
ಕಲಬುರಗಿ (ಏ.08): ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎನ್ನುತ್ತಾರೆ. ಆದರೆ ಅದೇ ಪ್ರೀತಿ ಹಾದಿ ತಪ್ಪಿದಾಗ, ಹಣದ ವ್ಯಾಮೋಹ ಬೆರೆತಾಗ ಎಂತಹ ಭೀಕರ ಅಂತ್ಯ ಕಾಣುತ್ತದೆ ಎಂಬುದಕ್ಕೆ ಕಲಬುರಗಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಮಗನ ವಯಸ್ಸಿನ ಯುವಕನೊಂದಿಗೆ ಸಲ್ಲದ ಸಂಬಂಧ ಬೆಳೆಸಿದ್ದ 57 ವರ್ಷದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಅದೇ ಯುವಕನ ಕೈಯಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ. ಕೊಲೆ ಮಾಡಿದ ಬಳಿಕ ಶವವನ್ನು ಸುಟ್ಟು ಹಾಕಿದ್ದ ಕಿರಾತಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲಮೂಡ ಗ್ರಾಮದ ಬಳಿಯ ನಿರ್ಜನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಅರ್ಧಮರ್ದ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಶವ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ತನಿಖೆ ಚುರುಕುಗೊಳಿಸಿದ ಕಮಲಾಪುರ ಪೊಲೀಸರಿಗೆ ಇದು ಕಲಬುರಗಿ ನಿವಾಸಿ ಜ್ಯೋತಿ ಕಪಾಳೆ (57) ಅವರ ಶವ ಎಂದು ತಿಳಿದುಬಂದಿದೆ. ಜ್ಯೋತಿ ಅವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಾಂಜರಖೇಡ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಅವಿವಾಹಿತೆಯಾಗಿದ್ದ ಜ್ಯೋತಿ ಅವರು ಭಾಲ್ಕಿಯಲ್ಲಿ ವಾಸವಿದ್ದರು. ರಜೆ ದಿನಗಳಲ್ಲಿ ಕಲಬುರಗಿಯ ಆನಂದ ನಗರದಲ್ಲಿರುವ ತಾಯಿ ಮನೆಗೆ ಬರುತ್ತಿದ್ದರು. ಈ ವೇಳೆ ಅವರಿಗೆ ನೆರೆಯ ನಿವಾಸಿ ಅಮರ ಗುಡ್ಡಳ್ಳಿ (27) ಎಂಬಾತನ ಪರಿಚಯವಾಗಿತ್ತು. ಕಳೆದ ಐದು ವರ್ಷಗಳಿಂದ ಇಬ್ಬರ ನಡುವೆ ಅಕ್ರಮ ಸಂಬಂಧವಿತ್ತು. 27ರ ಹರೆಯದ ಅಮರನಿಗೆ ಮದುವೆಯಾಗಿ ಹೆಂಡತಿ ಮಕ್ಕಳಿದ್ದರೂ, ಟೀಚರ್ ಜ್ಯೋತಿ ನೀಡುತ್ತಿದ್ದ ಹಣದ ಆಮಿಷಕ್ಕೆ ಬಿದ್ದು ಆಕೆಯೊಂದಿಗೆ ಸಂಬಂಧ ಮುಂದುವರಿಸಿದ್ದ. ಜ್ಯೋತಿ ನೀಡಿದ್ದ ಸುಮಾರು 15 ರಿಂದ 20 ಲಕ್ಷ ರೂಪಾಯಿ ಹಣದಲ್ಲಿ ಅಮರ್ ಐಷಾರಾಮಿ 'ಥಾರ್' ಕಾರನ್ನು ಕೂಡ ಖರೀದಿಸಿದ್ದ.
ಇದನ್ನೂ ಓದಿ: 40 ವರ್ಷದ ಗಂಡ ಬೇಡ, ಪ್ರಿಯತಮ ಬೇಕು: ಯುವತಿ ಕೋರಿಕೆಗೆ ನ್ಯಾಯಾಲಯದಿಂದ ಮಹತ್ವದ ತೀರ್ಪು
ಇತ್ತೀಚಿನ ದಿನಗಳಲ್ಲಿ ಜ್ಯೋತಿ ಅವರು ತಾನು ನೀಡಿದ್ದ ಹಣವನ್ನು ಮರಳಿ ನೀಡುವಂತೆ ಅಮರನಿಗೆ ಒತ್ತಡ ಹೇರಲಾರಂಭಿಸಿದ್ದರು. ಇದರಿಂದ ಆಕ್ರೋಶಗೊಂಡ ಅಮರ್, ಜ್ಯೋತಿಯನ್ನು ಹಾದಿಯಿಂದ ತಪ್ಪಿಸಲು ಸಂಚು ರೂಪಿಸಿದ್ದಾನೆ. ಏಪ್ರಿಲ್ 3 ರಂದು ಜ್ಯೋತಿಯನ್ನು ತನ್ನ ಥಾರ್ ಕಾರಿನಲ್ಲಿ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಸೇರಿದಂತೆ ವಿವಿಧೆಡೆ ಸುತ್ತಾಡಿಸಿದ್ದಾನೆ. ರಾತ್ರಿ ವೇಳೆಗೆ ಕಲಮೂಡ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಮೊದಲೇ ಸಿದ್ಧಪಡಿಸಿಕೊಂಡಿದ್ದ ಹರಿತವಾದ ಆಯುಧದಿಂದ ಜ್ಯೋತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸಾಕ್ಷ್ಯ ನಾಶಪಡಿಸಲು ಕಾರಿನ ಡಿಕ್ಕಿಯಲ್ಲಿ ತಂದಿದ್ದ ಪೆಟ್ರೋಲ್ ಸುರಿದು ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದ.
ಮೊಬೈಲ್ ಕರೆಗಳ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಅಮರನ ಮೇಲೆ ಅನುಮಾನ ಬಂದಿತ್ತು. ತಲೆಮರೆಸಿಕೊಂಡಿದ್ದ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕೊಲೆ ರಹಸ್ಯ ಬಯಲಾಗಿದೆ. ಆರೋಪಿಯಿಂದ ಕೊಲೆಗೆ ಬಳಸಿದ ಆಯುಧ, ಪೆಟ್ರೋಲ್ ಕ್ಯಾನ್ ಹಾಗೂ ಥಾರ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಹಂತಕ ಅಮರ ಕಲಬುರಗಿ ಕೇಂದ್ರ ಕಾರಾಗೃಹ ಸೇರಿದ್ದಾನೆ. ಒಟ್ಟಿನಲ್ಲಿ, ಸಲ್ಲದ ಸಂಬಂಧ ಮತ್ತು ಹಣದ ಹಪಾಹಪಿ ಒಬ್ಬ ಶಿಕ್ಷಕಿಯ ಪ್ರಾಣವನ್ನು ಬಲಿ ಪಡೆದರೆ, ಒಬ್ಬ ಯುವಕನ ಜೀವನವನ್ನು ಜೈಲು ಪಾಲಾಗುವಂತೆ ಮಾಡಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.