ಮದುವೆಯ ಸಂಬಂಧವಿದೆ ಎಂಬ ಕಾರಣಕ್ಕೆ ಪತಿಯ ಆಧಾರ್ ದತ್ತಾಂಶವನ್ನು ಪತ್ನಿಯು ಏಕಾಏಕಿ ಪಡೆಯಲಾಗುವುದಿಲ್ಲ. ಕಾನೂನಿನ ಅನ್ವಯ ಖಾಸಗಿ ಹಕ್ಕುಗಳ ರಕ್ಷಣಾ ನಿಯಮಗಳನ್ನು ಪಾಲನೆ ಮಾಡಲೇಬೇಕಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮದುವೆಯ ಸಂಬಂಧವಿದೆ ಎಂಬ ಕಾರಣಕ್ಕೆ ಪತಿಯ ಆಧಾರ್ ದತ್ತಾಂಶವನ್ನು ಪತ್ನಿಯು ಏಕಾಏಕಿ ಪಡೆಯಲಾಗುವುದಿಲ್ಲ. ಕಾನೂನಿನ ಅನ್ವಯ ಖಾಸಗಿ ಹಕ್ಕುಗಳ ರಕ್ಷಣಾ ನಿಯಮಗಳನ್ನು ಪಾಲನೆ ಮಾಡಲೇಬೇಕಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವೈವಾಹಿಕ ವ್ಯಾಜ್ಯದಲ್ಲಿ ನ್ಯಾಯಾಲಯದ ಸೂಚನೆಯಂತೆ ಜೀವನಾಂಶ ಪಾವತಿಸಬೇಕಿದ್ದ ಪತಿ ಕಾಣೆಯಾಗಿರುವುದರಿಂದ ಆತ ಎಲ್ಲಿದ್ದಾರೆ ಎಂಬುದನ್ನು ತಿಳಿಯಲು ಆಧಾರ್ ಕಾರ್ಡ್ ದತ್ತಾಂಶವನ್ನು ಒದಗಿಸಬೇಕೆಂಬ ಮಹಿಳೆಯೊಬ್ಬರ (ಪತ್ನಿ) ಮನವಿ ಪರಿಗಣಿಸುವಂತೆ ಏಕ ಸದಸ್ಯ ನ್ಯಾಯಪೀಠ ನೀಡಿದ್ದ ನಿರ್ದೇಶನ ಪ್ರಶ್ನಿಸಿ ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮದುವೆಯಾಗಿರುವ ಕಾರಣಕ್ಕೆ ವೈಯಕ್ತಿಕವಾಗಿರುವ ಖಾಸಗಿ ಹಕ್ಕನ್ನು ಮೊಟಕುಗೊಳಿಸುವುದಿಲ್ಲ. ಆಧಾರ್ (ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಸಹಾಯಧನ ಮತ್ತು ಸೇವೆಗಳ ಗುರಿ ಕೇಂದ್ರಿತ ತಲುಪಿಸುವಿಕೆ) ಕಾಯ್ದೆ-2016ರ ಸೆಕ್ಷನ್ 33ರ ಅಡಿ ವೈಯಕ್ತಿಕ ಹಕ್ಕಿಗೆ ರಕ್ಷಣೆ ಇರುತ್ತದೆ. ಅದು ಆಧಾರ್ ಸಂಖ್ಯೆ ಹೊಂದಿರುವವರ ವ್ಯಕ್ತಿಯ ಗೌಪ್ಯತೆಯ ಹಕ್ಕಿನ ಸ್ವಾಯತ್ತೆಯನ್ನು ಸಂರಕ್ಷಿಸುತ್ತದೆ. ಹಾಗಾಗಿ, ಮದುವೆ ಸಂಬಂಧ ಇದೆ ಎಂಬ ಕಾರಣಕ್ಕಾಗಿ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಏಕಾಏಕಿ ಪಡೆಯಲು ಆಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಗಂಡನನ್ನು ಸ್ವೀಟ್ ಹಾರ್ಟ್ ಎಂದ್ಲು ವೈಟ್ರೆಸ್, ರಣಚಂಡಿಯಾದ್ಲು ಪಕ್ಕದಲ್ಲಿದ್ದ ಹೆಂಡ್ತಿ!
