ಪ್ರೀತಿಸಿದೋರು ದೂರವಾದಾಗ್ಲೆ ಪ್ರೀತಿಯ ಮಹತ್ವ ತಿಳಿಯೋದು. ಇದಕ್ಕೆ ಈ ವ್ಯಕ್ತಿ ಉತ್ತಮ ನಿದರ್ಶನ. ಮದುವೆ ವಿಚ್ಛೇದನದ ನಂತ್ರ ಮತ್ತೆ ಈತ ಮದುವೆಯಾಗಿದ್ದು ಯಾರನ್ನ ಗೊತ್ತಾ? ಇಲ್ಲಿದೆ ವಿವಾಹಿತನ ಪ್ರೇಮ ಕಥೆ.
ದಾಂಪತ್ಯದಲ್ಲಿ ಹೊಂದಾಣಿಕೆ ಬಹಳ ಮುಖ್ಯವಾಗುತ್ತದೆ. ಹೊಂದಾಣಿಕೆ ಇಲ್ಲದ ಜೀವನದಲ್ಲಿ ಬೇರ್ಪಡುವಿಕೆ ಸಾಮಾನ್ಯ. ಮದುವೆಯಾದ ಆರಂಭದಲ್ಲಿದ್ದ ಪ್ರೀತಿ, ದಿನ ಕಳೆದಂತೆ ಕಡಿಮೆಯಾಗ್ತಾ ಹೋಗೋದಿದೆ. ನಮ್ಮಲ್ಲಿರುವ ವಸ್ತುವಿನ ಮಹತ್ವ ಅದು ಕಳೆದು ಹೋದಾಗ ಗೊತ್ತಾಗೋದು ಹೆಚ್ಚು. ಸದಾ ಕಷ್ಟುಸುಖದಲ್ಲಿ ನಿಲ್ಲುವ ಸಂಗಾತಿಯನ್ನು ಅನೇಕರು ತಪ್ಪಾಗಿ ಅರ್ಥೈಸಿಕೊಳ್ತಾರೆ. ಮನೆಯ ಹೊರಗೆ ನಗ್ತಾ ನೂರಾರು ಜನರ ಜೊತೆ ಮಾತನಾಡುವ ಜನರು ಮನೆಯಲ್ಲಿ ಸಂಗಾತಿ ಜೊತೆ ನಾಲ್ಕು ಪ್ರೀತಿಯ ಮಾತನಾಡೋದಿಲ್ಲ. ಸಂಗಾತಿ ಬೆನ್ನ ಹಿಂದೆ ಬಿದ್ದ ಭೂತದಂತೆ ಕಾಣಲು ಶುರುವಾಗ್ತಾಳೆ. ಪತ್ನಿ ಆಡಿದ ಮಾತುಗಳೆಲ್ಲ ಕಹಿಯಾಗಲು ಶುರುವಾಗುತ್ತವೆ. ಮದುವೆ, ಮನೆ, ಮಕ್ಕಳು ಹೊಣೆಯಂತೆ ಭಾಸವಾಗುತ್ತದೆ. ಈ ಸಂಸಾರ ಬಂಧನದಿಂದ ಹೊರಗೆ ಬಂದ್ರೆ ಸಾಕು ಎನ್ನುತ್ತ ಆತುರದ ನಿರ್ಧಾರ ತೆಗೆದುಕೊಳ್ತಾರೆ. ಪತಿ ಮಾತ್ರವಲ್ಲ ಅನೇಕ ಬಾರಿ ಪತ್ನಿಯ ತಪ್ಪೂ ಇದ್ರಲ್ಲಿರುತ್ತದೆ.
