
ಚಾಣಕ್ಯ, ಕೌಟಿಲ್ಯ, ವಿಶ್ವಗುಪ್ತ ಮುಂತಾದ ಹೆಸರುಗಳಿಂದ ಖ್ಯಾತನಾಗಿದ್ದ ಭಾರತದ ಮೊದಲ ಅರ್ಥಶಾಸ್ತ್ರಜ್ಞನ 'ಅರ್ಥಶಾಸ್ತ್ರ' ಪಾಠಗಳು ಪ್ರಾಚೀನ ಭಾರತದ ಕಾರ್ಪೋರೇಟ್ ಸ್ಟ್ರ್ಯಾಟಜಿ ಹಾಗೂ ಮ್ಯಾನೇಜ್‌ಮೆಂಟ್‌ಗೆ ಬೈಬಲ್‌ನಂತಿದ್ದವು. ಹಾಗಾಗಿಯೇ ಚಾಣಕ್ಯ ಪ್ರಾಚೀನ ಭಾರತದ ಮ್ಯಾನೇಜ್‌ಮೆಂಟ್ ಗುರು. ಆತನ ಅರ್ಥ ನೀತಿಗಳು ಇಂದಿಗೂ ಕೂಡಾ ಪ್ರಸ್ತುತವೇ. ಅವನ್ನು ಅರ್ಥೈಸಿಕೊಂಡರೆ ನೀವು ಇಂದಿನ ಕಾರ್ಪೋರೇಟ್ ಯುಗದಲ್ಲಿ ಸುಲಭವಾಗಿ ಜಯಿಸಬಹುದು.
ಕೆಲಸದ ವೇಳೆ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳುವುದು ಹೇಗೆ?
1. ವಿಷವಿಲ್ಲದ ಹಾವು ಕೂಡಾ ವಿಷಕಾರಿಯಂತೆ ತೋರಿಕೊಳ್ಳಬೇಕು
ಒಂದು ಊರಿನಲ್ಲಿ ಹಾವು ಎಲ್ಲರಿಗೂ ಕಚ್ಚುತ್ತಿತ್ತು. ಇದರಿಂದ ಜನ ಕತ್ತಲೆಯಲ್ಲಿ ಹೊರ ತಿರುಗಾಡಲೇ ಭಯ ಪಡುತ್ತಿದ್ದರು. ಒಮ್ಮೆ ಸಂತನೊಬ್ಬ ಹಾವನ್ನು ನೋಡಿ, ಇದೇ ಬುದ್ಧಿ ಮುಂದುವರಿಸಿದರೆ ಕಲ್ಲಾಗುವಂತೆ ಶಾಪ ಕೊಡುವುದಾಗಿ ಹೇಳಿದ. ಆಗ ಹಾವು ಇನ್ನು ಮುಂದೆ ಯಾರಿಗೂ ಕಚ್ಚುವುದಿಲ್ಲ ಎಂದು ಪ್ರಾಮಿಸ್ ಮಾಡಿತು. ಕೆಲ ತಿಂಗಳ ಬಳಿಕ ಸಂತನು ಮತ್ತೆ ಅದೇ ಹಾದಿಯಲ್ಲಿ ಬಂದಾಗ ಹಾವಿನೆಡೆಗೆ ಮಕ್ಕಳೆಲ್ಲ ಕಲ್ಲು ತೂರುತ್ತಿದ್ದರು. ಅದನ್ನು ಎತ್ತಿ ಎಸೆಯುತ್ತಿದ್ದರು. ಆಗ ಹಾವು ಸಂತನ ಕಡೆ ನೋಡಿ, ನಿನ್ನಿಂದ ನಾನೀಗ ಸಾಯುವ ಹಂತಕ್ಕೆ ಬಂದಿದ್ದೇನೆ ಎಂದು ದೂಷಿಸಿತು. ಆಗ ಸಂತನು, ನಾನು ನಿನಗೆ ಯಾರಿಗೂ ಕಚ್ಚಬೇಡ ಎಂದೆನೇ ಹೊರತು ಭುಸ್ ಎಂದು ಹೆದರಿಸಬೇಡ ಎನ್ನಲಿಲ್ಲವಲ್ಲ ಎನ್ನುತ್ತಾನೆ.
