ಬಯಸಿದ ಮಕ್ಕಳು ಸಿಗೋದು ಅಪರೂಪ. ಹೆಣ್ಣು ಬಯಸಿದವರಿಗೆ ಗಂಡು, ಗಂಡು ಬಯಸಿದವರಿಗೆ ಹೆಣ್ಣು ಮಕ್ಕಳಾಗೋದಿದೆ. ಹುಟ್ಟಿದ ಮಗುವನ್ನೇ ತಾವಂದುಕೊಂಡಂತೆ ಬೆಳೆಸಿ ಪೋಷಕರು ಖುಷಿಯಾಗ್ತಾರೆ. ಆದ್ರೆ ಈ ಚೀನಾ ದಂಪತಿ ಗಂಡು ಮಗುವಿಗಾಗಿ 9 ಮಗು ಹೆತ್ತಿದ್ದಲ್ಲದೆ, ವಿಚಿತ್ರ ಹೆಸರಿಟ್ಟು ತಮಗೆ ಗಂಡು ಮಗುವಿನ ಮೇಲಿರುವ ಪ್ರೀತಿ ತೋರಿಸಿದ್ದಾರೆ.
ಗಂಡು ಮಗು (Baby boy)ವಿನ ಆಸೆಯಲ್ಲಿ ಮೂರ್ನಾಲ್ಕು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ದಂಪತಿಯರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗಂಡು ಮಗುವಿಗೆ ನೀಡುವಷ್ಟೇ ಮಾನ್ಯತೆಯನ್ನು ಹೆಣ್ಣು ಮಗುವಿಗೆ ನೀಡಲಾಗ್ತಿದೆ. ಆದ್ರೂ ಈಗ್ಲೂ ಕೆಲವರು ಗಂಡೇ ಬೇಕು ಎನ್ನುವವರಿದ್ದಾರೆ. ಅದೇನೇ ಇರಲಿ, ಸೋಶಿಯಲ್ ಮೀಡಿಯಾ (social media)ದಲ್ಲಿ ಗಂಡು ಮಗುವಿನ ಆಸೆಗೆ 9 ಹೆಣ್ಣು ಮಗುವಿಗೆ ಪಾಲಕರಾದ ದಂಪತಿ ಗಮನ ಸೆಳೆದಿದೆ. ಚೀನಾದ ಈ ಜೋಡಿ, ಗಂಡು ಮಗು ಬೇಕು ಅಂತ ಒಂದಾದ್ಮೇಲೆ ಒಂದು ಮಗುವನ್ನು ಪಡೀತಾ ಹೋಯ್ತು. ಆದ್ರೆ ಹುಟ್ಟಿದ್ದೆಲ್ಲ ಹೆಣ್ಣು ಮಗುವಾಯ್ತು. ಇಲ್ಲಿನ ಇನ್ನೊಂದು ವಿಶೇಷ ಅಂದ್ರೆ ತನಗೆ ಹುಟ್ಟಿದ ಎಲ್ಲ ಹೆಣ್ಣು ಮಕ್ಕಳಿಗೆ ತಂದೆ ವಿಚಿತ್ರ ಹೆಸರನ್ನು ಇಟ್ಟಿದ್ದಾನೆ. ಪ್ರತಿ ಹೆಸರಿನಲ್ಲೂ ಸಹೋದರ ಎಂಬ ಅರ್ಥ ನೀಡುವ ಡಿ ಎಂಬ ಚೀನಿ ಅಕ್ಷರವಿದೆ. ಈ ಅಕ್ಷರಗಳು, ದಂಪತಿ ಗಂಡು ಮಗುವನ್ನು ಬಯಸುತ್ತಿದೆ ಎಂಬುದನ್ನು ತೋರಿಸುತ್ತದೆ. ಚೀನಾ ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಗಿದೆ.
ಜಿಯಾಂಗ್ಸು ಪ್ರಾಂತ್ಯದ ಹುವಾಯನ್ ನಲ್ಲಿ ಈ 9 ಸಹೋದರಿಯರು ಜನಿಸಿದ್ದಾರೆ. ಎಲ್ಲರ ವಯಸ್ಸು 20 ವರ್ಷಗಳ ಅಂತರದಲ್ಲಿದೆ. ಅವರ ತಂದೆ ವಯಸ್ಸು ಈಗ 81 ವರ್ಷ. ತಂದೆ ಹೆಸರು ಜಿ. ಆತ ತನ್ನ ಹೆಣ್ಣು ಮಕ್ಕಳಿಗೆ ಡಿಯಲ್ಲಿ ಮುಕ್ತಾಯಗೊಳ್ಳುವ ಹೆಸರನ್ನು ನಾಮಕರಣ ಮಾಡಿದ್ದಾನೆ. ಬಹಳ ಎಚ್ಚರಿಕೆಯಿಂದ ಹೆಣ್ಣು ಮಕ್ಕಳಿಗೆ ಈ ಹೆಸರನ್ನು ಇಡಲಾಗಿದೆ. ಅವರ ಹೆಸರಿನಲ್ಲೇ ದಂಪತಿ, ಗಂಡು ಮಗುವನ್ನು ಎಷ್ಟು ಬಯಸಿದ್ದರು ಎಂಬುದು ಅರ್ಥವಾಗುತ್ತದೆ.
ಡಿವೋರ್ಸ್ ಜೀವನಾಂಶ ಹೇಗೆ ನಿರ್ಧಾರವಾಗುತ್ತೆ? ಪುರುಷರಿಗೂ ಸಿಗುತ್ತಾ ಹಣ?