ಅನೇಕ ಬಾರಿ ಪರಸ್ಪರ ಅರ್ಥವಾಗದಿರುವುದೇ ದೂರವಾಗಲು ಕಾರಣವಾಗುತ್ತದೆ. ಈಗಿನ ದಿನಗಳಲ್ಲಿ ವಿಚ್ಛೇದನ (Divorce) ಸಂಖ್ಯೆ ಹೆಚ್ಚಾಗ್ತಿದೆ. ವಿವಾಹೇತರ ಸಂಬಂಧ ಸೇರಿದಂತೆ ಅನೇಕ ವಿಷ್ಯಗಳು ಡಿವೋರ್ಸ್ ಗೆ ಕಾರಣ ಎನ್ನುವುದು ಗೊತ್ತಾಗಿದೆ. ಒಮ್ಮೆ ದೂರವಾಗುವ ನಿರ್ಧಾರ ತೆಗೆದುಕೊಂಡ್ಮೆಲೆ ಜನರು ತಮ್ಮ ತೀರ್ಮಾನವನ್ನು ಪುನಃ ಪರಿಶೀಲಿಸುವ ಸಹವಾಸಕ್ಕೆ ಹೋಗೋದಿಲ್ಲ. ಮುಂದಿಟ್ಟ ಹೆಜ್ಜೆ ಹಿಂದೆ ಇಡೋದಿಲ್ಲ. ಕುಳಿತು ಮಾತನಾಡಿದ್ರೆ, ಸಮಸ್ಯೆ ಬಗ್ಗೆ ಚರ್ಚೆ ನಡೆಸಿದ್ರೆ ಎಷ್ಟೋ ಸಂಬಂಧ (Relationship)ಗಳು ಉಳಿದುಕೊಳ್ಳುತ್ತವೆ ಎನ್ನುತ್ತಾರೆ ತಜ್ಞರು.
2024ರಲ್ಲಿ ಈ ರಾಶಿಯವರು ಪ್ರೀತಿಯಲ್ಲಿ ಬೀಳೋದು ಗ್ಯಾರಂಟಿ.. ಹೇಗಿರಲಿದೆ ಗೊತ್ತಾ ಹೊಸ ವರ್ಷದಲ್ಲಿ ನಿಮ್ಮ ಲವ್ ಲೈಫ್
ಮೊದಲೇ ಹೇಳಿದಂತೆ ಮನೆಯಲ್ಲಿರುವ ಮಾಣಿಕ್ಯದ ಮೌಲ್ಯ ಕಳೆದುಹೋದ್ಮೇಲೆ ಗೊತ್ತಾಗುತ್ತದೆ. ವಿವಾಹೇತರ ಸಂಬಂಧದಲ್ಲಿರಲಿ ಅಥವಾ ಬೇರೆ ಯಾವುದೇ ಕಾರಣಕ್ಕೆ ವಿಚ್ಛೇದನ ಪಡೆದಿರಲಿ, ಸಂಗಾತಿ ದೂರವಾದ್ಮೇಲೆ ಅವರೇ ಉತ್ತಮವಾಗಿದ್ದರು ಎನ್ನುವ ಭಾವನೆ ಮೂಡೋದು ಸುಳ್ಳಲ್ಲ. ಈ ವ್ಯಕ್ತಿಗೂ ಅದೇ ಆಗಿದೆ. ಪತ್ನಿಗೆ ವಿಚ್ಛೇದನ ನೀಡಿ ದೂರವಾದ್ಮೇಲೆ ತಪ್ಪಿನ ಅರಿವಾಗಿದ್ದು, ಮತ್ತೆ ಆಕೆ ಜೊತೆ ಜೀವಿಸುವ ನಿರ್ಧಾರ ತೆಗೆದುಕೊಂಡು ಮರು ಮದುವೆ ಆಗಿದ್ದಾನೆ.
ಹೊಸದಾಗಿ ಮದುವೆಯಾದವರಲ್ಲಿ ಕಾಡುವ ಆತಂಕ! ನಿಮಗೂ ಹೀಗಾಗ್ತಿದೆಯೇ?