ಇಂದಿನ ಜಗತ್ತಿನಲ್ಲಿ ಕೂಡಾ ಅಷ್ಟೇ. ನಾವು ಯಾರಿಗೂ ತೊಂದರೆಯುಂಟು ಮಾಡದಿದ್ದರೂ ನಮಗೆ ಯಾರಾದರೂ ತೊಂದರೆಯುಂಟು ಮಾಡಲು ಬಂದಾಗ ಹೆದರಿಸುವ ಅಗತ್ಯವಿದೆ. ಚಾಣಕ್ಯ ನೀತಿಯ ಪಾಠ ಕೂಡಾ ಇದೇ ಹೇಳುತ್ತದೆ. ರಾಜಾ ಹರಿಶ್ಚಂದ್ರನಂತೆಯೂ ಬೇಡ, ತೀರಾ ಕೆಟ್ಟವರಾಗಿರುವುದೂ ಬೇಡ. ಆದರೆ, ನಿಮ್ಮ ತಂಟೆಗೆ ಯಾರೂ ಬರದಷ್ಟು ಜೋರಾಗಿ ತೋರಿಸಿಕೊಳ್ಳಿ. ಅಂದರೆ, ಬದುಕುವ ಕೌಶಲ ಬೆಳೆಸಿಕೊಳ್ಳಿ.
2. ಎಲ್ಲ ಗೆಳೆತನದ ಹಿಂದೆ ಸ್ವಲ್ಪ ಸ್ವಾರ್ಥವಿದೆ
ಸ್ವಾರ್ಥವಿಲ್ಲದ ಗೆಳೆತನ ಎಲ್ಲಿಯೂ ಇರುವುದಿಲ್ಲ. ಯಾರೇ ಹತ್ತಿರವಾಗುತ್ತಿದ್ದಾರೆ ಎಂದರೂ ಅವರ ಆಸಕ್ತಿ ಏನು, ನಿಮ್ಮಿಂದ ಅವರೇನು ಆಪೇಕ್ಷಿಸುತ್ತಿದ್ದಾರೆ, ಏಕೆ ನಿಮಗೆ ಹತ್ತಿರವಾಗುತ್ತಿದ್ದಾರೆ ಎಂಬ ಪ್ರಶ್ನೆ ಕೇಳಿಕೊಳ್ಳಿ. ಸಿನಿಕರಾಗಿ ಎನ್ನುತ್ತಿಲ್ಲ. ಆದರೆ, ದೊಡ್ಡ ಪೊಸಿಶನ್‌ನಲ್ಲಿರುವವರು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಏಕೆಂದರೆ ನಿಮ್ಮ ಸುತ್ತಲಿರುವವರಲ್ಲಿ ಬಹುತೇಕರು ಅವರು ಅಲ್ಲಿರಲು ನಿಮ್ಮಿಂದ ಏನನ್ನೋ ಬಯಸುತ್ತಾರೆ. ಏನು ಮುಖ್ಯವೆಂದರೆ, ನೀವು ಈ ಕುರಿತು ಪ್ರಾಮಾಣಿಕವಾಗಿರುವುದು. ನಿಮ್ಮೆಲ್ಲ ಅಗತ್ಯಗಳ ಹೊರತಾಗಿ ನೀವು ಉತ್ತಮ ಸ್ನೇಹಿತರಾಗಿರುವುದು. ನಿಮ್ಮಿಂದ ಬಯಸಿದರೂ, ನಿಮಗೆ ಬೇಕಾದಾಗ ನಿಲುಕುತ್ತಾರೆ ಎಂಬಂಥ ಗೆಳೆಯರನ್ನು ಸಂಪಾದಿಸಿ.
ಕಚೇರಿಯ ಕೆಟ್ಟ ಪರಿಸರದಿಂದ ಕೆಟ್ಟವರಾಗುವ ತಾಯಂದಿರು!
3. ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಶೇರ್ ಮಾಡಬೇಡಿ
ನೀವೇ ರಹಸ್ಯವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಲಾರಿರಿ ಎಂದ ಮೇಲೆ ಮತ್ತೊಬ್ಬರು ನಿಮ್ಮ ರಹಸ್ಯ ಕಾಪಾಡಬೇಕೆಂದು ನಿರೀಕ್ಷಿಸುವುದು ತಪ್ಪು. ಹಾಗಾಗಿ, ಶಾಲೆ, ಕಾಲೇಜು, ಕಚೇರಿ ಎಲ್ಲೇ ಇರಲಿ ಜನರು ತಮ್ಮ ಲಾಭಕ್ಕನುಗುಣವಾಗಿ ಬದಲಾಗುತ್ತಿರುತ್ತಾರೆ. ಹೀಗಾಗಿ, ಯಾರೊಂದಿಗೂ ಗುಟ್ಟುಗಳನ್ನು ಹಂಚಿಕೊಳ್ಳಬೇಡಿ. ಅದರಲ್ಲೂ ಬಿಸ್ನೆಸ್ ಸೀಕ್ರೆಟ್‌ಗಳನ್ನು ಖಡಾಖಂಡಿತವಾಗಿ ಗುಟ್ಟಾಗಿಡಿ.