ಹೆಣ್ಣು ಮಕ್ಕಳ ಹೆಸರು ಹೀಗಿದೆ : ಜಿ ತನ್ನ 9 ಹೆಣ್ಣುಮಕ್ಕಳಿಗೆ ಇಟ್ಟ ಹೆಸರು ಹಾಗೂ ಅದರ ಅರ್ಥ ಹೀಗಿದೆ. ಹಿರಿಯ ಮಗಳ ಹೆಸರು ಝಾವೋಡಿ. ಆಕೆಗೆ ಸುಮಾರು 60 ವರ್ಷ. ಝಾವೋಡಿ ಅಂದ್ರೆ ಸಹೋದರನಿಗೆ ಮನವಿ ಎಂದರ್ಥ. ಎರಡನೇ ಮಗಳ ಹೆಸರು ಪಾಂಡಿ. ಸಹೋದರನಿಗಾಗಿ ಕಾಯುತ್ತಿದ್ದೇನೆ ಎಂಬುದು ಪಾಂಡಿ ಅರ್ಥವಾಗಿದೆ. ಮೂರನೇ ಮಗಳಿಗೆ ಜಿ ವಾಂಗ್ಡಿ ಎಂದು ಹೆಸರಿಟ್ಟಿದ್ದಾನೆ. ವಾಂಗ್ಡಿ ಅಂದ್ರೆ ಸಹೋದರನಿಗಾಗಿ ಕಾಯುವುದು ಎಂಬ ಅರ್ಥ ನೀಡುತ್ತದೆ. ನಾಲ್ಕನೇ ಮಗುವಿಗೆ ಜಿ, ಕ್ಸಿಯಾಂಗ್ಡಿ ಎಂದು ನಾಮಕರಣ ಮಾಡಿದ್ದಾನೆ.ಸಹೋದರನ ಬಗ್ಗೆ ಯೋಚಿಸುವುದು ಎಂಬುದು ಇದರ ಅರ್ಥವಾಗುತ್ತದೆ. ಐದನೇ ಮಗಳಿಗೆ ಲಿಡಿ ಎಂದು ಜಿ ಹೆಸರಿಟ್ಟಿದ್ದಾನೆ. ಸಹೋದರ ಬರುತ್ತಿದ್ದಾನೆ ಎಂಬುದು ಲಿಡಿ ಅರ್ಥವಾಗಿದೆ. ತನ್ನ ಆರನೇ ಮಗುವಿಗೆ ಯಿಂಗ್ಡಿ ಎಂದು ಆತ ನಾಮಕರಣ ಮಾಡಿದ್ದಾನೆ. ಯಿಂಗ್ಡಿ ಅಂದ್ರೆ ಸ್ವಾಗತ ಸಹೋದರ ಎಂದಾಗುತ್ತದೆ. ನಿಯಾಂಡಿ ಎಂದು ಜಿ ತನ್ನ ಏಳನೇ ಮಗುವಿಗೆ ಹೆಸರಿಟ್ಟಿದ್ದಾನೆ. ನನಗೆ ನನ್ನ ಸಹೋದರನ ನೆನಪಾಗುತ್ತದೆ ಎಂಬುದು ಇದರ ಅರ್ಥವಾಗಿದೆ. ಎಂಟನೇ ಮಗಳಿಗೆ ಜಿ, ಚೌಡಿ ಎಂದು ನಾಮಕರಣ ಮಾಡಿದ್ದಾನೆ. ಚೌಡಿ ಅಂದ್ರೆ ನಿನ್ನ ಸಹೋದರನನ್ನು ದ್ವೇಷಿಸು ಎಂಬ ಅರ್ಥ ನೀಡುತ್ತದೆ. ಕೊನೆಯ ಮಗಳಿಗೆ ಜಿ, ಮೆಂಗ್ಡಿ ಎಂದು ಹೆಸರಿಟ್ಟಿದ್ದಾನೆ. ಸಹೋದರನ ಕನಸು ಎಂಬುದು ಇದರ ಅರ್ಥವಾಗುತ್ತದೆ. ಜಿ ಮತ್ತು ಆತನ ಪತ್ನಿಗೆ ಗಂಡು ಮಗು ಕನಸಾಗಿಯೇ ಉಳಿದಿದೆ.
7 ತಿಂಗಳು ಆನ್ಲೈನ್ ಡೇಟಿಂಗ್ ಮಾಡಿದ್ದ ಯುವಕನಿಗೆ ಗೊತ್ತಾಯ್ತು ಘೋರ ಸತ್ಯ, ಚಾಟ್
ಗಂಡು ಮಗು ಬಯಸಲು ಇದು ಕಾರಣ : ಭಾರತದಂತೆ ಚೀನಾದಲ್ಲಿ ಕೂಡ ಗಂಡು ಮಗ, ಪಾಲಕರ ವೃದ್ಧಾಪ್ಯದಲ್ಲಿ ಅವರ ಆರೈಕೆ ಮಾಡುತ್ತಾನೆ ಎಂದು ನಂಬಲಾಗಿದೆ. ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋಗುವ ಕಾರಣ, ನಮ್ಮನ್ನು ಆರೈಕೆ ಮಾಡಲು ಗಂಡು ಮಗು ಬೇಕು ಎನ್ನುವ ಉದ್ದೇಶದಿಂದಲೇ ಈ ದಂಪತಿ ಕೂಡ ಗಂಡು ಮಗು ಬಯಸಿದ್ದರು.