ಕಾಂಗ್ರೆಸ್- ಜೆಡಿಎಸ್ ಜಿದ್ದಾಜಿದ್ದಿ ಅಖಾಡವಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಮಿತ್ರಕೂಟದ ಅಭ್ಯರ್ಥಿಯಾಗಿ ಹಾಲಿ ಸಂಸದ ಡಿ.ಕೆ. ಸುರೇಶ್ ಅವರೇ ಅಭ್ಯರ್ಥಿಯಾಗುವುದು ನಿಶ್ಚಿತವೂ ಆಗಿದೆ. ಆದರೆ ಈ ದೋಸ್ತಿಗಳನ್ನು ಸದೆಬಡಿಯಲು ಬಿಜೆಪಿ ಯಾರನ್ನು ಕಣಕ್ಕಿಳಿಸುತ್ತದೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಚನ್ನಪಟ್ಟಣದಲ್ಲಿ ತಮ್ಮನ್ನು ಮಣಿಸಿರುವ ಕುಮಾರಸ್ವಾಮಿ ಹಾಗೂ ಡಿಕೆ ಬ್ರದರ್ಸ್‌ಗಳನ್ನು ಮಣಿಸಲು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಕಣಕ್ಕಿಳಿಯುತ್ತಾರಾ ಎಂಬ ಕುತೂಹಲವಿದೆ
ಮಹಾಭಾರತ ಸಂಗ್ರಾಮ: ಬೆಂಗಳೂರು ಗ್ರಾಮಾಂತರ ಕ್ಷೇತ್ರ
ರಾಮನಗರ[ಫೆ.15]: ಬೆಂಗಳೂರು ಗ್ರಾಮಾಂತರ ಕ್ಷೇತ್ರ ಎಂದರೆ ಮದಗಜಗಳ ಕಾಳಗದ ಅಖಾಡ. ಇಲ್ಲಿ ಪ್ರತಿ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ತೀವ್ರ ಸೆಣಸು ಇರುತ್ತಿತ್ತು. ಆದರೆ, ಬದಲಾದ ರಾಜ್ಯ ರಾಜಕಾರಣವು ಈ ಅಖಾಡದ ಚಿತ್ರಣವನ್ನೇ ಬದಲು ಮಾಡಿದೆ. ವೈರಿಗಳಿಬ್ಬರು ಮಿತ್ರರಾಗಿದ್ದು, ಸಮಾನ ಶತ್ರುವನ್ನು ಎದುರಿಸಲು ಸಂಘಟಿತರಾಗಿದ್ದಾರೆ. ಹಳೆ ಸೇಡು ತೀರಿಸಿಕೊಳ್ಳಲು ‘ಕಮಲ’ದ ನೇತಾರ ಶತಪ್ರಯತ್ನ ನಡೆಸಲು ಸಜ್ಜಾಗಿದ್ದಾರೆ.
ಟಿಕೆಟ್ ಫೈಟ್: ವಿಜಯಪುರದಲ್ಲಿ ಜಿಗಜಿಣಗಿ V/S ಅಲಗೂರ?
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರಿದ್ದರೂ ಜೆಡಿಎಸ್ನಿಂದ ಯಾರೇ ಅಭ್ಯರ್ಥಿಯಾಗಿದ್ದರೂ ಈ ಅಖಾಡದಲ್ಲಿ ನೇರ ಹಣಾಹಣಿ ಇರುತ್ತಿದ್ದದ್ದು ಹಾಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಪುಟದ ಸಹೋದ್ಯೋಗಿ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ನಡುವೆ. ಆದರೆ, ಮದಗಜಗಳಂತೆ ಕಾದಾಡುತ್ತಿದ್ದ ಶಿವಕುಮಾರ್ ಹಾಗೂ ಕುಮಾರಸ್ವಾಮಿ ಮೈತ್ರಿ ಕೂಟದಲ್ಲಿ ಬಂಧಿಯಾಗಿದ್ದಾರೆ. ಇನ್ನು ಅಸ್ತಿತ್ವದ ಹುಡುಕಾಟದಲ್ಲಿರುವ ಒಂಟಿ ಸಲಗದಂತಹ ಬಿಜೆಪಿಯ ಯೋಗೇಶ್ವರ್ ಈ ಮದಗಜಗಳ ಮೇಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.
