ಮಧ್ಯರಾತ್ರಿಯ ಪಿಸುಮಾತು, ಪದೇ ಪದೇ ಫೋನ್ ಕಾಲ್, ಗಂಟೆಗಟ್ಲೆ ಮಾತುಕತೆ ಎಲ್ಲವೂ ಕಾಲ ಕಳೆದಂತೆ ನಿಂತು ಹೋಗುತ್ತವೆ. ಆಮೇಲೆ ಉಳಿಯುವುದು ಮೌನ. ಸುದೀರ್ಘ ನಿಟ್ಟುಸಿರು. ಆರಂಭದ ತೀವ್ರತೆ ಕಡೆಯವರೆಗೂ ಉಳಿಯುವುದಿಲ್ಲ. ಸಂಗಾತಿಯನ್ನು ನೋಡಿದಾಗ ಹೊಟ್ಟೆಯೊಳಗೆ ಮುಸುಕಾಡುತ್ತಿದ್ದ ಚಿಟ್ಟೆಹಾರಿ ಹೋಗಿರುತ್ತದೆ.
ಹೇಳುವುದಕ್ಕೆ ಬೇಸರವಾದರೂ ಇದು ಸತ್ಯ. ಅದಕ್ಕೆ ಕಾರಣಗಳು ನೂರಾರು. ನಾನೇ ಗೆಲ್ಲಬೇಕು ಅನ್ನುವ ಹಠ, ನಾನು ಸಂಬಂಧ ಕೇರ್ ಮಾಡಿದಷ್ಟುಅವರು ಮಾಡುತ್ತಿಲ್ಲವೆಂಬ ಸಿಟ್ಟು, ಪ್ರೀತಿ ಕಮ್ಮಿಯಾಗಿದೆ ಎಂಬ ಭಾವ ಎಲ್ಲವೂ ಸೇರಿ ಹೃದಯ ಹಿಂಡಿ ಹಿಪ್ಪೆ ಮಾಡಿ ಸಂಬಂಧದ ಶಕ್ತಿ ಕ್ಷೀಣಿಸುತ್ತದೆ. ಆದರೂ ಒಳಗೆಲ್ಲೋ ಏನೋ ಹೇಗೋ ಸರಿ ಹೋಗಬೇಕು ಎಂಬ ಆಸೆ. ಮತ್ತೆ ಮನಸಾರೆ ನಗುವ ಹಂಬಲ. ಕೆಟ್ಟದ್ದನ್ನೆಲ್ಲಾ ಸುಟ್ಟು ನಿರಾಳವಾಗುವ ಬಯಕೆ. ಹಾಗಾಗುವುದು ಸುಲಭವಲ್ಲ. ಚೂರು ಕಷ್ಟಪಡಬೇಕು.
1. ಚೂರು ಬಿಟ್ಟು ಹಿಡಿದರೆ ಒಲವು
undefined
ನಾನು ಹೇಳಿದ್ದು ಯಾವುದೂ ನಡೆಯುತ್ತಿಲ್ಲ ಎಂಬ ಭಾವ ಅನೇಕರನ್ನು ನೋಯಿಸುತ್ತಿರುತ್ತದೆ. ನನಗೆ ಸಮಯ ಕೊಡುವುದಿಲ್ಲ, ನಾನು ಹೇಳಿದಂತೆ ಮಾಡುವುದಿಲ್ಲ ಅನ್ನುವ ದೂರು ಒಳಗೊಳಗೇ ಕೇಳುತ್ತಿರುತ್ತದೆ. ಇಂಥಾ ಹೊತ್ತಲ್ಲಿ ಒಂದು ನೆನಪಿಟ್ಟುಕೊಳ್ಳಬೇಕು. ಸಂಬಂಧವಷ್ಟೇ ನಮ್ಮ ಪ್ಯಾಷನ್ ಅಲ್ಲ. ಓದಿನಲ್ಲೋ, ಆಟದಲ್ಲೋ, ಕೆಲಸದಲ್ಲೋ, ಹವ್ಯಾಸದಲ್ಲೋ ಸಮಯ ಕಳೆಯಬಹುದು. ಸಂಗಾತಿಗೆ ಅವರಿಗೆ ಬೇಕಾದ ಸ್ಪೇಸ್ ಕೊಟ್ಟುಬಿಡಿ. ಚೂರು ಬಿಟ್ಟು ಹಿಡಿದುಬಿಡಿ.
