
ಕೆಲ ಜನರಿಗೆ ನಮ್ಮನ್ನು ನೋವಿನಲ್ಲಿ ಕಾಣಲು, ನಮ್ಮ ಸೋಲನ್ನು ಸಂತೋಷಿಸಲು ಇಷ್ಟ. ಅವರೇ ನಮ್ಮ ಶತ್ರುವಾಗಿಬಿಡುತ್ತಾರೆ. ಮತ್ತೆ ಕೆಲವರು ಕಾರಣವೇ ಇಲ್ಲದೆ ನಮ್ಮನ್ನು ದ್ವೇಷಿಸಿ ಇದೇ ಪಟ್ಟಿಗೆ ಸೇರುತ್ತಾರೆ. ಶತ್ರುಗಳು ಹೇಗೇ ಆಗಲಿ, ಮುಳ್ಳಿಗೆ ಮುಳ್ಳು ಎಂಬಂತೆ ಕಾದಾಡುವುದನ್ನು ಬಿಟ್ಟು ಅವರ ವರ್ತನೆಗೆ ಸಂಪೂರ್ಣ ವಿರುದ್ಧವಾದ ವರ್ತನೆ ತೋರಿಸಿ. ಅಂದರೆ ದ್ವೇಷಿಸುವವರನ್ನು ಪ್ರೀತಿಸಿ ನೋಡಿ. ಅವರು ಗೊಂದಲದಲ್ಲಿ ನಿಮ್ಮ ಬಳಿ ಹೇಗೆ ವರ್ತಿಸಬೇಕೆಂಬುದೇ ತಿಳಿಯದೆ ವಿಲವಿಲ ಒದ್ದಾಡುತ್ತಾರೆ. ಇಷ್ಟಕ್ಕೂ ಶತ್ರುಗಳನ್ನು ಏಕೆಲ್ಲ ಪ್ರೀತಿಸಬೇಕು ಅಂದರೆ...
1. ಅವರು ಆ್ಯಂಗರ್ ಮ್ಯಾನೇಜ್‌ಮೆಂಟ್ ಹೇಳಿಕೊಟ್ಟಿರುತ್ತಾರೆ.
ಸಿಟ್ಟು ಹೆಚ್ಚಾಗಿರುವವರು ಆ್ಯಂಗರ್ ಮ್ಯಾನೇಜ್‌ಮೆಂಟ್ ಕ್ಲಾಸಿಗೆ ಹೋಗಬಹುದು. ಆದರೆ, ಅಲ್ಲಿ ಥಿಯರಿ ಅಷ್ಟೇ ಹೇಳಿಕಡುತ್ತಾರೆ, ಪ್ರಾಕ್ಟಿಕಲ್ ಅಲ್ಲ. ಆದರೆ ನಿಮಗೆ ಪ್ರಾಕ್ಟಿಕಲ್ ಕ್ಲಾಸ್ ಹೇಳಿಕೊಡುವುದು ನಿಮ್ಮ ಶತ್ರುಗಳು. ಅವರು ಕೆರಳಿಸುವ ಲೆಕ್ಕಕ್ಕೆ ನಿಮ್ಮ ಸಿಟ್ಟಿನ ಕರಾಳ ರೂಪ ಕಾಣಿಸಿಕೊಳ್ಳುತ್ತದೆ. ಆದರೆ, ಬಹುತೇಕ ಬಾರಿ ನೀವದನ್ನು ಹತ್ತಿಕ್ಕಿಕೊಂಡು ಇರಲು ಕಲಿಯುತ್ತೀರಿ. ಅಂದರೆ ಕೋಪವನ್ನು ನಿಭಾಯಿಸುವುದನ್ನು ಅವರು ಹೇಳಿಕೊಟ್ಟಿದ್ದಾರೆ ಎಂದಾಯಿತು. ಇಂಥದೊಂದು ಅದ್ಭುತ ಥೆರಪಿಯನ್ನು ಉಚಿತವಾಗಿ ನಡೆಸಿದ ಅವರನ್ನು ಪ್ರೀತಿಸಬೇಕಲ್ಲವೇ?
