ಪೋಷಕರನ್ನು ಕಳೆದುಕೊಂಡರೆ ಬದುಕು ಬರಡಾಗುತ್ತದೆ, ಬದಲಾಗುತ್ತದೆ..

By Suvarna NewsFirst Published Dec 21, 2019, 2:56 PM IST
Highlights

ಅಮ್ಮನನ್ನೋ, ಅಪ್ಪನನ್ನೋ ಕಳೆದುಕೊಳ್ಳುವುದಿದೆಯಲ್ಲ.. ಬದುಕಿನಲ್ಲಿ ಅದಕ್ಕಿಂಥ ಕೆಟ್ಟದು ಇನ್ನೊಂದು ಸಂಭವಿಸಲು ಸಾಧ್ಯವಿಲ್ಲ. ಅದರಲ್ಲೂ ತಂದೆತಾಯಿ ಹಾಗೂ ಮಕ್ಕಳ ಸಂಬಂಧಗಳಲ್ಲಿ ತಾಯಿ ಮಗಳ ಸಂಬಂಧ ಅತಿ ಆಳವಾದುದು ಎನ್ನಲಾಗುತ್ತದೆ. ಹೀಗೆ ಸಣ್ಣ ವಯಸ್ಸಿನಲ್ಲಿ ಪೋಷಕರನ್ನು ಕಳೆದುಕೊಂಡರೆ ಬದುಕನ್ನು ನೋಡುವ ರೀತಿಯೇ ಬದಲಾಗುತ್ತದೆ. 

ಪ್ರೀತಿಪಾತ್ರರು ನಮ್ಮಿಂದ ದೂರಾದಾಗ ನಮ್ಮ ಯೋಚನೆಗಳು ಬದಲಾಗುತ್ತವೆ, ಚಿಂತನೆ ಹೆಚ್ಚುತ್ತದೆ. ಇನ್ನು ಅವರೇನಾದರೂ ಈ ಜಗತ್ತಿನಿಂದಲೇ ಮರೆಯಾದರೆ ಬದುಕನ್ನು ನಾವು ನೋಡುವ ರೀತಿಯೇ ಬದಲಾಗುತ್ತದೆ. ಅದರಲ್ಲೂ ಪೋಷಕರನ್ನು ಕಳೆದುಕೊಂಡಾಗ ನಾವು ಅವರ ಮೇಲೆ ಮಾನಸಿಕವಾಗಿ ಎಷ್ಟೊಂದು ಅವಲಂಬಿತರಾಗಿದ್ದೆವು ಎಂಬುದು ಅರಿವಿಗೆ ಬರುತ್ತದೆ. ಈ ಸಂದರ್ಭದಲ್ಲಿ ಅದೆಷ್ಟೋ ಪಾಠಗಳನ್ನು ಕಲಿಯುತ್ತೇವೆ, ಹಲವಾರು ರೀತಿಯ ಭಾವಗಳು ನಮ್ಮಲ್ಲಿ ಸುಳಿದಾಡುತ್ತವೆ. ಬದುಕು ಹೊರಳುತ್ತದೆ. ಆಗ ಮನುಷ್ಯನಲ್ಲಿ ಏನೇನು ಭಾವಗಳು ಸುಳಿಯುತ್ತವೆಂದರೆ, 

ಕುಟುಂಬದ ಮೌಲ್ಯ ಅರಿವಾಗುತ್ತದೆ

ಕುಟುಂಬ ಎಂಬುದು ಈ ಮುಂಚೆ ನಿಮ್ಮ ಪ್ರಾಮುಖ್ಯತೆ ಆಗಿಲ್ಲದಿದ್ದಲ್ಲಿ, ಸಡನ್ ಆಗಿ ಕುಟುಂಬದ ಮುಂದೆ ಬೇರೇನಿಲ್ಲ ಎನಿಸತೊಡಗುತ್ತದೆ. ಉಳಿದ ಹತ್ತಿರದವರನ್ನೂ ಕಳೆದುಕೊಳ್ಳುವ ಭಯ ಆವರಿಸುತ್ತದೆ. ಇದರಿಂದ ನೀವು ಕುಟುಂಬಕ್ಕೆ ಹೆಚ್ಚು ಸಮಯ ನೀಡಲಾರಂಭಿಸುತ್ತೀರಿ. 

ಮಕ್ಕಳಿಗೆ ಕತೆ ಹೇಳೋದ್ರಿಂದ ಏನೆಲ್ಲ ಲಾಭ ಗೊತ್ತಾ?

