ಪಾಕೆಟ್ ಮನಿಯೇ ಮಕ್ಕಳ ಮನಿ ಮ್ಯಾನೇಜ್ಮೆಂಟ್ ಗುರು!

By Suvarna News  |  First Published Dec 19, 2019, 2:30 PM IST

ಮಕ್ಕಳಿಗೆ ಬಾಲ್ಯದಲ್ಲೇ ಹಣದ ಮಹತ್ವವನ್ನು ತಿಳಿಸಿಕೊಡಲು ಪಾಲಕರಿಗಿರುವ ಸರಳ ಮಾರ್ಗವೆಂದರೆ ಪಾಕೆಟ್ ಮನಿ. ಹಣವನ್ನು ಯಾವಾಗ, ಹೇಗೆಲ್ಲ ಬಳಸಬೇಕು ಎಂಬುದನ್ನು ಪಾಕೆಟ್ ಮನಿ ಮೂಲಕ ಮಕ್ಕಳು ಕಲಿಯುತ್ತಾರೆ. 


ಅಪ್ಪ ನಂಗೆ ಪೆನ್ ತೊಗೊಳ್ಳಬೇಕು ಹಣ ಕೊಡು, ಇವತ್ತು ನೋಟ್ಬುಕ್ ತೊಗೊಳ್ಳಬೇಕು ಹಣ ಕೊಡು ಎಂದು ದಿನಂಪ್ರತಿ ಒಂದೊಂದು ಬೇಡಿಕೆಯಿಡುವ ಮಕ್ಕಳಿಗೆ ಬಹುತೇಕ ಅಪ್ಪ-ಅಮ್ಮಂದಿರು ತಿಂಗಳಿಗೆ ಸ್ವಲ್ಪ ಹಣವನ್ನು ಪಾಕೆಟ್ ಮನಿ ಎಂದು ನೀಡುವ ಅಭ್ಯಾಸ ಬಹುತೇಕ ಮನೆಗಳಲ್ಲಿದೆ. ಮಕ್ಕಳು ಈ ಹಣದಲ್ಲೇ ತಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುವುದು ಮಾತ್ರವಲ್ಲ ಉಳಿಕೆ ಹಣವನ್ನು ಜೋಪಾನ ಮಾಡುವ ಅಭ್ಯಾಸ ಕೂಡ ಹೊಂದಿರುತ್ತಾರೆ. ಮಕ್ಕಳಿಗೆ ಪಾಕೆಟ್ ಮನಿ ಕೊಡುವುದರಿಂದ ಏನೆಲ್ಲ ಪ್ರಯೋಜನಗಳಿವೆ ಗೊತ್ತಾ?

ಮಕ್ಕಳಿಗೆ ಕತೆ ಹೇಳೋದ್ರಿಂದ ಏನೆಲ್ಲ ಲಾಭ ಗೊತ್ತಾ?

Tap to resize

Latest Videos

undefined

* ದುಡ್ಡಿನ ಮೌಲ್ಯದ ಅರಿವಾಗುತ್ತದೆ: ಪಾಕೆಟ್ ಮನಿ ನೀಡುವುದರಿಂದ ಬಾಲ್ಯದಲ್ಲೇ ಮಕ್ಕಳಿಗೆ ಹಣದ ಮೌಲ್ಯ ತಿಳಿಯುತ್ತದೆ. ಪ್ರತಿ ಪೈಸೆಯೂ ಎಷ್ಟೊಂದು ಮಹತ್ವ ಪಡೆದಿದೆ ಎಂಬುದರ ಅರಿವಾಗುತ್ತದೆ. ಕಷ್ಟಪಟ್ಟರೆ ಮಾತ್ರ ಹಣ ಸಿಗುತ್ತದೆ ಎಂಬ ಅರಿವನ್ನು ಕೂಡ ಪೋಷಕರು ಮಕ್ಕಳಲ್ಲಿ ಮೂಡಿಸಬೇಕು. ಮಕ್ಕಳು ಏನಾದರೂ ಒಳ್ಳೆಯ ಕೆಲಸ ಮಾಡಿದಾಗ ಉದಾಹರಣೆಗೆ ಪಕ್ಕದ ಮನೆಯಲ್ಲಿರುವ ಅಜ್ಜಿಗೆ ಗಾರ್ಡನಿಂಗ್ ಮಾಡುವ ಕಾರ್ಯದಲ್ಲಿ ನಿಮ್ಮ ಮಗ ಅಥವಾ ಮಗಳು ನೆರವಾಗಿದ್ದಾಳೆ ಎಂದರೆ ಇನ್ನೊಬ್ಬರಿಗೆ ಸಹಾಯ ಮಾಡುವ ಅವಳ ಗುಣವನ್ನು ಉತ್ತೇಜಿಸಲು ನಿಗದಿತ ಪಾಕೆಟ್ ಮನಿಗಿಂತ ಸ್ವಲ್ಪ ಹೆಚ್ಚು ಹಣವನ್ನು ನೀಡಿ. ಹೀಗೆ ಮಾಡುವುದರಿಂದ ಮಕ್ಕಳಿಗೆ ಕಷ್ಟಪಟ್ಟರೆ ಮಾತ್ರ ಹಣ ಸಿಗುತ್ತದೆ ಎಂಬುದು ತಿಳಿಯುತ್ತದೆ.