ಟಿಕೆಟ್ ಫೈಟ್: ಬಿಜೆಪಿ ಟಿಕೆಟ್‌ಗೆ ಸವದಿ, ಕತ್ತಿ, ಕೋರೆ ಫೈಟ್
ಈ ಮೂವರು ಪ್ರಭಾವಿಗಳ ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುತ್ತದೆ. ಈ ಮೂವರು ನಾಯಕರು ಒಬ್ಬರನ್ನೊಬ್ಬರು ರಾಜಕೀಯವಾಗಿ ಮಣಿಸಿ ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಿದವರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕಂಡ ಸೋಲು ಸಿ.ಪಿ.ಯೋಗೇಶ್ವರ್ ಅವರ ಪ್ರತಿಷ್ಠೆಗೆ ಪೆಟ್ಟು ನೀಡಿದೆ. ಕುಮಾರಸ್ವಾಮಿ ಎದುರಿನ ಸೋಲು, ಅದರ ಹಿಂದೆ ಡಿಕೆಶಿ ಆಡಿದ ಆಟದ ವಿರುದ್ಧ ಈ ಸಂಸತ್ ಚುನಾವಣೆಯಲ್ಲಿ ಪ್ರತೀಕಾರ ತೀರಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ಈ ಬಾರಿ ಕ್ಷೇತ್ರದಲ್ಲಿ ಕೈ-ದಳ ದೋಸ್ತಿ ಎದುರು ಕಮಲ ಸೆಟೆದು ನಿಂತಿದೆ.
ಡಿಕೆಸು ದೋಸ್ತಿಗಳ ಅಭ್ಯರ್ಥಿ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಎರಡೂ ಪಕ್ಷಗಳಲ್ಲಿ ಚುನಾವಣೆಗೆ ಟಿಕೆಟ್ ಕೇಳುವ ಧೈರ್ಯವನ್ನು ಸದ್ಯ ಕ್ಷೇತ್ರದಲ್ಲಿ ಯಾರೊಬ್ಬರೂ ತೋರಿಸುತ್ತಿಲ್ಲ. ಇತ್ತೀಚೆಗೆ ನಡೆದ ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕುಮಾರಸ್ವಾಮಿ ಪತ್ನಿ ಅನಿತಾ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿದ್ದರು. ಸಂಸದ ಡಿ.ಕೆ.ಸುರೇಶ್ ಪ್ರಚಾರದ ಸಂಪೂರ್ಣ ನೇತೃತ್ವ ವಹಿಸಿದ್ದರು. ಮಾಜಿ ಶಾಸಕ ಯೋಗೇಶ್ವರ್ ಕಾಂಗ್ರೆಸ್‌ನ ಚಂದ್ರಶೇಖರ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿದ್ದರು. ಆದರೆ, ಡಿ.ಕೆ. ಸಹೋದರರು ಉರುಳಿಸಿದ ದಾಳಕ್ಕೆ ಮಣಿದ ಚಂದ್ರಶೇಖರ್ ಕೊನೇ ಕ್ಷಣದಲ್ಲಿ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿ ಕೈ ಪಾಳಯ ಸೇರಿದ್ದರು. ಅನಿತಾ ಅವರ ಸುಲಭ ಗೆಲುವಿಗೆ ಕಾರಣರಾದ ಡಿ.ಕೆ.ಸಹೋದರರ ರಾಜಕೀಯ ತಂತ್ರಗಾರಿಕೆ ಜೆಡಿಎಸ್ ವರಿಷ್ಠ ದೇವೇಗೌಡ ಅವರಿಗೂ ಮೆಚ್ಚುಗೆಯಾಗಿತು. ಈ ಎಲ್ಲಾ ಕಾರಣಗಳಿಂದಾಗಿ ಜೆಡಿಎಸ್ ಈ ಕ್ಷೇತ್ರವನ್ನು ಕಾಂಗ್ರೆಸ್ನಿಂದ ಕೇಳುತ್ತಿಲ್ಲ. ಹೀಗಾಗಿ ಡಿ.ಕೆ. ಸುರೇಶ್ ಅವರು ದಳ-ಕಾಂಗ್ರೆಸ್‌ನ ಒಮ್ಮತದ ಅಭ್ಯರ್ಥಿಯಾಗಲಿದ್ದಾರೆ.