ಇತರರ ಬಗ್ಗೆ ಹೊಟ್ಟೆಕಿಚ್ಚು

ಇತರರು ತಮ್ಮ ಪೋಷಕರೊಡನೆ ಹೊರ ಹೋಗುವುದು, ಒಬ್ಬರಿಗೊಬ್ಬರು ಕಷ್ಟದಲ್ಲಿ ಆಗುವುದು ನೋಡಿದಾಗ ಹೊಟ್ಟೆಕಿಚ್ಚಾಗತೊಡಗುತ್ತದೆ. ಅವರಿಗದು ಸಾಮಾನ್ಯ ದಿನವಾದರೂ, ನಿಮಗೆ ಸಾಮಾನ್ಯವಾಗಿರುವುದಿಲ್ಲ. ತಂದೆತಾಯಿಯೊಂದಿಗೆ ಸುಮ್ಮನೆ ಊಟಕ್ಕೆ ಹೊರಹೋಗಲು ಒಂದೇ ಒಂದು ಅವಕಾಶ ಸಿಕ್ಕರೆ ಅದಕ್ಕಾಗಿ ಏನು ಬೇಕಾದರೂ ಮಾಡುತ್ತೇನೆ ಎಂದು ನಿಮಗೆನಿಸಲಾರಂಭಿಸುತ್ತದೆ.

ಪಶ್ಚಾತ್ತಾಪ ಪಡುವಿರಿ

ಕಳೆದುಕೊಂಡವರ ಜೊತೆ ನೀವು ಕಳೆದ ದಿನಗಳ ನೆನಪು ಮನಸ್ಸಿನಲ್ಲಿ ಮಗುಚಿಕೊಳ್ಳುತ್ತಲೇ ಇರುತ್ತದೆ. ಆಗೆಲ್ಲ, ನೀವು ಅವರಿಗೆ ಹೇಳಿದ ನೋಯಿಸುವ ಮಾತುಗಳು, ಕೋರಿಕೊಂಡರೂ ಮಾಡಿಕೊಡದ ಕೆಲಸ, ಅವರಿಗೆಷ್ಟು ಆಯಾಸವಾಗಿದ್ದಲೂ ಕೈಕಾಲು ಒತ್ತಲಿಲ್ಲವೆಂದು, ಅವರೊಂದಿಗೆ ಹೆಚ್ಚು ಸಮಯ ಕಳೆಯಲಿಲ್ಲವೆಂದೋ ಬೇಜಾರಾಗುತ್ತಲೇ ಇರುತ್ತದೆ. 

ಅವರು ನಿಮಗಾಗಿ ಮಾಡಿದ್ದಕ್ಕೆಲ್ಲ ಕೃತಜ್ಞತೆ

ಅಪ್ಪಅಮ್ಮ ಇರುವಾಗ ಅವರು ನಮಗಾಗಿ ಎಷ್ಟೆಲ್ಲ ಮಾಡಿದರೂ ಅದನ್ನು ನಾವು ಗಮನಿಸಿರುವುದೇ ಇಲ್ಲ. ಆದರೆ, ಅವರನ್ನು ಕಳೆದುಕೊಂಡಾಗ ಅವರು ನಮಗಾಗಿ ಎಷ್ಟೊಂದೆಲ್ಲ ಮಾಡಿದ್ದಾರೆ ಎಂಬುದನ್ನು ನೆನೆದಾಗಲೆಲ್ಲ ಕಣ್ಣೀರು ಒತ್ತಿಕೊಂಡು ಬರುತ್ತದೆ. ಅವರ ಆಸೆಗಳನ್ನೆಲ್ಲ ಗಂಟುಮೂಟೆ ಕಟ್ಟಿಟ್ಟು ನಮ್ಮ ಬಯಕೆಗಳನ್ನು ತೀರಿಸಿದ್ದು, ಎಷ್ಟೇ ಕಷ್ಟವಿದ್ದರೂ ತೋರಿಸಿಕೊಳ್ಳದೆ ನಮ್ಮನ್ನು ರಾಜನಂತೆ ಬೆಳೆಸಿದ್ದು, ಕುಳಿತಲ್ಲಿಗೆ ಊಟತಿಂಡಿ ತಂದು ತಿನ್ನಿಸಿದ್ದು, ನಮಗಾಗಿ ಹರಕೆ ಮಾಡಿದ್ದು ಎಲ್ಲವೂ ಈಗ ಗಣನೆಗೆ ಸಿಗತೊಡಗುತ್ತದೆ. ಅವರೇ ನಮ್ಮ ಮಕ್ಕಳಾಗಿ ಹುಟ್ಟಲಿ, ಅವರ ಸೇವೆ ಮಾಡುವ ಅವಕಾಶ ಸಿಗಲಿ ಎಂದೆನಿಸತೊಡಗುತ್ತದೆ. 

