
ಅಹಮದಾಬಾದ್ (ಏ.21): ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಡಿಎನ್‌ಎ (DNA) ಪರೀಕ್ಷೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ನಗರದಲ್ಲಿ ಪ್ರತಿ ವರ್ಷ ಸುಮಾರು 550 ಡಿಎನ್‌ಎ ಪರೀಕ್ಷೆಗಳು ನಡೆಯುತ್ತಿದ್ದು, ಇದರಲ್ಲಿ ಬಹುತೇಕ ಪರೀಕ್ಷೆಗಳು ಮಗುವಿನ ಅಸಲಿ ತಂದೆ ಯಾರು? ಎಂಬುದನ್ನು ಖಚಿತಪಡಿಸಿಕೊಳ್ಳಲು ನಡೆಯುತ್ತಿರುವುದು ವಿಶೇಷ. ಗುಜರಾತ್ ಸಮಾಚಾರ್ ವರದಿಯ ಪ್ರಕಾರ, ಈ ಹಿಂದೆ ಕೇವಲ ವೈದ್ಯಕೀಯ ಕಾರಣಗಳಿಗಾಗಿ ನಡೆಯುತ್ತಿದ್ದ ಈ ಪರೀಕ್ಷೆಗಳು ಈಗ ವೈಯಕ್ತಿಕ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಬಳಕೆಯಾಗುತ್ತಿವೆ.
ಹಿಂದೆ ಅನುವಂಶೀಯ ಕಾಯಿಲೆಗಳನ್ನು ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಅನೇಕ ಪತಿ ಅಥವಾ ಕುಟುಂಬಸ್ಥರು 'ಮಾನಸಿಕ ಶಾಂತಿ'ಗಾಗಿ (Peace of Mind) ಮಗುವಿನ ಜೈವಿಕ ಸಂಬಂಧವನ್ನು ಖಚಿತಪಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ದಂಪತಿಗಳ ನಡುವಿನ ಹೆಚ್ಚುತ್ತಿರುವ ಅಪನಂಬಿಕೆಯೇ ಈ ಟ್ರೆಂಡ್‌ಗೆ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಗುವಿನಲ್ಲಿ ಥಲಸೇಮಿಯಾ ಅಥವಾ ಡೌನ್ ಸಿಂಡ್ರೋಮ್‌ನಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ಅಥವಾ ಮಗುವಿನ ದೈಹಿಕ ಲಕ್ಷಣಗಳು ಪೋಷಕರಿಗೆ ಹೋಲಿಕೆಯಾಗದಿದ್ದಾಗ ಅನುಮಾನಗಳು ಶುರುವಾಗುತ್ತಿವೆ. ಇದಲ್ಲದೆ, ವಿಚ್ಛೇದನ ಪ್ರಕರಣಗಳಲ್ಲಿ ಮಗುವಿನ ಪಾಲನೆ (Custody) ಮತ್ತು ಜೀವನಾಂಶದ ವಿವಾದಗಳು ಎದುರಾದಾಗ ಕಾನೂನುಬದ್ಧವಾಗಿ ಡಿಎನ್‌ಎ ಪರೀಕ್ಷೆಯ ಮೊರೆ ಹೋಗಲಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಸಿಲುಕಿರುವ ದಂಪತಿಗಳು ಹೆಚ್ಚಾಗಿ 30 ರಿಂದ 40 ವರ್ಷ ವಯಸ್ಸಿನವರಾಗಿದ್ದು, ಅವರ ಮಕ್ಕಳು 4 ರಿಂದ 10 ವರ್ಷದೊಳಗಿನವರಾಗಿರುತ್ತಾರೆ.
ನಗರದ ಖಾಸಗಿ ಲ್ಯಾಬ್‌ಗಳು ವರ್ಷಕ್ಕೆ ಸುಮಾರು 350 ಪಿತೃತ್ವ ಸಂಬಂಧಿತ ಪರೀಕ್ಷೆಗಳನ್ನು ನಡೆಸುತ್ತವೆ. ಇವುಗಳ ಫಲಿತಾಂಶದ ಪ್ರಕಾರ, ಶೇ. 60 ರಿಂದ 70 ರಷ್ಟು ಪ್ರಕರಣಗಳಲ್ಲಿ ಅನುಮಾನ ಪಟ್ಟ ತಂದೆಯೇ ಜೈವಿಕ ತಂದೆ ಎಂದು ಸಾಬೀತಾಗುತ್ತದೆ. ಆದರೆ ಉಳಿದ ಶೇ. 30 ರಿಂದ 40 ರಷ್ಟು ಪ್ರಕರಣಗಳಲ್ಲಿ ಫಲಿತಾಂಶವು ವ್ಯತಿರಿಕ್ತವಾಗಿರುತ್ತದೆ. ಇವುಗಳ ಜೊತೆಗೆ ಸರ್ಕಾರಿ ಲ್ಯಾಬ್‌ಗಳು ವರ್ಷಕ್ಕೆ ಸುಮಾರು 200 ವಿವಾದಿತ ಪ್ರಕರಣಗಳನ್ನು ನಿಭಾಯಿಸುತ್ತಿವೆ.