2. ಆಟಗಳು ಮೈದಾನದಲ್ಲಿರಲಿ ಮನಸ್ಸಲ್ಲಲ್ಲ
ಇಬ್ಬರ ಮಧ್ಯೆ ಕೋಪವಿದ್ದಾಗ ಒಂದೋ ಸಂಗಾತಿಯನ್ನು ಇಗ್ನೋರ್ ಮಾಡುವುದು ಅಥವಾ ಮೊಂಡು ಮಾಡುವುದು ನಡೆಯುತ್ತಿರುತ್ತದೆ. ಅದರಿಂದಾಗಿ ಸಂಗಾತಿ ಆ ಕ್ಷಣ ಚೂರು ಜಾಸ್ತಿ ಗಮನ ನೀಡಬಹುದು. ಆದರೆ ಅದರಿಂದ ಹೆಚ್ಚಿನ ಪರಿಣಾಮ ಏನೂ ಇರುವುದಿಲ್ಲ. ಪದೇ ಪದೇ ಕೆಟ್ಟದಾಗಿ ವರ್ತಿಸುವುದರಿಂದ, ಇಗ್ನೋರ್ ಮಾಡುವುದರಿಂದ, ಮೊಂಡು ವರ್ತನೆ ತೋರುವುದರಿಂದ ಸಂಗಾತಿ ಆಸಕ್ತಿ ಕಳೆದುಕೊಳ್ಳಬಹುದೇ ಹೊರತು ಹತ್ತಿರಾಗುವುದಿಲ್ಲ. ಇಂಥಾ ಆಟಗಳು ಸಂಬಂಧದಲ್ಲಿ ನಡೆಯುವುದಿಲ್ಲ.
ಲೈಫ್ ಚಿಕ್ಕದು, ಯಾರನ್ನಾದ್ರೂ ಲವ್ ಮಾಡಿ ದಿನ ಕಿಸ್ ಕೊಡಿ, ಕಿಸ್ ಪಡ್ಕೊಳಿ ಎಂದ ಗಾಯಕ
3. ಸಂಗಾತಿಯ ಆಸೆಗಳನ್ನು ಗೌರವಿಸಿ
ಕೆಲವೊಮ್ಮೆ ವಿಚಿತ್ರ ಆಸೆಗಳು ಹುಟ್ಟಿಕೊಳ್ಳುತ್ತವೆ. ಅವಳು ಆ ಆಸೆಯನ್ನು ಹೇಳಿಕೊಂಡಾಗ ಅವನು ಗೇಲಿ ಮಾಡುತ್ತಾನೆ ಅಂತಿಟ್ಟುಕೊಳ್ಳಿ. ಆಗ ಆಕೆ ಬೇಜಾರಾಗುತ್ತಾಳೆ. ಅವನ ಆಸೆಗೆ ಅವಳು ತಮಾಷೆ ಮಾಡಿದರೂ ಅಷ್ಟೇ. ಸಂಬಂಧದಲ್ಲಿ ಬೇಕಾಗಿರುವುದು ಪರಸ್ಪರ ಗೌರವ. ನೀವು ಅವರ ಮೇಲೆ ಗೌರವ ಕಳೆದುಕೊಂಡರೆ ಅಥವಾ ಅವರು ನಿಮ್ಮ ಮೇಲೆ ಗೌರವ ಕಳೆದುಕೊಂಡರೆ ಪ್ರೀತಿ ಉಳಿಯುತ್ತದಾ? ಇಲ್ಲ. ಸಂಬಂಧದಲ್ಲಿರುವ ನೆಗೆಟಿವ್‌ಗಳ ಕಡೆಗೆ ಗಮನ ಕೊಡುವುದನ್ನು ಬಿಟ್ಟರೆ ಚೂರು ನೆಮ್ಮದಿ ಸಿಗುತ್ತದೆ. ಒಳ್ಳೆಯದರ ಬಗ್ಗೆ ಮಾತ್ರ ಮಾತನಾಡಿ ಕಾಳಜಿ ತೋರಿಸಿದರೆ, ಒಳ್ಳೆಯ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದರೆ ಗೌರವ, ಪ್ರೀತಿ ಎಲ್ಲವೂ ಉಳಿಯುತ್ತದೆ. ಎಷ್ಟುಮಾತನಾಡಬೇಕು, ಏನು ಮಾಡಬಾರದು ಅನ್ನುವುದು ತಿಳಿದಿರಲಿ.