4. ಶುರು ಮಾಡಿದ ಮೇಲೆ ಹೆದರದಿರಿ
ಯಾವುದೇ ಕೆಲಸವನ್ನು ಆರಂಭಿಸಿದಿರಾದರೆ ಮಧ್ಯದಲ್ಲಿ ಹೆದರುವುದು, ಅರ್ಧಕ್ಕೇ ಕೈ ಬಿಡುವುದು ಮಾಡಬೇಡಿ. ಪ್ರಾಮಾಣಿಕವಾಗಿ ನಿಮ್ಮ ಪಾಡಿಗೆ ಕೆಲಸ ಮಾಡಿ. ಪ್ರಾಮಾಣಿಕವಾಗಿ ಕೆಲಸ ಮಾಡುವವರು ಎಲ್ಲರಿಗಿಂತ ಹೆಚ್ಚು ಸಂತೋಷವಾಗಿರುತ್ತಾರೆ. ಹಲವರು ತಮ್ಮ ಕೆಲಸದಲ್ಲಿ ವಿಫಲರಾಗಲು ಕಾರಣವೇ ಅವರು ಕೆಲಸವನ್ನು ಅರ್ಧಕ್ಕೇ ಬಿಡುವುದು. ಉದಾಹರಣೆಗೆ ಹೊಸ ವರ್ಷದಲ್ಲಿ ತೆಗೆದುಕೊಳ್ಳುವ ಎಷ್ಟು ರೆಸಲ್ಯೂಶನ್‌ಗಳನ್ನು ಸಾಧಿಸುವಿರಿ ಲೆಕ್ಕ ಹಾಕಿ. ನಿರಂತರವಾದ ಪ್ರಾಮಾಣಿಕ ಪರಿಶ್ರಮದಿಂದ ಮಾತ್ರ ಯಶಸ್ಸು ಸಿದ್ದಿಯಾಗಲು ಸಾಧ್ಯ.
ಕಚೇರಿಯಲ್ಲಿದ್ದರೆ ಬೆಸ್ಟೀ, ಕೆಲಸದಲ್ಲಿ ಹೆಚ್ಚುತ್ತೆ ಪ್ರೀತಿ
5. ಕೆಲಸ ಆರಂಭಿಸುವ ಮುನ್ನ ಪ್ರಶ್ನಿಸಿಕೊಳ್ಳಿ
ಯಾವುದೇ ಕೆಲಸ ಆರಂಭಿಸುವ ಮುನ್ನ ನಿಮ್ಮನ್ನು ನೀವೇ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ. ನಾನೇಕೆ ಇದನ್ನು ಮಾಡುತ್ತಿದ್ದೇನೆ, ಇದರ ಫಲಿತಾಂಶ ಏನಿರಬಹುದು, ನಾನು ಯಶಸ್ವಿಯಾಗಬಲ್ಲೆನೇ ಎಂದು. ತೃಪ್ತಿಕರ ಉತ್ತರಗಳನ್ನು ಕೊಟ್ಟುಕೊಳ್ಳಲು ಸಾಧ್ಯವಾದಾಗಷ್ಟೇ ಮುಂದುವರಿಯಿರಿ. ಏಕೆಂದರೆ, ಇಂದಿನ ಯುವಜನತೆ ಎಲ್ಲವನ್ನೂ ಫಟಾಫಟ್ ನಿರ್ಧರಿಸುತ್ತಾರೆ. ಹಾಗಾಗಿಯೇ ಸಂಬಂಧ, ವೃತ್ತಿ, ಬದುಕಿನಲ್ಲಿ ಹೆಚ್ಚು ಸೋಲು ಅನುಭವಿಸುತ್ತಾರೆ. ಬದಲಿಗೆ ಅವರು ಎಲ್ಲಕ್ಕೂ ಮುನ್ನ ಈ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿದ್ದೇ ಆದಲ್ಲಿ ಹೆಚ್ಚು ಯಶಸ್ವಿಯಾಗಿಯೂ, ಹೆಚ್ಚು ಸುಖವಾಗಿಯೂ ಇರಬಲ್ಲರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.