ಟಿಕೆಟ್ ಫೈಟ್: ಕಾಂಗ್ರೆಸ್ ಸಂಸದ ಜೆಡಿಎಸ್ ಅಭ್ಯರ್ಥಿ ಆಗ್ತಾರಾ?
ಯೋಗೇಶ್ವರ್ ಬದಲು ರುದ್ರೇಶ್?
ಇನ್ನು ಬಿಜೆಪಿಗೆ ಪ್ರತಿಯೊಂದು ಸಂಸತ್ ಕ್ಷೇತ್ರವೂ ಮುಖ್ಯವಾಗಿದೆ. ಅದರಂತೆ ಬಲಿಷ್ಠ ದೋಸ್ತಿ ಅಭ್ಯರ್ಥಿ ಎದುರು ಕ್ಷೇತ್ರದಲ್ಲಿ ಪಕ್ಷದ ವರಿಷ್ಠರು ಗೆಲ್ಲುವ ಕುದುರೆಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಸದ್ಯ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಹಾಗೂ ಮುಖಂಡ ಪಿ.ಮುನಿರಾಜು ಗೌಡ (ತುಳಸಿ ಮುನಿರಾಜು) ಹೆಸರು ಚಾಲ್ತಿಯಲ್ಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಭೆಯಲ್ಲಿ 8 ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರು ಎಂ.ರುದ್ರೇಶ್ ಹೆಸರು ಅಖೈರುಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದರಿಂದ ರುದ್ರೇಶ್ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದೇ ಹೇಳಲಾಗುತ್ತಿದೆ. ಈಗಾಗಲೇ ರುದ್ರೇಶ್ ಅವರು ರೆಸಾರ್ಟ್‌ನಲ್ಲಿ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೂ ರಹಸ್ಯ ಚರ್ಚೆ ನಡೆಸಿದ್ದು, ಸದ್ಯದಲ್ಲೇ ಕ್ಷೇತ್ರದಾದ್ಯಂತ ಪ್ರವಾಸ ಆರಂಭಿಸುವ ಸಿದ್ಧತೆಯಲ್ಲಿದ್ದಾರೆ.
ಟಿಕೆಟ್ ಫೈಟ್: ಸಿದ್ದು ಸ್ಪರ್ಧೆ ವದಂತಿಯಿಂದ ಕೊಪ್ಪಳ ಕ್ಷೇತ್ರದಲ್ಲಿ ಸಂಚಲನ
ಅಶ್ವತ್ಥನಾರಾಯಣಗೆ ಸಿಗುತ್ತಾ ಚಾನ್ಸ್?