4. ಬೌಂಡರಿ ಗೆರೆಯೊಂದಿರಲಿ
ಪ್ರತಿಯೊಂದು ಆಟಕ್ಕೂ ಒಂದು ಚೌಕಟ್ಟು ಇರುತ್ತದೆ. ಕೆಲವು ಗೆರೆಗಳನ್ನು ನಾವು ದಾಟಬಾರದು. ದಾಟುವ ಸಂದರ್ಭ ಬಂದರೂ ತಡೆದುಕೊಳ್ಳಬೇಕು. ಸಂಬಂಧದಲ್ಲೂ ಅಂಥಾ ಗೆರೆಗಳನ್ನು ಹಾಕಿಕೊಂಡಿರಬೇಕು. ಜೋರು ಮಾತನಾಡುವ ಸಂದರ್ಭ ಬಂದರೂ ಅದನ್ನು ತಡೆ ಹಿಡಿಯಬೇಕು. ದನಿ ಹಿತವಾಗಿರಬೇಕು. ಜಗಳಾಡುವ ಮೂಡ್‌ನಲ್ಲಿರುವವರ ಜೊತೆ ಅದೇ ಥರ ಮಾತನಾಡಬಾರದು. ನಿಮ್ಮ ಅಭಿಪ್ರಾಯವನ್ನು ಕೋಪ ಇಳಿದ ಮೇಲೆಯೇ ಹೇಳುವ ಸಂಯಮ ಗಳಿಸಿದರೆ ಅದೇ ದೊಡ್ಡ ಗೆಲುವು.
ಎಷ್ಟೊಂದು ವಿಧದ ಮುತ್ತು..! ಕಿಸ್ ಮಾಡೋ ಮುನ್ನ ಅವುಗಳ ಅರ್ಥ ತಿಳ್ಕೊಳ್ಳಿ
5. ತಪ್ಪಿದ್ದಾಗ ಕ್ಷಮೆ ಕೇಳಿ
ಕೆಲವೊಮ್ಮೆ ತಪ್ಪುಗಳು ಆಗಿ ಹೋಗುತ್ತವೆ. ಪ್ರೀತಿಸುವವರಿಗೆ ನೋವಾಗುವಂತಹ ಘಟನೆಗಳು ಜರುಗುತ್ತವೆ. ಆಗ ಯಾರು ತಪ್ಪು ಮಾಡಿರುತ್ತಾರೋ ಅವರು ನಿಯತ್ತಿನಿಂದ ಕ್ಷಮೆ ಕೇಳಬೇಕು. ಇಲ್ಲ ನಾನು ಮಾಡಿದ್ದೇ ಸರಿ ಎಂದುಕೊಂಡರೆ ಮನಸಿನ ಗಾಜು ಒಡೆಯುತ್ತದೆ. ಸ್ವಚ್ಛ ಮನಸ್ಸಿನಿಂದ ಕ್ಷಮೆ ಕೇಳಿದರೂ ಏನೇ ಬೇಸರವಿದ್ದರೂ ಮರೆತುಹೋಗುತ್ತದೆ.