ಎದೆ ಎತ್ತರಕ್ಕೆ ಬೆಳೆದ ಮಕ್ಕಳಿಗೆ ಬರುತ್ತಾ ಸಿಟ್ಟು? ಮ್ಯಾನೇಜ್ ಮಾಡೋ ಗುಟ್ಟು
2. ಆರೋಗ್ಯಕರ ಸ್ಪರ್ಧೆಗೆ ಅವಕಾಶ
ನಿಮ್ಮ ಶತ್ರುಗಳೇ ಹೆಚ್ಚಿನ ಬಾರಿ ನಿಮ್ಮೊಳಗೆ ಸ್ಪರ್ಧಾತ್ಮಕ ಕಿಚ್ಚನ್ನು ಹೊತ್ತಿಸುವುದು. ನಿಮ್ಮ ಸೋಲಿನಲ್ಲಿ ಅವರು ಖುಷಿ ಕಾಣುತ್ತಿದ್ದಾರೆ ಎಂಬ ಕಾರಣದಿಂದಲೇ ನೀವು ಗೆಲ್ಲುವ ಹಠಕ್ಕೆ ಬೀಳುತ್ತೀರಿ. ಸ್ಪರ್ಧಿಸಲು ನಿಮಗೊಂದು ಸರಿಯಾದ ಪ್ರೇರಣೆ ಸಿಕ್ಕಿರುತ್ತದೆ. ಆದರೆ, ಹೀಗೆ ಮಾಡುವಾಗ ನೀವೂ ಅವರಂತೆ ಅವರ ಸೋಲಿನಲ್ಲಿ ಖುಷಿ ಕಂಡರೆ ಅವರಿಗೂ ನಿಮಗೂ ವ್ಯತ್ಯಾಸವಿರದು. ಬದಲಿಗೆ, ನೈತಿಕವಾಗಿ ಶಾಂತ ಮನಸ್ಥಿತಿಯಲ್ಲಿ ಎಲ್ಲೆಡೆ ಗೆಲ್ಲುತ್ತಾ, ಮುನ್ನುಗ್ಗುತ್ತಾ ಸಾಗಿ. ಆರೋಗ್ಯಕರ ಸ್ಪರ್ಧೆ ಒಳ್ಳೆಯದೇ.
3. ಅವರ ನೆಗೆಟಿವ್ ಕಾಮೆಂಟ್ಸ್‌ನಿಂದ ಉತ್ತೇಜನ
ಅವರು ನಿಮ್ಮ ಶತ್ರುಗಳೆಂದ ಮೇಲೆ ಅವರು ನಿಮ್ಮ ಬಗ್ಗೆ ಒಳ್ಳೆಯ ಮಾತಾಡುವುದು ದೂರವೇ ಉಳಿಯಿತು. ಆದರೆ, ಅವರು ಹೇಳುತ್ತಿರುವುದರಲ್ಲಿ ಸ್ವಲ್ಪ ಸತ್ಯವೂ ಅಡಗಿರಬಹುದು ಅಲ್ಲವೇ? ಹೀಗೆ ಶತ್ರುವಿನಿಂದ ನೆಗೆಟಿವ್ ಕಾಮೆಂಟ್ ಬಂದಾಗಲೆಲ್ಲ ನಿಮ್ಮನ್ನು ನೀವು ಪರಾಮರ್ಶಿಸಿಕೊಳ್ಳಿ. ಅವರು ಹೇಳಿದ್ದರಲ್ಲಿ ಸತ್ಯವಿದ್ದರೆ, ಆಗ ಅದು ನೀವು ತಪ್ಪನ್ನು ಸರಿ ಪಡಿಸಿಕೊಂಡು ಇನ್ನೂ ಉತ್ತಮ ವ್ಯಕ್ತಿಯಾಗಿ ಮುನ್ನಡೆಯಲು ಸಹಕಾರಿಯಾಗುತ್ತದೆ. ಈ ಮೂಲಕ ನಿಮ್ಮ ವ್ಯಕ್ತಿತ್ವ ವಿಕಸನವಾಗುತ್ತದೆ. ಇದು ಮತ್ತೊಂದು ಬಾರಿ ಫ್ರೀಯಾಗಿ ಅವರು ನಿಮಗೆ ಪರ್ಸನಾಲಿಟಿ ಡೆವಲಪ್‌ಮೆಂಟ್ ಕ್ಲಾಸ್ ತೆಗೆದುಕೊಂಡ ಸಮಯ.