ಬಿಜೆಪಿ ಟಿಕೆಟ್‌ಗಾಗಿ ಪಿ.ಮುನಿರಾಜು ಗೌಡ (ತುಳಸಿ ಮುನಿರಾಜು) ಕೂಡ ಆಕಾಂಕ್ಷಿ. 2014ರ ಲೋಕಸಭೆ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ವಿರುದ್ಧ ಸ್ಪರ್ಧಿಸಿದ್ದ ಮುನಿರಾಜು (4.21 ಲಕ್ಷ ಮತ ಪಡೆದಿದ್ದರು) 2.31 ಲಕ್ಷಗಳ ಮತಗಳ ಅಂತರದಿಂದ ಡಿ.ಕೆ.ಸುರೇಶ್ ವಿರುದ್ಧ ಸೋಲು ಕಂಡಿದ್ದರು. ಈಗ ಮತ್ತೊಮ್ಮೆ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ. ಇವರ ಜತೆಗೆ, ರಾಜ್ಯ ಬಿಜೆಪಿ ವಕ್ತಾರ ಹಾಗೂ ಮಾಜಿ ಪರಿಷತ್ ಸದಸ್ಯ ಅಶ್ವತ್ಥನಾರಾಯಣ್ ಅವರು ಕೂಡ ಆಕಾಂಕ್ಷಿಯಾಗಿದ್ದಾರೆ. ಈ ಹಿಂದೆ ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಟಿಕೆಟ್ ದೊರೆಯುವ ಹಂತದಲ್ಲಿತ್ತು. ಆದರೆ, ಕೆಲ ಮುಖಂಡರು ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಮಾಡುವ ಸಲಹೆ ನೀಡಿದರು. ಅಂತಿಮವಾಗಿ ಎರಡೂ ಕಡೆ ಟಿಕೆಟ್ ದೊರಕಿರಲಿಲ್ಲ. ಹೀಗಾಗಿ ಈ ಬಾರಿ ತಮಗೆ ಅವಕಾಶ ದೊರೆಯಬೇಕು ಎಂಬುದು ಅವರ ವಾದ.
ಟಿಕೆಟ್ ಫೈಟ್: ಉಗ್ರಪ್ಪಗೆ ಮೈತ್ರಿ ಟಿಕೆಟ್ ಖಚಿತ, ಬಿಜೆಪಿಯಿಂದ ಯಾರೆಂಬುದೇ ಅನಿಶ್ಚಿತ!
ಹೀಗೆ ಮೂರು ಮಂದಿ ಪ್ರಯತ್ನ ನಡೆಸುತ್ತಿದ್ದರೂ ಅಂತಿಮವಾಗಿ ಸಿ.ಪಿ. ಯೋಗೇಶ್ವರ್ ಅವರೇ ಕಣಕ್ಕೆ ಇಳಿಯಬಹುದು ಎಂಬ ಮಾತಿದೆ. ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಅವರಿಗೆ ಯೋಗೇಶ್ವರ್ ಅವರಿಂದ ಮಾತ್ರ ಪ್ರಬಲ ಪೈಪೋಟಿ ನೀಡಲು ಸಾಧ್ಯ ಎಂಬುದು ಪಕ್ಷದ ಮುಖಂಡರ ವಾದವೂ ಆಗಿದೆ. ಕುಮಾರಸ್ವಾಮಿ ಮತ್ತು ಡಿಕೆಶಿ ವಿರುದ್ಧವೇ ರಾಜಕಾರಣ ಮಾಡಿಕೊಂಡು ಬಂದಿರುವ ಯೋಗೇಶ್ವರ್ ಈ ಇಬ್ಬರ ಎಲ್ಲಾ ರಾಜಕೀಯ ಪಟ್ಟುಗಳನ್ನು ಅರಿತವರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಕಾರಣರಾದ ಡಿಕೆ ಸಹೋದರರ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲೂ ಇದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಿಂತರೂ, ನಿಲ್ಲದಿದ್ದರೂ ಡಿಕೆಶಿ ಸಹೋದರರಿಗೆ ಸೇಡು ತೀರಿಸಲು ಬಿಜೆಪಿ ಅಭ್ಯರ್ಥಿ ಪರ ತಮ್ಮ ಸಾಮರ್ಥ್ಯ ವಿನಿಯೋಗಿಸುವುದು ಖಚಿತ.
ಟಿಕೆಟ್ ಫೈಟ್: ಶಿವಮೊಗ್ಗದಿಂದ ಮಧು ಸ್ಪರ್ಧಿಸ್ತಾರಾ? ಗೀತಾ ಕಣಕ್ಕಿಳೀತಾರಾ?