* ಮನಿ ಮ್ಯಾನೇಜ್ಮೆಂಟ್ ಕಲಿಯುತ್ತಾರೆ: ಪಾಕೆಟ್ ಮನಿಯಿಂದಾಗಿ ಮಕ್ಕಳು ಬಾಲ್ಯದಲ್ಲೇ ಹಣವನ್ನು ಹೇಗೆ ಬಳಸಬೇಕು ಎಂಬುದನ್ನು ಕಲಿಯುತ್ತಾರೆ. ಎಷ್ಟು ಹಣ ಖರ್ಚು ಮಾಡಬೇಕು, ಎಷ್ಟನ್ನು ಉಳಿಸಬೇಕು ಎಂಬುದನ್ನು ಪ್ಲ್ಯಾನ್ ಮಾಡುತ್ತಾರೆ. ಹಣವನ್ನು ಜಾಣತನದಿಂದ ಹೇಗೆ ಖರ್ಚು ಮಾಡಬಹುದು ಎಂಬುದು ಕೂಡ ಅವರಿಗೆ ತಿಳಿಯುತ್ತದೆ.

* ಉಳಿತಾಯದ ಮಹತ್ವ ತಿಳಿಯುತ್ತದೆ: ಯಾವುದಾದರೊಂದು ವಸ್ತುವನ್ನು ಖರೀದಿಸಲು ಪಾಕೆಟ್ ಮನಿಯಲ್ಲಿ ಹೇಗೆ ಉಳಿತಾಯ ಮಾಡಬೇಕು ಎಂಬುದನ್ನು ಮಕ್ಕಳಿಗೆ ಕಲಿಸಿಕೊಡುವುದರಿಂದ ಆ ವಸ್ತುವನ್ನು ಖರೀದಿಸುವಾಗ ಇದು ನನ್ನ ಹಣದಿಂದ ಕೊಂಡುಕೊಂಡಿದ್ದು ಎಂಬ ಹೆಮ್ಮೆಯ ಭಾವ ಅವರಲ್ಲಿ ಮೂಡುತ್ತದೆ. ಹೀಗಾಗಿ ನೀವು ಪಾಕೆಟ್ ಮನಿ ಕೊಟ್ಟಾಗಲೆಲ್ಲ ಅದನ್ನು ಪೂರ್ತಿಯಾಗಿ ಖಾಲಿ ಮಾಡದೆ ಸ್ವಲ್ಪ ಹಣವನ್ನು ತನಗೆ ಬೇಕಾದ ವಸ್ತುವನ್ನು ಕೊಳ್ಳಲು ಉಳಿತಾಯ ಮಾಡುತ್ತಾರೆ.

* ದುಂದುವೆಚ್ಚಕ್ಕೆ ಕಡಿವಾಣ: ಇತ್ತೀಚಿನ ದಿನಗಳಲ್ಲಿ ಮಕ್ಕಳು ಕೇಳಿದ್ದನ್ನೆಲ್ಲ ಹೆತ್ತವರು ತೆಗೆದುಕೊಡುತ್ತಾರೆ. ಮಕ್ಕಳು ಕೂಡ ಅಷ್ಟೇ, ಅತ್ತು ರಂಪಾಟ ಮಾಡಿದರೆ ಅಪ್ಪ-ಅಮ್ಮ ಕೇಳಿದ ವಸ್ತುವನ್ನು ಖರೀದಿಸಿ ಕೊಡುತ್ತಾರೆ ಎಂಬುದನ್ನು ಅರಿತು ಬಿಟ್ಟಿದ್ದಾರೆ. ನಿಮ್ಮ ಮಕ್ಕಳಲ್ಲಿ ಕೂಡ ಇಂಥ ಅಭ್ಯಾಸವಿದ್ದರೆ ಪಾಕೆಟ್ ಮನಿ ನೀಡುವ ಮೂಲಕ ಅವರನ್ನು ದಾರಿಗೆ ತರಬಹುದು. ಕೈಯಲ್ಲಿ ಹಣ ಕಡಿಮೆಯಿರುವಾಗ ಅದನ್ನು ಜಾಗ್ರತೆಯಿಂದ ಹೇಗೆ ಖರ್ಚು ಮಾಡಬಹುದು ಎಂಬುದನ್ನು ಅವರು ಕಲಿತುಕೊಳ್ಳುತ್ತಾರೆ.