ಡಿಎನ್‌ಎ ಪರೀಕ್ಷೆಯು ಸಾಮಾನ್ಯ ಜನರಿಗೆ ಅಷ್ಟು ಸುಲಭವಲ್ಲ. ಒಂದು ಪರೀಕ್ಷೆಗೆ 12,000 ರಿಂದ 15,000 ರೂ. ವೆಚ್ಚವಾಗುತ್ತದೆ. ತಂದೆ ಮತ್ತು ಮಗುವಿನ ಡಿಎನ್‌ಎ ಪರೀಕ್ಷೆ ನಡೆಸಲು 25,000 ದಿಂದ 30,000 ರೂ. ಬೇಕಾಗುತ್ತದೆ. ಇನ್ನು ಐವಿಎಫ್ (IVF) ಅಥವಾ ಬಾಡಿಗೆ ತಾಯ್ತನದಂತಹ ಸಂಕೀರ್ಣ ಪ್ರಕರಣಗಳಲ್ಲಿ ಈ ವೆಚ್ಚ 50,000 ರೂ. ವರೆಗೂ ತಲುಪುತ್ತದೆ. ವೆಚ್ಚ ಕಡಿಮೆಯಿದ್ದರೆ ಇನ್ನೂ ಹೆಚ್ಚಿನ ಜನರು ಈ ಪರೀಕ್ಷೆಗೆ ಮುಂದಾಗುತ್ತಿದ್ದರು ಎನ್ನುತ್ತಾರೆ ತಜ್ಞರು.
ಈ ಟ್ರೆಂಡ್ ಕೇವಲ ಶ್ರೀಮಂತ ಅಥವಾ ನಗರದ ಕುಟುಂಬಗಳಿಗೆ ಸೀಮಿತವಾಗಿಲ್ಲ. ಗ್ರಾಮೀಣ ಭಾಗದ ಜನರು, ಕಾರ್ಮಿಕ ವರ್ಗದವರು ಮತ್ತು ಬೇರೆ ರಾಜ್ಯದ ಜನರೂ ಸಹ ಅಹಮದಾಬಾದ್‌ಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಇದು ಸಮಾಜದ ಎಲ್ಲಾ ಸ್ತರಗಳಲ್ಲಿಯೂ ಸಂಬಂಧಗಳ ಬಗ್ಗೆ ಅನುಮಾನ ಮೂಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಐವಿಎಫ್ ಚಿಕಿತ್ಸೆಯ ಸಮಯದಲ್ಲಿ ಭ್ರೂಣ ಬದಲಾವಣೆಯಾಗಿರಬಹುದು ಅಥವಾ ಬೇರೆಯವರ ವೀರ್ಯ ಬಳಸಲಾಗಿರಬಹುದು ಎಂಬ ಆತಂಕದಿಂದಲೂ ದಂಪತಿಗಳು ಪರೀಕ್ಷೆ ಮಾಡಿಸುತ್ತಿದ್ದಾರೆ. ಆದರೆ ಇಂತಹ ಶೇ. 90 ರಷ್ಟು ಪ್ರಕರಣಗಳಲ್ಲಿ ಪೋಷಕರ ಆತಂಕ ಸುಳ್ಳಾಗಿದ್ದು, ಅವರೇ ಜೈವಿಕ ಪೋಷಕರು ಎಂಬುದು ದೃಢಪಟ್ಟಿದೆ.
ವಿಜ್ಞಾನವು ಸತ್ಯವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆಯಾದರೂ, ಈ ಪರೀಕ್ಷೆಗಳು ಕುಟುಂಬಗಳ ಮೇಲೆ ಮಾನಸಿಕ ಒತ್ತಡವನ್ನು ಹೇರುತ್ತಿವೆ. ಈ ವಿವಾದಗಳ ಮಧ್ಯೆ ಮಕ್ಕಳು ಸಿಲುಕುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಆಧುನಿಕ ಸಮಾಜದಲ್ಲಿ ನಂಬಿಕೆ ಮತ್ತು ಸಂಬಂಧಗಳ ನಡುವಿನ ಬಿರುಕನ್ನು ಈ ಡಿಎನ್‌ಎ ಪರೀಕ್ಷೆಗಳ ಏರಿಕೆ ಎತ್ತಿ ತೋರಿಸುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.