ಪತ್ರ ಬರೆದು ಡಿಕೆಶಿ ಆಪರೇಷನ್
ಪ್ರತಿ ಚುನಾವಣೆಗಳಲ್ಲಿ ಪ್ರಬಲ ಪೈಪೋಟಿವೊಡ್ಡುತ್ತಿದ್ದ ಜೆಡಿಎಸ್ ಆತಂಕ ಈ ಬಾರಿ ಕಾಂಗ್ರೆಸ್‌ಗಿಲ್ಲ. ಜೆಡಿಎಸ್ ನಾಯಕರೇ ಈಗ ಡಿಕೆಶಿ ಬೆನ್ನಿಗಿದ್ದಾರೆ. ಹೀಗಾಗಿ ಒಂದರ್ಥದಲ್ಲಿ ಡಿಕೆಶಿ ಸಹೋದರರು ನಿರಾಳರಾಗಿರುವಂತೆ ಕಾಣುತ್ತಿದೆ. ಆದರೂ, ಯೋಗೇಶ್ವರ್‌ರನ್ನು ಲಘವಾಗಿ ಪರಿಗಣಿಸುವಂತಿಲ್ಲ. ಹೀಗಾಗಿಯೇ ಶಿವಕುಮಾರ್ ಅವರು ಕೆಲ ತಿಂಗಳ ಹಿಂದಷ್ಟೇ ಪತ್ರವೊಂದನ್ನು ಬರೆದು ಚನ್ನಪಟ್ಟಣ ಕ್ಷೇತ್ರದ ಬಿಜೆಪಿಗರಿಗೆ ಕಾಂಗ್ರೆಸ್‌ಗೆ ಸೇರ್ಪಡೆಯಾಗುವಂತೆ ಮುಕ್ತ ಆಹ್ವಾನ ನೀಡಿದ್ದರು. ಚುನಾವಣೆ ಸನಿಹದಲ್ಲಿ ಯೋಗೇಶ್ವರ್ ಬೆಂಬಲಿಗರನ್ನು ಕಾಂಗ್ರೆಸ್ ಪಾಳಯಕ್ಕೆ ಸೆಳೆಯುವ ತಂತ್ರಗಾರಿಕೆಯನ್ನೂ ಅವರು ಸದ್ದಿಲ್ಲದೆ ಮುಂದುವರೆಸಿದ್ದಾರೆ.
ಟಿಕೆಟ್ ಫೈಟ್: ಬಿಜೆಪಿ ಭದ್ರಕೋಟೆ ಕಸಿಯಲು ಕಾಂಗ್ರೆಸ್ ಕಸರತ್ತು!
ಜೆಡಿಎಸ್ ಕಾರ‍್ಯಕರ್ತರ ನಡೆ ಏನು?
ಇನ್ನು ಮೈತ್ರಿ ಇದ್ದರೂ, ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಯನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ ಎಂದು ನಂಬುವಂತಹ ಸ್ಥಿತಿಯಿಲ್ಲ. ಕಾಂಗ್ರೆಸ್ಸಿಗರ ವಿರುದ್ಧದ ಆಕ್ರೋಶ ಕ್ಷೇತ್ರದ ಕಾರ್ಯಕರ್ತರಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ. ಅದು ಲೋಕಸಭಾ ಚುನಾವಣೆಯಲ್ಲಿ ಸ್ಫೋಟಗೊಂಡರೂ ಅಚ್ಚರಿಯಿಲ್ಲ. ಇಲ್ಲಿ ಮೇಲ್ನೋಟಕ್ಕೆ ಕಾಣುತ್ತಿರುವಂತೆ ಮೈತ್ರಿ ಗಟ್ಟಿಎನಿಸಿದರೂ ಒಳಸುಳಿ ಬೇರೆಯೇ ಇದೆ. ಕಾರ‍್ಯಕರ್ತರ ಈ ಬೇಗುದಿಯನ್ನು ಜೆಡಿಎಸ್ ವರಿಷ್ಠರು ಸಮಾಧಾನ ಮಾಡದಿದ್ದರೆ ಮೈತ್ರಿ ಅಭ್ಯರ್ಥಿಯು ಗೆಲುವಿಗಾಗಿ ಬೆವರು ಸುರಿಸಬೇಕಾಗಬಹುದು.
