಸುಳ್ಳುಗಳು ಅಪಾಯಕಾರಿಯಲ್ಲದಿರಬಹುದು. ಆದರೆ, ನೀವು ಮತ್ತೆ ಮತ್ತೆ ಸುಳ್ಳು ಹೇಳುವುದನ್ನು ಕೇಳುವಾಗ ಯಾರೊಬ್ಬರಿಗೆ ಕೂಡಾ ನಿಮ್ಮ ಮೇಲೆ ನಂಬಿಕೆ ಇಡಲು ಸಾಧ್ಯವಾಗುವುದಿಲ್ಲ. ನಂಬಿಕೆ ಇಡಲಾಗದ ವ್ಯಕ್ತಿಯೊಡನೆ ಸ್ನೇಹ, ಪ್ರೀತಿ ಬೆಳೆಸಲು ಯಾರೂ ಇಷ್ಟ ಪಡುವುದಿಲ್ಲ. ಸತ್ಯವನ್ನು ಮುಚ್ಚಿಡುವುದು ಅಥವಾ ಹೊಸಕತೆ ಕಟ್ಟುವುದು ಕೂಡಾ ಸುಳ್ಳು ಎಂದೇ ಎನಿಸಿಕೊಳ್ಳುತ್ತದೆ.
ಸಂತ್ರಸ್ತ
ತಮ್ಮನ್ನು ತಾವು ಸದಾ ಸಂತ್ರಸ್ತರಂತೆ ಬಿಂಬಿಸಿಕೊಳ್ಳುವವರೊಂದಿಗೆ ಬದುಕಲು ಯಾರಿಗೂ ಇಷ್ಟವಾಗುವುದಿಲ್ಲ. ಕೆಲವೊಮ್ಮೆ ಇದರಿಂದ ನಿಮಗೆ ಸಿಂಪತಿ ಸಿಗಬಹುದು. ಆದರೆ ಪ್ರತಿ ಬಾರಿ ನಿಮಗೇ ಎಲ್ಲ ಮೋಸ, ಕಷ್ಟ ಆಗುತ್ತಿವೆ ಎಂಬಂತೆ ಬಿಂಬಿಸಿಕೊಂಡರೆ ಅದು ನಿಮ್ಮನ್ನು ರೋಗಗ್ರಸ್ತರಂತೆ ಭಾಸವಾಗುವಂತೆ ಮಾಡುವ ಜೊತೆಗೆ, ಎದುರಿನವರು ವಿನಾಕಾರಣ ಪಸ್ಚಾತ್ತಾಪ ಅನುಭವಿಸುವಂತಾಗುತ್ತದೆ. ಈ ರೀತಿಯ ಆ್ಯಟಿಟ್ಯೂಡ್ ನಿಮಗೆ ನಿಮ್ಮ ಭಾವನೆಗಳ ಮೇಲೆ, ಬದುಕಿನ ಮೇಲೆ ನಿಯಂತ್ರಣವಿಲ್ಲ ಎಂಬುದನ್ನು ತೋರಿಸುತ್ತದೆ. ಅಷ್ಟೇ ಅಲ್ಲ, ನಿಮ್ಮ ಯೋಚನಾಲಹರಿ ಹಳಿ ತಪ್ಪಿರುವುದರಿಂದ ನೀವು ಯಾವುದನ್ನೂ ಇದ್ದಂತೆಯೇ ಕಾಣಲಾರಿರಿ. ನಿಮ್ಮ ಅಸಂತೋಷಗಳಿಗೆಲ್ಲ ಇನ್ನೊಬ್ಬರನ್ನು ಹೊಣೆ ಮಾಡುವ ಬುದ್ಧಿ ಯಾರಿಗೂ ಸಹ್ಯವೆನಿಸುವುದಿಲ್ಲ.
ನಮ್ಮ ಸುತ್ತ ಇರೋರನ್ನು ಸಂತೋಷವಾಗಿಡೋದು ಹೇಗೆ?