ಪ್ರಕರಣದ ವಿವರ:
ಹುಬ್ಬಳ್ಳಿಯ ಮಹಿಳೆಯು 2005ರಲ್ಲಿ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದು, ದಂಪತಿಗೆ ಹೆಣ್ಣು ಮಗುವಿದೆ. ಪತಿಯ ವಿರುದ್ಧ ಆಕೆ ದಾವೆ ಹೂಡಿದ್ದರು. ಅದರ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ಪತ್ನಿಗೆ ಮಾಸಿಕ 10,000 ರು. ಹಾಗೂ ಹೆಣ್ಣು ಮಗುವಿಗೆ 5,000 ರು. ಜೀವನಾಂಶ ನೀಡಲು ಆದೇಶಿಸಿತ್ತು. ಆದರೆ, ಜೀವನಾಂಶ ಪಾವತಿಸಬೇಕಿದ್ದ ಪತಿ ಕಾಣೆಯಾಗಿದ್ದರು. ಇದರಿಂದ ಪತಿ ಎಲ್ಲಿದ್ದಾನೆ ಎಂಬುದನ್ನು ಪತ್ತೆ ಮಾಡಬೇಕಾದ ಹಿನ್ನೆಲೆಯಲ್ಲಿ ಆತನ ಆಧಾರ್ ಕಾರ್ಡ್ ದತ್ತಾಂಶವನ್ನು ಆರ್‌ಟಿಐ ಕಾಯ್ದೆಯಡಿ ಪತ್ನಿ ಕೋರಿದ್ದರು.
ಆದರೆ, ಪತಿಯ ಆಧಾರ್ ಕಾರ್ಡ್ ದತ್ತಾಂಶವನ್ನು ಬಹಿರಂಗಪಡಿಸಲಾಗದು. ಅದನ್ನು ಆಧಾರ್ ಕಾಯ್ದೆ ಸೆಕ್ಷನ್ 33ರ ಅಡಿ ಹೈಕೋರ್ಟ್ ನಿರ್ಧರಿಸಬೇಕಾಗುತ್ತದೆ ಎಂದು ತಿಳಿಸಿದ್ದ ಯುಐಡಿಎಐ, ಪತ್ನಿಯ ಅರ್ಜಿಯನ್ನು 2021ರ ಫೆ.25ರಂದು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಕೆಯ ಮನವಿ ಪರಿಗಣಿಸುವಂತೆ ಯುಐಡಿಎಐಗೆ 2023ರ ಫೆ.8ರಂದು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಸೂಚಿಸಿತ್ತು.
ಬಾಯ್‌ಫ್ರೆಂಡ್ ಜತೆ ಮದ್ವೆಯಾಗು ಅಂತ ಹೆಂಡ್ತಿಯನ್ನೇ ಬಿಟ್ಟುಕೊಟ್ಟ ತ್ಯಾಗಮಯಿ ಗಂಡ!
ಈ ಆದೇಶ ಪ್ರಶ್ನಿಸಿ ಯುಐಡಿಎಐ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಈ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿ ಪ್ರಕರಣವನ್ನು ಏಕ ಸದಸ್ಯ ನ್ಯಾಯಪೀಠಕ್ಕೆ ಹಿಂದಿರುಗಿಸಿದೆ. ಜತೆಗೆ, ಆಧಾರ್ ಕಾಯ್ದೆಯ ಸೆಕ್ಷನ್ 33 ಅಡಿಯಲ್ಲಿ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು ಹಾಗೂ ಅದರಲ್ಲಿ ಮಹಿಳೆಯ ಪತಿಯನ್ನು ಪ್ರತಿವಾದಿ ಮಾಡಬೇಕು ಎಂದು ಸೂಚಿಸಿದೆ.