ಎಚ್‌ಡಿಕೆ ಗೆದ್ದು, ಅವರ ಪತ್ನಿ ಸೋತಿದ್ದ ಕ್ಷೇತ್ರ ಇದು
2008ರಲ್ಲಿ ಕ್ಷೇತ್ರ ಪುನರ್ ರಚನೆ ಬಳಿಕ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು. 2009ರಲ್ಲಿ ಈ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ 1.30 ಲಕ್ಷ ಮತಗಳ ಅಂತರದಿಂದ ಚುನಾಯಿತರಾಗಿದ್ದರು. 2013ರಲ್ಲಿ ಅವರ ರಾಜೀನಾಮೆಯಿಂದಾಗಿ ತೆರವುಗೊಂಡ ಸ್ಥಾನಕ್ಕೆ ನಡೆದ ಉಪÜ ಚುನಾವಣೆಯಲ್ಲಿ ಕುಮಾರಸ್ವಾಮಿ ಪತ್ನಿ ಅನಿತಾ ಅವರನ್ನು 1.37 ಲಕ್ಷ ಮತಗಳ ಅಂತರದಿಂದ ಮಣಿಸಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಆಯ್ಕೆಯಾದರು. ನಂತರ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ಕೆ.ಸುರೇಶ್ 2.31 ಮತಗಳಿಂದ ಗೆಲುವು ಸಾಧಿಸಿ, ಹಾಲಿ ಸಂಸದರಾಗಿ ಮುಂದುವರೆದಿದ್ದಾರೆ.
ಟಿಕೆಟ್ ಫೈಟ್ : ಚಿಕ್ಕಬಳ್ಳಾಪುರದಲ್ಲಿ 2 ಬಾರಿ ಗೆದ್ದಿದ್ದರೂ ಮೊಯ್ಲಿಗೆ ಟಿಕೆಟ್ ಕಗ್ಗಂಟು!
1 ಕ್ಷೇತ್ರ 3 ಜಿಲ್ಲೆ 8 ಶಾಸಕರು
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ರಾಮನಗರ, ತುಮಕೂರು ಹಾಗೂ ಬೆಂಗಳೂರು ನಗರ ಜಿಲ್ಲೆಗಳ ವ್ಯಾಪ್ತಿವರೆಗೂ ಹರಡಿಕೊಂಡಿದೆ. ರಾಮನಗರ ಜಿಲ್ಲೆಯಲ್ಲಿ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ತುಮಕೂರು ಜಿಲ್ಲೆಯಲ್ಲಿ ಕುಣಿಗಲ್ ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಆನೇಕಲ್, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳು ಈ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಒಟ್ಟು ಈ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಕಪುರ, ಕುಣಿಗಲ್, ಆನೇಕಲ್, ರಾಜರಾಜೇಶ್ವರಿ ನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಚನ್ನಪಟ್ಟಣ, ಮಾಗಡಿ, ರಾಮನಗರ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕ ಆಯ್ಕೆಯಾಗಿದ್ದಾರೆ.
ಟಿಕೆಟ್ ಫೈಟ್ : ಹಾಸನದಲ್ಲಿ ಪ್ರಜ್ವಲ್ ಎದುರು ಬಿಜೆಪಿ ಸ್ಪರ್ಧಿ ಯಾರು..?
ಯಾರ್ಯಾರ ಪೈಪೋಟಿ ?