ವಿವಾಹಿತರಿಗೆ 'ಗುಡ್ ನ್ಯೂಸ್' ಯಾವಾಗ ಎಂದು ಕೇಳೋ ಅಭ್ಯಾಸ ಬಿಟ್ಬಿಡಿ

ತಂದೆತಾಯಿಯ ಬಗ್ಗೆ ದೂರಿದರಾಗಲ್ಲ

ಈಗ ಗೆಳೆಯರು ತಮ್ಮ ತಂದೆಯನ್ನು ದೂರುವುದೋ, ತಾಯಿಯನ್ನು ಕಡೆಗಣಿಸುವುದೋ ಮಾಡಿದರೆ, ಅವರ ಬಗ್ಗೆ ಅಸಮಾಧಾನ ಹೊರಹಾಕಿದರೆ ನಿಮಗೆ ಕೋಪ ಬರತೊಡಗುತ್ತದೆ. ಅವರ ಅದೃಷ್ಟ ಅವರಿಗೆ ತಿಳಿದೇ ಇಲ್ಲವಲ್ಲ ಎನಿಸತೊಡಗುತ್ತದೆ. 

ನಿಮ್ಮ ನೋವು ಯಾರಿಗೂ ಅರ್ಥವಾಗಲ್ಲ

ಪೋಷಕರನ್ನು ಕಳೆದುಕೊಂಡ ನೋವು ಉಳಿದವರಿಗೆ ಅರ್ಥವಾಗಲು ಸಾಧ್ಯವೇ ಇಲ್ಲ. ಅನುಭವಿಸಿದವರಷ್ಟೇ ನಿಮ್ಮ ನೋವನ್ನು ಬಲ್ಲರು. ಹೀಗೆ ಯಾರಿಗೂ ನಿಮ್ಮ ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದಾದ ಮೇಲೆ ನೀವು ಆ ಬಗ್ಗೆ ಯಾರ ಬಳಿಯೂ ಮಾತನಾಡಲಾರಿರಿ.

ಯಾವುದೂ ಶಾಶ್ವತವಲ್ಲ

ಇಂಥದೊಂದು ದೊಡ್ಡ ನೋವನ್ನು ಅನುಭವಿಸಿದ ಮೇಲಷ್ಟೇ ಬದುಕಿನಲ್ಲಿ ಯಾವುದೂ ಶಾಶ್ವತವಲ್ಲ ಎಂದು ಅರಿವಾಗುವುದು. ಇದರ ಬಳಿಕ ನೀವು ಇರುವುದನ್ನು, ಇರುವವರನ್ನು ಹೆಚ್ಚು ಪ್ರೀತಿಸಲು ಶುರು ಮಾಡುತ್ತೀರಿ. ಅವರು ನಿಮಗಾಗಿ ಮಾಡಿದ್ದೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಕೃತಜ್ಞತೆ ಸಲ್ಲಿಸಲು ಕಲಿಯುತ್ತೀರಿ. ಯೋಚನೆಗಳಲ್ಲಿ ಹೆಚ್ಚು ಪ್ರಬುದ್ಧರಾಗುತ್ತೀರಿ. 

ನೀವಂದುಕೊಂಡಿದ್ದಕ್ಕಿಂತ ಹೆಚ್ಚು ಸ್ಟ್ರಾಂಗ್

ಈ ಲಾಸನ್ನು ಎಂದಿಗೂ ಅಳಿಸಲಾಗದು, ಈ ನೋವನ್ನು ಎಂದಿಗೂ ಮರೆಯಲಾಗದು ಎಂದುಕೊಂಡಿರುತ್ತೀರಿ. ಆದರೆ, ಕಾಲ ಕಳೆದ ಹಾಗೆಲ್ಲ ನೀವು ಬದುಕಿನಲ್ಲಿ ಕಹಿ ನೆನಪುಗಳನ್ನು ಬದಿಗೆ ಹಾಕಿ, ಅವರೊಂದಿಗೆ ಕಳೆದ ಸಿಹಿನೆನಪುಗಳನ್ನು ಜೊತೆ ಇಟ್ಟುಕೊಂಡು ಖುಷಿಯಾಗಿ ಬದುಕುವುದನ್ನು ಕಲಿಯುತ್ತೀರಿ. 

click me!