ವಿವಾಹಿತರಿಗೆ 'ಗುಡ್ ನ್ಯೂಸ್' ಯಾವಾಗ ಎಂದು ಕೇಳೋ ಅಭ್ಯಾಸ ಬಿಟ್ಬಿ

ಪಾಕೆಟ್ ಮನಿ ನೀಡುವ ಮುನ್ನ: ಮಗುವಿಗೆ 5-6 ವರ್ಷವಾಗುವ ತನಕ ಹಣದ ಉಪಯೋಗವೇನು ಎಂಬುದು ಸಮರ್ಪಕವಾಗಿ ಅರ್ಥವಾಗುವುದಿಲ್ಲ. ಪಾಕೆಟ್ ಮನಿ ಎಂದ ತಕ್ಷಣ ದೊಡ್ಡ ಮೊತ್ತದ ಹಣ ನೀಡಬೇಕಾದ ಅಗತ್ಯವಿಲ್ಲ. ಪ್ರಾರಂಭದಲ್ಲಿ 50-100 ರೂಪಾಯಿ ನೀಡಿದರೆ ಸಾಕು. ಪ್ರತಿ ತಿಂಗಳ ಪ್ರಾರಂಭದಲ್ಲಿ ಮಕ್ಕಳಿಗೆ ಹಣ ನೀಡಿ ಹಾಗೂ ಅದನ್ನು ಯಾವುದಕ್ಕೆಲ್ಲ ಬಳಸಬಹುದು ಎಂಬುದನ್ನು ಅವರೊಂದಿಗೆ ಕುಳಿತು ಚರ್ಚಿಸಿ. ಇದರಿಂದ ಮಕ್ಕಳು ಹಣ ಅಪವ್ಯಯ ಮಾಡುವುದು ತಪ್ಪುತ್ತದೆ. ತಿಂಗಳ ಕೊನೆಯಲ್ಲಿ ಅವರ ಬಳಿ ಎಷ್ಟು ಹಣ ಉಳಿದಿದೆ ಮತ್ತು ಯಾವುದಕ್ಕೆಲ್ಲ ಎಷ್ಟೆಷ್ಟು ಹಣ ವ್ಯಯಿಸಿದ್ದಾರೆ ಎಂಬ ಮಾಹಿತಿ ಪಡೆಯಿರಿ.

ಮಕ್ಕಳು ದೊಡ್ಡವರಾದಂತೆ ಅವರ ಅಗತ್ಯಕ್ಕನುಗುಣವಾಗಿ ಪಾಕೆಟ್ ಮನಿ ಮೊತ್ತವನ್ನು ಹೆಚ್ಚಿಸಿ. ಮಕ್ಕಳಿಗೆ ಪಾಕೆಟ್ ಮನಿ ಹಾಕಿಡಲು ಒಂದು ಡಬ್ಬ ಹಾಗೂ ಉಳಿಕೆಯಾದ ಹಣವನ್ನು ಕೂಡಿಡಲು ಇನ್ನೊಂದು ಡಬ್ಬವನ್ನು ಒದಗಿಸಿ. ಮಕ್ಕಳಿಗೆ ಯಾವುದೇ ಕಾರಣಕ್ಕೂ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣ ನೀಡಬೇಡಿ. ಏಕೆಂದರೆ ಒಮ್ಮೆ ನೀಡಿದರೆ ಅವರು ಪ್ರತಿ ಬಾರಿಯೂ ಯಾವುದೋ ಒಂದು ಕಾರಣವನ್ನು ನಿಮ್ಮ ಮುಂದಿಟ್ಟು ಹೆಚ್ಚುವರಿ ಹಣ ಕೇಳುವ ಸಾಧ್ಯತೆಯಿರುತ್ತದೆ.ಅಲ್ಲದೆ, ಪ್ರತಿ ತಿಂಗಳು ನಿಗದಿತ ಮೊತ್ತದ ಹಣ ನೀಡುವುದರಿಂದ ಬಜೆಟ್ಗೆ ಅನುಗುಣವಾಗಿ ಖರ್ಚು ಮಾಡುವುದು ಹೇಗೆ ಎಂಬುದು ಮಕ್ಕಳಿಗೆ ತಿಳಿಯುತ್ತದೆ.

ಅಮ್ಮನಾದ ಬಳಿಕದ ಸವಾಲುಗಳು ಸುಲಭವಿಲ್ಲ, ಆದರೆ ನೀವು ಒಂಟಿಯಲ್ಲ!  

click me!