ಕಾಂಗ್ರೆಸ್ - ಡಿ.ಕೆ.ಸುರೇಶ್
ಬಿಜೆಪಿ - ಎಂ.ರುದ್ರೇಶ್, ಸಿ.ಪಿ. ಯೋಗೇಶ್ವರ್, ಮುನಿರಾಜುಗೌಡ
ಜಾತಿ ಸಮೀಕರಣ :
ಜಾತಿ ಲೆಕ್ಕಾಚಾರ ನೋಡಿದರೆ ಒಕ್ಕಲಿಗ ಸಮುದಾಯವೇ ಇಲ್ಲಿ ಬಹುಸಂಖ್ಯಾತರು. ನಂತರದ ಸ್ಥಾನದಲ್ಲಿ ದಲಿತರು ಇದ್ದಾರೆ. ಬಳಿಕ ಲಿಂಗಾಯತರು, ಮುಸ್ಲಿಮರು, ಕುರುಬರು, ಬ್ರಾಹ್ಮಣರು, ಕ್ರಿಶ್ಚಿಯನ್ನರಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಅಭ್ಯರ್ಥಿಗಳೇ ಈವರೆಗೆ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಬಿಜೆಪಿಯಿಂದ ಒಕ್ಕಲಿಗ ಅಭ್ಯರ್ಥಿ ಕಣಕ್ಕಿಳಿದರೆ ಒಕ್ಕಲಿಗ ಮತಗಳು ವಿಭಜನೆಗೊಳ್ಳುತ್ತವೆ. ಲಿಂಗಾಯತರು ಅಭ್ಯರ್ಥಿಯಾದಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯುವುದು ಕಷ್ಟವಾಗುತ್ತದೆ. ಜೆಡಿಎಸ್ ಜತೆಗಿರುವುದರಿಂದ ಕಾಂಗ್ರೆಸ್ ಅಹಿಂದ ಮತಗಳ ಮೇಲೆ ಕಣ್ಣಿಟ್ಟಿದೆ.
ಟಿಕೆಟ್ ಫೈಟ್: ಬೆಂಗಳೂರು ಉತ್ತರದಲ್ಲಿ ದೇವೇಗೌಡ V/S ಡಿವಿಎಸ್ V/S ರಮ್ಯಾ?
ರಾಜಕಾರಣದಲ್ಲಿ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿ.ಕೆ.ಶಿವಕುಮಾರ್ ಚುನಾವಣೆ ಗೆಲುವಿಗಾಗಿ ಶತ್ರುಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡ ಉದಾಹರಣೆಗಳು ಇವೆ. ಕಾಂಗ್ರೆಸ್‌ನಲ್ಲಿದ್ದಾಗ ತಮ್ಮ ಕಡು ವಿರೋಧಿ ಎಂದೇ ಪರಿಗಣಿಸಲ್ಪಟ್ಟಿದ್ದ ಮಾಜಿ ಸಂಸದೆ ತೇಜಸ್ವಿನಿ ಗೌಡ ಹಾಗೂ ಸಮಾಜವಾದಿ ಪಕ್ಷದ ಶಾಸಕರಾಗಿದ್ದ ಸಿ.ಪಿ.ಯೋಗೇಶ್ವರ್ ಜತೆ ಶಿವಕುಮಾರ್ ಸಂಧಾನ ನಡೆಸಿದ್ದರು. ಸೋದರನ ವಿಜಯ ತಂತ್ರಗಾರಿಕೆ ಮೆರೆದಿದ್ದು ಇದೆ. ಆದರೆ, ಈ ಬಾರಿ ಅಷ್ಟೊಂದು ಶ್ರಮ ಪಡಬೇಕಿಲ್ಲ ಎಂದೇ ಕಾಂಗ್ರೆಸ್ಸಿಗರು ಭಾವಿಸಿದ್ದಾರೆ.
ಟಿಕೆಟ್ ಫೈಟ್: ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ನಿಲ್ತಾರಾ? ನಿಖಿಲ್‌ಗೆ ಬಿಡ್ತಾರಾ?
-ಎಂ ಅಫ್ರೋಜ್ ಖಾನ್