ಘಟನೆ ನಡೆದಿರೋದು ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ. ಈತನ ಹೆಸರು ವಿನಯ್ ಜೈಸ್ವಾಲ್. ತನ್ನ ಕಥೆಯನ್ನು ವಿನಯ್ ಜೈಸ್ವಾಲ್ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ವಿನಯ್ ಡಿಸೆಂಬರ್ 2012 ರಲ್ಲಿ ಮದುವೆಯಾಗಿದ್ದರು. ಆದರೆ ಕೆಲವು ಭಿನ್ನಾಭಿಪ್ರಾಯಗಳಿಂದ ಅವರು 2018 ರಲ್ಲಿ ವಿಚ್ಛೇದನ ಪಡೆದರು. ಇಬ್ಬರ ದಾರಿಗಳೂ ಬೇರೆಯಾದ್ವು. ಐದು ವರ್ಷಗಳ ನಂತರ ಮತ್ತೆ ಒಂದಾಗಲು ನಿರ್ಧರಿಸಿ, ಮದುವೆಯಾಗಿದ್ದಾರೆ.
ವಿನಯ್ ಬಾಳಲ್ಲಿ ನಡೆದಿದ್ದೇನು? : ವಿಚ್ಛೇದನವಾದ್ಮೇಲೆ ವಿನಯ್ ಹಾಗೂ ಪತ್ನಿ ಬೇರೆ ವಾಸ ಶುರು ಮಾಡಿದ್ದರು. ಆದ್ರೆ ಪತ್ನಿ ಮನಸ್ಸಿನಲ್ಲಿ ಇನ್ನೂ ವಿನಯ್ ಮೇಲೆ ಪ್ರೀತಿ ಇತ್ತು. ಇದಕ್ಕೆ ಆಕೆ ಮಾಡಿದ ಕೆಲಸವೇ ಸಾಕ್ಷ್ಯ. ವಿನಯ್‌ಗೆ ಹೃದಯಾಘಾತವಾದಾಗ ಮಾಜಿ ಪತ್ನಿಗೆ ವಿಷಯ ತಿಳಿದಿದೆ. ಅವರ ಮನಸ್ಸು ತಡೆಯಲಿಲ್ಲ. ವಿನಯ್ ಬಳಿ ಓಡಿ ಬಂದಿದ್ದಾರೆ. ವಿನಯ್ ಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಆಯ್ತಂತೆ. ಅವರು ಸಿಸಿಯುವಿನಿಂದ ಮನೆಗೆ ಬಂದು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಅವರ ಮಾಜಿ ಪತ್ನಿ ಅವರ ಜೊತೆ ಇದ್ದರಂತೆ. ಹೃದಯಾಘಾತ ಇವರಿಬ್ಬರ ಹೃದಯದ ನಡುವಿನ ಅಂತರದ ಮಂಜುಗಡ್ಡೆಯನ್ನು ಕರಗಿಸಿದೆ. ಇಬ್ಬರು ಒಂದಾಗುವ ನಿರ್ಧಾರಕ್ಕೆ ಬಂದಿದ್ದಾರೆ.
ಈಗ ವಿನಯ್ ಮತ್ತು ಅವರ ಪತ್ನಿ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕುಟುಂಬ ಸಮಾರಂಭದಲ್ಲಿ ಔಪಚಾರಿಕ ಮದುವೆ ನಡೆದಿದೆ. ಮದುವೆ ನೋಂದಣಿ ಕೆಲಸ ಕೂಡ ಆಗಿದ್ದು, ವಿಚ್ಛೇದನದ ತೀರ್ಪನ್ನು ರದ್ದುಗೊಳಿಸಲಾಗಿದೆ. ನಾವಿಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಿದ್ದೇವೆ. ಒಬ್ಬರಿಲ್ಲದೆ ಇನ್ನೊಬ್ಬರಿರಲು ಸಾಧ್ಯವಿಲ್ಲ ಎನ್ನುವ ಸತ್ಯದ ಅರಿವಾಗಿದೆ ಎಂದು ವಿನಯ್ ಹೇಳಿದ್ದಾರೆ.