4. ಇಂಟರ್ ಪರ್ಸನಲ್ ಸ್ಕಿಲ್ಸ್ ಹೆಚ್ಚಿಸುತ್ತಾರೆ
ನಿಮ್ಮ ಇಂಟರ್ ಪರ್ಸನಲ್ ಸ್ಕಿಲ್ ಹೆಚ್ಚಿಸಿಕೊಳ್ಳಬೇಕೆಂದರೆ ನೀವಿದನ್ನು ಟಾಸ್ಕ್ ಆಗಿ ತೆಗೆದುಕೊಳ್ಳಬೇಕು. ಶತ್ರುವಿನೊಂದಿಗೆ ಮಾತನಾಡಿ, ಶಾಂತಿ ಸ್ಥಾಪನೆ ಮಾಡಿಕೊಳ್ಳಬೇಕು. ಕಡೆಯಲ್ಲಿ ನಿಮಗೊಬ್ಬ ಎಕ್ಸ್ಟ್ರಾ ಫ್ರೆಂಡ್ ಸಿಕ್ಕಿರುತ್ತಾರೆ. ಜೊತೆಗೆ, ಈ ಹೆಚ್ಚುವರಿ ಇಂಟರ್‌ಪರ್ಸನಲ್ ಸ್ಕಿಲ್ ಕಡೆವರೆಗೂ ಕೈ ಹಿಡಿಯುತ್ತದೆ.
ಕೋಪದಲ್ಲಿ ನೀವು ಜಮದಗ್ನಿಯೇ? ಬುದ್ಧನಾಗಲು ಹೀಗೆ ಮಾಡಿ
5. ಪಾಸಿಟಿವ್ ಆಗಿರಲು ಅವಕಾಶ
ಶತ್ರುಗಳನ್ನು ದ್ವೇಷದಿಂದ ಕಂಡಷ್ಟೂ ನಮ್ಮ ನೆಗೆಟಿವ್ ಯೋಚನೆಗಳು, ನೆಗೆಟಿವ್ ಗುಣಗಳು ಹೆಚ್ಚುತ್ತವೆ. ಇದರಿಂದ ಪಾಸಿಟಿವ್ ಆದಂಥದ್ದೇನೂ ನಮಗೆ ಸಂಭವಿಸಲು ಸಾಧ್ಯವಿಲ್ಲ. ಬದಲಿಗೆ ಅವರ ಬಗ್ಗೆ ಪಾಸಿಟಿವ್ ಆಗಿ ಯೋಚಿಸಲಾರಂಭಿಸಿದರೆ, ಉಳಿದೆಲ್ಲ ಯೋಚನೆಗಳೂ ಪಾಸಿಟಿವ್ ಆಗಿಯೇ ಕೊಂಡಿಯಾಗಿ ಮುಂದುವರೆಯುತ್ತವೆ. ಶತ್ರುವನ್ನು ಪ್ರೀತಿಸಬೇಕೆಂಬುದು ಕೂಡಾ ಪಾಸಿಟಿವ್ ಚಿಂತನೆಯೇ ಅಲ್ಲವೇ? ದ್ವೇಷಿಸುವುದರಿಂದ ಹಲವಷ್ಟನ್ನು ಕಳೆದುಕೊಳ್ಳುತ್ತೇವೆ. ಆದರೆ, ಪ್ರೀತಿಸುವುದರಿಂದ ಹಲವಷ್ಟನ್ನು ಪಡೆದುಕೊಳ್ಳುತ್ತೇವೆ.
6. ಕೇವಲ ಅಪಾರ್ಥಗಳಿರಬಹುದು
ಕೆಲವೊಮ್ಮೆ ಕೇವಲ ಅಪಾರ್ಥಗಳ ಕಾರಣದಿಂದ ಒಂದಿಷ್ಟು ಶತ್ರುಗಳು ಹುಟ್ಟಿಕೊಂಡಿರುತ್ತಾರೆ. ಒಮ್ಮೆ ಅವರನ್ನು ಶತ್ರು ಎಂದುಕೊಂಡ ಮೇಲೆ ಅವರು ಮಾಡುವುದೆಲ್ಲವೂ ವಿರುದ್ಧವಾಗಿಯೇ ಕಾಣಲಾರಂಭಿಸುತ್ತದೆ. ಅದೇ ಅವರನ್ನು ಪ್ರೀತಿಸತೊಡಗಿದರೆ, ಅವರೊಂದಿಗೆ ಆ ಬಗ್ಗೆ ಮಾತನಾಡಿದರೆ ನಿಮ್ಮಿಬ್ಬರ ನಡುವೆ ದ್ವೇಷಕ್ಕೆ ಬೇರೇನೂ ಕಾರಣಗಳಿಲ್ಲ, ನೀವು ಅವರ ಬಗ್ಗೆ ಅಂದುಕೊಂಡಿದ್ದು ನಿಜವಲ್ಲ ಎಂಬುದು ಅರ್ಥವಾಗುತ್ತದೆ. ಇದರಿಂದ ವಿನಾ ಕಾರಣ ಶತ್ರುಗಳನ್ನು ಹೊಂದುವುದು ತಪ್ಪುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.